ಗಾಳಿಪಟ.

ಗಾಳಿಪಟ.

ಏ ಹುಚ್ಚ ರಂಡೆ ಗಂಡ ಕಾನ್ವೆಂಟ್ ಕಲಿತಿದ್ದಿ ಈ ಹೊಲ್ಸು ಗೋಲಿ, ಬಗರಿ, ಲಗೋರಿ ಆಡೋದು, ಮರ ಹತ್ತಿ ನೆಲ್ಲಿಕಾಯಿ ತಿಂಬೋದು ಮತ್ತ ಆಶಾಡ ಬಂತು ಅಂದ್ರ ಗಾಜಿನ್ ಬಾಟ್ಲಿ ವಡ್ದು ಮಾಂಜ ಧಾರ ಮಾಡಿ ಗಾಳಿಪಟ ಹಾರ್ಸ್ಲಿಕ್ಕೆ ಬಯ್ಲಾಗ ಓಡ್ತಿ ನಾಚ್ಗಿ ಆಗಂಗಿಲ್ಲ ನಿಂಗ ಅಂತ ಅಮ್ಮ ಬಯ್ಯೋದು ಗ್ನಾಪಕ ಮಾಡ್ಕೊಂತ ಸೀನ ಅಹ್ಮದಾಬಾದ್ನಾಗಿರೊ ತನ್ನ ಫ಼್ಲ್ಯಾಟ್ನಾಗ ತಂದ ಮಾರಿ ಚಿತ್ರ ಇರೋ ಗಾಳಿಪಟ ಮಾಡ್ಕೋತ ಕೂತಿದ್ದ.

ಬೆಳ್ಗಾ ಮುಂಜಾನೆ ಎದ್ದು ಅಪ್ಪ ಭಾವಿ ನೀರು ಸೇದಿ ಧಬೊ ಧಬೊ ಅಂತ ಮೈ ಮ್ಯಾಲೆ ಸುರ್ಕೊಂಡು ಬಯಲ ಹಣಮಪ್ಪನ ಪೂಜಿ ಮಾಡಿ ಆ ಹೊತ್ತಿಗೆ ಗುಡಿಗೆ ಬರೊ ಮಂದಿಗೆ ತೀರ್ಥ ಕೊಟ್ಟು ಬಂದು ಮೈಲ್ಗೀಲೆ ಬೀಡಿ ಸೇದ್ಕೋತ ಸೀನನ್ನ ಎಬ್ಬ್ಸಿ ಓದ್ಲಿಕ್ಕೆ ಕೂಡ್ಸ್ತಿದ್ದ. ಸೀನ ನಿದ್ದಿಗಣ್ಣಿಲೆ ಓದ್ಕೋತ, ಓದಿದ್ನ ಎಡ್ಗಯ್ಲೆ ಬರ್ದು ತಗಿತಿದ್ದ, ಬಲಗೈಲೇ ಬರಿಯೋ ಪಾಪಿಷ್ಟ ಅಂತ ಅಮ್ಮ ಅವನ ತಲಿಗೆ ಒಂದು ಟಂಗು ಕೊಡ್ತಿದ್ಲು.

ಇದ್ದ್ ಒಬ್ಬ ಮಗ ಛಂದಾಗಿ ಕಾನ್ವ್ಂಟ್ನಾಗ ಕಲ್ತು ಧೊಡ್ದವಾಂ ಆಗ್ಲಿ ಅಂತ ಗುಂಡಾಚಾರ್ರು ಮತ್ತ ಲಕ್ಕುಂಬಾಯಾರು ಸೀನನ್ನ ಓಣಿ ಹುಡ್ರು ಜೋಡಿ ಆಡ್ಲಿಕ್ಕೆ ಬಿಡ್ತಿದ್ದಿಲ್ಲ, ಬೆಳಿಗ್ಗೆ ಸಾಲಿಗೆ ಹೋಗೊ ತಂಕ ಅಪ್ಪ ಅವನ್ನ ಕಾವ್ಲು ಕಾಯ್ತಿದ್ದ ಸಾಲಿ ಮುಗಿಸ್ಕೊಂಡು ಮನಿಗೆ ಬಂದ ಮ್ಯಾಲೆ ಅಮ್ಮ ಸೀನನ್ನ ಕಟ್ಕೊಂಡು ಹರಿಕಥಾಮ್ರುತ್ಸಾರ ಹಾಡ್ಲಿಕ್ಕೆ ಗುಡಿಗೆ ಹೋಗ್ತಿದ್ಲು.

ಸಾಲ್ಯಾಗ ಬಸ್ಯ, ವಲಿ ಬಾಷ ಅವರ ಜೋಡಿ ಗೋಲಿ, ಬಗರಿ ಮತ್ತ ಲಗೋರಿ ಆಡೋದು ಒಂದು ಚೂರು ಕಲ್ತಿದ್ದ. ಆಶಾಡ ಮಾಸ್ದಾಗ ಕಳ್ಳ್ತನದ್ಲೆ ಗಾಳಿಪಟ ಮಾಡಿ ಅದಕ್ಕ ಸೂತ್ರ ಕಟ್ಟಿ ಮಾಂಜ ಧಾರ ಬಿಗ್ದು ಚಡ್ದಿ ಏರ್ಸ್ಕೋಂತ ಪಟ ಹಾರ್ಸ್ಲಿಕ್ಕೆ ಬಯ್ಲಾಗ ಓಡ್ತಿದ್ದ, ಆದ್ರ ಸಲ್ಪ ಹೊತ್ತಿಗೆ ಅವನ ಪಟನ್ನ ಬಸ್ಯಾ ತನ್ನ ಪಟದ್ಲೆ ಹರ್ದ್ ಬಿಡ್ತಿದ್ದ. ಅಳ್ಕೋತ ಮನಿಗೆ ಬಂದು ಅಮ್ಮಗ ಅದನ್ನ ಹೇಳಿಕ್ಕೆ ಆಕಿ ಮತ್ತ ಅವನ ತಲಿಗೆ ಒಂದು ಟಂಗು ಕೊಟ್ಟು ಬಯ್ತಿದ್ಲು.

ತಂದ ಮಾರಿ ಚಿತ್ರ ಇರೊ ಗಾಳಿಪಟ ತೊಗೊಂಡು ಸೀನ ಫ಼್ಲ್ಯಾಟಿನ ಮಾಳ್ಗಿ ಮ್ಯಾಲೆ ನಿಂತು ತ್ರಾಸ್ ಪಟ್ಗೊಂಡು ಹಾರ್ಸಿದ, ಸಲ್ಪ ಹೊತ್ತಿಗೆ ಯಾರ್ದೊ ಪಟ ಅವನ ಪಟ ಹರ್ದ ಹಾರ್ಸ್ತು. ಸಣ್ಣಾಗಿ ಕಿಸಿಯೊ ಅವನ ಮಾರಿ ಚಿತ್ರ ಇರೊ ಪಟ ತಲಿ ಕೆಳಗಾದಾಗ ಅಳ್ಕೊಂತ, ತಲಿ ಮ್ಯಾಲೆ ಆದಾಗ ನಕ್ಕೊಂತ ಹಾರ್ಕೊಂತ ದೂರ ಹೋತು, ಯಾರೊ ಅವನ ತಲಿಗೆ ಟಂಗು ಇಟ್ಟಂಗಾತು...

Rating
No votes yet

Comments