ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು
೨. ಕನ್ನಡ ಸಾಹಿತ್ಯದ ಆರಂಭದಿಂದಲೂ ಪ್ರತಿ ಸಾಹಿತಿಯೂ ತನಗೆ ಬೇಕಾದಾಗ, ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಬಳಸುತ್ತಲೇ ಬಂದಿದ್ದಾನೆ. ಇದು ಆಯಾ ಕೃತಿಕಾರರಿಗೆ ಮತ್ತು ರಸಾಸ್ವಾದನೆಗೆ ಸಂಬಂಧಿಸಿದ ವಿಷಯ. ಹಾಗಂತ ಕನ್ನಡ ಪದಗಳನ್ನು ಹುಡುಕಲಿಲ್ಲ ಅಂತಲ್ಲ. ನಿಘಂಟನ್ನು ಓದುವ ಹವ್ಯಾಸ ನನಗೂ ಸ್ವಲ್ಪ ಮಟ್ಟಿಗಿದೆ. ಆದರೆ "ಕೆಲವೊಮ್ಮೆ" ನಿಘಂಟಿನಿಂದ ಪದಗಳನ್ನು ಬಳಸಲೇಬೇಕೆಂದು ಬಳಸಿದಲ್ಲಿ ರಸಾಸ್ವಾದನೆಗೆ ಭಂಗವಾದೀತೆಂದು ನನ್ನ ಅನಿಸಿಕೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ. ಅದರಲ್ಲಿ ಹಿಂಜರಿಕೆ, ತಪ್ಪಿತಸ್ಥ ಮನೋಭಾವ ಯಾಕೆ? ಈ ರೀತಿಯ ಪ್ರಯತ್ನಗಳು (ಶುದ್ಧ ಕನ್ನಡ ಪರ್ಯಾಯ ಪದಗಳ ಬಳಕೆ) ನಿಧಾನವಾಗಿ ಪ್ರಾರಂಭವಾಗಿ, ಕ್ರಮೇಣ ರೂಢಿಗೆ ಬರಬೇಕೆ ಹೊರತು ಒಮ್ಮೆಗೇ ಹಿಂದಿನ ಎಲ್ಲವನ್ನೂ ತಿರಸ್ಕರಿಸಬೇಕು ಎಂದಲ್ಲ. ಎಲ್ಲಕ್ಕಿಂತ ರಸಾಸ್ವಾದನೆ ಮತ್ತು ಸಂವಹನ ಮುಖ್ಯ ಅಂತ ನನ್ನ ಭಾವನೆ. ಹಾಗಂತ ಕನ್ನಡ ತನ್ನ ಸ್ವಾಭಿಮಾನ ಕಳೆದುಕೊಳ್ಳಬೇಕು ಅಂತ ನಾನು ಖಂಡಿತ ಹೇಳುತ್ತಿಲ್ಲ. ನಾನೂ ಒಬ್ಬ "ಹದಿನಾರಾಣೆ ಕನ್ನಡಿಗ". ಉದಾಹರಣೆಗೆ ಆಂಡಯ್ಯನವರ "ಕಬ್ಬಿಗರ ಕಬ್ಬ" ಸಂಪೂರ್ಣ ಕನ್ನಡದ ಕೃತಿ ಅಂತ ಹೇಳುತ್ತಾರೆ. ಆದರೆ ಯಾಕೆ ಅವರ ನಂತರ ಯಾರೂ ಆ ಪ್ರಯತ್ನವನ್ನು ಪದೇ ಪದೇ (ಇನ್ನಷ್ಟು ದೊಡ್ಡ ಮಟ್ಟದಲ್ಲಿ) ಮಾಡಲಿಲ್ಲ? ಅಥವಾ ಆ ಒಂದು ಕೃತಿ ಕೂಡ ಯಾಕೆ ನಮ್ಮನ್ನು "ಗದುಗಿನ ಭಾರತ", ವಚನಗಳು, ದಾಸಸಾಹಿತ್ಯಗಳಷ್ಟು ಆವರಿಸಲಿಲ್ಲ? (ನಾನು ಕೇವಲ ಜನಪ್ರಿಯತೆಯ ಮಾನದಂಡವನ್ನಿಟ್ಟುಕೊಂಡು ಹೇಳುತ್ತಿಲ್ಲ) ನೀವೇ ಹೇಳಿ? ದಯವಿಟ್ಟು ತಪ್ಪು ತಿಳಿಯದಿರಿ, ನಾನು ಆಂಡಯ್ಯನವರ ಕಾವ್ಯದ ಬಗ್ಗೆ ಟೀಕಿಸುತ್ತಿಲ್ಲ. ಆ ಮಟ್ಟಿಗಿನ ಪಾಂಡಿತ್ಯ/ಅರ್ಹತೆ ನನಗಿಲ್ಲವೇ ಇಲ್ಲ. ಇರುವ ವಿಚಾರ ಹೇಳುತ್ತಿದ್ದೀನಿ ಅಷ್ಟೇ.
