ಮೈಕ್ರೋಸಾಫ್ಟೀಕರಣ

ಮೈಕ್ರೋಸಾಫ್ಟೀಕರಣ

Comments

ಬರಹ

Kannada Issues in Microsoft Vista

ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.

ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು ತಾತ್ವಿಕವಾಗಿ ಸರಿಯೂ ಹೌದು. ನನಗೆ ಕಾಡುತ್ತಿರುವುದು ಈ ಸಮಸ್ಯೆಯಲ್ಲ. ಯಾವುದಾದರೂ ಒಂದು ಸಂಸ್ಥೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯೊಂದನ್ನು ಅದಕ್ಕೆ ತೋಚಿದಂತೆ ಬದಲಾಯಿಸಿಬಿಡುವುದನ್ನು ಒಪ್ಪಿಕೊಳ್ಳಬೇಕೇ?

Kannada Issues on Microsoft Vista

ಸಾ ಫ್ ಟ್ ವೇ ರ್ ಎಂಬಂಥ ಪ್ರಯೋಗವನ್ನು ಬಿಎಂಶ್ರೀ ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಅದಕ್ಕೆ ಹೆಚ್ಚಿನವರ ಬೆಂಬಲ ದೊರೆಯಲಿಲ್ಲ. ಕೆಲವರಿದನ್ನು ವಿರೋಧಿಸಿದರು ಎಂದೂ ಓದಿದ್ದು ನೆನಪಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಇದನ್ನು ಹೇರುತ್ತಿದೆ. ವಿರೋಧಿಸುವುದು ಬಿಡಿ. ಕನಿಷ್ಠ ಇದರ ಕುರಿತು ಚರ್ಚಿಸುತ್ತಿಲ್ಲ.

ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಸಾಫ್ಟ್ ವೇರ್ ಗಳ ಅತಿದೊಡ್ಡ ಗ್ರಾಹಕ ಸರಕಾರ. ಸರಕಾರ ತನ್ನ ಎಲ್ಲಾ ಕೆಲಸಕ್ಕೆ ಮೈಕ್ರೋಸಾಫ್ಟ್ ನ ತಂತ್ರಾಂಶಗಳನ್ನೇ ಬಳಸುತ್ತಿದೆ. (ಇತ್ತೀಚೆಗೆ ಚುನಾವಣಾ ಆಯೋಗ ಮುಕ್ತ ತಂತ್ರಾಂಶಗಳನ್ನು ಬಳಸುವ ಪ್ರಯತ್ನ ಆರಂಭಿಸಿದೆ) ಕರ್ನಾಟಕ ಸರಕಾರದ ಇ-ಗವರ್ನನ್ಸ್ ಕಾರ್ಯದರ್ಶಿಯವರಿಗಂತೂ ಮೈಕ್ರೋಸಾಫ್ಟ್ ಎಂದರೆ ಪಂಚಪ್ರಾಣ. ಆಡಳಿತದಲ್ಲಿ ಕನ್ನಡ ಎಂಬ ಪರಿಕಲ್ಪನೆ ಕಂಪ್ಯೂಟರ್ ಗಳ ಸಂದರ್ಭದಲ್ಲಿಯೂ ನಿಜವಾಗುತ್ತಿರುವ ಹೊತ್ತಿನಲ್ಲಿ ಕನ್ನಡ ಬರೆವಣಿಗೆಯೂ ಮೈಕ್ರೋಸಾಫ್ಟ್ ನ ತಂತ್ರಾಂಶಗಳ ಮೂಗಿನ ನೇರಕ್ಕೆ ಇರುತ್ತದೆ ಎಂದಾಗುತ್ತದೆಯಲ್ಲವೇ?

ಮೈಕ್ರೋಸಾಫ್ಟ್ ಎಕ್ಸ್ ಪಿಗಾಗಿ ಹೊರತಂದಿದ್ದ ಕನ್ನಡ ಹೊದಿಕೆ ಅಥವಾ ಲಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ನಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕೊಂದಿರುವುದರ ಬಗ್ಗೆ ಉದಾಹರಣೆ ಸಹಿತ ಒಂದು ವರ್ಷದ ಹಿಂದೆಯೇ ಪ್ರಶಾಂತ್ ಪಂಡಿತ್ 'ಸಂಪದ'ದಲ್ಲಿಯೇ ಬರೆದಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ವಿಸ್ತಾಕ್ಕೂ ಇದೇ ಹೊದಿಕೆಯನ್ನು ಬಳಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.

ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು? ಹೇಗೆ?

-ಇಸ್ಮಾಯಿಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet