ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?

ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?

ಕನ್ನಡಕ್ಕೆ ಅನುವಾದ ಕುರಿತು ಹೊಸ ಆಲೋಚನೆ

ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ' ಓದಿಲ್ಲ ( ಅಷ್ಟೇ ಏಕೆ , ಭೈರಪ್ಪ , ಕಾರಂತರ ಕಾದಂಬರಿಗಳನ್ನೂ ಓದಿಲ್ಲ) .

ವರ್ಷಕ್ಕೊಮ್ಮೆ ಮುಂಬೈಯಲ್ಲಿ Strand Book exhibiTion and Sale ನಡೆಯುತ್ತದೆ . ಭಾರೀ ಪ್ರಮಾಣದಲ್ಲಿ ರಿಯಾಯಿತಿ ಕೊಡುವದರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳು ಮಾರಾಟವಾಗುತ್ತವೆ . ( ನಿಮಗೆ ಗೊತ್ತಿರಬಹುದು . ಈ Strand Book stall ಬಹಳ ಹೆಸರುವಾಸಿ . ಅತಿ ಗಣ್ಯ ವ್ಯಕ್ತಿಗಳು ಹಿಂದೆ ಭೇಟಿ ಕೊಡುತ್ತಿದ್ದರಂತೆ . ಇದನ್ನು ಆರಂಭಿಸಿದವರು ಶ್ಯಾನುಭಾಗ್ ಎಂಬ ಕನ್ನಡಿಗರು. ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿನ ಅವರ ಕೆಲಸಕ್ಕೆ ಪದ್ಮಭೂಷಣವೋ ಪದ್ಮಶ್ರೀಯೋ ಬಂದಿದೆ. ಅಂತರ್ಜಲದಲ್ಲಿ Strand Book ಎಂದು ಹುದುಕಿದರೆ ಈ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ)

ಈ ಸಲ ನಾನು ಹೋದಾಗ ಅಲ್ಲಿ 'ಕಾನೂರು ಹೆಗ್ಗಡಿತಿ'ಯ ಇಂಗ್ಲೀಷ್ ಅನುವಾದ (ಪೆಂಗ್ವಿನ್ ಪುಸ್ತಕ) ನೋಡಿ ಖರೀದಿಸಿದೆ. ಕನ್ನಡ ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಓದುತ್ತಿದ್ದೇನೆ. (ಅಲ್ಲಿ ನಾನು ಬೆಂಗಳೂರಿನಿಂದ ಮುನ್ನೂರು ಕೊಟ್ಟು ತರಿಸಿದ ಜಯಂತ್ ಕಾಯ್ಕಿಣಿಯವರ Dots and Lines ಕೂಡ ಇತ್ತು. ಬೆಲೆ ಬರೀ ಎರಡು ನೂರು!)

House of kanooru ಹೆಸರಿನಲ್ಲಿರುವ ಈ ಕಾದಂಬರಿಯನ್ನು ಓದುವಾಗ ಗಮನಿಸಿದೆ . ಗುಲಗಂಜಿ , ಹರಿವೆ, ಹೆಗ್ಗಡಿತಿ, ತುಳಸಿ ಇಂಥ ಶಬ್ದಗಳನ್ನು ಹಾಗೆಯೇ ಬಳಸಿದ್ದಾರೆ. ಅಯ್ಯೋ , ಮಾರಾಯಾ ಎಂಬ ಉದ್ಗಾರಗಳನ್ನೂ ಹಾಗೆಯೇ ಇಟ್ಟಿದ್ದಾರೆ.

ಬಹುಶ: ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿದ್ದರೆ ಸರಿಯೆನಿಸುತ್ತದೆ - ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದಿಸುವಾಗ - ಸಾಧ್ಯವಿದ್ದಲ್ಲಿ ಮತ್ತು ಸಾಧ್ಯವಿದ್ದಷ್ಟು ಮಟ್ಟಿಗೆ ಎರಡನೆಯ ಭಾಷೆಯ ಶಬ್ದಗಳನ್ನೇ ಉಪಯೋಗಿಸಬೇಕು. ಸರಿಯಾದ ಶಬ್ದಗಳಿಲ್ಲದಿದ್ದರೆ ಮೂಲ ಭಾಷೆಯ ಶಬ್ದಗಳನ್ನೇ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಹೊಸ ಶಬ್ದ ರಚನೆಮಾಡಿ ಬಳಕೆಗೆ ತರುವ ಅಗತ್ಯ ಇದೆಯೇ ? ಹಾಗೆ ತರುವದಾದರೂ ಅಂಥ ಹೊಸಶಬ್ದಗಳ ಪ್ರಮಾಣ ಮಿತಿ ಮೀರಬಾರದು. ಮಿತಿ ಮೀರದೆ ಇದ್ದಲ್ಲಿ ಬಳಕೆಗೆ ಬರುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ಜನ ಸಂಪೂರ್ಣವಾಗಿಯೇ ತಿರಸ್ಕರಿಸಿಯಾರು.

ತಂತ್ರಾಂಶವನ್ನು ಅನುವಾದಿಸುವಾಗ ಹೊಸ ಶಬ್ದಗಳಾದ ಡೌನ್ಲೋಡ್ , ರ್‍ಯಾಂಡಂ , ಅಪ್ಲೋಡ್ , ಟ್ಯಾಬ್ ಗಳನ್ನು ಹಾಗೆಯೇ ಬರೆಯುವದು ಸರಿಯೆನಿಸುತ್ತದೆ.ಅದೇ ಅರ್ಥ ಕೊಡುವ ಕನ್ನಡ ಶಬ್ದ ಇದ್ದಲ್ಲಿ ಮಾತ್ರ ಕನ್ನಡ ಶಬ್ದವನ್ನೇ ಬಳಸಬೇಕು. ಹೊಸದೇ ಆದ ಶಬ್ದ ರಚನೆ ಮಾತ್ರ ಬಲು ಅಪರೂಪವಾಗಿ ಮಾಡಬೇಕು.

ಏನೋ ನನ್ನ ಅಲ್ಪ ಬುದ್ಧಿಗೆ ತೋಚಿದ್ದನ್ನು ಹೇಳಿದ್ದೇನೆ ? ನಿಮ್ಮ ಅಂಬೋಣ ಏನು? ಏನಂತೀರಿ?

[ ಅಂದ ಹಾಗೆ ಒಂದಿಷ್ಟು ಹಳೆಯ 'ಹೊಸ ಶಬ್ದಗಳು '

೧. ಗ್ರಾಮಾಫೋನ್ ರೆಕಾರ್ಡುಗಳಿಗೆ , ಗಾನ ದೋಸೆ , ಗಾನ ತಟ್ಟೆ ಶಬ್ದ ಕಾಯಿನ್ ಮಾಡಿದ್ದರು! ಕೊನೆಗೆ ಧ್ವನಿಮುದ್ರಿಕೆ ಉಳಿಯಿತು - ಗ್ರಾಂಥಿಕ ಭಾಷೆಯಲ್ಲಿ . ಆಡುಮಾತಿನಲ್ಲಿ ರೆಕಾರ್ಡೇ ಉಳಿಯಿತು.

೨. ಅವನು ತನ್ನ ಮೋಟಾರಿನ ಕೊಂಬನ್ನು ಮೊಳಗಿಸಿದನು - ಕಾರಿನ ಹಾರ್ನು ಮಾಡಿದನು ಎಂಬುದಕ್ಕೆ!

೩. ಕ್ಯಾಸೆಟ್ಟಿಗೆ - ಧ್ವನಿಕರಂಡಿಕೆ ! ಕೊನೆಗೆ ಗ್ರಾಂಥಿಕ ಭಾಷೆಯಲ್ಲಿ ಧ್ವನಿಸುರಳಿಯೂ ಆಡುಮಾತಿನಲ್ಲಿ ಕ್ಯಾಸೆಟ್ಟು ಉಳಿದಿದೆ]

Rating
No votes yet

Comments