ಕರ್ನಾಟಕ ಕ್ರಿಕೆಟ್ - ೨

ಕರ್ನಾಟಕ ಕ್ರಿಕೆಟ್ - ೨

ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.

ಅರುಣ್ ಕುಮಾರ್ ಗೆ ಹಾವುಗಳೆಂದರೆ ತುಂಬಾನೇ ಪ್ರೀತಿ. ಅವರೊಂದಿಗೆ ಹೊಟೇಲ್ ರೂಮ್ ಶೇರ್ ಮಾಡಿಕೊಳ್ಳಲು ಉಳಿದ ಆಟಗಾರರು ಹಿಂಜರಿಯುತ್ತಿದ್ದರು. ಚೇಷ್ಟೆ ಮಾಡುವುದರಲ್ಲಿ ಬಹಳ ಮುಂದಿದ್ದ ಅರುಣ್ ಹಾವುಗಳ ಮೂಲಕ ಸಹ ಆಟಗಾರರನ್ನು ಬಹಳ ಕಾಡಿದ್ದಾರೆ.

ಜ್ಯಾಕ್ ಮುಂದಿನ ವರ್ಷಗಳಲ್ಲಿ ತನ್ನ ಬ್ಯಾಟಿಂಗ್ ನಿಂದ ಕರ್ನಾಟಕಕ್ಕೆ ಹಲವಾರು ಬಾರಿ ಉತ್ತಮ ಆರಂಭವನ್ನು ನೀಡಿದ್ದರು. ಹಲವಾರು ಬಾರಿ ಭಾರತ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜ್ಯಾಕ್ ಹೆಸರಿರುತ್ತಿತ್ತು. ನಿರಾಸೆಯ ಸಂಗತಿಯೆಂದರೆ ಜ್ಯಾಕ್ ೬೦-೭೦ ಓಟಗಳನ್ನು ಗಳಿಸಿದ ಬಳಿಕ ಸಂಯಮವನ್ನು ಕಳೆದು ಕೆಟ್ಟ ಹೊಡೆತಗಳಿಗೆ ತನ್ನ ವಿಕೆಟ್ ಒಪ್ಪಿಸುವುದನ್ನು ರೂಢಿಮಾಡಿಕೊಂಡಿದ್ದರು. ತನ್ನ ಕ್ರಿಕೆಟ್-ನ ಈ ನ್ಯೂನತೆಯನ್ನು ಜ್ಯಾಕ್ ಸರಿಪಡಿಸಿಕೊಂಡಿದ್ದರೆ ಭಾರತ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಹೆಸರನ್ನು ನಾವೆಲ್ಲರೂ ಕಾಣಬಹುದಿತ್ತು.

೨೦೦೪-೦೫ ರ ರಣಜಿ ಋತುವಿನಲ್ಲಿ ಅರುಣ್ ಕುಮಾರ್-ಗೆ ಶನಿದೆಸೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಬಂದಿದ್ದವು. ಒಂದು ಕಡೆಯಿಂದ ರಾಬಿನ್ ಉತ್ತಪ್ಪ, ಶ್ಯಾಮ್ ಪೊನ್ನಪ್ಪ ಮತ್ತು ಭರತ್ ಚಿಪ್ಲಿ ಇತ್ಯಾದಿ ಯುವ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಗಾರರ ತವಕ ಮತ್ತೊಂದು ಕಡೆಯಿಂದ ಬ್ಯಾಟಿಂಗ್ ಬಾರದ, ಬೌಲಿಂಗ್ ಬಾರದ, ಕ್ಷೇತ್ರರಕ್ಷಣೆ ಬಾರದ ಮತ್ತು ಕನ್ನಡ ಮೊದಲೇ ಬಾರದ ಸ್ಟುವರ್ಟ್ ಬಿನ್ನಿಯಂತಹವರನ್ನು 'ಆಡಿಸಲೇಬೇಕಾದ' ಅನಿವಾರ್ಯತೆ. ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಅರುಣ್ ೨೫;೧೩ ಮತ್ತು ೨೯;೬ ಓಟಗಳನ್ನು ಗಳಿಸಿ ವಿಫಲರಾದರು. ಇದೇ ಕಾರಣವನ್ನು ಮುಂದಿಟ್ಟು ನಂತರದ ೫ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಯಿತು. ಆದರೆ ಈ ೫ ಪಂದ್ಯಗಳನ್ನಾಡಿದ ರಾಬಿನ್ ಮತ್ತು ಶ್ಯಾಮ್ ಅವರಿಬ್ಬರ ಒಟ್ಟಾರೆ ಪ್ರದರ್ಶನ ಸಾಧಾರಣವಾಗಿತ್ತು ಅಷ್ಟೆ.

