ತಮಿಳುನಾಡಿನಿಂದ ಎಳನೀರು ಮಾರೋಕೆ ೫೦೦ ಜನ !!!!!

Submitted by Chetan.Jeeral on Wed, 01/14/2009 - 19:33

ನಮಸ್ಕಾರ ಸ್ನೇಹಿತರೆ,

ಮೊನ್ನೆ ತಾನೆ ಡಾ| ಶೋಭಾ ಕೊಪ್ಪದ್ ಅವರು ತಮಗಾದ ಅನುಭವದ ಬಗ್ಗೆ ಬರೆದಿದ್ದನ್ನು ಓದಿ ಮನಸ್ಸಿಗೆ ತುಂಬಾ ನೋವು ಅನ್ನಿಸಿತು. ಅವರು ಹೇಳಿದ ಮಾತುಗಳಲ್ಲಿ ನಿಜಾಂಶ ಇದೆ. ಶೋಭಾ ಅವರು ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಅಂತ ಹೇಳಿರೋದು ಸರಿಯಾಗಿದೆ. ಕನ್ನಡ ಜನಾಂಗಕ್ಕಿರೋ ಹಲವು ಸಮಸ್ಯೆಗಳಲ್ಲಿ ಅದು ಒಂದು ಅನ್ನೋದು ನನ್ನ ಅನಿಸಿಕೆ. ಇನ್ನೊಂದು ಗಂಭೀರವೇ ಆದ ಸಮಸ್ಯೆ ಅಂದ್ರೆ ಕನ್ನಡಿಗರಲ್ಲಿ ಉದ್ಯಮಶೀಲತೆ ಇಲ್ಲದೇ ಇರೋದು.

ಕನ್ನಡಿಗರು ಯಾಕೆ ಹೆಚ್ಚು ಹೆಚ್ಚು ಉದ್ಯಮಗಳನ್ನ ಸ್ಥಾಪಿಸೋಕೆ ಆಗುತ್ತಿಲ್ಲ. ಕನ್ನಡಿಗರರಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಉದ್ಯಮಶೀಲತೆ ಇಲ್ಲವೆ? ರಾಷ್ಟ್ರ ಮಟ್ಟದಲ್ಲಿ ನೋಡಿದ್ರೂ ನಮ್ಮ ನೆಲದಿಂದ ಹೋಗಿ ದೊಡ್ಡ ಮಟ್ಟದ ಸಾಧನೆ ಮಾಡಿರೋ ಉದ್ಯಮಿಗಳು ಎಲ್ಲೋ ಬೆರಳಣಿಕೆಯಷ್ಟೇ. ಹಾಗಿದ್ರೆ ನಮ್ಮ ಜನರಲ್ಲಿ ಉದ್ಯಮಗಳನ್ನು ಕಟ್ಟೋ ಶಕ್ತಿಯೇ ಇಲ್ಲವಾ? Don't we have what it takes to build corporates ? Don't we have what it takes to become big time entrepreneurs ? ಉದ್ಯಮಶೀಲತೆ ಅನ್ನೋದು ಕನ್ನಡ ಜನಾಂಗದ DNA ಯಲ್ಲೇ ಇಲ್ಲವಾ?

