ದೊಡ್ಡವರೆಲ್ಲ ಜಾಣರಲ್ಲ..!

ದೊಡ್ಡವರೆಲ್ಲ ಜಾಣರಲ್ಲ..!

ಶೀರ್ಷಿಕೆ ಹೇಳುವಂತೆ,ಇದು ದೊಡ್ಡವರ ಬಗೆಗಿನ ವಿಷಯವಾದ್ದರಿಂದ ಮೊದಲೇ ಒಂದು ಮಾತು ಸ್ಪಷ್ಟ ಮಾಡಿಬಿಡುತ್ತೇನೆ, ಹಿರಿಯ ನಾಗರಿಕರ ಬಗ್ಗೆ ನನಗೆ ಅತೀವ ಪ್ರೀತಿ,ಅಭಿಮಾನ,ಗೌರವವಿದೆ. ಈ ಮಾತನ್ನು ಹೇಳಿದ ಕಾರಣ ಇಷ್ಟೇ,ಈ ಬರಹವನ್ನು ಓದುವವರು ನನ್ನದು ಅಧಿಕಪ್ರಸಂಗ ಅಥವಾ ಹಿರಿಯರ ಬಗ್ಗೆ ಗೌರವ ಇಲ್ಲದವನೆಂದು ತಿಳಿಯಬಾರದು ಎಂಬ ಕಾರಣದಿಂದ ಮಾತ್ರ.

ನಿನ್ನೆ ಸಂಜೆ ಮತ್ತಿಕೆರೆಯಲ್ಲಿರುವ 'ಜಯಪ್ರಕಾಶ್ ನಾರಾಯಣ್ ಪಾರ್ಕ್ (ಜೆ.ಪಿ ಪಾರ್ಕ್)'ಗೆ ನಾನು ಹಾಗೂ ಗೆಳೆಯ ಶ್ರೀಕಾಂತ ಹೋಗಿದ್ದೆವು. ಈ ಜೆ.ಪಿ ಪಾರ್ಕ್ ಇದೆಯಲ್ಲ ಇದು ನಮ್ಮ ಬೆಂಗಳೂರಿನಲ್ಲಿರುವ ಕೆಲವೇ ಕೆಲವು ದೊಡ್ಡ ಹಾಗೂ ಸುಂದರವಾದ ಉದ್ಯಾನವನಗಳಲ್ಲೊಂದು. ಇಲ್ಲಿ, ಕೆಲಸದಲ್ಲಿ ನಿರತರಾಗಿರುವ ರೈತರು, ವಿವಿಧ ಬಂಗಿಯಲ್ಲಿ ನಿಂತಿರುವಮಾನವರು,ಮಂಗಗಳು,ಹುಲಿಗಳು.ಚಿರತೆಗಳು,ಎತ್ತುಗಳು,ಸಿಂಹಗಳ ಪುತ್ತಳಿಕೆಗಳಿವೆ.

ನಾವು ಅಲ್ಲೇ ಒಂದು ಬೆಂಚುಗಲ್ಲಿನ ಮೇಲೆ ಕುಳಿತು ಹೋಗುವ ಬರುವ ಕೆಲವರನ್ನು ;) ನೋಡುತ್ತಾ ಕುಳಿತೆದ್ದೆವು.ಅಷ್ಟರಲ್ಲಿ ನಮ್ಮ ಎದುರಿಗೆ ನಿಂತಿದ್ದ ಸೆಕ್ಯುರಿಟಿಯ ಬಳಿ ಒಬ್ಬ ಮಧ್ಯವಯಸ್ಕರು ಬಂದು, ಏನೋ ಜೋರಾಗಿ ಮಾತಾಡುತ್ತಿದ್ದರು, ನಮಗೆ ಕೇಳಿಸಿದ್ದು ಒಂದೇ ಮಾತು 'ನಾನು ಕಂಪ್ಲೇಂಟ್ ಮಾಡ್ತಿನ್ರಿ' ಅಂತ, ಆಗ ಆ ಸೆಕ್ಯೂರಿಟಿಯವರು ಅಲ್ಲೇ ಕುಳಿತಿದ್ದ ಕೆಲ 'ಹಿರಿಯರ' ಬಳಿ ಹೋಗಿ ನಡೆದ ವಿಷಯ ಹೇಳತೊಡಗಿದರು.

