ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?

ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?

"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಈ ನಿಟ್ಟಿನಲ್ಲಿ ಬರಿದೆ ಮಾತನಾಡದೇ, "ಮಾಡಿ ತೋರಿಸುವ" ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಖಾಸಗಿ ಸಂಸ್ಥೆಯೊಂದರ ಬಗ್ಗೆ ನಿಮಗೆ ಗೊತ್ತಾ? "ಗೂಗಲ್" ಸಂಸ್ಥೆ ಈ ವಿಷಯದಲ್ಲಿ ಹೊಸ ಹೆಜ್ಜೆಯಿಟ್ಟು, ತನ್ನ "ಹಲವು ಪ್ರಥಮ"ಗಳ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ.

ಕ್ಯಾಲಿಫೋರ್ನಿಯಾದ "ಮೌಂಟನ್ ವ್ಯೂ" ಕಚೇರಿ ಆವರಣದಲ್ಲಿ (ಆಫೀಸ್ ಕ್ಯಾಂಪಸ್) ಸುಮಾರು 1.6 MW(ಮೆಗಾ ವ್ಯಾಟ್) ವಿದ್ಯುತ್ತನ್ನು ಸೂರ್ಯನ ಬೆಳಕನ್ನು ಬಳಸಿ ಉತ್ಪಾದಿಸುವುದರ ಮೂಲಕ ಗೂಗಲ್, ಈ ರೀತಿಯ ಸಾಧನೆಗೈಯುತ್ತಿರುವ ಜಗತ್ತಿನ ಪ್ರಥಮ ಖಾಸಗಿ ಸಂಸ್ಥೆಯೆನಿಸಿದೆ. ಇದಕ್ಕಾಗಿ ಗೂಗಲ್ ಅನುಸರಿಸಿದ ವಿಧಾನ ಬಹಳ ಸರಳ. "ಮೌಂಟನ್ ವ್ಯೂ" ಆವರಣದಲ್ಲಿರುವ ನಾಲ್ಕು ಕಚೇರಿಗಳ ಮಾಳಿಗೆಗಳ ಮೇಲೆ ಮತ್ತು ವಾಹನ ನಿಲುಗಡೆಗೆಂದು ಇರುವ ಜಾಗಗಳಲ್ಲಿ, ಸುಮಾರು 9000 "ಸೌರಶಕ್ತಿ ಫಲಕ"ಗಳನ್ನು (ಸೋಲಾರ್ ಪ್ಯಾನಲ್) ಅಳವಡಿಸಿ, ಆ ಮೂಲಕ ಮಾಲಿನ್ಯ ರಹಿತ ರೀತಿಯಲ್ಲಿ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದಾರೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್, ಅಂದಾಜು 1000-1100 "ಸಾಮಾನ್ಯ" ಕ್ಯಾಲಿಫೋರ್ನಿಯಾ ಮನೆಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಂತೆ! "ಗೂಗಲ್‌ಪ್ಲೆಕ್ಸ್"ನ (ಗೂಗಲ್ ಸಂಸ್ಥೆಯ ಆವರಣಕ್ಕೆ ಅವರಿಟ್ಟಿರುವ ಹೆಸರು) ದಿನನಿತ್ಯದ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 30%ರಷ್ಟನ್ನು ಹೀಗೆ ಉತ್ಪತ್ತಿಯಾಗುವ ವಿದ್ಯುತ್ತಿನಿಂದಲೇ ಪೂರೈಸಬಹುದು ಎಂದು ಸಂಸ್ಥೆಯ ಅಂಬೋಣ.

30% ಉಳಿತಾಯವಾದರೂ ಆಗಲಿ, ಅಥವಾ ಸ್ವಲ್ಪ ಕಡಿಮೆಯೇ ಆಗಲಿ, ಕಿಂಚಿತ್ತಾದರೂ ವಿದ್ಯುತ್ ಉಳಿಸುವ ಮೂಲಕ, "ಪರಿಸರ ಸಂರಕ್ಷಣೆ"ಗೆ ತನ್ನ ಕೈಲಾದಷ್ಟು "ಅಳಿಲು ಸೇವೆ" ಮಾಡುತ್ತಿದೆಯಲ್ಲ, ಆ ವಿಷಯವೇ ನಿಜಕ್ಕೂ ಅಭಿನಂದನೀಯ ಅಂತ ನನ್ನ ಅನಿಸಿಕೆ. ನೀವೇನು ಹೇಳುತ್ತೀರಾ?

Rating
No votes yet

Comments