ಹೀಗೊಂದು ಅಪರೂಪದ ಪುಸ್ತಕ

ಹೀಗೊಂದು ಅಪರೂಪದ ಪುಸ್ತಕ

ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ ಕೊಳ್ಳುತ್ತಿದ್ದೆ. ನಮ್ಮ ತಂದೆಯವರ ಪುಸ್ತಕ ಸಂಗ್ರಹದ ಹವ್ಯಾಸದಿಂದ ನಾನು ಬಹಳ ಪ್ರಭಾವಿತನಾದೆ. ನನ್ನ ಬಳಿ ಹಣವಿರುತ್ತಿದ್ದುದು ಬಹಳ ಕಮ್ಮಿಯಾದ್ದರಿಂದ ಸುಲಭ ಬೆಲೆಗೆ ಸಿಗುತ್ತಿದ್ದ ರಷ್ಯನ್ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಈಗಲೂ ಮನರಂಜನೆಗಾಗಿ ಬೌತಶಾಸ್ತ್ರ ಪುಸ್ತಕವನ್ನು ತಿರುವಿಹಾಕುತ್ತಾ ನಿರಂತರ ಚಲನೆಯ ಯಂತ್ರಗಳ ಬಗೆಗಿನ ಲೇಖನಗಳನ್ನು ಸವಿಯುತ್ತಿರುತ್ತೇನೆ. ಹಳೆಯ ಪೇಪರ್ ಅಂಗಡಿಯವನನ್ನು ಗುರುತು ಮಾಡಿಕೊಂಡು, ಅವನಿಂದ ಕಸ್ತೂರಿಗಳನ್ನು ಸುಲಭ ಬೆಲೆಗೆ ಕೊಂಡು ಓದುತ್ತೆದ್ದೆ.

ಸುಮಾರು ೧೫ ವರ್ಷಗಳ ಹಿಂದಿನ ಮಾತು. ಎಂಜಿನಿಯರಿಂಗ್ ಓದುತ್ತಿದ್ದ ಸಮಯ. ನಮ್ಮ ಪುಸ್ತಕಗಳಿಗಾಗಿ ಆಗಾಗ ಬೆಂಗಳೂರಿನ ಅವೆನ್ಯೂ ರೋಡ್ ನ ಹಳೆಯ ಪುಸ್ತಕದಂಗಡಿಗಳಿಗೆ ಬೇಟಿಕೊಡುತ್ತಿದ್ದೆ. ಕೆಂಪೇಗೌಡ ರೋಡಿನಲ್ಲಿ, ಮೈಸೂರ್ ಬ್ಯಾಂಕ್ ವೃತ್ತದ ಬಳಿ ಬಸ್ ನಂಬರ್ ೧೨ ರಲ್ಲಿ ಬಂದಳಿಯುತ್ತಿದ್ದೆ. ಹಾಗೆಯೇ ಪಕ್ಕದ ಕಟ್ಟೆಯ ಮೇಲೆ ಜೋಡಿಸಿಟ್ಟು ಮಾರುತ್ತಿದ್ದ ಪುಸ್ತಕಗಳಿಗೂ ಒಂದು ಕಣ್ಣು ಹಾಯಿಸುತ್ತಿದ್ದೆ.
ಒಮ್ಮೆ ಹೀಗೆಯೇ ನೋಡುತ್ತಿದ್ದಾಗ ಕಂದು ಬಣ್ಣದ ಬಟ್ಟೆ ಹೊದಿಕೆಯಿರುವ ಸ್ವಲ್ಪ ಜೀರ್ಣವಾದ ತೆಳುವಾದ ಪುಸ್ತಕವೊಂದು ಕಾಣಿಸಿತು. ತೆಗೆದು ಕೊಂಡು ನೋಡಿದರೆ An Elementary Grammer of the Kannada, or Canarese Language ಎಂದಿತ್ತು. ಮುದ್ರಣದ ವರ್ಷ ನೋಡಿದರೆ ೧೮೫೯ !. ಕನ್ನಡದಲ್ಲಿ ಮೊದಲುಮುದ್ರಣಕಂಡ ಪುಸ್ತಕಗಳ ಸಾಲಿಗೆ ಇದು ಸೇರುತ್ತದೆಂದು ಅನಿಸಿತು. ತಕ್ಷಣವೇ ಕೊಳ್ಳಬೇಕೆಂದು ನಿರ್ಧರಿಸಿದೆ. ಅಂಗಡಿಯವನ ಬಳಿ ವ್ಯಾಪಾರ ಮಾಡಿ ೯ ರೂಪಾಯಿಗಳಿಗೆ ಕೊಂಡು ಕೊಂಡೆ.

