ಬಿ.ಎಂ.ಟಿ.ಸಿ ವೋಲ್ವೊ ಬಸ್ಸುಗಳಲ್ಲೇಕಿಲ್ಲ ಕನ್ನಡ??

Submitted by ಸಂಗನಗೌಡ on Tue, 11/20/2007 - 23:59

ನಾವ್ ಕನ್ನಡಿಗರೇಕೆ ಹೀಗೆ?? ಹೊರಗಿನವರನ್ನು ಒಲಿಸಲು ನಮ್ಮತನವನ್ನೇ ಬಿಟ್ಟು ಕೊಡುವದು ಪೆದ್ದುತನವಲ್ಲವೆ? ನಮ್ಮ ತಾಯ್ನುಡಿಗೇ ಮೋಸ ಮಾಡಿ, ನಾವು ಹೊರಗಿನವರನ್ನು ಮೆಚ್ಚಿಸಬೇಕೆ?? ಎಲ್ಲಕ್ಕೂ ಮಿಗಿಲಾಗಿ, ನಾವು ಹಾಗೇ ಮಾಡಿದರೆ ಅವರು ಮೆಚ್ಚಿ ಬಿಡುತ್ತಾರೆಂಬ ಬ್ರಮೆ ಏಕೆ?

ನಡೆದದ್ದೇನೆಂದರೇ ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್ಕಿಗೆ ಬರುವ ವೋಲ್ವೋ ಬಸ್ಸಲ್ಲಿ ಕನ್ನಡ ಹಾಡು ಎಲ್ಲೂ ಇಣುಕಲೇ ಇಲ್ಲ. ಅಪ್ಪಿ-ತಪ್ಪಿಯೂ ಕನ್ನಡ ರೇಡಿಯೋ ಹಾಕಲಿಲ್ಲ ಡ್ರೈವರ್ ಮಹಾಸಯ. ಒಂದು ಕಡೇ, ಇಂಗಲೀಸ್ ಬೋರ್ಡುಗಳಿಗೇ ಮಸಿ ಬಳಿಯುವದು, ಇನ್ನೊಂದ್ ಕಡೆ ಕನ್ನಡವನ್ನು ಬೇಕು ಅಂತಲೇ ಕಡೆಗಣಿಸೋದು. ಈ ರೀತಿಯ ಎಕ್ಸ್ಟ್ರೀಮಿಟಿ ಸರಿನಾ?

ಹೊರಗಿನವರನ್ನು ಅವರ ಬಾಸೆಯಲ್ಲಿ ಮಾತಾಡಿಸಿದರೆನೇ ನಾವು ಒಳ್ಳೇಯವ್ರು ಅನ್ನಿಸ್ಕೋಬೇಕಾ? ಅವರು ಒಳ್ಳೇಯವ್ರು ಅನ್ನಲ್ಲಾ, ಹೇಡಿಗಳು ಅಂತಾರೆ. ಎಲೆಕ್ಟ್ರಾನಿಕ್ ಸಿಟಿ ಕಡೇ ಕನ್ನಡೇತರರು ಹೆಚ್ಚಿಗೆ ಇದ್ದರೆ ನಮ್ಮದೇ ಸರಕಾರಿ ಬಸ್ಸಲ್ಲಿ ಕನ್ನಡ ಹಾಡು ಹಾಕ್ಬಾರದು ಅಂತಾನಾ? 

ಕನ್ನಡ ನಾಡಲ್ಲಿ ಕನ್ನಡ-ಉಳಿಯಲಿ ಬಿಡಲಿ, ಅವರಿಗೇನು? ಅವರ ನಾಡುಗಳಲ್ಲಿ ಅವರವರ ನುಡಿಗಳು ಅರಾಮಾಗಿವೆ ಅಂತ ಅವರಿಗೆ ಗೊತ್ತು. ನಮ್ಮ ನುಡಿಯನ್ನು ಕಾಯ್ದುಕೊಳ್ಳಬೇಕಿರುವದು ನಮ್ಮ ಹೊಣೆ ತಾನೆ. ನಮ್ಮ ನುಡಿಯನ್ನು ಅವಕಾಸ ಸಿಕ್ಕಲ್ಲೆಲ್ಲಾ ಬೇರೆಯವರಿಗೆ ನಾವು ಕೇಳಿಸುವದು ಬಿಟ್ಟು, ಈ ರೀತಿ ಕಡಗಣಿಸುವದು ಸರಿನಾ?

ನಾಡ ನುಡಿಯನ್ನು ಸಂಪೂರ್ಣ ಕಡೆಗಣಿಸಿ ರಾಸ್ಟ್ರೀಯತೆಯ ಹೆಸರಲ್ಲಿ ಬರೀ ಹಿಂದಿ, ಇಂಗಲೀಸ್ ಹಾಡುಗಳನ್ನು ಬಿತ್ತರಿಸೋದು ರೇಡಿಯೋಗಳ ಹೊಣೆಗೇಡಿತನವಲ್ಲವೆ? ಪ್ರೈವೇಟ್ ಆದ್ರೂ ಅವು ಕೆಲಸ ಮಾಡುತ್ತಿರುವದು ಕನ್ನಡ ನಾಡಲ್ಲಿ ತಾನೆ?

ಇಲ್ಲ ಅಂದ್ರು ನಾಕೈದು ಹಾಡುಗಳಲ್ಲಿ ಒಂದಾದ್ರು ಹಾಡು ಕನ್ನಡವಾಗಿರಬೇಕು ಅಂತ ಸರಕಾರ  ನೇಮ ಮಾಡಿದ್ರೆ ತಪ್ಪೇನು?‍

Rating
No votes yet

Comments