"ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?

"ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?

2002ರ ಸೆಪ್ಟಂಬರ್ 24. ದೇಶದ ಬೃಹತ್ ದೇವಾಲಯಗಳಲ್ಲಿ ಒಂದಾದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ ದೇಶದೆಲ್ಲೆಡೆ ವ್ಯಾಪಕ ಸುದ್ದಿಯನ್ನು ಮಾಡಿತ್ತು. ಪವಿತ್ರ ಹಿಂದೂ ಧಾರ್ಮಿಕ ಕಟ್ಟಡದ ಮೇಲೆ ಯಾವುದೋ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಸುದ್ದಿಯಾಯಿತೇ ಹೊರತು, ಮತ್ತಾವ ಕಾರಣಕ್ಕೂ ಅಲ್ಲ. ಒಂದು ಸುದ್ದಿ ಮಾನವೀಯ ನೆಲೆಯನ್ನು ಕಳೆದುಕೊಂಡು ಕೇವಲ ಸುದ್ದಿಯಾಗಿ ಉಳಿದರೆ ಏನಾಗುತ್ತದೆ ಅನ್ನೋದಕ್ಕೆ ಈ ದಾಳಿಯ ಹಿಂದಿನ ಕಹಿ ಘಟನೆಯೇ ಸಾಕ್ಷಿ.

ಈ ಘಟನೆ ನಡೆದ ಸಮಯದಲ್ಲಿ ದೇಶದ ಎಲ್ಲಾ ಮಾಧ್ಯಮಗಳು ಒಂದೆಡೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವು. ಯಾಕೆಂದರೆ, ದೇಶ ತನ್ನ ನಾಯಕನನ್ನು ಆಯ್ಕೆ ಮಾಡುವುದಕ್ಕೆಂದು ಸಜ್ಜಾಗಿತ್ತು. ಮನಮೋಹನ್ ಸಿಂಗ್ ದೇಶದ ಗದ್ದುಗೆಯನ್ನು ಏರುತ್ತಾರೋ ಅಥವಾ ಸೋನಿಯ ಗಾಂಧಿಯೋ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಇಡೀ ದೇಶ ನಿರತವಾಗಿತ್ತು. ಎಷ್ಟೇ ಆಗಲಿ ಕಾನೂನಿನ ಕೈ ದೊಡ್ಡದಿರುತ್ತದೆ ಎನ್ನುವ ಹಾಗೆ ರಾಜಕೀಯದ ಕೈ ಕೂಡ ದೊಡ್ಡದಿರುತ್ತದಲ್ಲವೆ?

ಇತ್ತ ಕಡೆ ಏನಾಯಿತೆಂದರೆ, ಅಂದು ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಯೋಧ ತನ್ನ ಜೀವನದ ಬಹು ದೊಡ್ಡ ಕದನದಲ್ಲಿ ಭಾಗವಹಿಸಿದ್ದ. ದೇಶರಕ್ಷಣೆಗಾಗಿ ಪಣ ತೊಟ್ಟು ನಿಂತಿದ್ದ ಈ ವೀರ ಯೋಧನ ಕತೆ ಏನಾಯಿತು ಬಲ್ಲಿರಾ?

ಈ ಘಟನೆ ನಡೆದ ಸುಮಾರು 2 ವರ್ಷದ ಬಳಿಕ 2004 ರ ಮೇ19ರಂದು ಈ ವೀರ ಯೋಧ ಅಸುನೀಗಿದ. ಕಾರಣ?

ಅಕ್ಷರಧಾಮ ದಾಳಿಯ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಈತನ ತಲೆಗೆ ಹೊಕ್ಕ ಗುಂಡು ಆತ 600 ದಿನಗಳ ಕಾಲ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಜೀವನ್ಮರಣಗಳ ನಡುವೆ ಹೋರಾಡುತ್ತ ಕೋಮಾದಲ್ಲಿರುವಂತೆ ಮಾಡಿತು. ತಮ್ಮ ಮಗ ಗುಣಮುಖನಾಗಿ ಸಹಜಸ್ಥಿತಿಗೆ ಮರಳುವನೇನೋ ಎಂದು ಆತನ ಕುಟುಂಬದವರು 600 ದಿನಗಳ ಕಾಲ ತಮ್ಮ ನೋವು, ಆತಂಕ, ದುಃಖ, ದುಮ್ಮಾನಗಳ ನಡುವೆಯೇ ಆಶಾಭಾವನೆಯನ್ನು ಹೊತ್ತು ಕಾದು ಕೂತಿತು. ಆದರೆ, 'ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ' ಎಂಬಂತೆ ತನ್ನ ಜೀವನದ ಸುದೀರ್ಘ ಹೋರಾಟದಲ್ಲಿ ಆತನಿಗೆ ಕಡೆಗೂ ಜಯ ದೊರಕಲಿಲ್ಲ.

