ಹೀಗೇ ಸುಮ್ಮನೆ...

ಹೀಗೇ ಸುಮ್ಮನೆ...

ಪತ್ರಿಕೆಗಗಳಲ್ಲಿ, ಇಂಟರ್ ನೆಟ್ ನಲ್ಲಿ ಬರವಣಿಗೆಗಳಿಗೇನೂ ಕೊರತೆ ಇಲ್ಲ. ಆದರೆ ನಾವು ಯಾಕಾಗಿ ಬರೆಯುತ್ತೇವೆ? ತಲೆ ಕೆಡಸಿಕೊಂಡು ಬರೆಯುವ ನನ್ನ ಮಿತ್ರರು ಸ್ವಲ್ಪ ನಮ್ಮ ತಲೆ ಒಳಗೆ ಏನಿದೆ? ಅಂತಾ ಹಂಚಿಕೊಳ್ಳುವಿರಾ?
ನನಗೇನೋ ಹಲವು ವೇಳೆ ಅನ್ನಿಸಿದ್ದು ನಮ್ಮ ತೆವಲಿಗಾಗಿ ಬರೆಯುತ್ತೇವೆಂದು.ನನ್ನ ಮಿತ್ರ ಡಾ. ಗ್ರಾ.ಬ. ಹರೀಶ್ ಅಂತೂ ನಮ್ಮ ತೀಟೆಗೆ ಬರೀತೀವಿ ಅಂತಾರೆ. ತೀಟೆ ಪದಕ್ಕಿಂತ ತೆವಲು ಅನ್ನೋ ಪದ ಸೌಮ್ಯವಾಗಿ ಕಂಡಿದ್ದರಿಂದ ಆ ಪದ ಬಳಸಿದೆ, ಅಷ್ಟೆ. ಬರವಣಿಗೆ ಯಿಂದ ಏನೂ ಪ್ರಯೋಜನ ವಾಗಬೇಡವೇ? ಯಾರಿಗೇ-ಅಂತಾ ಕೇಳ್ತೀರಾ? ನಿಜವಾಗಲೂ ಸಮಾಜದ ಮೇಲೆ ಅಂತಾ ಹೇಳ್ತೀನಿ. ಕತ್ತಿಗಿಂತ ಲೇಖನಿ ಹರಿತ ಅಂತಾರೆ ಅಲ್ವಾ?
ರಾಜಕಾರಣಿಗಳನ್ನು ನೋಡಿದಾಗಲೆಲ್ಲಾ ನನಗೆ ಹಾಗೆ ಅನ್ನಿಸುತ್ತೆ. ಏನ್ ಪ್ರಯೋಜನ ಬರೆದು? ನಾನು ನೋಡಿದ ಹಾಗೆಯೇ ಮೋಟಾರ್ ಬೈಕ್ ಕೊಳ್ಳಲು ಸಾಧ್ಯವಿಲ್ಲದಿದ್ದ ರಾಜಕಾರಣಿ ಈಗ ಸಾವಿರ ಸಾವಿರ ಕೋಟಿ ಆಸ್ತಿಯ ಒಡೆಯ.ಆಸ್ತಿ ಹೇಗೆ ಸಂಪಾದಿಸಿದಿರಿ? ಅಂತಾ ಕೇಳೋ ದಾತ ಯಾರೂ ಇಲ್ಲ. ಕಾರಣ ಎಲ್ಲಾ ರಾಜಕಾರಣಿಗಳ ಕಥೆಯೂ ಇದೇ ಆಗಿದೆ. ಇನ್ನು ನಮ್ಮ ಅಧಿಕಾರಿವರ್ಗದಲ್ಲಿ ಎರಡು ರೀತಿಯ ಜನರಿದ್ದಾರೆ. ಜೀವನವೆಲ್ಲಾ ದುಡಿದು ಬ್ಯಾಂಕ್ ಸಾಲ ಮಾಡಿ ತಾನು ನಿವೃತ್ತಿ ಪಡೆಯೋದರಲ್ಲಿ ಆರು ಸ್ಕೇರ್ ಮನೆ ಕಟ್ಟಿದರೆ ಪಾಪ ಸುಸ್ತೋ ಸುಸ್ತು. ಈ ರೀತಿಯ ಜನ ನೂರಕ್ಕೆ ಐವತ್ತಕ್ಕೂ ಹೆಚ್ಚು. ಅವರು ಇನ್ಯಾವುದಕ್ಕೂ ತಲೆ ಕೆಡಸಿ ಕೊಳ್ಳುವುದಿಲ್ಲ. ಅಬ್ಭಾ, ನನ್ನ ಮಕ್ಕಳನ್ನು ಅಂತೂ ಬಿ.