ನಿಮಗೆ ಒಂದು ಸಣ್ಣ ಉದಾಹರಣೆಯ ಮೂಲಕ ಇವತ್ತಿನ ಸ್ಥಿತಿಯನ್ನ ವಿವರಿಸುತ್ತೇನೆ. ನನ್ನ ಮನೆಯ ಹತ್ತಿರ ಒಂದು ದಿನಸಿ ಅಂಗಡಿ ಇದೆ. ನಮ್ಮ ಮನೆಗೆ ಎಲ್ಲಾ ಸಾಮಾನುಗಳನ್ನು ಅಲ್ಲಿಯೆ ತಗೆದುಕೊಳ್ಳುವುದು. ಅದರ ಮಾಲಿಕ ಒಬ್ಬ ಮಲೆಯಾಳಿ. ಮೊದಲಿಗೆ ಒಂದು ಸಣ್ಣ ಅಂಗಡಿಯಿಂದ ಶುರುಮಾಡಿದ ಅವನು ಇವತ್ತು ಒಂದು ಸೂಪರ್ ಮಾರ್ಕೆಟ್ ಶುರು ಮಾಡಿದ್ದಾನೆ. ಹಾಗೇ ಒಂದು ಸಾರಿ ಅವನ ಜೊತೆ ಮಾತನಾಡುತ್ತಿದ್ದೆ. " ಏನ್ರಿ, ಇಂದು ಯಾವುದೇ ಊರಿಗೆ ಹೋದ್ರು,, ನಿಮ್ಮ ಜನರೇ ಎಲ್ಲಾ ಕಡೆ ಇರ್ತಾರೆ, ಏನಿದರ ಗುಟ್ಟು" ಅಂತ ಕೇಳಿದೆ. ಅದಕ್ಕೆ ಅವನು " ಏನು ಇಲ್ಲಾ ಸರ್, ನಮ್ಮ ಕಡೆ ನಮಗೆ ಕೆಲಸ ಬಹಳ ಸಿಕ್ಕೋಲ್ಲ, ಹಾಗಾಗಿ ನಾವು ಇಲ್ಲಿಗೆ ಬರ್ತಿವಿ. ಇಲ್ಲಿ ನಮಗೆ ಯಾವುದೇ ಕೆಲಸ ಮಾಡೋಕು ಅವಕಾಶ ಇದೆ. ನಿಮ್ಮ ಜನಗಳು ವ್ಯಾಪಾರ ಮತ್ತೆ ವ್ಯವಹಾರ ಮಾಡೋದು ಕಡಿಮೆ ಅಲ್ವಾ" ಅಂತ ನಗುತ್ತಾ ಹೇಳಿದ. " ಸರಿ ಹಾಗಾದ್ರೆ ಇಲ್ಲೆ ನೀವು ನೆಲೆ ಊರೋಕೆ ಹೇಗೆ ಸಾಧ್ಯ, ನಿಮ್ಮ ಮನೆ, ಅಪ್ಪಾ, ಅಮ್ಮ, ಅಣ್ಣ, ತಮ್ಮ ಎಲ್ಲರನ್ನು ಬಿಟ್ಟು ಇರೋಕೆ ತೊಂದ್ರೆ ಆಗಲ್ವಾ" ಅಂತ ಕೇಳಿದ್ದಕ್ಕೆ. " ಹಂಗೇನು ಇಲ್ಲಾ ಸರ್, ನಮ್ಮ ಅಣ್ಣ ಒಬ್ಬ ಅಲ್ಲೆ ವ್ಯಾಪಾರ ಮಾಡ್ತಾ ಸೆಟ್ಲ್ ಆಗಿದಾನೆ. ಅದ್ರೆ ನನ್ನ ತಮ್ಮನಿಗೆ ಏನು ಕೆಲಸ ಇರಲಿಲ್ಲ. ಅದಕ್ಕೆ ಅವನನ್ನ ಇಲ್ಲಿ ಕರೆಸಿಕೊಂಡೆ. ಇವಾಗ ಅವನಿಗೆ ಅರ್.ಟಿ ನಗರದಲ್ಲಿ ಒಂದು ಅಂಗಡಿ ಮಾಡಿದಿನಿ, ಇನ್ನೊಬ್ಬ ಇಲ್ಲೆ ನನ್ನ ಜೊತೆ ಇದಾನೆ "ಅಂತ ಹೇಳಿದ. ಇದೆಲ್ಲಾ ಹೇಗೆ ಸಾಧ್ಯ ಅಂತ ಆಶ್ಚರ್ಯದಿಂದ ಕೇಳಿದ್ದಕ್ಕೆ,, "ನಮ್ಮದೇನು ಮಹಾ ಬಿಡಿ ಸಾರ್. ನೀವು ಎಳನೀರು ಕುಡಿತೀರಲ್ಲ ಎದುರುಗಡೆ, ಅವನ ನೆಟ್ವರ್ಕ್ ನೋಡಿದ್ರೆ ಗಾಬರಿ ಆಗಿಬಿಡ್ತೀರಾ. ಅವನ ಮಾಲಿಕ ಇಲ್ಲಿ ಸುಮಾರು ೫೦೦ ಜನ ಎಳನೀರು ಮಾರೋಕೆ ಅಂತಾನೇ ತಮಿಳುನಾಡಿನಿಂದ ಜನರನ್ನ ಕರೆಸಿಕೊಂಡಿದಾನೆ. ಅವರೆಲ್ರೂ ಒಬ್ಬ ಮಾಲೀಕನ ಕೈಯಲ್ಲೆ ಇರೋದು" ಅಂತ ಅಂದ. ಅದನ್ನ ಕೇಳಿ ನನಗೆ ಏನು ಹೇಳಬೇಕು ಅಂತಾನೆ ಗೊತ್ತಾಗಲಿಲ್ಲ.

