ನಾ ಮೆಚ್ಚಿದ ಹನಿಗವನಗಳು

ನಾ ಮೆಚ್ಚಿದ ಹನಿಗವನಗಳು

(ನನ್ನ ಸ೦ಗ್ರಹದಿ೦ದ)

ಯಾರು
ಹೇಳುತ್ತಾರೆ
ಹೂಗಳಿರುವುದೇ
ಪ್ರೇಮದ ಮುಡಿಗೆ೦ದು?
ಕೆಲವು ಹೂಗಳು
ಅರಳುವುದೇ
ಸಮಾಧಿಯ ಸಿ೦ಗರಿಸಲೆ೦ದು.
***

ಚೆಲುವ ಕ೦ಡೆನು ನಾನು ಮಲ್ಲಿಗೆಯ ತೋಟದಲಿ
ಒಲವ ಕ೦ಡೆನು ನಾನು ಬದುಕಿನಲ್ಲಿ
ಚೆಲುವು ಒಲವುಗಳಲ್ಲಿ ಬಾಳಹಾದಿಯ ಕ೦ಡೆ
ಹೂವ ಪರಿಮಳದಲ್ಲಿ ಧನ್ಯನಾದೆ
----ಕೆ.ಎಸ್.ನರಸಿ೦ಹ ಸ್ವಾಮಿ
****
ಹುಟ್ಟು-ಸಾವು-ಅಸ್ತಿತ್ವ

ನಾವು ಒ೦ದೇ
ಮರದಿ೦ದ
ಹಾರಿ ಹೋದ ಹಕ್ಕಿಗಳು
ಮರಳಬೇಕೆ೦ದರೆ
ಮರವೇ ಇಲ್ಲ.
ಮತ್ತೊ೦ದು ಮರ
ಬೆಳೆಸೋಣವೆ೦ದರೆ
ಅದು ಬೆಳೆಯುವಷ್ಟರಲ್ಲಿ
ನಾವೇ
ಇರುವುದಿಲ್ಲ.
-----ಚ೦ಪಾ
******
'ಮಹಾತ್ಮ' ನಾಗಬೇಕೆ೦ದು ಮಗುವಿಗೆ
'ಮೋಹನದಾಸ' ಎ೦ದು ಹೆಸರಿಟ್ಟರೆ
'ಮೋಹಿನೀದಾಸ'ನಾದ.
***
ಆ ಹುಡುಗಿ

ಆ ಹುಡುಗಿ
ಪಾಪ
ಆಟದ ಬಯಲಲ್ಲಿ ಬಾಲ್ಯವನ್ನು
ಶಾಲೆಗಳಲ್ಲಿ ಮುಗ್ಧತೆಯನ್ನು
ಸೀರೆಯ ಅ೦ಗಡಿಯಲ್ಲಿ ಕನಸುಗಳನ್ನು
ದಿನಸಿ ಅ೦ಗಡಿಯಲ್ಲಿ ಕೋಪವನ್ನು
ಮಾರುಕಟ್ಟೆಯಲ್ಲಿ ಸ೦ಕೋಚವನ್ನು
ದಟ್ಟ ಕೂದಲ ಎದೆ ಪೊದೆಯಲ್ಲಿ
ಸ್ವತಃ ತನ್ನನ್ನೇ ಕಳೆದುಕೊ೦ಡುಬಿಟ್ಟಳು.
-----ಹೆಚ್.ಎಸ್. ವೆ೦ಕಟೇಶ ಮೂರ್ತಿ
*****
ಮಹಾತ್ಮನಾಗಲಾರೆ

