ನಾಗರೀಕ ಜವಾಬ್ದಾರಿಗಳು
ದಿನನಿತ್ಯದ ಜೀವನದಲ್ಲಿ ನಾವು ತೊಂದರೆಗಳಾದಾಗ ಹಲವು ಬಾರಿ ಸರ್ಕಾರವನ್ನು, ಸುತ್ತಮುತ್ತವಿರುವವರನ್ನು ಆಗಾಗ ದೂಷಿಸುತ್ತ, ಬೈದುಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ. ತಕ್ಷಣದ ವಿವೇಚನೆಗೆ, ಕಾಮನ್ ಸೆನ್ಸಿಗೆ ಇವುಗಳಿಗೆಲ್ಲ ನಾವು ಜವಾಬ್ದಾರರಲ್ಲ ಅನ್ನಿಸುತ್ತದೆ, ಉದಾಹರಣೆಗೆ ನೀರು ಪೋಲು ಮಾಡುವುದು, ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೇ ಹೋಗುವುದು, ಕಂಡ ಕಂಡ ಹೊತ್ತಿನಲ್ಲಿ ವಿದ್ಯುತ್ ಕಡಿತ, ವಾಹನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಇತ್ಯಾದಿ..
ಆದರೆ ಅವುಗಳ ಬಗ್ಗೆ ಸ್ವಲ್ಪ ನಿಧಾನಕ್ಕೆ ಯೋಚಿಸಿದಾಗ ನೇರವಾಗಿಯೋ/ಪರೋಕ್ಷವಾಗಿಯೋ ಇದೇ ಆರೋಪಗಳಲ್ಲಿ ದೋಷಮುಕ್ತರಲ್ಲವೆನ್ನುವುದು ನಾಗರೀಕರಿಗೆ ಸುಮಾರು ಪಾಲಿಗೆ ಸತ್ಯ.
ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.
೧. ಮನೆಯಲ್ಲಿನ ಬೋರ್ವೆಲ್ ನೀರಿನ ಬಳಕೆಯನ್ನು ಗಮನಿಸಿ: ಸೈಟ್ ನಿಮ್ಮದೇ, ಬಾವಿ ತೆಗೆಸಿದ್ದು ನೀವೇ , ಪಂಪು ವಿದ್ಯುತ್ತಿನ ಖರ್ಚು ನಿಮ್ಮದೇ ಇರಬಹುದು,ಆದರೆ ಅಂತರ್ಜಲ ನಿಮ್ಮದೇ? ಅದನ್ನು ಸ್ವಂತ ಆಸ್ತಿಯಂತೆ ಉಪಯೋಗಿಸುವುದು ಎಷ್ಟು ಸರಿ, ಅದೂ ಅಲ್ಲದೆ ಅಂತರ್ಜಲಕ್ಕೆ ನೀರು ವಾಪಾಸಾಗಲು ನಿಮ್ಮ ಯಾವುದೇ ಚಟುವಟಿಕೆ ಕಾರಣವಲ್ಲದಿದ್ದಾಗ ಎಲ್ಲರಿಗೂ ಸೇರಬೇಕಾಗಿರುವ ಅಂತರ್ಜಲವನ್ನು ಬೋರಿನ ಒಡೆಯಾರಿಗಿ ನಾವು ಒಬ್ಬರೇ ದೋಚಿದಂತಾಗುವುದಿಲ್ಲವೇ? ಬೇಕಿದ್ದರೆ ಎಲ್ಲರೂ ಹಾಗೆಯೇ ಉಪಯೋಗಿಸಿಕೊಳ್ಳಲಿ ಎನ್ನುವುದು ಧಿಮಾಕಿನ ಮಾತಲ್ಲವೇ?