ತಿರುಗಿ ಮನೆಗೆ ಬರ್ತಾ ಯೋಚನೆ ಮಾಡ್ತಾ ಇದ್ದೆ. ಒಂದು ಎಳನೀರು ಮಾರೋಕು ಅಲ್ಲೆಲ್ಲೆಂದಲೋ ಜನ ಬರಬೇಕಾ? ಇವತ್ತು ಒಂದು ಎಳನೀರಿಗೆ ಸುಮಾರು ೧೦ರೂ ಅಂತ ಲೆಕ್ಕ ಹಾಕಿದ್ರು ಒಬ್ಬ ಮನುಷ್ಯ ದಿನಕ್ಕೆ ೬೦-೧೦೦ ಎಳನೀರು ಮಾರಿದರು ದಿನಕ್ಕೆ ಆಗುವ ವ್ಯಾಪಾರ, ೬೦೦-೧೦೦೦ರೂಗಳು. ಅಂದ್ರೆ ೫೦೦ ಜನ ತಗೊಂಡ್ರೆ ೩,೦೦,೦೦೦ - ೫,೦೦,೦೦೦ ರೂಪಾಯಿಗಳು. ಈ ಲೆಕ್ಕ ನೋಡಿ ನನ್ನ ತಲೆ ತಿರುಗಿ ಹೋಯಿತು. ಎಳನೀರು ಮಾರಿ ದೊಡ್ಡ ಸಂಪಾದನೆ ಮಾಡೋ ಬುದ್ಧಿ ನಮ್ಮ ಕನ್ನಡದ ಯಾವ ಹೈಕಳಿಗೂ ಬಂದೇ ಇಲ್ವಾ? ನಮ್ಮ ಜನರಿಗೆ ವ್ಯಾಪಾರ ಮಾಡುವ ಬುಧ್ಧಿನೇ ಇಲ್ವಾ? ಅಥವಾ ವ್ಯಾಪಾರ, ವ್ಯವಹಾರ ಎಲ್ಲ ಮಾರ್ವಾಡಿ, ತಮಿಳು, ತೆಲುಗು ಜನರದ್ದು, ಅದೆಲ್ಲ ನಮಗ್ಯಾಕೆ ಅನ್ನೋ ಉದಾಸೀನಭಾವವೋ ? ಈ ಎಳನೀರು ವ್ಯಾಪಾರವನ್ನೆ ತಗೆದುಕೊಳ್ಳಿ. ೫೦೦ ಜನ ಕನ್ನಡಿಗರನ್ನ ಇಟ್ಟಕೊಂಡು ಎಳನೀರು ಮಾರಿ ದುಡ್ಡು ಮಾಡೋ ಬುದ್ಧಿ ಒಬ್ಬೇ ಒಬ್ಬ ಕನ್ನಡಿಗನಿಗೆ ಬಂದಿಲ್ವಲ್ಲ. ಇಂತಹ ಸಣ್ಣ ಸಣ್ಣ ವ್ಯಾಪಾರಗಳನ್ನು ಸಹ ನಮ್ಮ ಕನ್ನಡಿಗರು ಉಪಯೋಗಿಸೋ ಜಾಣತನವನ್ನು ಹೊಂದಿಲ್ಲವೆ? ಇದು ಕೇವಲ ಒಂದು ಸಣ್ಣ ಉದಾಹರಣೆ.