ನಡೆದ ವಿಷಯವಾದರೂ ಇಷ್ಟೇ.
ಆ ಮಧ್ಯವಯಸ್ಕರರ ಕಡೆಯ ಚಿಕ್ಕ ಹುಡುಗನೊಬ್ಬ, ಪಾರ್ಕಿನಲ್ಲಿದ್ದ ಹುಲಿಯ ಪುತ್ತಳಿಕೆಯ ಮೇಲೆ ಹೋಗಿ ಕುಳಿತನಂತೆ, ಅದನ್ನು ನೋಡಿದ ಸೆಕ್ಯೂರಿಟಿ ಆ ಹುಡುಗನಿಗೆ ಗದರಿಸುವ ಬದಲು, ತಾನು ಹಿಡಿದಿದ್ದ ಲಾಠಿಯಲ್ಲಿ ಹೊಡೆದನಂತೆ.
ಹುಡುಗನ ಪಾಲಕರು "ನೀವು ಅವನಿಗೆ ಗದರಿಸಬಹುದಿತ್ತು, ಅದನ್ನು ಬಿಟ್ಟು ಲಾಠಿಯಲ್ಲಿ ಮಕ್ಕಳಿಗೆ ಹೊಡೆಯೋದೆನ್ರಿ" ಅಂದ್ರೆ, ಸೆಕ್ಯೂರಿಟಿ "ರೀ ನಾನು ಹೊಡೆದಿಲ್ಲ, ಸುಮ್ಮನೆ ಕೋಲು ಬೀಸಿದೆ ಅಷ್ಟೆ" ಅಂತಿದ್ರು.
ಅವರು ಸುಮ್ಮನೆ ಕೋಲು ಬೀಸಿದ ಹೊಡೆತಕ್ಕೆ ಪಾಪ ಆ ಹುಡುಗ ಕುಂಟುತಿದ್ದ!

ಇಬ್ಬರ ವಾದವನ್ನು ಅಲ್ಲಿದ್ದ ೨ ಹಿರಿ ತಲೆಗಳು ಕೇಳಿ ಹೀಗೆ ತೀರ್ಪಿತ್ತರು "ಅಲ್ಲಾ ರೀ, ನೀವು ಮಕ್ಕಳನ್ನು ಕರೆದುಕೊಂಡು ಬಂದ ಮೇಲೆ ಅವರನ್ನ ನೋಡಿ ಕೊಳ್ಳಬೇಕು, ಸೆಕ್ಯೂರಿಟಿ ಹೊಡೆದಿದ್ದೆ ಸರಿ"
ಅದಕ್ಕೆ ಪಾಲಕರು "ಸರ್,ನಿಜ ಮಕ್ಕಳನ್ನು ನೋಡಿಕೊಳ್ಳಬೇಕಿತ್ತು, ಆದರೆ ಮಿಸ್ ಆಗಿ ಹೋಗಿದ್ದಾರೆ, ಅದಕ್ಕೆ ಹೊಡೆಯೊದಾ?" ಪಾಲಕರ ಬೆಂಬಲಕ್ಕೆ ಕೆಲ ಮಂಡಿಯ ಜೊತೆ ನಾವು ನಿಂತೆವು.ನಂತರ ವಿಷಯ ಪರಿಹಾರವಾಗದೆ ಪಾಲಕರು ಪಾರ್ಕಿನ ಮುಖ್ಯದ್ವಾರದ ಬಳಿ ಕಂಪ್ಲೇಂಟ್ ಕೊಡಲು ಬಂದರು.
ಅಷ್ಟು ಹೊತ್ತು ನಾವು ಈ ಹಿರಿತಲೆಗಳ ನ್ಯಾಯ ತೀರ್ಮಾನ ನೋಡಿ, "ಬಾ ಗುರು ನೋಡೋಣ, ಅದೇನು ನ್ಯಾಯ ತೀರ್ಮಾನ ಮಾಡ್ತಾರೆ" ಅಂತ ಅನ್ಕೊಂಡು ಗೇಟಿನ ಬಳಿ ಬಂದು ನಿಂತೆವು. ಅಷ್ಟರಲ್ಲಿ ೭-೮ ಜನ 'ಹಿರಿಯ (?) ನಾಗರಿಕರು' (ಬಹುಷಃ ಪಾರ್ಕಿನ ಉಸ್ತುವಾರಿ ವಹಿಸಿಕೊಂಡವರಿರಬೇಕು )ಪಾರ್ಕಿನ ಯಾವುದೋ ಮೂಲೆಯಿಂದ ಅಲ್ಲಿಗೆ ಬಂದರು. ನೋಡಿದರೆ ಎಲ್ಲ 'ನಿವೃತ್ತ ಜೀವನ'ನಡೆಸುತ್ತಿರುವವರಂತೆ ಕಾಣುತಿದ್ದರು. ಅವರಲ್ಲಿ ಕೆಲವರದು ರೇಷ್ಮೆ ಬಣ್ಣದ ಕೇಶವಾದರೆ :) ,ಇನ್ನು ಕೆಲವರದು 'ಬಯಲು ಪ್ರದೇಶ' :) ( ನನಗೂ ಒಂದಲ್ಲ ಒಂದು ದಿನ ಇದೆ ರೀತಿ ಹೇಳಿಸಿಕೊಳ್ಳೋ ಟೈಮು ಬರುತ್ತೆ ಬಿಡಿ ;), ಅದು ಬೇರೆ ಮಾತು )