ಆತ ಯಾರು ಗೊತ್ತೇ? ಆತನೇ ಎನ್ ಎಸ್ ಜಿಯ ಕಮಾಂಡೊ ಆಗಿದ್ದ ಶ್ರೀ ಸುರ್ಜನ್ ಸಿಂಗ್.

ನಮ್ಮ ದೇಶದ ಪ್ರಮುಖ ಸುದ್ದಿಪತ್ರಿ ಕೆಗಳು, 24X7 ಸುದ್ದಿ ಬಿತ್ತರಿಸುವ ಸುದ್ದಿವಾಹಿನಿಗಳು, ಅಂದು ದೇಶದ ರಾಜಕೀಯ ನಾಟಕದ ಪ್ರೇಕ್ಷಕರಾಗಿಬಿಟ್ಟಿದ್ದವು. ಮಾನವೀಯತೆಯನ್ನೇ ಕಳೆದುಕೊಂಡಿರುವ ಇಂದಿನ ಆಧುನಿಕ ಮಾಧ್ಯಮ ಎಂದಿನಂತೆ 'ಸುದ್ದಿಯೆಂಬ ಸೂಳೆ'ಯ ಬೆನ್ನತ್ತಿ ಹೊರಟಿದ್ದವು. ಈ ವೀರ ಯೋಧನ ಸಾಹಸ ಕಥನದ ಬಗ್ಗೆ ಯಾವೊಂದು ನೋಟವನ್ನೂ ಚೆಲ್ಲಲಿಲ್ಲ. ಯಾವುದೋ ಸುದ್ದಿಪತ್ರಿಕೆಯ ಮೂಲೆಯಲ್ಲೊಂದು ಕಡೆ ಈತನ ಬಗ್ಗೆ ಸುದ್ದಿ ಬಂತು. ಇದು ನಮ್ಮ ಪ್ರಜಾಪ್ರಭುತ್ವ, ಗಣರಾಜ್ಯ, ಸಮಾಜವಾದಿ, ಜಾತ್ಯಾತೀತ ಭಾರತ ದೇಶದ ರಕ್ಷಣೆಗಾಗಿ ಪ್ರಾಣ ತೆತ್ತ ಯೋಧನಿಗೆ ತೋರಿಸಿದ ಗೌರವ, ಅಂತಿಮ ನಮನ.

ಈತ ಕೊನೆ ಉಸಿರೆಳೆವವರೆಗೂ ಆ ಇಡೀ 600 ದಿನಗಳ ಕಾಲ ಈತನ ಕುಟುಂಬದವರನ್ನು ಬಿಟ್ಟರೆ ಉಳಿದದ್ದು ಒಂದೇ. ಅದು ಏನು ಗೊತ್ತೇ .....

ನಮ್ಮ ರಾಷ್ಟ್ರಧ್ವಜ.

ಈ ದೇಶ ಈತನಿಗೆ ನಮಿಸದಿದ್ದರೂ, ಈತನ ಶೌರ್ಯಕ್ಕೆ ತಲೆಬಾಗಿ ನಮಿಸುವಂತೆ ನಮ್ಮ ರಾಷ್ಟ್ರಧ್ವಜ ಆತನ ಬಳಿ ಕಡೆಯವರೆಗೂ ಉಳಿದಿತ್ತು.

ಯಾವ ಪದಗಳು ದೇಶದ ಹಿತಕ್ಕಾಗಿ ಪ್ರಾಣ ತೆರುವ ಇಂತಹ ಯೋಧರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಸಾಧ್ಯ?

Rating
No votes yet

Comments