ವಿಶ್ವದ ಅತಿದೊಡ್ಡ ಈಜುಕೊಳ

ವಿಶ್ವದ ಅತಿದೊಡ್ಡ ಈಜುಕೊಳ

-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಒಂದು ಈಜುಕೊಳ ಎಷ್ಟು ದೊಡ್ಡದಿರಬಹುದು? ಸಾಧಾರಣವಾಗಿ ಐವತ್ತು ಮೀಟರ್ ಉದ್ದ ಇಪ್ಪತ್ತೈದು ಮೀಟರ್ ಅಗಲ. ಬೆಂಗಳೂರಿನಲ್ಲಿರುವ ಹೆಚ್ಚಿನ ಸಾರ್ವಜನಿಕ ಈಜುಕೊಳಗಳು ಈ ಉದ್ದಗಳತೆಯವು. ಈಜು ಸ್ಪರ್ಧೆಗಳನ್ನು ನಡೆಸುವ ಕೊಳಗಲು ಇನ್ನಷ್ಟು ದೊಡ್ಡದಾಗಿರುತ್ತವೆ. ಆದರೆ ದಕ್ಷಿಣ ಅಮೇರಿಕಾದ ಚಿಲಿ ದೇಶದಲ್ಲಿರುವ ಸ್ಯಾನ್ ಅಲ್ಫೋನ್ಸೋ ಡೆಲ್ ಮಾರ್ ಎಂಬ ಅಮೇರಿಕನ್ ರೆಸಾರ್ಟ್ ಒಂದರಲ್ಲಿರುವ ಈಜುಕೊಳದ ವ್ಯಾಪ್ತಿ ಜಗತ್ತಿನ ಯಾವುದೇ ಕೃತಕ ಈಜುಕೊಳಕ್ಕೆ ಸಮನಲ್ಲ. ಚಿಲಿ ದೇಶದ ಭೂಪಟದಂತೆಯೇ ಒಂದು ಮೆಣಸಿನ ಆಕೃತಿಯಲ್ಲಿರುವ ಈಜುಕೊಳ ಎಂಟು ಹೆಕ್ಟೇರುಗಳಷ್ಟು ವಿಸ್ತಾರ ಹೊಂದಿದ್ದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಈಜುಕೊಳವೆನಿಸಿದೆ. ಈ ವಿಸ್ತಾರದಲ್ಲಿ ಸಾಮಾನ್ಯ ಅಳತೆಯ ಆರು ಸಾವಿರ ಗೃಹಬಳಕೆಯ ಈಜುಕೊಳಗಳನ್ನು ಅಳವಡಿಸಬಹುದಾಗಿದೆ.

ಒಟ್ಟು ೧.೩ ಕಿ.ಮೀ ಉದ್ದ ಹಾಗೂ ಎಂಟು ನೂರು ಮೀಟರ್ ಅಗಲ ಹೊಂದಿರುವ ಈಜುಕೊಳದ ಕನಿಷ್ಟ ಆಳ ಆರು ಇಂಚಿದ್ದರೆ ಗರಿಷ್ಟ ಆಳ ಎಂಟು ಮೀಟರುಗಳಷ್ಟಿದ್ದು ಹೊಂದಿರುವ ನೀರಿನ ಪ್ರಮಾಣ ಇನ್ನೂರೈವತ್ತು ಸಾವಿರ ಘನ ಮೀಟರ್! ಅತ್ಯಂತ ಸ್ಪಷ್ಟ ಸ್ಫಟಿಕದಂತಿರುವ ನೀರು, ದ್ವೀಪಗಳು, ಕಾರಂಜಿಗಳು ಮೊದಲಾದವು ಈ ಈಜುಕೊಳವನ್ನು ವಿಶಿಷ್ಟವಾಗಿಸಿದೆ.

ಚಿಲಿಯ ಖ್ಯಾತ ಉದ್ಯಮಿ ಹಾಗೂ ಕ್ರಿಸ್ಟಲ್ ಲಗೂನ್ಸ್ ಸಂಸ್ಥೆಯ ಸ್ಥಾಪಕರಾದ ಫೆರ್ನಾಂಡೋ ಫಿಶ್ಮಾನ್ ಅವರ ಕಲ್ಪನೆಯ ಕೂಸಾದ ಈ ಈಜುಕೊಳ ಈಗ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಈಜುಕೊಳವೆಂದು ಗಿನ್ನೆಸ್ ದಾಖಲೆ ಪಡೆದು ಗಮನ ಸೆಳೆದಿದೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಈಜುಕೊಳದ ಪರಿಧಿಯಲ್ಲಿ ಒಟ್ಟು ನಲವತ್ತೊಂದು ಜೀವರಕ್ಷಕಾ ಸಿಬ್ಬಂದಿ ಕಟ್ಟೆಚ್ಚರದಲ್ಲಿ ಕಾಯುತ್ತಿರುತ್ತಾರೆ. ಏನಾದರೂ ಅವಘಡ ಸಂಭವಿಸಿದ ಪಕ್ಷ ಈಜುಕೊಳದ ತಳದಲ್ಲಿರುವ ಸುರಕ್ಷಾ ಉಪಕರಣ ಮೇಲೆದ್ದು ಅಮೂಲ್ಯ ಜೀವಗಳನ್ನುಳಿಸುವಲ್ಲಿ ನೆರವಾಗುತ್ತದೆ. ಈ ಈಜುಕೊಳವನ್ನು ನಿರ್ಮಿಸುವಲ್ಲಿ ಜಪಾನ್ ಹಾಗೂ ಕೊರಿಯಾದ ತಂತ್ರಜ್ಞಾನವನ್ನು ಬಳಸಲಾಗಿದ್ದು ಒಟ್ಟು ಹದಿನೈದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ.

Rating
No votes yet

Comments