ಹಾಗೆ ಬಂದ ಹಿರಿಯರಲ್ಲಿ ಒಬ್ಬರು, ಪಾಲಕರ ಬಳಿ ವಿಷಯವೇನೆಂದು ಕೇಳಿದರು, ಆ ಪಾಲಕರು ವಿಷಯ ಹೇಳುತ್ತಿರುವಾಗಲೇ , ಇನ್ನೊಬ್ಬ ಹಿರಿಯ ಮಹಾಶಯ ಒಂದು ನೋಟ್ ಬುಕ್ ತೆಗೆದವನೇ, ಅವರ ಮಾತನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆಯಿಲ್ಲದೆ, 'ನಿಮ್ಮ ಅಡ್ರೆಸ್ ದಿಟೈಲ್ಸ್ ಕೊಡ್ರಿ, ಬನ್ನಿ ಪೋಲಿಸ್ ಕಂಪ್ಲೇಂಟ್ ಕೊಡೋಣ' ಅಂದ್ರೆ, ಮತ್ತೊಬ್ಬ ಮಹಾಶಯ ಆ ಚಿಕ್ಕ ಹುಡುಗನ ಹಿಡಿದು ಎಳೆಯುತ್ತಿದ್ದ, ನಡೀರಿ ಸ್ಟೇಷನ್ಗೆ ಅಂತ, ಇದೆಲ್ಲ ನಾಟಕ ನೋಡಿ ಆ ಹುಡುಗನ ತಾಯಿ "ನನ್ನ ಮಗನ ಕೈ ಬಿಡ್ರಿ' ಅಂತ ಬಿಡಿಸಿಕೊಳ್ಳೋಕೆ ಬಂದರೆ ಒಂದು ಹಿರಿತಲೆ ಆ ಹೆಣ್ಣು ಮಗಳಿಗೆ ಹೇಳಿದ "ಏನ್ರಿ, ರೌಡಿಯಿಸಂ ಮಾಡೋಕೆ ಬಂದ್ರಾ ಇಲ್ಲಿ!!" ಅನ್ನೋದಾ.

ಕಡೆಗೆ ಎಲ್ಲರು ಸೇರಿ ಆ ಪಾಲಕರ ಮೇಲೆ ಕೈ ಮಿಲಾಯಿಸಲೇ ಹೊರಟು ಬಿಟ್ಟರು, ಪಾಪ ಆ ಸಹೃದಯಿ ಪಾಲಕರು, ಸುಮ್ಮನೆ ಹೊರಗೆ ಹೋಗಿ ಬಿಟ್ಟರು. ಅವರು ಹೋದ ಮೇಲೆ, ಒಂದು ಹಿರಿತಲೆ ಹೇಳಿತು "ಅವರನ್ನ ನಾಳೆಯಿಂದ ಪಾರ್ಕಿನ ಒಳಗೆ ಬಿಡಬೇಡ್ರಿ" (ಏನೋ ಇವರ ಸ್ವಂತ ದುಡ್ಡಿನಿಂದ ಕಟ್ಟಿಸಿರೋ ತರ!)