೩. ಯಾವಾಗ ನಾನು ಒಬ್ಬ ಭಾಷಾಶಾಸ್ತ್ರಜ್ಞನಾಗಿ ಬರೆಯಲು ಕುಳಿತುಕೊಳ್ಳುತ್ತೇನೋ ಆಗ ನನ್ನೊಳಗಿನ ಸಾಹಿತಿ, ರಸಕಾರ, ಅರ್ಧ ಡಲ್ ಆಗುತ್ತಾನೆ. ಭಾಷೆಯ ಮಿತಿ, ದೌರ್ಬಲ್ಯ ಇದು ಅಂತ ನನ್ನ ಭಾವನೆ. ಕುಮಾರವ್ಯಾಸ, ವಚನಕಾರರು, ದಾಸರು ಎಲ್ಲರೂ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದರು ನಿಜ ಆದರೆ ಪ್ರಜ್ಞಾಪೂರ್ವಕವಾಗಿ ಹಟಕ್ಕೆ ಬಿದ್ದು ಬಳಸಲಿಲ್ಲ. ಥಟ್ಟಂತ ನೆನಪಿಗೆ ಬರುತ್ತಿರೋದು: ಕನಕದಾಸರು "ರಕ್ಷಿಸು" ಅಂತಲೂ ಬಳಸಿದರು (ಸಂಸ್ಕೃತ ಮೂಲ) ಹಾಗೇ ಲೀಲಾಜಾಲವಾಗಿ "ಪೊರೆ" ಅಂತಲೂ ಬಳಸಿದರು. ಅದರಲ್ಲಿ ಕಾಲದ ಹೊಡೆತದಲ್ಲಿ "ರಕ್ಷಿಸು" ಬಳಕೆ ಉಳಿದಿದೆ "ಪೊರೆ" ಹೆಚ್ಚಾಗಿ ಬಳಕೆಯಲ್ಲಿಲ್ಲ. ಸೋಮೇಶ್ವರನ ಶತಕವನ್ನೇ ನೋಡಿ, "ರವಿಯಾಕಾಶಕೆ ಭೂಷಣಂ" ಅಂತ ಬರೀತಾನೆ. ಇದು "ಸಂಸ್ಕೃತ ಭೂಯಿಷ್ಠ" ಅಂತಂದ ಮಾತ್ರಕ್ಕೆ ಆತ ಕನ್ನಡ ಪದಗಳನ್ನು ಹುಡುಕಿಯೇ ಇರಲಿಲ್ಲ ಅಂತಲೇ? ಅಲ್ಲ, ಸನ್ನಿವೇಶಕ್ಕೆ ತಕ್ಕಂತೆ, ರಸಕ್ಕೆ ತಕ್ಕಂತೆ ಕವಿ ಪದಗಳನ್ನು ಬಳಸಿದ್ದಾನೆ. ಇದು ಬರೀ ಎರಡು ಉದಾಹರಣೆಗಳು ಅಷ್ಟೆ. ೪. ಕೃತಿಯೊಂದನ್ನು ಅಭ್ಯಾಸ ಮಾಡುವಾಗ, ಕಠಿಣ ಪದ ಎದುರಾದರೆ ನಿಘಂಟು ಬೇಕಾಗುತ್ತದೆ ನಿಜ. ಆ ಕೃತಿ ರಚನೆಯಾದ ಕಾಲದಲ್ಲಿ ಆ ಪದ ಬಳಕೆಯಲ್ಲಿತ್ತು ಅಂದ ಮಾತ್ರಕ್ಕೆ ಈಗಿನ ಕಾಲಕ್ಕೂ ಎಲ್ಲವೂ ಸಲ್ಲಬೇಕೆಂದೇನೂ ಇಲ್ಲ. ಮಂಕುತಿಮ್ಮನ ಕಗ್ಗ ಓದುತ್ತಿದ್ದೀವಿ ಅಂತ ಇಟ್ಟುಕೊಳ್ಳೋಣ. "..