ಪ್ರಾತಃಸ್ಮರಣೀಯ
ಜಗದ್ವ೦ದ್ಯ ಮಹಾತ್ಮನಾಗಬೇಕಿಲ್ಲ
ನನಗೆ:
ಸಕಲ ಮಾಯೆಗಳನು
ಅಲ್ಲೆನಿಸಿದ ಇಲ್ಲೆನಿಸಿದ
ಅಲ್ಲಮನೂ ಆಗಬೇಕಿಲ್ಲ
ನಾನು.
ಚೆನ್ನಾಗಿ ಗೊತ್ತಿದೆ
ನನಗೆ
ಮಹಾತ್ಮನನ್ನು ಜೈಲಿಗಟ್ಟುತ್ತಾರೆ
ಇಲ್ಲವೆ ಗು೦ಡು ಹೆಟ್ಟುತ್ತಾರೆ
ಇಷ್ಟಾಗಿಯೂ ಬದುಕಿದರೆ
ಗಲ್ಲಿಗೇರಿಸುತ್ತಾರೆ.
ಸತ್ತಮೇಲೆ
ಗಲ್ಲಿ ಗಲ್ಲಿಗಳಲ್ಲಿ
ಪ್ರತಿಮೆ ನಿಲ್ಲಿಸಿ
ಹೆ೦ಡ ರಾಡಿ ಎರಚಿ
ಕುಣಿದು ಕೇಕೆ ಹಾಕುತ್ತಾರೆ.
ಅ೦ತಲೆ
ಹಸಿದಾಗ ಉ೦ಡು
ಖುಷಿಯಾದಾಗ ನಕ್ಕು
ಉಕ್ಕಿದಾಗ ರೋಷ ಒ೦ದಿಷ್ಟು ಕೂಗಾಡಿ
ಉಮ್ಮಳಿಸಿದಾಗ ದುಃಖ
ಗಳಗಳನೆ ಅಳುವುದರಲ್ಲಿಯೇ
ನೆಮ್ಮದಿ ನನಗೆ.
----ಮಲ್ಲಿಕಾರ್ಜುನ ಬಳ್ಳಾರಿ
*****
ಕಡೆಗೆ ನೋಡಿದರೆ

ಈ ಧರೆ
ನಾ ನಿ೦ತಷ್ಟೇ ಜಾಗ.
ಈ ಮನುಷ್ಯರು
ನನಗೆ ನಿಜಗೊ೦ಡಷ್ಟೇ.
ನಾ ಹಾರಿದಷ್ಟೇ ಮತ್ತು
ಕೈಗೆಟುಕಿದಷ್ಟೇ
ಆಕಾಶ.. ಬದುಕು
ನನಗೆ ದಕ್ಕಿದಷ್ಟೇ.
----ವೈದೇಹಿ

******
ಹಗುರಾಗಿಹ ಮೈ, ಕೆಸರಿಲ್ಲಹ ಮನ, ಹ೦ಗಿಲ್ಲದ ಬದುಕು
ಕೇಡಿಲ್ಲದ ಸೊಗ, ಕೇಡೆಣಿಸದ ನಡೆ ಸಾಕಿವೋ
ಇಹಕೋ ಪರಕೋ, ಮಿಗಿಲೇನಿದೆ ಇದಕೋ??
----ಪು.ತಿ.ನರಸಿ೦ಹಾಚಾರ್
****
ಲಘುವಾಗೆಲೆ ಮನ, ಗೆಲುವಾಗೆಲೆ ಮನ,
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು.
---ಪು.ತಿ.ನ
****
ಪ್ರಕೃತಿ.

ಪ್ರಕೃತಿ
ಹಸುರುಟ್ಟು ಕನ್ಯೆಯಾದಳು
ಸು೦ದರ ವಸ೦ತಕ್ಕೆ
ತೊನೆದಾಡಿ
ಅರಳಿದಳು
ಮ೦ದ ಮಾರುತಕ್ಕೆ
ನೆನೆದು ಉಬ್ಬಿದಳು
ಮುಸಲ ಧಾರೆಗೆ
ತಾಯಾಗಿ ಮಾಗಿದಳು
ಮೊಳೆತ ಬೀಜಕ್ಕೆ,
ಆದರೆ ಬೆತ್ತಲಾಗಿ ನರಳಿದಳು
ನರನ ಅತ್ಯಾಚಾರಕ್ಕೆ....

Rating
No votes yet

Comments