ಆ ಹಿರಿತಲೆಗಳ ಅವಿವೇಕತನದ ಅತಿರೇಕದ ವರ್ತನೆ ನೋಡಿ, ಅನ್ನಿಸಿದ್ದು ಅವರಿಗೆ ಮರ್ಯಾದೆ ಬೇಡ ಅವರ ವಯ್ಯಸಿಗಾದ್ರು ಮರ್ಯಾದೆ ಬೇಡ್ವಾ.'ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು' ಅನ್ನೋ ಮಾತು ಅವರಿಗೆ ಹೇಳಿ ಮಾಡಿಸಿದಂತಿತ್ತು. ಆ ಪಾಲಕರು ಸ್ವಲ್ಪ ಮೃದು ಸ್ವಭಾವದವರಾಗಿದ್ದರಿಂದ ಅಲ್ಲಿ ನಡೆಯಬೇಕಿದ್ದ 'ಮಾರಾಮಾರಿ' ತಪ್ಪಿತು.

ಬಂದ ಹಿರಿ ತಲೆಗಳಲ್ಲಿ ಒಬ್ಬರಿಗೂ ಶಾಂತಿ ಸಂಧಾನ ಮಾಡಿಸುವ ಆಸೆಯಿರಲಿಲ್ಲ, ಕೇವಲ ತಮ್ಮ ಅಧಿಕಾರದ ದರ್ಪದಿಂದ ನಡೆದುಕೊಂದರಷ್ಟೇ.ತಮ್ಮ ಅದ್ದಾಕ್ಕೆ ಬಂದ ಎದುರಾಳಿ ಗುಂಪಿನವನ ಮೇಲೆ ದಾಳಿ ಮಾಡಲು ಬರುವ ಪುಂಡ ಹುಡುಗರಲ್ಲಿರುವಂತ ಆವೇಶ ಅವರಲ್ಲಿ ಕಾಣುತಿತ್ತು.
ಅಲ್ಲಾ ರೀ , ಆ ಮಧ್ಯವಯಸ್ಕನ ಮೇಲೆ ಬೀಳಲು ಹೋಗುತ್ತಾರಲ್ಲ ಇವರ ಬುದ್ಧಿಗೆ ಏನ್ ಹೇಳೋದು, ಅವನು ಒಮ್ಮೆ ಕೈ ಬೀಸಿದರೆ ಇವರೆಲ್ಲ ತರಗೆಲೆಗಳಂತೆ ಬೀಳುವಂತೆ ಇದ್ದರು.ಅವರ ಮೊಮ್ಮಗನ ವಯಸ್ಸಿನ ಹುಡುಗನ ರಟ್ಟೆ ಹಿಡಿದೆಳೆಯುತ್ತಾರೆ, ಮಗಳಂತೆ ಇರುವ ಹೆಣ್ಣು ಮಗಳಿಗೂ ಸೌಜನ್ಯ ತೋರಿಸುವುದಿಲ್ಲ.

ಆ ಘಟನೆಯನ್ನು ಕಣ್ಣಾರೆ ಕಂಡ ಮೇಲೆ ನನಗನ್ನಿಸಿದ್ದು "ದೊಡ್ಡವರೆಲ್ಲ ಜಾಣರಲ್ಲ..!"
(ಅಪ್ಪಿ ತಪ್ಪಿ ಏನಾದರೂ ಈ ಬರಹವನ್ನು ಈ ಮೇಲಿನ ಘಟನೆಗೆ ಕಾರಣರಾದ ಹಿರಿತಲೆಗಳು ಓದಿದರೆ, ಓದಿ ಅರ್ಥ ಮಾಡಿಕೊಂಡರೆ ನಂಗೆ ಅತಿ ಸಂತೋಷವಾಗುತ್ತದೆ)

Rating
No votes yet

Comments