ತೊಟ್ಟಿಮನೆ

ತೊಟ್ಟಿಮನೆ

 

 

ಊರಗೌಡರ
ತೊಟ್ಟಿಮನೆಯಲಿ
ಇದ್ದ ಜನಗಳು ನೂರು|
ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು||
ಒಂದು ಹೊತ್ತಿಗೆ
ನೂರು ಜನಗಳ
ಊಟವು ಒಮ್ಮೆಲೆ ನಡೆದಿತ್ತು|
ಒಟ್ಟಿಗೆ ಕುಣಿಯುತ
ಒಟ್ಟಿಗೆ ಕಲಿಯುತ
ಆಟ ಪಾಠವು ನಡೆದಿತ್ತು|| ಕೆಲಸದ ಹಂಚಿಕೆಯಾಗಿತ್ತು ಮನೆಯಲಿ ಕಿಲಕಿಲ ನಗುವಿತ್ತು ಗೌಡರ ಬಂಡಿಯು ಸಾಗಿತ್ತು| ಅಜ್ಜಿಯ ತೊಡೆಯಲಿ ಬೆಚ್ಛಗೆ ಮಕ್ಕಳು ಮಲಗುತ ಕಾಲವು ಕಳೆದಿತ್ತು|| ಆಡುವ ಕಿಟ್ಟಿಯ
ನೋಡುತ ಗೌಡರು
ಗೌಡತಿ ಕಿವಿಯಲಿ ಕೇಳಿದರು|
ತುಂಟಾತದ ನಗುವಿನ
ಚಂದದ ಹುಡುಗ
ಯಾರ ಮನೆಯ ಮಗುವಮ್ಮಾ?||

ಗೌಡತಿ ಗೌಡರ
ದುರುಗುಟ್ಟುತ ನೋಡಿ
ಪಿಸುಗುಟ್ಟುತ ಗೌಡರ ಕಿವಿಯೊಳಗೆ|
ಮಗ ಗೋಪಾಲನ
ಮುದ್ದಿನ ಮೂರನೆ
ಮಗನೇ ಅಲ್ಲವೆ ಇವನೆಂದು||

ಸಂಜೆಯ ಸಮಯದಿ
ಜಗತಿಯ ಮೇಲೆ
ಶಿಶುವಿಹಾರವೇ ನಡೆದಿತ್ತು|
ಮಕ್ಕಳ ಕುಣಿತವ
ಹಿರಿಯರು ನೋಡುತ
ನೋಡುತ ದಿನವೇ ಕಳೆದಿತ್ತು||

ಕಾಲದ ಕಣ್ಣೇ ಬಿದ್ದಿತ್ತು
ಕಂಬ ಕಂಬವೇ ಕುಸಿದಿತ್ತು
ತೊಟ್ಟಿಯ ಮನೆಯು ಒಡೆದಿತ್ತು
ಗೌಡರ ಕಥೆಯು ಮುಗಿದಿತ್ತು||

ಇಂದು[೨೧.೧೨.೨೦೦೮] ಹಾಸನದಲ್ಲಿ ಮನೆ ಮನೆ ಕವಿಗೋಷ್ಠಿಯ ೧೨ ನೇ ವಾರ್ಷಿಕೊತ್ಸವದಲ್ಲಿ ಪ್ರಸ್ತುತ ಪಡಿಸಿದ ಕವನವಿದು. ಜನರ ಮೆಚ್ಚುಗೆ ಪಡೆಯಿತು. ಈಗ ನಿಮ್ಮ ಮುಂದಿದೆ. ನಿಮ್ಮ ಪ್ರತಿಕ್ರಿಯೆಯೇ ನನಗೆ ಪ್ರೋತ್ಸಾಹ.

Rating
No votes yet

Comments