ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ

ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ


ಹರಿ ಬಂದಿದ್ದಾಗ ಏನಾದರೂ ಒಳ್ಳೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದುಕೊಂಡಿದ್ದೆ. ಪುತ್ತೂರಿಗೆ ಹೋಗುವುದು ನಿಶ್ಚಿತವಾಗಿತ್ತು. ಇತ್ತೀಚೆಗೆ NGC ಯಲ್ಲಿ ಹಾವುಗಳ ಬಗ್ಗೆ ಕಾರ್ಯಕ್ರಮ ತೋರಿಸಿದ್ದರು. ಆಗಲೇ ಹಾವುಗಳನ್ನು ಕೈಯಲ್ಲಿ ಹಿಡಿಯುವುದನ್ನೊಮ್ಮೆ ಟ್ರೈ ಮಾಡಬೇಕಿತ್ತಲ್ಲಾ ಎಂದುಕೊಂಡಿದ್ದೆ.ಐತಾಳರು ಪುತ್ತೂರಿನ ಆಸುಪಾಸಿನಲ್ಲಿರುವುದು ಗೊತ್ತಿದ್ದರಿಂದ ಅವರ ಹತ್ತಿರ appointment ತೆಗೆದುಕೊಂಡೆವು. ಅವರ ಮನೆ ಪುತ್ತೂರು ಪೇಟೆಗೆ ಬಹಳ ಹತ್ತಿರದಲ್ಲಿದೆ. (ಆಸಕ್ತರಿಗಾಗಿ: ಅರುಣಾ ಟಾಕೀಸಿನ ರೋಡಿನಲ್ಲಿ ಮುಂದೆ ಹೋಗಿ ರಾಘವೇಂದ್ರ ಸ್ವಾಮಿ ಮಠಕ್ಕೆ ಎಡಕ್ಕೆ ತಿರುಗಿ. 'ಡಾ| ಐತಾಳ' ರ ಮನೆಯೆಂದರೆ ಯಾರಾದರೂ ಹೇಳುತ್ತಾರೆ).
ಅವರ ಮನೆ 'ಬನ' ತಲುಪಿ ಒಂದೈದು ನಿಮಿಷ ಅವರಿಗಾಗಿ ಕಾಯಬೇಕಾಯಿತು. ಮನೆಯ ಪಕ್ಕದ ಕಾಂಪೌಂಡು ಒಂದು 'ನಾಗಬನ' - ಕಲ್ಲಿನ ನಾಗನದ್ದು. ಇವರ ಮನೆ 'ಬನ' - ನಿಜ ನಾಗಗಳದ್ದು. ಅವರ ಕ್ರೋಟನ್ ಗಿಡಗಳ ಮೇಲೆಲ್ಲ ಹಾವಿನ ಪೊರೆಯನ್ನು ಅಲಂಕಾರಕ್ಕಾಗಿ ಹಾಕಿದ್ದಾರೆ!. ಪಕ್ಕದ ತೆಂಗಿನ ಮರದ ಬುಡದಲ್ಲಿ ವಿಧವಿಧದ ಪೊರೆಗಳ ರಾಶಿಯೇ ಇತ್ತು.
ನಮಸ್ಕಾರ ಎನ್ನುತ್ತಾ ಬಂದಾಗ 'ಸ್ನೇಕ್ ಐತಾಳರ' ದರ್ಶನವಾಯಿತು. ಹೆಚ್ಚುಕಮ್ಮಿ ಹಾವುಗಳಂತೆಯೇ ತೆಳ್ಳಗೆ ಬೊಜ್ಜಿನ ಗಂಧಗಾಳಿಯೂ ಇಲ್ಲದ ದೇಹ.

