ಆಮೀರ್‍ಗೆ ಧಿಕ್ಕಾರ

ಆಮೀರ್‍ಗೆ ಧಿಕ್ಕಾರ

ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ
ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.

ಗಮನಿಸಿ ನೋಡಿದಾಗ ಗೊತ್ತಾಯಿತು-ಅದು ಆಮೀರ್ ಖಾನ್‌ನ ಘಜನಿ ಚಿತ್ರದ ಪೋಸ್ಟರ್-ನನ್ನ ಬೆಡ್‌ನ ಎದುರಿನ ಗೋಡೆಯಲ್ಲಿತ್ತು. ಬೆಳ್ಳಂಬೆಳಗ್ಗೆ ಏಳುವಾಗ ನೋಡಲು ಲಕ್ಷ್ಮಿ ಫೋಟೋ, ಹೋಗಲಿ ಕತ್ರೀನಾಳಾದ್ದಾದರೂ ಹಾಕಬಾರದೆ. (ಹೆಗಲಿನ ಮಟ್ಟಕ್ಕೆ ಬೆಳೆದ ಮಕ್ಕಳಿರುವಾಗ ಇದನ್ನೆಲ್ಲಾ ಯೋಚನೆ ಮಾಡಬಾರದು. ಶಾಂತಂ ಪಾಪಂ.)

ಬರೀ ಮೇಲ್ಮೈ(ಮೇಲಿನ+ಮೈ), ಕೆಟ್ಟ ನೋಟ, ತಲೆಯಲ್ಲಿ ಕಾಫೀತೋಟದ ರಸ್ತೆ ತರಹ ಅಡ್ಡಾದಿಡ್ಡಿ ಗೆರೆ-ಈ ಪೋಸ್ಟರ್ ನನ್ನ ಕೋಣೆಯಲ್ಲಿ ಅಂಟಿಸಿರಬೇಕಾದರೆ ಏನೋ ಮಸಲತ್ತು ನಡೆಯುತ್ತಿದೆ ಎಂದು ಅಂದಾಜಿಸಿದೆ.

ಏನೂ ಗೊತ್ತಿಲ್ಲದವನಂತೆ ಎದ್ದು ನನ್ನ ನಿತ್ಯದ ಕೆಲಸ (ಪಾತ್ರೆ ತೊಳೆಯುವುದು, ಗುಡಿಸುವುದು...) ಮಾಡುತ್ತಿದ್ದೆ. ಮಕ್ಕಳಿಗೆ ತಡೆಯಲಾಗಲಿಲ್ಲ-‘ಕೋಣೆಯಲ್ಲಿದ್ದ ಫೋಟೋ ನೋಡಲಿಲ್ಲವಾ ಅಪ್ಪಾ’ ಎಂದು ಕೇಳಿದರು. ಹೊಸದಾಗಿ ನೋಡುವವನಂತೆ ಹೋಗಿ ನೋಡಿದೆ.
‘ಓಹೋ, ಶಾರುಕ್ ಖಾನ್ ಫೋಟೋ! ಚೆನ್ನಾಗಿಲ್ಲ. ನಿಮ್ಮ ಕೋಣೆಯಲ್ಲಿಯೇ ಹಾಕಿಕೊಳ್ಳಿ’ ಎಂದೆ.
‘ಇಲ್ಲಾಪ್ಪಾ, ಇದು ಆಮೀರ್ ಖಾನ್. ಬಾಡಿ ನೋಡಿ ಹೇಗಿದೆ?’ ಎಂದ ಮಗರಾಯ.
(ಬಾಡಿ..ಹೀರೋಯಿನ್‌ಗಳದ್ದಾಗಿದ್ದರೆ ಸೌಂದರ್ಯ ತುಂಬಿ ತುಳುಕುತ್ತಿತ್ತು. ಈ ಬಾಡಿ ನೋಡಿದಾಗ ಅಂಗಡಿಗಳಲ್ಲಿ ಒಂದರ ಮೇಲೆ ಒಂದು ಜೋಡಿಸಿಟ್ಟ ಪ್ಯಾಕ್‌ಗಳಂತೆ ಕಾಣುತ್ತದೆ. ಆದರೆ ಇದನ್ನು ಮಕ್ಕಳೆದುರು ಹೇಳಲಾಗುತ್ತದಾ?)