ಆಯ್ಕೆಗಾರರು ನೀಡಿದ ಸುಳಿವುಗಳನ್ನು ಅರ್ಥೈಸಿಕೊಂಡ ಅರುಣ್, ಮುಂದಿನ ಋತುವಿನ ರಣಜಿ ತಂಡಕ್ಕೆ ತನ್ನನ್ನು ಪರಿಗಣಿಸಲಾರರು ಎಂಬುದನ್ನು ಮನಗಂಡು, ಹೊರ ರಾಜ್ಯದ ಅನುಭವಿ ಆಟಗಾರರಿಗಾಗಿ ಹುಡುಕಾಡುತ್ತಿದ್ದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ನ್ನು ಸಂಪರ್ಕಿಸಿದರು. ಅರುಣ್ ಕುಮಾರ್ ರಂತಹ ಆಟಗಾರ ಸಿಕ್ಕಿದ್ದು ಅಸ್ಸಾಮ್ ಕ್ರಿಕೆಟ್ ನ ಭಾಗ್ಯ. ಅವರನ್ನು ಕಳೆದುಕೊಂಡು ಸ್ಟುವರ್ಟ್ ಬಿನ್ನಿಯಂತವರ ಆಟ ನೋಡುತ್ತಿರುವುದು ನಮ್ಮ ದೌರ್ಭಾಗ್ಯ.

ಹೀಗೆ ೨೦೦೫-೦೬ ನೇ ಋತುವಿನಲ್ಲಿ ನಮ್ಮ ಅರುಣ್ ಕುಮಾರ್, ಆಸ್ಸಾಮ್ ಪರವಾಗಿ ಆಡಿ ೪ ಪಂದ್ಯಗಳಲ್ಲಿ ೨ ಶತಕಗಳ ಸಹಿತ ೫೭.೬೬ ಸರಾಸರಿಯಲ್ಲಿ ೩೪೬ ಓಟಗಳನ್ನು ಗಳಿಸಿದರು. ಅರುಣ್ ಕುಮಾರ್ ರಿಂದ ಬಹಳ ಆಕರ್ಷಿತವಾದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಈ ಪ್ರಸಕ್ತ ಋತುವಿನಲ್ಲಿ (೨೦೦೬-೦೭) ಅವರಿಗೆ ದೊಡ್ಡ ಜವಾಬ್ದಾರಿಯೊಂದನ್ನು ನೀಡಿತು. ಅದೇನೆಂದರೆ ಅಸ್ಸಾಮ್ ತಂಡದ ನಾಯಕತ್ವ! ಇದರೊಂದಿಗೆ ಬಂದ ಇನ್ನೂ ದೊಡ್ಡ ಜವಾಬ್ದಾರಿಯೆಂದರೆ ಅಸ್ಸಾಮ್ ತಂಡವನ್ನು ಪ್ಲೇಟ್ ಲೀಗ್ ನ ಫೈನಲ್ ತಲುಪುವಂತೆ ಮಾಡಿ ಮುಂದಿನ ಋತುವಿನಲ್ಲಿ ಎಲೀಟ್ ಲೀಗ್ ನಲ್ಲಿ ಆಡಲು ಅರ್ಹತೆ ಗಳಿಸುವುದು.

ಅರುಣ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಸ್ಸಾಮ್ ಈಗ ಪ್ಲೇಟ್ ಲೀಗ್ ನ ಸೆಮಿ ಫೈನಲ್ ತಲುಪಿದೆ. ಭರ್ಜರಿ ಆಟ ಪ್ರದರ್ಶಿಸಿರುವ ಅರುಣ್, ೫ ಪಂದ್ಯಗಳಲ್ಲಿ ೨ ಶತಕಗಳೊಂದಿಗೆ ೯೦.೩೩ ಸರಾಸರಿಯಲ್ಲಿ ೫೪೨ ಓಟ ಗಳಿಸಿದ್ದಾರೆ. 'ಕರ್ನಾಟಕಾಸ್ ಲಾಸ್ ಇಸ್ ಅಸ್ಸಾಮ್-ಸ್ ಗೈನ್'. ರಣಜಿಗೆ ಪಾದಾರ್ಪಣ ಮಾಡಿದ ಋತುವಿನಲ್ಲೇ ಆಸ್ಸಾಮ್ ವಿರುದ್ಧ ೭೫ ಓಟ ಗಳಿಸಿದ್ದ ಅರುಣ್ ಗೆ, ೧೩ ವರ್ಷಗಳ ಬಳಿಕ ತಾನು ಇದೇ ತಂಡದ ನಾಯಕನಾಗಿ ಆಡಲಿದ್ದೇನೆ ಎಂಬುದೆಲ್ಲಿ ಗೊತ್ತಿತ್ತು? ಲೈಫ್ ಇಸ್ ಒನ್ ಫುಲ್ ಸರ್ಕಲ್.

ನಾಳೆ ಜನವರಿ ೧೦ ರಂದು ಕಟಕ್ ನಲ್ಲಿ ಆರಂಭವಾಗುವ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಅಸ್ಸಾಮ್, ಒರಿಸ್ಸಾ ತಂಡವನ್ನು ಎದುರಿಸಲಿದೆ. ಅಸ್ಸಾಮ್ ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಲೆಂದು ನಮ್ಮ ಕನ್ನಡದ ಹುಡುಗ ಜ್ಯಾಕ್ ಗೆ ಶುಭ ಹಾರೈಕೆಗಳು. ಅಸ್ಸಾಮ್ ಪರವಾಗಿ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಸ್ಪಿನ್ನರ್ ಆನಂದ್ ಕಟ್ಟಿ ಕೂಡಾ ಆಡುತ್ತಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಕನ್ನಡದ ಈ ಹುಡುಗನಿಗೂ ನಾಳಿನ ಪಂದ್ಯಕ್ಕೆ ಶುಭಹಾರೈಕೆಗಳು.

Rating
No votes yet

Comments