ಇ. ಮಾಡಿಸಿ ಬಿಟ್ಟೆ, ಹೆಣ್ಣು ಮಗಳ ಮದುವೆ ಮಾಡಿ ಬಿಟ್ಟೆ, ಎಂಬ ನಿಟ್ಟುಸಿರು. ಇವರೆಲ್ಲಾ ಪಾಪದ ಜೀವಿಗಳು. ಅವರ ಕಣ್ ಮುಂದೆ ದೇಶ ಕೊಳ್ಳೆ ಹೊಡೆದರೂ ಅವರಿಗೇನೂ ಅನ್ನಿಸುವುದೇ ಇಲ್ಲ. ಇನ್ನು ಎರಡನೇ ,ಅಲ್ಲಲ್ಲಾ ಇದೇ ಮೊದಲನೇ ವರ್ಗ ದೇಶವನ್ನು ಲೂಟಿ ಮಾಡೋ ಅಧಿಕಾರಿಗಳು. ಇತ್ತೀಚಿಗೆ ಲೋಕಾಯುಕ್ತರೇನೋ ಒಂದಿಷ್ಟು ಬೇಟೆ ಆಡಿದ್ದಾರೆ. ಆದರೆ ಅದು ಒಂದು ಪರ್ಸೆಂಟೂ ಇಲ್ಲ.
ನಮ್ಮ ರಾಜಕಾರಣಿಗಳನ್ನು ಕೇಳೋರೇ ಇಲ್ಲ ಬಿಡಿ. ನಮ್ಮ ಊರುಗಳಲ್ಲಿ ರಸ್ತೆ ಗುಂಡಿ ಬಿದ್ದಿರುತ್ತೆ, ನಲ್ಲಿಯಲ್ಲಿ ವಾರಕ್ಕೊಮ್ಮೆ ನೀರು ತೊಟ್ಟಿಕ್ಕುತ್ತೆ.ಕರೆಂಟು ಕೇಳಲೇ ಬೇಡಿ. ಆದರೆ ರಾಜಕಾರಣಿಗಳ ಭವ್ಯ ಬದುಕನ್ನು ನೋಡಿದ್ದೀರಾ? ನಮ್ಮ ದೇಶವನ್ನೇ ಲೂಟಿ ಮಾಡಿರುವ ಅನೇಕರಿಗೆ ಹಿಂದೆ ಮುಂದೆ ಸರ್ಕಾರಿ ರಕ್ಷಣೆ. ನಮ್ಮ ದೇಶದಲ್ಲಿನ ರಾಜಕಾರಣಿಗಳು ಹಾಗೂ ಬ್ರಷ್ಟ ಅಧಿಕಾರಿಗಳು ಲೂಟಿ ಮಾಡಿರುವ ನಮ್ಮ ದೇಶದ ಸಂಪತ್ತನ್ನು ಸರ್ಕಾರ ವಶ ಪಡಿಸಿಕೊಂಡರೆ ದೇಶದ ಸರ್ವತೋ ಮುಖ ಅಭಿವೃದ್ಧಿಗೆ ಹಣ ಸಾಕಾಗ ಬಹುದೇನೋ! ನಮ್ಮ ತಲೆ-ತಲಾಂತರಗಳಿಂದ ಬಂದ ಪಿತ್ರಾರ್ಜಿತ ಆಸ್ತಿಯನ್ನು ಮಲಗಿಕೊಂಡು ತಿಂದರೂ ಇನ್ನೂ ನಾಲ್ಕು ತಲೆ ಮಾರಿಗಾಗುತ್ತದೆ ಎಂಬುದು ಅನೇಕ ರಾಜಕಾರಣಿಗಳ ಅಂಬೋಣ.ಇಂತಾ ಸಂದರ್ಭದಲ್ಲಿ ಒಂದು ಮಾತು ನನಗೆ ನೆನಪಾಗುತ್ತದೆ. ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿಯವರ ಆಡಳಿತದಲ್ಲಿ " ಉಳುವವರಿಗೇ ಭೂಮಿ" ಎಂಬ ಕಾನೂನು ಬಂದು ನಮ್ಮಂತ ಬಡವರ ಅರ್ಧ-ಮುಕ್ಕಾಲು ಎಕರೆ ಜಮೀನು ಕೂಡ ಉಳುವವರ ಪಾಲಾಯ್ತು. ನನಗೆ ಅದರಲ್ಲೇನೂ ಬೇಸರವಿಲ್ಲ. ಆದರೆ ಅದೇ ಸಂದರ್ಭದಲ್ಲಿ ಇಂದಿನ ರಾಜಕಾರಣಿಗಳ ಜಮೀನೂ ಸಹ ಉಳುವವರ ಪಾಲಾಗಿರಬೇಕು. ಅಥವಾ ಇವರೇ ನೇಗಿಲು ಹಿಡಿದು ನೂರಾರು ಎಕರೆ ಜಮೀನು ಉತ್ತಿರಬೇಕು. ಯಾವುದು ಸತ್ಯ? ನಮ್ಮ ದೇಶದಲ್ಲಿ ನ ಅನೇಕ ರಾಜಕಾರಣಿಗಳು ಸಾವಿರರು ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನಒಡೆಯರೆಂದು ಎಂತಹಾ ಸಾಮಾನ್ಯ ಜನರಿಗೂ ಖಂಡಿತವಾಗಿಯೂ ಗೊತ್ತು. ಆದರೆ ಯಾರೂ ಏನೂ ಮಾಡುವಂತಿಲ್ಲ. ಈ ದೇಶದ ದುರ್ದೈವವೆಂದರೆ ದುಡಿಮೆ ಮಾಡದ ಯುವಕರ ದೊಡ್ದ ಗುಂಪು ರಾಜ ಕಾರಣಿಗಳ ಹಿಂದೆ ನಾಲ್ಕಾರು ವರ್ಷ ಓಡಾಡಿ ನಂತರ ಕೆರೆ ಕಟ್ಟೆ ಗಳ , ಚಿರಂಡಿ-ರಸ್ತೆಗಳ ಕಾಮಗಾರಿಗಳ ಗುತ್ತಿಗೆ ಪಡೆದು ಇನ್ನು ನಾಲ್ಕಾರು ವರ್ಷಗಳಲ್ಲಿ ಶ್ರೀಮಂತರಾಗಿ ಬಿಡುತ್ತಾರೆ. ಯಾವ ಯುವ ಶಕ್ತಿ ನಮ್ಮ ರಾಜಕಾರಣಿಗಳ ಅನೈತಿಕತೆಯನ್ನು ಪ್ರಶ್ನಿಸಬೇಕಾಗಿತ್ತೋ ಅಂತಹ ಒಂದು ಸಮೂಹವನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ಕೆಲಸವನ್ನು ಸಲೀಸು ಮಾಡಿಕೊಳ್ಳುವ ಚಾಣಾಕ್ಷಮತಿಗಳು ನಮ್ಮ ರಾಜಕಾರಣಿಗಳು. ಮುಗಿಯಿತು ನನ್ನ ಪ್ರಲಾಪ. ಎಲ್ಲಾ ನನ್ನ ತೆವಲಿಗಾಗಿ

Rating
No votes yet

Comments