೨. ಪದೇ ಪದೇ ಕರೆಂಟ್ ಹೋಗುತ್ತದೆ, ಇನ್ವರ್ಟರ್/ಬ್ಯಾಟರಿ ಉಪಯೋಗಿಸುತ್ತೇವೆ: ಅಲ್ಲ, ಲೋಡ್ ಶೆಡ್ಡಿಂಗ್ ಮಾಡುವುದು ಯಾಕೆ? ನಮ್ಮಲ್ಲಿರುವ ಸಂಪನ್ಮೂಲಗಳು ಕೆಲವೊಮ್ಮೆ ನಮ್ಮ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, ಅದಕ್ಕೆ
ವಿದ್ಯುತ್ ಬಳಕೆಯನ್ನು ಕಡಿತಗೊಳಿಸಬೇಕೆಂದಲ್ಲವೇ. ಹಾಗಿರುವಾಗ ಬೇರೆಯವರು ದೀಪ ಆರಿಸಲ್ಲ, ಸುಮ್ಮನೆ ಉರಿಸುತ್ತಾರೆಂದು ಗೊಣಗುವ ನಾವು ಕರೆಂಟ್ ಹೋದಾಗ ಮೊದಲೆ ಚಾರ್ಜ್ ಆಗಿರುವ ಬ್ಯಾಟರಿಯನ್ನುಪಯೋಗಿಸಿ ಕರೆಂಟ್ ಹೋದರೂ ದೀಪ ಆರದ ಹಾಗೆ ನೋಡಿಕೊಂಡರೆ ವಿದ್ಯುತ್ ಬಳಕೆಯಲ್ಲಿ ಕಡಿತವಾದರೂ ಎಲ್ಲಾಯಿತು ಸ್ವಾಮಿ? ಬಳಸುವುದಕ್ಕಿಂತ ಹೆಚ್ಚಾಗಿಯೇ ಉಪಯೋಗಿಸಿಕೊಳ್ಳಲಿಲ್ಲವೆ? ಹೀಗಿದ್ದೂ ಕರೆಂಟ್ ತೆಗೀತಾರೆ ಅನ್ನುವುದು ಎಷ್ಟು ಸರಿ?
೩. ಹಳ್ಳಿ ಕಡೆ ಜನ ಅನಧಿಕೃತವಾಗಿ ಕಾಡು ಕಡಿದೋ ಕಂಡವರ ಜಮೀನನ್ನು ಕಬಳಿಸಿ ಖಾಸಗೀ ಆಸ್ತಿ ಮಾಡಿಕೊಂಡರೆಂದು ಪತ್ರಿಕೆಗಳಲ್ಲಿ ಓದುತ್ತೇವೆ, ರಸ್ತೆ ಬದಿಯ ಗಾಡಿ ಅಂಗಡಿಯವರಿಂದ ಓಡಾಡುವುದೇ ಕಷ್ಟ ಅಂತ ಬೈಕೋತೀವಿ, ಆದರೆ ನಮ್ಮ ಮನೆಯೆದುರು ಸುಂದರವಾಗಿ ನಾಲ್ಕು ಗಿಡ ಹಾಕಿಬಿಡುವ ಅಂತ ರೋಡಿನ ಅಂಚಿನ ತನಕ ಒಂದು ೭-೮ ಅಡಿ ಅಗಲದ ಫುಟ್ಪಾತನ್ನು ಕಬಳಿಸಿ ಹೂಗಿಡ ನಿಟ್ಟು ಖಾಸಗಿ ಉದ್ಯ್ಯಾನ ನಿರ್ಮಿಸುತ್ತೇವೆ, ಬೇರೆಯವರು ಹೂಕೀಳುತ್ತಾರೆ ಅಂತ ಹೊಯ್ಕತೀವಿ, ಇಲ್ಲ, ಮನೆ ಮುಂದೇನೆ ವಾಹನಗಳನ್ನು ರೋಡಿನ ತನಕ ನಿಲ್ಲಿಸಿ ಆರಾಮಾಗಿ ಮನೆಗೆ ಹೋಗಿಬಿಡ್ತೀವಿ, ಇಲ್ಲ ಅಂದರೆ, ಗಾಡಿಗಳು ಮನೆಯಿಂದ ನೆಟ್ಟಗೆ ರೋಡಿಗೇ ಇಳಿಯಬೇಕು, ಹಾಗೆ ಗೇಟಿಂದ ರೋಡಿಗೆ ಕಲ್ಲು ಚಪ್ಪಡಿ ಹಾಕ್ಬಿಡ್ತೀವಿ, ಇದು ಕಬಳಿಕೆ ಅಲ್ವಾ ಸ್ವಾಮಿ? ಇದ್ಯಾವುದೂ ಇಲ್ಲ ಅಂದರೆ ರೋಡಿನ ತನಕ ಶ್ಯಾಮಿಯಾನ ಹಾಕಿರುವ ಹೋಟೆಲ್ಗಳಲ್ಲಿ ಫುಟ್ಪಾತ್ನಲ್ಲಿ ನಿಂತುಕೊಂಡು ದೋಸೇ ತಿನ್ನೋಲ್ವ?