ಪರಿಚಯದ ಬಳಿಕ ಹಾವಿನ ಮನೆಯ ಬಾಗಿಲು ತೆರೆದರು.
ಮೊದಲಿಗೆ ಇರುವುದೇ ಒಂದು ಜೋಡಿ ಕಾಳಿಂಗ ಸರ್ಪ. ಕಾಳಿಂಗ ಸರ್ಪಗಳ ಬಗ್ಗೆ ಇರುವ ಸತ್ಯ/ಮಿಥ್ಯಗಳ ಬಗ್ಗೆ ಒಳ್ಳೆಯ ಮಾಹಿತಿ ನೀಡಿದರು. ಕಚ್ಚಿದರೆ ದೇವರ ಪಾದ ಸೇರಲು 'ಎರಡು ನಿಮಿಷ ಮಾತ್ರ' ಎನ್ನುವುದು ಅವುಗಳ ಸುತ್ತಾ ಒಂದು ಪ್ರಭಾವಳಿ ಸೃಷ್ಟಿಸುತ್ತವೆ, ನಿಜಕ್ಕೂ; ಅದೂ, ಸಾವು ನಮ್ಮಿಂದ ಕೇವಲ ಎರಡೂವರೆ ಅಡಿ ದೂರದಲ್ಲಿದ್ದಾಗ. ಪೆಟ್ಟಿಗೆಯ ಮುಚ್ಚಳ ತೆಗೆದು ಫೋಟೊ ತೆಗೆಯಲು ಅನುವು ಮಾಡಿ ಕೊಟ್ಟರು. ದಿನನಿತ್ಯದ ಈ ಅಡ್ವೆಂಚರ್ ಬಗೆಗಿನ ಅವರ ಫಿಲಾಸಫಿ ನನಗೆ ಇಷ್ಟವಾಯಿತು - ಹೆದರಿಕೆ ಬಿಟ್ಟೇ ಈ ಕಲಸ ಹಿಡಿದಿದ್ದೇನೆ. ಸತ್ತರೂ ಎರಡು ನಿಮಿಷದಲ್ಲಿ ತಾನೇ?, ಪರವಾಗಿಲ್ಲ - ಎಂದು ಬಿಟ್ಟರು.
ಅಂದ ಹಾಗೆ, ಐತಾಳರು ಸಾಕಷ್ಟು ಕಷ್ಟಗಳನ್ನು ಉಂಡವರು. ಚಿಕ್ಕಂದಿನಲ್ಲಿ ಭೂಮಸೂದೆಯಲ್ಲಿ ತಮ್ಮೆಲ್ಲಾ ಭೂಮಿಯನ್ನು ಕಳೆದುಕೊಂಡು ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸಗಳನ್ನು ದುಡಿಮೆಯೊಂದಿಗೇ ಮಾಡಿದರಂತೆ. ಪಿಗ್ಮಿ ಕಲೆಕ್ಶನ್ ಇತ್ಯಾದಿ ಚಿಕ್ಕ ಚಿಕ್ಕ ಉದ್ಯೋಗಗಳನ್ನು ಮಾಡಿ ಬೆಳೆದವರು. ಅನುಭವಿಸಿದ ಕಷ್ಟ-ನಷ್ಟಗಳಿಂದ 'ಏನಾದರೂ ಆಗಲಿ, ಪರಮಾವಧಿ ಕಷ್ಟಗಳನ್ನು ಈಗಾಗಲೇ ನೋಡಿ ಬಿಟ್ಟಿದ್ದೇನೆ' ಎನ್ನುವ ಒಂದು ಮನೋಭಾವ ಅವರಲ್ಲಿದ್ದಂತೆ ಇತ್ತು. ಇರಲಿ..
ಕಾಳಿಂಗಗಳ ಬಳಿಕ ನಾಗರಹಾವಿನ ದರ್ಶನವಾಯಿತು. ಕಾಳಿಂಗಗಳ ಎದುರು ನಾಗರಹಾವು ಸ್ವಲ್ಪ uninteresting ಆಗಿ ಕಂಡವು !.
ಆ ಬಳಿಕ ನಮ್ಮ hands-on session ನ ಆರಂಭ. ಮುನ್ನಾದಿನವಷ್ಟೆ ಯಾರದೋ ಕರೆಯ ಮೇರೆಗೆ ಅವರು ಕೆಲವು ಅನಾಥ ಹಾವಿನ ಮರಿಗಳನ್ನು ಸಂಗ್ರಹಿಸಿದ್ದರು. ಮಡಕೆಯ ಮುಚ್ಚಳ ತೆಗೆದು ನಮಗೆ ಒಂದು ಮರಿಯನ್ನು ಹಿಡಿಯಲು ಹೇಳಿದರು. ಹರಿ, ತಕ್ಷಣ photography ಯಲ್ಲಿ ತೀವ್ರ ಆಸಕ್ತಿ ತೋರಿ hands-on session ನ್ನು ನನಗೆ ಬಿಟ್ಟರು. ನನಗೆ ಇದು ಒಳ್ಳೆಯದೇ ಆಯಿತು ಎನ್ನಿ - ನನ್ನ ಅನುಭವದ ಫೊಟೊಗಳು ಸಿಕ್ಕವು. ಹಾವುಗಳನ್ನು ಕೈಯಲ್ಲಿ ಹಿಡಿಯುವುದು ಒಂದು ಅದ್ಭುತ ಅನುಭವ. ಮರಿಗಳ ಬಳಿಕ ಇರ್ತಲೆ ಹಾವು ಎಂದು ನಮ್ಮೂರಲ್ಲಿ ಕರೆಯಲ್ಪಡುವ ಹಾವನ್ನು ಕೈಯಲ್ಲಿ ಹಿಡಿದದ್ದಾಯಿತು. ಬಾಲ ಮೊಂಡಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. (ಇವೆರಡೂ ವಿಷವಿಲ್ಲದವು). 