ದಂದುಗವನ್ ಅರೆಗಯ್ದು" ಅಂತ ಓದುತ್ತೀವಿ. "ದಂದುಗ" ಅರ್ಥ ಗೊತ್ತಾಗಲಿಲ್ಲ. ನಿಘಂಟು ತೆಗೆದು ನೋಡಿದ್ವಿ. "ದುಃಖ" ಅಂತ ಅರ್ಥ ಗೊತ್ತಾಯಿತು. ಸರಿ, "ದುಃಖ"ಕ್ಕಿಂತ "ದಂದುಗ" ಕನ್ನಡ ಮೂಲದ್ದು ಅಂತ ನಾಳೆಯಿಂದ ನಾನು ಅದನ್ನು ಬಳಸಲು ಸಾಧ್ಯವೇ (ಇವತ್ತಿನ ಸನ್ನಿವೇಶದಲ್ಲಿ)? ನೀವೇ ಹೇಳಿ? ಆಕಸ್ಮಾತ್ ಬಳಸಲಿಲ್ಲ ಅಂದಲ್ಲಿ ನಾನು ಕನ್ನಡಕ್ಕೆ ನಿಷ್ಠನಾಗಿಲ್ಲ ಅಂತ ಅರ್ಥವೇ?೫. ಹೊಸ ಪದಗಳಿಗೆ ನನ್ನ ಮನದುಂಬಿದ ಸ್ವಾಗತವಿದೆ. ಬಳಸೋಣ. ಆದರೆ ಇರುವುದನ್ನು "ತ್ಯಾಜ್ಯ" ಅನ್ನುವ ಭಾವನೆಯಿಂದ ಕೋಪದಿಂದ ಬಿಸುಟು ಹೊಸದನ್ನು ಬಳಸುವುದು ಬೇಡ. ಯಾವುದೇ ಭಾಷೆ, ಇನ್ನೊಂದರ ಪದಗಳನ್ನು ಹಿತ-ಮಿತವರಿತು ಬಳಸಿದಲ್ಲಿ, ಅದು ಕೀಳರಿಮೆಯನ್ನು ತೋರಿಸುವುದಿಲ್ಲ ಅಂತ ನನ್ನ ಬಲವಾದ ನಂಬಿಕೆ. ಕನ್ನಡ ಯಾವ ಭಾಷೆಗೂ ಅಡಿಯಾಳಾಗುವುದು ನನಗೆ ದೇವರಾಣೆಗೂ ಇಷ್ಟವಿಲ್ಲ (ಸಂಸ್ಕೃತವನ್ನೂ ಸೇರಿಸಿ). ಆದರೆ ಎಲ್ಲವನ್ನೂ ಕನ್ನಡೀಕರಿಸುವಾಗ ಆಗುವ ಅಪಾಯಗಳ ಬಗ್ಗೆ ಕೂಡಾ ಸ್ವಲ್ಪ ಎಚ್ಚರ ಇರುವುದು ಒಳ್ಳೆಯದು ಅಲ್ಲವೇ? ನೀವು ಗಮನಿಸಿ ನೋಡಿ; ಒತ್ತಾಯದಿಂದ ಯಾವ ಇತರೆ ಭಾಷೆಯ ಪದವೂ ಕನ್ನಡದಲ್ಲಿ ನಿಂತಿಲ್ಲ. ಉದಾ: "ಧೂಮ್ರ ಶಕಟ" v/s "ಉಗಿಬಂಡಿ". ಯಾವ ಪದ ಬಳಕೆಯಲ್ಲಿದೆ ಹೇಳಿ? ಆದರೆ "ಧೂಮಪಾನ" ಪದಕ್ಕೆ ಬಂದಾಗ "ಹೊಗೆಬತ್ತಿ ಸೇದುವುದು" ಅನುವಾದ ಬಹಳ ಉದ್ದವಾಯಿತು. ಹಾಗಾಗಿ "ಧೂಮಪಾನ" ಉಳಿಯಿತು. ಇಂಗ್ಲಿಷ್ ಬಹಳ ಬಲವಾಗಿ ಬೆಳೆಯುತ್ತಿರಲು ಕಾರಣ ಅಲ್ಲಿ ಯಾವ ಭಾಷೆಯಲ್ಲಿ ಒಳ್ಳೆಯ ಪದ ಸಿಗುತ್ತೋ ಅದನ್ನು ತಕ್ಷಣ ತಮ್ಮದಾಗಿಸಿಕೊಂಡು ನಿಘಂಟಿನಲ್ಲಿ ಕೂಡಾ ಸೇರಿಸಿಬಿಡುತ್ತಾರೆ. ಉದಾ: "Gyan" ಮತ್ತು "Guru" ಪದಗಳು. ನಿಮಗೆ ಇವು ಇಂಗ್ಲಿಷ್ ನಿಘಂಟಿನಲ್ಲಿ ಕೂಡ ನೋಡಲು ಸಿಗುತ್ತವೆ! ಅವರು ಸಂದರ್ಭಕ್ಕೆ ತಕ್ಕಂತೆ ಬಳಸುತ್ತಾರೆ. "Guru" ಅಂದರೆ ಶಿಕ್ಷಕ ಅಂತ ಅನ್ನೋಲ್ಲ್ಲ. Expert ಅಂತ ಅರ್ಥ ಕೊಡುತ್ತಾರೆ. ಇಂಗ್ಲಿಷ್ ತನ್ನ ಬತ್ತಳಿಕೆಗೆ ಇನ್ನೆರಡು ಅಸ್ತ್ರ ಸೇರಿಸಿಕೊಳ್ಳುತ್ತದೆ, ಬೆಳೆಯುತ್ತದೆ. ಆದರೆ ನಾವು "ಗುರು" ಬೇರೆ ಭಾಷೆಯ ಪದ ಆಯಿತು ಅಂತ ದೂರ ತಳ್ಳುತ್ತೇವೆ. ಬೇರೆ ಪದ ಹುಡುಕುತ್ತೇವೆ. ಯಾಕೆ? ಯಾಕೆ?
೬. ಅಚ್ಚ ಕನ್ನಡದ ಪರ್ಯಾಯ ಪದಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸೋಣ. ಬಳಸೋದಕ್ಕೆ ನಮಗೆ ಯಾರಿಂದಲೂ "official" ಅನುಮತಿಯೇನೂ ಬೇಕಾಗಿಲ್ಲವಲ್ಲ. ಆ ಹೊಸ ಪದದಲ್ಲಿ ಆಕರ್ಷಣೆಯಿದ್ದಲ್ಲಿ, ಎಲ್ಲರಿಗೂ "ಅಪೀಲ್" ಆದಲ್ಲಿ ಅದು ಬಳಕೆಗೆ ಬರುತ್ತೆ. ಬೇಡಾ ಅಂತ ಯಾರೇ ಕೂಗಾಡಿದರೂ ಆಗ ಅದನ್ನು ತಡೆಯಲು ಆಗೋಲ್ಲ. ಉದಾ: "ಮಚ್ಚಾ" ಪದ. ಕನ್ನಡದಲ್ಲಿ "ಮಗಾ" ಅಂತಾನಾದ್ರೂ ಬಳಸಬಹುದು, ಈ "ಮಚ್ಚಾ" ಯಾಕೆ? ಏನು ಮಾಡೋದು, ಒಮ್ಮೆ ಈ ಮಾಸ್ ಅಪೀಲ್ ಆಗಿ ಬಿಟ್ತರೆ ಬಹಳ ಕಷ್ಟ. ಇದೇ ಮಾಸ್ ಅಪೀಲ್ ಒಳ್ಳೆಯ ಹೊಸ ಪದಗಳ ಬಗ್ಗೆ ಬರುವಂತೆ ನಾವೇ ಸೃಷ್ಟಿಸೋಣ. ಎಲ್ಲರೂ ಕೈ-ಕೈ ಜೋಡಿಸೋಣ. ಏನಂತೀರಾ? ಇಂಗ್ಲಿಷ್ ಪದಗಳನ್ನು ಬರಮಾಡಿಕೊಳ್ಳುವುದು ಖಂಡಿತಾ ತಪ್ಪು ಅಂದ್ರೆ ಕೈಲಾಸಂರನ್ನು ನಾವು ನಾಳೆಯಿಂದ ಪಕ್ಕಕ್ಕಿಡಬೇಕಾಗುತ್ತೆ! ನನ್ನ ಅನಿಸಿಕೆ ಏನಪ್ಪ ಅಂದ್ರೆ ಆ ರೀತಿಯ ಹಟ ಬೇಡ. ಹಾಗಂತ ನಾಳೆಯಿಂದ ಇಂಗ್ಲಿಷನ್ನು ಕನ್ನಡದಲ್ಲಿ ಬರೆದು "ಇದೂ ಕನ್ನಡವೇ" ಅಂತ ಹೇಳಬಹುದು ಅಂತಲ್ಲ. ಸಾಹಿತ್ಯ ಸೃಷ್ಟಿಗೆ ತಕ್ಕಷ್ಟು, ರಸಾಸ್ವಾದನೆಗೆ ಬೇಕಿದ್ದಷ್ಟು, ಬೇರೆ ಪದಗಳ ಬಳಕೆಯೂ ಇರಲಿ. ೭. ಯಾವುದೋ ಒಂದು ಭಾಷೆಯ ಒತ್ತಡದಿಂದ ಇನ್ನೊಂದು ಭಾಷೆ ನಿಂತ ನೀರಾಗುತ್ತದೆ/"ಮಡಿವಂತಿಕೆ" ಮೈಗೂಡಿಸಿಕೊಳ್ಳುತ್ತದೆ ಅನ್ನುವುದು ಕೇವಲ ಒಂದು ನಂಬಿಕೆ. Lingusitic ಆಗಿ ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಅಂತ ನನ್ನ ಭಾವನೆ. ೮. ಕಳೆದ ವರ್ಷ ನಮ್ಮ ಸಂಸ್ಥೆಯಲ್ಲಿ ಕನ್ನಡಿಗ ಸಹೋದ್ಯೋಗಿಗಳ ಜತೆ ಒಂದು ಸಮೀಕ್ಷೆ/ರಸಪ್ರಶ್ನೆ ನಡೆಸಿದ್ದೆ. ನೀವು ದಿನಾಲೂ ಬಳಸುವ ಆಂಗ್ಲ ಪದಗಳಿಗೆ ಕನ್ನಡ ಪದಗಳನ್ನು ಹೇಳಿ ಅಂತ. Electricity - ಗೊತ್ತಿಲ್ಲ (ಅದೇನೋ ವಿದ್ಯುತ್ ಅಂತ ಶುರು ಆಗುತ್ತಪ್ಪಾ, ಗೊತ್ತಿಲ್ಲ!), Shopping Complex - ಗೊತ್ತಿಲ್ಲ; ಕೊನೆಗೆ ತಲೆಕೆಟ್ಟು ಸುಮ್ಮನಾದೆ. ಯಾಕೆ ಹೀಗೆ ಅಂತ ಕೇಳಿದೆ. ಒಬ್ಬರು ಹಿರಿಯರು ಬಹಳ ಚೆನ್ನಾಗಿ ಹೇಳಿದರು. "ಶ್ಯಾಮ್, ನನ್ನ ಮಗಳು ಸ್ಕೂಲಿಗೆ ಹೋಗುತ್ತಾಳೆ. ಆಕೆಯ ಪುಸ್ತಕದಲ್ಲಿರುವ ಕನ್ನಡ ಪದಗಳ ಪೈಕಿ ಸುಮಾರು ನಲವತ್ತು % ನಾವು ಇವತ್ತಿನ ದಿನ ಬಳಸುವುದೇ ಇಲ್ಲ. ಎಲ್ಲದಕ್ಕೂ ನಿಘಂಟು ತೆಗೆದು ನೋಡಬೇಕು. ಯಾಕೆ ಹೀಗೆ? ಕನ್ನಡದಲ್ಲಿ ಸಮಕಾಲೀನ ಪದಗಳು, ಬಳಸಲು ಸುಲಭವಾಗಿರುವಂಥದ್ದು ಇಲ್ವೇ ಇಲ್ವಾ" ಅಂತ. ಎಷ್ಟು ವಿಚಿತ್ರ ಅಲ್ವಾ? ಈ ಬಗ್ಗೆ ನಾನು ಬರೆದು ನಿಮ್ಮ ಆಲೋಚನೆಗೆ ಅಡ್ಡಿ ಬರೋಲ್ಲ. ನೀವೇ ಯೋಚಿಸಿ ನೋಡಿ. ಇರುವ ಪದಗಳಾದ "ವಿದ್ಯುತ್, ಆಹ್ವಾನ ಪತ್ರಿಕೆ, ಆರೋಗ್ಯ" ಮುಂತಾದುವುಗಳನ್ನು