೪. ರೋಡ್ ಸರಿಯಿಲ್ಲ, ರಿಪೇರಿ ಮಾಡಿಲ್ಲ, ತೊಟ್ಟಿ ಕ್ಲೀನ್ ಮಾಡಿಲ್ಲ ಹೀಗೆ ನೂರೆಂಟು ತೊಂದರೆಗಳನ್ನು ಕಂಡವರ ಮುಂದೆಲ್ಲ ಹೇಳ್ಕೋತಾನೆ ಇರ್ತೀವಿ, ಒಮ್ಮೆಯಾದರೂ ಸಂಘಟಿತರಾಗಿ ಹೋಗಿ ವಾರ್ಡ್ ಸದಸ್ಯರ ಹತ್ತಿರ ಹೋಗಿ ಜಾಣ್ಮೆಯಿಂದ ಕೆಲಸ ಸಾಧಿಸಿಕೊಂಡು ಬರುತ್ತೇವೆಯೇ?
ಹೀಗೆ ಸುಮಾರು ಉದಾಹರಣೆಗಳನ್ನು ಕೊಡಬಹುದು, ದೈನಂದಿನ ಬದುಕಿನಲ್ಲಿ ಜವಾಬ್ದಾರಿನೇ ಇಲ್ಲದ ನಮ್ಮ ನಡುವಳಿಕೆಯಿಂದ ನಾವು ನಮ್ಮ ದೇಶದ ಸಮಸ್ತ ಜನರ ಆಸ್ತಿ ಮತ್ತು ಪರಿಸರವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನುಂಗುಹಾಕ್ತಿದ್ದೇವೆ. ಬೇಜವಾಬ್ದಾರಿಯಿಂದ ನುಸುಳಿಕೊಳ್ಳುವುದು ಬೇಡ, ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದು ಬೇಡ, ಇವುಗಳನ್ನೇ ದೇಶಕ್ಕೆ ಮಾಡುವ ಸೇವೆ ಅಂತಾನೋ ಅಥವ ಇದೇ ತ್ಯಾಗಾನೋ ಅನ್ಕೊಂಡೋ ಮನಸ್ಸಿನಲ್ಲಿ ಬೈಕಂಡಾದರೂ ಪರವಾಗಿಲ್ಲ, ಈ ತರಹದ ಕೆಲಸಗಳನ್ನೆಸಗುವುದು ಬೇಡ, ಬದಲಾಗೋಣ, ಕಾರ್ಯತತ್ಪರರಾಗೋಣ. ಬದಲಾಗದಿದ್ದವರಿಗೆ ತಿಳಿಸೋಣ,ಕೇಳದಿದ್ದರೆ ಕೈಲಾಗುವ ಮಟ್ಟಿಗೆ ಚುನಾವಣೆಯಲ್ಲಿ ಸೋಲಿಸುವುದು, ಅವರ ದುಖಾನಿಗೇ ಹೋಗದೇ ಬುದ್ಧಿ ಕಲಿಸುವ.
ನಮ್ಮದು ಪ್ರಗತಿಶೀಲ ದೇಶ. ಪ್ರಗತಿಶೀಲ ದೇಶದ ಪ್ರಜೆಗಳಾದ್ದರಿಂದ ಅಮೇರಿಕದವರಂತೆಯೋ ಪಶ್ಚಿಮ ಯೂರೋಪಿನ ದೇಶಗಳಂತೆಯೋ ನಾವು ಆರಾಮಾಗಿರುವುದು ತಪ್ಪಾಗುತ್ತದೆ. ಮುಂದೆ ಹೋಗಬೇಕು, ಮುಂದಿನ ಜನಾಂಗಕ್ಕೂ ಸ್ವಲ್ಪ ಉಳಿಸಬೇಕೆಂದಾದರೆ ಇಷ್ಟರ ಮಟ್ಟಿಗೆ ಕಾಳಜಿವಹಿಸಬೇಕು, ತೊಂದರೆ/ಕಷ್ಟ ಅನುಭವಿಸಬೇಕು, ತ್ಯಾಗ ಮಾಡಬೇಕು - ನಮ್ಮ ದೇಶ ಅಂತ ಇದ್ದರೆ.
Comments
ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
In reply to ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು by Shyam Kishore
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
In reply to Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು by H.S.R.Raghaven…
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
In reply to Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು by ಶ್ಯಾಮ ಕಶ್ಯಪ
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
In reply to Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು by ASHOKKUMAR
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
In reply to Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು by ಶ್ಯಾಮ ಕಶ್ಯಪ
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
Re: ನಾಗರೀಕ ಜವಾಬ್ದಾರಿಗಳು