ಜಾರಿ ಬಿದ್ದೆಯಲ್ಲೆ ಜಾಣೆ ಪ್ರೀತಿಗೆ
ಮಿಂಚು ಬಡಿಯಿತೋ , ಇಲ್ಲ ಸಿಡಿಲು ಹೊಡೆಯಿತೋ,
ಕಣ್ಣೆವೆಗಳೇಕೆ ನೆಲ ನೋಡುತಿವೆ ಮೈ ಏಕೆ ಬಿಸಿಯಾದಂತೆ ತೋರುತಿದೆ
ಕೆನ್ನೆಗಳೇಕೆ ರಂಗೇರಿವೆ,ಎದೆಯ ಬಡಿತ ಜೋರಾಯಿತೇಕೆ
ಕಣ್ ತುಂಬಿದ ಚಂದ್ರನ ಮರಳಿ ಕಾಣುವ ಕಾತುರ ಕಿವಿ ತುಂಬಿದ ದನಿಯ ಮತ್ತೆ ಆಲಿಸುವ ಆತುರ,
ಛೇ ಹುಚ್ಚಿ ನಾನು ಸುಮ್ಮ ಸುಮ್ಮನೆ ನಗುವೆನಲ್ಲ. ನಕ್ಕಾಗಲೂ ಕಣ್ಮುಂದೆ ನಲ್ಲ ಬಂದು ನಿಂತನಲ್ಲ
ಪಕ್ಕದಲ್ಲಿ ಕೂತವರಾರೋ, ನಿಂತವರಾರೋ ನೋಡುತ್ತಿದ್ದಾರೇನೋ ಗಾಬರಿಯಲ್ಲೂ
ಓದಲಿಕ್ಕೆಂದು ತೆರೆದ ಪುಸ್ತಕದಲ್ಲಿಯೂ ಕಾಣದೆ ಅಕ್ಷರ ಅವನದೇ ಧ್ಯಾನ ನಿರಂತರ
ಕಾಲ್ಬೆರೆಳೇಕೆ ನೆಲಕ್ಕೆ ಮುತ್ತಿಡುತ್ತಿದೆ . ನೆಲವ ನಲ್ಲನೆಂದು ಭಾವಿಸಿತೇ?
ಮುಷ್ಟಿ ಮುಷ್ಟಿಗಳೇಕೆ ಸರಸಕೆ ತೊಡಗಿವೆ . ಎರೆಡೂ ಪ್ರೇಮಿಗಳಾದವೇ?
ಕೈ ಬಿಡದೆ ಮುಂಗುರಳ ಸುತ್ತುತಿದೆ ಕೈಗೂ ಮುಂಗುರುಳಿಗೂ ಸ್ನೇಹವೇ?
ನೋಡಿದ ಒಂದರೆಘಳಿಗೆಯಲಿ ಮನ ಆ ಮನಸ ಹುಡುಕಿ ಹೊರಟಿತೆ
ಒಮ್ಮೆಯೂ ತಿಳಿಸದೇ ಮನದೊಡತಿಯ ಮಾತ ಕೇಳದೆ
ಹೇಳದೆ ಕೇಳದೆ ಮನಕ್ಕೆ ಲಗ್ಗೆ ಹಾಕಿ ನುಸುಳಲು ಕೊಟ್ಟಾವರಾರು ಅನುಮತಿ?
ಅರ್ಜಿ ಹಾಕದೆ ಸರದಿಯಲಿ ಕಾಯದೆ
ಸದ್ದಿಲ್ಲದೆ ಬಂದು ಅಪ್ಪಿಕೊಂಡಿತೇಕಿಂಥ ಭ್ರಾಂತಿ ಅಥವ ಇದೇನಾ ಪ್ರೀತಿ?
ತಲೆ ಗೊಂದಲದ ಗೂಡಾಗಿರಲು ಮನಸ್ಸು ಪಿಸು ನುಡಿಯಿತು
"ಜಾರಿ ಬಿದ್ದೆಯಲ್ಲೆ ಜಾಣೆ ಪ್ರೀತಿಗೆ"
[ಇದನ್ನ ಎಂಟು ಸರಿಯಾಗಿ ಎಂಟು ವರ್ಷ ಎರೆಡು ತಿಂಗಳ ಹಿಂದೆ ಬಸ್ಸಿನಲ್ಲಿ ಕೂತು ಬರೆದದ್ದು. ಕವಿತೆಯೋ, ಕೊರೆತವೋ , ಅಥವ ಹುಚ್ಚು ಮನಸಿನ ಗೀಚಿದ ಪುಟಗಳೋ ಏನೋ ಒಂದು ]
Comments
ಉ: ಜಾರಿ ಬಿದ್ದೆಯಲ್ಲೆ ಜಾಣೆ ಪ್ರೀತಿಗೆ