ನಮ್ಮ ಎಳೆಯರಲ್ಲಿ ಬಳಕೆಯಲ್ಲಿರುವಂತೆ ಉಳಿಸಿಕೊಳ್ಳೋಣ. ಆಮೇಲೆ, ಬೌದ್ಧಿಕವಾಗಿ ಒಂದು ಹಂತ ದಾಟಿದ ಮೇಲೆ ಯಾರೇ ಆದರೂ ಕನ್ನಡ ನಿಘಂಟು ಇವುಗಳನ್ನು ತೆಗೆದು ನೋಡಲು ಪ್ರಯತ್ನ ಪಡುತ್ತಾರೆ. ಇಲ್ಲಾಂದ್ರೆ, "ಹೋಗೋ ಮಾರಾಯ, ನಿಮ್ಮ ಕನ್ನಡದಲ್ಲಿ ಒಂದೊಂದಕ್ಕೂ ನೀವು ಕಿತ್ತಾಡುತ್ತಿರಿ, ನಾವು ಆರಾಮಾಗಿ ಇಂಗ್ಲೀಷಿನ Electicity, Shopping Complex etc etc ಬಳಸುತ್ತಾ ಆರಾಮಾಗಿರುತ್ತೀವಿ" ಅಂತನ್ನುವ ಸ್ಥಿತಿ ಇವತ್ತಲ್ಲಾ ನಾಳೆ ಖಂಡಿತ ಬರುತ್ತೆ. ಮೊದಲು ಇರುವುದನ್ನು ಉಳಿಸೋಣ, ಜತೆಯಲ್ಲಿ ಬೆಳೆಸೋಣ. ದಯವಿಟ್ಟು ಇರುವುದನ್ನು ಕೆಡವಿ ಹೊಸತನ್ನು ಕಟ್ಟೋಣ ಅನ್ನುವ ಸಾಹಸ ಬೇಡ ಅಂತ ನನ್ನ ಅನಿಸಿಕೆ. ಆಮೇಲೆ ಇರುವುದೂ ಕಳೆದು ಹೋದರೆ?ಇನ್ನೂ ಏನೇನೋ ಇದೆ ತಲೆಯಲ್ಲಿ. ಇಲ್ಲ, ಬೆಸೆಯುವ ಕೊಂಡಿ ಇಲ್ಲದಂತಾಗಿ ಅಲ್ಲಲ್ಲಿ ವಿಚಾರ ಮಸುಕಾದಂತೆ ಅನ್ನಿಸುತ್ತಿದೆ. ಮುಂದೊಮ್ಮೆ ನನ್ನ ವಿಚಾರಗಳನ್ನು ನಿಮ್ಮ ಮುಂದಿಡುತ್ತೀನಿ (ಈಗ ಯಾರೂ ಈ ನನ್ನ ಲೇಖನಕ್ಕೆ ಬಯ್ಯಲಿಲ್ಲ ಅಂದಲ್ಲಿ). ಸದ್ಯಕ್ಕಿಷ್ಟು ಸಾಕು.
"ಸಿರಿಗನ್ನಡಂ ಗೆಲ್ಗೆ"- ಶ್ಯಾಮ್ ಕಿಶೋರ್
Comments
Re: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು
In reply to Re: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು by venkatesh
ಉತ್ತರ: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು
ದಯವಿಟ್ಟು ಗಮನಿಸಿ: ಲೇಖನದಲ್ಲಿ formatting ತೊಂದರೆಗಳು