ಈಗ ಅಂದಾಜಾಯಿತು. ಇದು ನನ್ನ ಸಿಗರೇಟು, ಕುಡಿತ, ‘೧೦ ಪ್ಯಾಕ್ ಹೊಟ್ಟೆ’ಗೆ ಕತ್ತರಿ ಹಾಕುವ ಪ್ಲಾನ್..
ಈ ಮಕ್ಕಳು ಹೇಗೆ ಬೆಳೀತಾವೆ ನೋಡಿ. ನಿನ್ನೆವರೆಗೆ ಚಡ್ಡಿ ಸರಿ ಹಾಕಲಿಕ್ಕೆ ಬರದಿದ್ದವು ಈಗ ಬಾಡಿ ಬಗ್ಗೆ ನನಗೇ ಹೇಳುವಷ್ಟು ದೊಡ್ಡವರಾದರು.
‘ ನೋಡೋ, ನಾನು ಬಾಡಿ ಬೆಳಸಿ ಇನ್ನು ಸಾಧಿಸಬೇಕಾದ್ದೇನೂ ಇಲ್ಲ. ನೀವು ಬೇಕಿದ್ದರೆ
ಜಿಮ್‌ಗೆ ಸೇರಿ ಪ್ರಯತ್ನಿಸಿ’ ಅಂದೆ. ಅಷ್ಟು ಹೊತ್ತಿಗೆ ನನ್ನ ಮನೆಯಾಕೆಯ ಪ್ರವೇಶವಾಯಿತು.
‘ ನೋಡೇ, ಆತನ ತರಹ ಬಾಡಿ ಬೆಳೆಸಲು ಮಕ್ಕಳಿಗೆ ಗೆ ಗೆ, ಅಲ್ವೇ ನನಗೆ ಬೆಳಗ್ಗೆ ಟೈಮ್ ಎಲ್ಲಿದೆ? ಗುಡಿಸಿ ಒರೆಸುವುದಕ್ಕೇ ಟೈಮ್ ಸಾಲುವುದಿಲ್ಲಾ..’
ವ್ಯಾಯಾಮ ಅಥವಾ ಮನೆಕೆಲಸದಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿಯಾಳು ಎಂದೆಣಿಸಿದೆ.

‘ಮಧ್ಯರಾತ್ರಿವರೆಗೆ ಟೈಪ್‌ರೈಟರ್ ಕುಟ್ಟುತ್ತೀರಲ್ಲ. ಅದನ್ನು ಬಿಟ್ಟು, ಬೇಗ ಮಲಗಿ, ಬೆಳಗ್ಗೆ ೪ ಘಂಟೆಗೆ ಎದ್ದು ವ್ಯಾಯಾಮ ಮಾಡಿ, ನಂತರ ಉಳಿದ ಕೆಲಸ ಮಾಡಿದರಾಯಿತು.’ ಅಂದಳು. ಹೋಗಿ ಮುಟ್ಟಿದ್ದು ಅಲ್ಲಿಗೇ.. ‘ಸಂಪದ’ವನ್ನು ಮೊದಲಿಂದಲೂ ಸವತಿ ತರಹ ನೋಡುತ್ತಾಳೆ.
ಮುಂದೇನಾಯಿತು ಎಂದು ನೀವು ಆಲೋಚಿಸಿದ್ದೀರೋ ಅದೇ ಆಯಿತು.

ಈಗ ಈ ಚ ಚ ಛಳಿಯಲ್ಲಿ - ನೀವೆಲ್ಲಾ ಕಂಬಳಿ ಹೊದ್ದು ಸುಖನಿದ್ದೆಯಲ್ಲಿರುವಾಗ- ನಾನು- ಈ ಪಾಪಿ ಘಜನಿಯಿಂದಾಗಿ-ಜಾಗಿಂಗ್ ಮಾಡುತ್ತಿದ್ದೇನೆ. ಸ್ಯಾಂಕೀಟ್ಯಾಂಕಿನ ಪಕ್ಕದ ಪೂಲ್‌ನಲ್ಲಿ ಸ್ವಿಮ್ ಮಾಡುತ್ತಿದ್ದೇನೆ,
ಈ ಸಿಕ್ಸ್ ಪ್ಯಾಕ್ ಆಮೀರ್‌ನಿಂದಾಗಿ-
ನನ್ನ ಒಂದು ಪ್ಯಾಕ್ ಸಿಗರೇಟಿಗೆ ಕತ್ತರಿ
ಒಂದೇ ಒಂದು (೨,೩,೪..)ಪೆಗ್‌ಗೂ ಕತ್ತರಿ
ಅರ್ಧ(ರಾತ್ರಿ) ಗಂಟೆ ಸಂಪದ ನೋಡಲೂ ಕತ್ತರಿ ಪ್ರಯೋಗವಾಗಿದೆ.

ಅಮಿತಾಬ್ ಶರ್ಟ್‌ನ ಒಂದು ಬಟನ್ ಸಹ ಬಿಚ್ಚದೇ ಈಗಲೂ ಹೀರೋ ಆಗಿ ಇಲ್ಲವಾ?
ಇಷ್ಟಕ್ಕೆಲ್ಲಾ ಕಾರಣನಾದ ಆಮೀರ್ ಘಜನಿ ರಿಲೀಸ್‌ಗೆಂದು ಬೆಂಗಳೂರಿಗೆ ಬಂದಾಗ ಧಿಕ್ಕಾರ ಕೂಗಬೇಕೆಂದಿದ್ದೇನೆ.

-ಗಣೇಶ(ಸದ್ಯದಲ್ಲಿ ಸಿಕ್ಸ್ ಪ್ಯಾಕ್ ಗಣೇಶ)

Rating
No votes yet

Comments