ಇವರಲ್ಲಿ ೮ ವರ್ಷ ವಯಸ್ಸಿನ ಎರಡು ಹೆಬ್ಬಾವುಗಳಿವೆ, ಮುವ್ವತ್ತು ಕೆಜಿ ತೂಗುತ್ತವಂತೆ. ಅದರ ತಂಟೆಗೆ ನಾವಾಗಲೀ ಅವರಾಗಲೀ ಹೋಗದೆ, ನೋಡಿ ಸಂತಸ ಪಟ್ಟೆವು. ಹೀಗೆ ಸುಮಾರು ೮-೧೦ ತಳಿಗಳ ದರ್ಶನವಾಯಿತು. ಐತಾಳರ ಸಂಗ್ರಹದಲ್ಲಿ ಕೊಳಕು ಮಂಡಲದಂತಹ ಅಪಾಯಕಾರಿ ಹಾವುಗಳೂ ಇವೆ (ನಮ್ಮ ಪಾಲಿಗೆ readonly - ಮುಟ್ಟಲಿಕ್ಕೆ ಹೋಗಲಿಲ್ಲ).
ನಮ್ಮೂರಲ್ಲಿ ಮೈಮೇಲೆ ಪಟ್ಟೆಗಳಿರುವ ಎಲ್ಲ ಹಾವುಗಳನ್ನು ವಿಷಯುಕ್ತ ಎಂದು ಪರಿಗಣಿಸಿ ಕೊಲ್ಲುವ ವಾಡಿಕೆ ಇದೆ (ಈ ಮಾರಣ ಹೋಮಗಳಲ್ಲಿ ನಾನು ಪ್ರೇಕ್ಷಕನಾಗಿ/ಸಹಾಯಕನಾಗಿ
ಭಾಗವಹಿಸಿದ್ದೇನೆ). ಅದು ಎಷ್ಟು ತಪ್ಪು ಎಂದು ನನಗೆ ಮೊನ್ನೆ ಗೊತ್ತಾಯಿತು. ಅವರು ತೋರಿಸಿದ ಹೆಚ್ಚಿನ ವಿಷವಿಲ್ಲದ ಹಾವುಗಳಿಗೆ ಪಟ್ಟೆಗಳಿದ್ದವು.
ಐತಾಳರು ಇದಲ್ಲದೆ ಒಂದು ಮೂಲಿಕಾವನವನ್ನೂ ನಡೆಸುತ್ತಾರೆ. ಅದನ್ನು ಸಂದರ್ಶಿಸಲು ನಮಗೆ ಈ ಬಾರಿ ಸಮಯವಾಗಲಿಲ್ಲ.
ಐತಾಳರು ಖಂಡ ತುಂಡ ನಿಷ್ಟುರವಾದಿ. ಅವರ ಈ ಸ್ವಭಾವ ಅವರಿಗೆ ದುಡ್ಡು, ಹೆಸರು ಗಳಿಸಲು ತೊಂದರೆ ಮಾಡಿದೆ ಎಂದೇ ಹೇಳಬೇಕು. ತಮ್ಮ ಕೆಲಸದ ಗುರಿ ಉದ್ದೇಶಳು ಏನೆಂಬುದು ಅವರಿಗೆ ಸ್ಪಷ್ಟವಿದೆ - ಅದು, ಹಾವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸವುದು, ಮತ್ತು ಸ್ವಂತ ಆಸಕ್ತಿಗಾಗ ಅಧ್ಯಯನ. ಹಲವು ಬಾರಿ ಅವರಲ್ಲಿ ಶೂಟಿಂಗ್ ಇತ್ಯಾದಿ ಉದ್ದೇಶಗಳಿಗೆ ಹಾವುಗಳನ್ನು ಕೇಳಿದ್ದಾರಂತೆ. 'ನಾನೇನೂ ದೊಂಬರಾಟ ನಡೆಸುತ್ತಿಲ್ಲ' ಎಂದು ಅವರನ್ನು ಗದರಿಸಿ ಹಿಂದೆ ಕಳಿಸಿದ್ದಾರೆ ಐತಾಳರು. ಹಾಗೆಂದು ಕೇವಲ ಜ್ನಾನಾರ್ಜನೆಗೆ ಬಂದ ನಮ್ಮಂತವರಿಗೆ ಮುಕ್ತ ಮನಸ್ಸಿನಿಂದ (ಅವರಿಗೆ ಏನೇನೂ ಹೊಸದಲ್ಲದ ಅವೇ ವಿಷಯಗಳನ್ನು) ಮತ್ತೆ ಮತ್ತೆ ವಿವರಿಸುತ್ತಾರೆ.
ಒಂದು ಹೊಸ ವಿಷಯದ ಬಗ್ಗೆ ತಿಳಿದ ಸಂತೋಷದಿಂದ ನಾವು ವಾಪಸು ಬಂದೆವು. ಐತಾಳರಿಗೆ ಒಳ್ಳೆಯದಾಗಲಿ.
ವಂದನೆಳು,

ವಸಂತ್ ಕಜೆ.

 

Rating
No votes yet

Comments