ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?

ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?

ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀರಿನಾಳದಲ್ಲಿ ನಡೆಸಿದರೆ?

ಹುಚ್ಚುತನವೆಂದು ಅನ್ನಿಸುವ ಈ ಕಾರ್ಯಕ್ಕೂ ಒಂದು ಗಿನ್ನೆಸ್ ದಾಖಲೆಯಿದೆ. ಕಳೆದ ವರ್ಷ ಹತ್ತು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯಾದ ಎಪ್ಪತ್ತೆರೆಡು ಮುಳುಗುಗಾರರ ತಂಡ ಲಿನೆನ್ ಬಟ್ಟೆಯೊಂದನ್ನು ಇಸ್ತ್ರಿ ಮಾಡಿತ್ತು.

ಆದರೆ ಈ ವರ್ಷ ಬ್ರಿಟನ್ನಿನ ಎಂಭತ್ತಾರು ಮುಳುಗುಗಾರರ ತಂಡ ಆ ದಾಖಲೆಯನ್ನು ಮುರಿದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ತ್ಯಜಿಸಲಾಗಿರುವ ಗಣಿಯೊಂದರಲ್ಲಿ ೧೭೩ ಅಡಿ ಆಳದದಲ್ಲಿ ಹತ್ತು ನಿಮಿಷದಲ್ಲಿ ಎಂಭತ್ತಾರು ಮುಳುಗುಗಾರರು ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿದ್ದಾರೆ.

ಬ್ರಿಟನ್ನಿನ ಸೌಥ್ ವೇಲ್ಸ್ ಎಂಬಲ್ಲಿ ನಡೆದ ಈ ಸಾಧನೆ ನಿಜಕ್ಕೂ ಲೈಫ್ ಬೋಟ್ ರಕ್ಷಣಾಗಾರರಿಗೆ ನೆರವು ನೀಡುವಲ್ಲಿ ಧನಸಂಗ್ರಹದ ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತೇ ವಿನಃ ದಾಖಲೆಗಾಗಿ ಅಲ್ಲ ಎಂದು ತಂಡದ ನಾಯಕ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಗಾರೆಥ್ ಲಾಕ್ ಅವರು ತಿಳಿಸಿದ್ದಾರೆ.

ಈ ಪ್ರಯತ್ನವನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಆಗಮಿಸಿದ್ದುದು ವಿಶೇಷವಾಗಿದೆ. ಹೊಸ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಇನ್ನು ಒಂದೆರೆಡು ವಾರದಲ್ಲಿ ಪ್ರಕಟಿಸಬಹುದು.

ಇಸ್ತ್ರಿ ಮಾಡಿದ ಬಟ್ಟೆ ಒದ್ದೆಯಾಗಿಯೇ ಇದ್ದರೆ ತೊಡುವುದು ಹೇಗೆ? ಈ ಮಾಹಿತಿಯನ್ನು ಅವರು ನೀಡಿಲ್ಲ.

ಕೃಪೆ: www.thesun.co.uk

Rating
No votes yet

Comments