ಮೊನ್ನೆ ಚೆನ್ನೈನಲ್ಲಿ "ಪ್ರವಾಸಿ ಭಾರತೀಯ ದಿವಸ" ಸಮ್ಮೇಳನ ಆಯೋಜಿಸಲಾಗಿತ್ತು. ಅಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯ ಮಂತ್ರಿಗಳು ಮತ್ತು ಇತರೆ ಮಂತ್ರಿಗಳು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಮತ್ತು ಅನಿವಾಸಿ ಭಾರತಿಯರಿಗೆ ಭಾರತದಲ್ಲಿ ಬಂಡವಾಳ ಹೂಡಲು ಹೇಳುತ್ತಿದ್ದರು. ಆದರೆ ಅಲ್ಲಿ ಬಂದಿದ್ದ ಬಹುತೇಕ ಬಂಡವಾಳ ಹೂಡಿಕೆದಾರರು ಆರಿಸಿದ್ದು ಗುಜರಾತ್ ರಾಜ್ಯವನ್ನು. ಎರಡನೆಯ ರಾಜ್ಯವಾಗಿ ಆಯ್ಕೆಯಾಗಿದ್ದು ಮಹಾರಾಷ್ಟ್ರ. ನಮ್ಮ ರಾಜ್ಯ ಎಂಟನೆಯ ಸ್ಥಾನದಲ್ಲಿದೆ. ಎಲ್ಲಾ ನೈಸರ್ಗಿಕ, ಔದ್ಯೋಗಿಕ, ಮಾನವ ಸಂಪನ್ಮೂಲಗಳು ಮತ್ತು ಎಲ್ಲಾ ಸೌಲಭ್ಯಗಳಿರುವ ರಾಜ್ಯ ನಮ್ಮದು. ಅದ್ರೆ ಯಾಕೆ ಉದ್ಯಮ, ಉದ್ದಿಮೆಗಾರಿಕೆಯ ವಿಷಯದಲ್ಲಿ ಹಿಂದಿದೆ? ಸ್ವಲ್ಪ ಮಟ್ಟಿಗೆ ಐ.ಟಿ/ಬಿ.ಟಿ ಅಂತೆಲ್ಲ ಪ್ರಗತಿ ಆಗಿದ್ರೂ, ಅದರಲ್ಲೂ ನಮ್ಮ ರಾಜ್ಯದ ಉದ್ಯಮಿಗಳ ಪಾಲು ಇಲ್ವೇ ಇಲ್ಲ ಅನ್ನುವಷ್ಟು ಕಮ್ಮಿ.

ಹಾಗಿದ್ರೆ, ಕನ್ನಡಿಗರ ಉದ್ಯಮಶೀಲತೆ ಬೆಳೆಸೋ ನಿಟ್ಟಿನಲ್ಲಿ ಸರ್ಕಾರ, ನಾಡಿನ ಚಿಂತಕರು ಹೀಗೆ ಯಾರೂ ಚಿಂತನೆನೇ ನಡೆಸಿಲ್ವಾ? ಕನ್ನಡಿಗರಲ್ಲಿ ಉದ್ದಿಮೆ, ಉದ್ಯಮಶೀಲತೆ ಬೆಳೆಸೋಕೆ ಸರ್ಕಾರ, ಶಿಕ್ಷಣ ವ್ಯವಸ್ಥೆ, ಉದ್ಯಮಿಗಳು, ನಾಡ ಪರ ಚಿಂತಕರು ಎಲ್ಲ ಸೇರಿ ತುರ್ತು ಕ್ರಮ ತೆಗೆದುಕೊಳ್ಳಬೇಕು. ಅದಿಲ್ಲ ಅಂದ್ರೆ, ಕರ್ನಾಟಕದ ಎಲ್ಲ ಸಂಪನ್ಮೂಲವನ್ನು ಕನ್ನಡಿಗರಲ್ಲದೇ ಇನ್ಯಾರೋ ಸೂರೆ ಹೊಡೆದು, ನಾವು ಅವರ ಅಡಿಯಾಳಾಗೇ ಜೀವನ ಪೂರ್ತಿ ಕೆಲಸ ಮಾಡಿಕೊಂಡು, ಕೊಡುವ ಪುಡಿಗಾಸಿನ ಸಂಬಳಕ್ಕೆ ತೃಪ್ತಿ ಪಟ್ಟುಕೊಂಡು ಇರೋದಾಗುತ್ತೆ. ಏನಂತೀರಾ?

Rating
No votes yet

Comments