ಹೀಗೆದೆ ಆ ಪುಸ್ತಕದ ವಿವರ. ಲೇಖಕರು - ಥಾಮಸ್ ಹಡ್ಸನ್, ವೆಸ್ಲಿಯನ್ ಮಿಶಿನೆರಿ. ಮುದ್ರಕರು - ವೆಸ್ಲಿಯನ್ ಮಿಶಿನ್ ಪ್ರೆಸ್. ಬೆಂಗಳೂರು. ಮುಖಪುಟದಲ್ಲಿ ಹೇಳಿಕೊಳ್ಳುವಂತೆ ಈ ಪುಸ್ತಕದ ವಿಶೇಷವೇನೆಂದರೆ ಬಳಸಿದ ಎಲ್ಲಾಪದಗಳನ್ನೂ ಎಥಾವತ್ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ, ಹಾಗೆಯೇ ಕನ್ನಡ ಪದಗಳ ಉಚ್ಚಾರಣೆಯನ್ನೂ ಇಂಗ್ಲೀಷಿನಲ್ಲಿ ಕೊಟ್ಟಿದ್ದಾರೆ.

ಮೇ ೧, ೧೮೫೯ ರಲ್ಲಿ, ಬೆಂಗಳೂರಿನಲ್ಲಿ ಬರೆದ ಇಂಗ್ಲೀಷ್ ಮುನ್ನುಡಿಯಲ್ಲಿ ಲೇಖಕ ಥಾಮಸ್ ಹಡ್ಸನ್ ಹೀಗೆ ಹೇಳುತ್ತಾರೆ - "ತಮಿಳು, ತೆಲಗು ಮತ್ತು ಕನ್ನಡ ಇವು ದಕ್ಷಿಣ ಭಾರತದ ಮೂರು ಪ್ರಮುಖ ಭಾಷೆಗಳು. ಕನ್ನಡವು ಇಂಗ್ಲಿಷ್ ಜನರ ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುವ ಲಕ್ಷಾಂತರ ಹಿಂದೂಗಳು ಮಾತನಾಡುವ ಭಾಷೆ."
ಮುಂದುವರೆಯುತ್ತಾ ಈ ಭಾಷೆಯ ಜ್ಞಾನವು ಸರ್ಕಾರಿ ನೌಕರರಿಗೆ ಹಾಗೂ ಮತ ಪ್ರಚಾರಕರಿಗೆ ಅತ್ಯಗತ್ಯವೆನ್ನುತ್ತಾರೆ. ಲೇಖಕರು ಕನ್ನಡದ ಅಧ್ಯಯನ ಪ್ರಾರಂಭ ಮಾಡಿದಾಗ, ವ್ಯಾಕರಣದ ಸುಲಭ ಪರಿಚಯ ಮಾಡಿಕೊಡುವ ಪುಸ್ತಕದ ಅಗತ್ಯ ಕಂಡರು. ಈ ಹಿಂದೆ ಮೆಕೆರ್ರೆಲ್ (McKerrell) ಎಂಬಾತನ ವ್ಯಾಕರಣದ ಅಮೂಲ್ಯವಾದ ಆದರೆ ಗೊಂದಲಮಯವಾದ ಸಂಗತಿಗಳನ್ನು ಮೂಲವಾಗಿಟ್ಟುಕೊಂಡು, ಅದಕ್ಕೆ ಟಿಪ್ಪಣಿಗಳನ್ನೂ, ಇತರ ವಿಷಯಗಳನ್ನೂ ಸೇರಿಸಿ ಈ ಹಸ್ತಪ್ರತಿ ತಯಾರಿಸಿದ್ದೇನೆ ಎನ್ನುತ್ತಾರೆ.

ಪುಸ್ತಕದ ವಿಷಯಗಳನ್ನು ಇಂಗ್ಲೀಷ್ ವ್ಯಾಕರಣ ಪುಸ್ತಕರೀತಿಯಲ್ಲೇ ವರ್ಗೀಕರಿಸಿದ್ದಾರೆ. ಪುಸ್ತಕದ ಕೊನೆಯಲ್ಲಿ ಇತರ ಪ್ರಕಟಣೆಗಳ ವಿವರ ಕೊಟ್ಟಿದ್ದಾರೆ. ರೆ.ರೀವ್ ರವರ ನಿಘಂಟು, ಸ್ಯಾಂಡರ್‌ಸನ್ ರವರಿಂದ ವಿಸ್ತರಿಸಲ್ಪಟ್ಟಿದ್ದು ,೧೦೪೦ ಪುಟಗಳದ್ದೆನ್ನುತ್ತಾರೆ. ಹಾಗೆಯೇ ಹಳ್ಳಿ ಮಾತುಗಳ ಸಂಗ್ರಹದ ಪುಸ್ತಕವನ್ನೂ ಹೆಸರಿಸುತ್ತಾರೆ.

ಈ ವಿಷಯಗಳ ಬಗ್ಗೆ ನಿಮಗೇನಾದರೂ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಿ. ಹಾಗೆಯೇ ಹಳೆಯ ಪುಸ್ತಕದಂಗಡಿಗೆ ಆಗಾಗ ಬೇಟಿಕೊಡುತ್ತಿರಿ.

- ಸುಚರ
----------------------
ಬ್ಲಾಗುವ ನಾಯಿ ಕಚ್ಚುವುದಿಲ್ಲ

Rating
No votes yet

Comments