ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರೋ ಹಾಗೆ ನಮ್ಮ ದೇಶದ ಇತಿಹಾಸವನ್ನು ನಮಗೆ ತಿಳಿಸಿಕೊಟ್ಟೋರು, ಪುಸ್ತಕ ರೂಪದಲ್ಲಿ ದೊರೆಯುವಂತೆ ಮಾಡಿದೋರು ವಿದೇಶಿಗರು. ಅದು ದೇಶದ ಹೆಚ್ಚು ಕಮ್ಮಿ ಎಲ್ಲ ರಾಜ್ಯ, ಬಾಶೆಗಳಿಗೂ ಅನ್ವಯಿಸ್ತದೆ. ಅಷ್ಟೇ ಏಕೆ ಇಂದು "ಶಾಸ್ತ್ರೀಯ ಬಾಶೆ" ಎಂದು ಕರೆಸಿಕೊಳ್ಳುತ್ತಿರುವ ಕನ್ನಡದ ಇತಿಹಾಸದ ಸಂಶೋದನೆ ಮಾಡಿದೋರಲ್ಲಿ ಅವರೇ ಮೊದಲಿಗರು. ನಮಗೆ ದೊಡ್ಡ ಮಟ್ಟದ ನಿಗಂಟು ರಚಿಸಿಕೊಟ್ಟೋರು ಅವರೇ. ಹೀಗೆ ಹೇಳ್ತಾ ಹೋದ್ರೆ ಬೆಟ್ಟದಷ್ಟಿದೆ. ಪುಣ್ಯಾತ್ಮರು ಅವ್ರು.

ಹಾಗಾದ್ರೆ ಕನ್ನಡಿಗರು ಅಂತ ಅನಿಸಿಕೊಂಡವರು, ಈ ನೆಲ ಜಲದ ಮಕ್ಕಳು ಕನ್ನಡಕ್ಕೋಸ್ಕರ ಮಾಡಿರುವುದಾದರೂ ಏನು? ಎಂಬುದನ್ನು ಯೋಚಿಸುದ್ರೆ ಹೇಳ್ಕಳ್ಳೋ ಅಂತದ್ದು ಏನೂ ಆಗಿಲ್ಲ. ಮಾಡಿದ್ದಾರೆ ಕೆಲವರು ಮಹಾನುಬಾವರು. ಆದರೆ, ಅವರ ಸಂಕೆ ಕಮ್ಮಿ. ಉಳಿದೋರು, ಹೆಚ್ಚಿಸ ಸಂಕೆಲ್ಲಿರೋ ಕನ್ನಡಿಗರು ಏನು ಮಾಡವ್ರೆ ಅನ್ನೋದು ಪ್ರಶ್ನೆ. ಆದ್ರೆ, ಕನ್ನಡದಲ್ಲಿ ಇನ್ನೂ ಏನೂ ಕೆಲಸವಾಗಿಲ್ಲ ಎಂದು ಬೇರೇವ್ರನ್ನ ದೂರ್‍ತಾ ಕಾಲ ಕಳೀದೆ ಕನ್ನಡಿಗರು ಅಂತ ಅನ್ನಿಸಿಕೊಂಡಿರೋ ಎಲ್ರೂ ನಮ್ಮ ಕೈಲಾದ ಪ್ರಯತ್ನಗಳನ್ನ ಮಾಡಿ ಕನ್ನಡವನ್ನ ಒಳ್ಳೆಯ ರೀತಿಯಲ್ಲಿ ಕಟ್ಟೋ ಪ್ರಯತ್ನ ಮಾಡ್ಬೇಕಾಗಿದೆ. ಅದಕ್ಕೆ ಅಲ್ಲಮ ಹೇಳಿದ "ಹಿಂದಣ ಹೆಜ್ಜೆಯ ಕಂಡರಿಯದೆ ನಿಂದ ಹೆಜ್ಜೆಯನರಿಯಬಾರದು ನೋಡಾ" ಎಂಬ ಮಾತನ್ನ ನೆನಪಿನಲ್ಲಿಟ್ಟುಕೊಂಡು ಕೆಲಸ ಸುರು ಮಾಡ್ಬೇಕಾಗಿದೆ. ಯಾಕಂದ್ರೆ ಇತಿಹಾಸ ಗೊತ್ತಿಲ್ದಿರೋರು ವರ್‍ತಮಾನದಲ್ಲಿ ಏನನ್ನೂ ಕಟ್ಟೋಕಾಗೋಲ್ಲ.

ನಾನು "ಕನ್ನಡಿಗರಿಗೆ ಏಕಿಲ್ಲ ಇತಿಹಾಸ ಪ್ರಗ್ನೆ?!" ಅಂತ ಹೇಳಿದಕ್ಕೂ ಇಲ್ಲಿ ಬರೀತಾ ಇರೋದಕ್ಕು ಏನು ಸಂಬಂಧ ಅಂತ ಇದನ್ನ ಓದಿದವರಿಗೆ ಅನ್ನಿಸಬಹುದು. ಅದಕ್ಕೆ ಕಾರಣ ಅಂದ್ರೆ, ನಮ್ಮ ಕನ್ನಡ ಚಿತ್ರಗಳು. ಅವುಗಳ ಹೆಸರುಗಳು. ಆ ವಿಷಯಕ್ಕೆ ಬರೋ ಮುಂಚೆ ನಮ್ಮ ಕನ್ನಡ ಚಿತ್ರಗಳ ಬಗ್ಗೆ ಹೇಳೋಕೆ ಬೇಕಾದಷ್ಟಿದೆ, ಅದ್ರಲ್ಲಿ ಸ್ವಲ್ಪ ಮಾತ್ರ ಹೇಳಿ ವಿಷಯಕ್ಕೆ ಬರ್‍ತೀನಿ. ಹೆಚ್ಗೆ ಕುಯ್ಯಲ್ಲ. ಯಾಕಂದ್ರೆ ನಾನು non-violinist.

ಇದು ಕನ್ನಡದ ಇತ್ತೀಚಿನ ಚಿತ್ರಗಳ ಬಗ್ಗೆ ಒಂದು ಹಕ್ಕಿನೋಟವಶ್ಟೆ. ಆದ್ರಿಂದ ತುಂಬಾ ವಿಚಾರಗಳನ್ನ ಇಲ್ಲಿ ಚರ್‍ಚಿಸೋಕೆ ಹೋಗ್ತಿಲ್ಲ.

ಇತ್ತೀಚಿನ ನಮ್ಮ ಕನ್ನಡ ಚಿತ್ರಗಳನ್ನ ಗಮನಿಸುದ್ರೆ ಗೊತ್ತಾಯ್ತದೆ ಎಂತೆಂತ ಚಿತ್ರಗಳನ್ನ ನಮ್ಮವರು ತೆಗಿತವ್ರೆ ಅಂತ. ನಮ್ಮ ಕನ್ನಡದ್ದು ಅಂತ ಹೇಳ್ಕೊಳ್ಳೋಂತದ್ದು ಒಂದೇ ಒಂದು ಚಿತ್ರ ಕೂಡ ನಮ್ಮ ಕಣ್ಣ ಮುಂದೆ ಸಿಗೋದಿಲ್ಲ. ಎಲ್ಲಾ "ಮಚ್" awaited, "ಲಾಂಗ್" awaited ಚಿತ್ರಗಳೇ. ಈಗ ಹುಟ್ಟಿದ ಮಗುವಿನಿಂದ ಹಿಡಿದು, ಶಾಲೆಗೋಗೋ ಹುಡುಗ, ಕಾಲೇಜಿಗೋಗೋ ಹುಡುಗ ಎಲ್ರರತ್ರನೂ ಚಾಕು, ಚೂರಿ, ಲಾಂಗು, ಮಚ್ಚುಗಳೇ. ಹೆಚ್ಚು ಕಮ್ಮಿ ಕನ್ನಡದೆಲ್ಲಾ ನಾಯಕನಟರೂ ಇದರಲ್ಲಿ ಸ್ಪರ್ಧೆಗಿಳಿದೋರಂತೆ ನಾ ಮುಂದು ತಾ ಮುಂದು ಅಂತ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇ ಮಾಡಿದ್ದು. "ಕನ್ನಡದ ಪ್ರೇಕ್ಷಕ ಮಹಾಪ್ರಬು"ಗಳು ಕಣ್ಣು ಬಾಯಿ ಬುಟ್ಕೊಂಡು ೧೦,೨೦,೩೦,೪೦ ಅಂತ ಕಾಸು ಕೊಟ್ಟು ಅವ್ರಿಗೆ ಸಿಗೋ ೨-೩ ಗಂಟೇಲಿ ಮೈಗೆ ಮನಸ್ಸಿಗೆ ರಕ್ತ ಅಂಟಿಸಿಕೊಂಡು ಬರೋದು.

ಇಂತ ಚಿತ್ರಗಳಲ್ಲಿ ಮಾಡೋರನ್ನ, ಚಿತ್ರ ತೆಗೆಯೋರನ್ನ ಯಾಕಿಂತ ಚಿತ್ರಗಳನ್ನ ತೆಗೀತೀರಿ ಅಂತ ಕೇಳಿದ್ರೆ "ಜನ ಏನು ಕೇಳ್ತಾರೆ ಅಂತ ಚಿತ್ರ ತೆಗೀತೀವಿ" ಅನ್ನೋ ದಿಮಾಕಿನ ಉತ್ತರವಷ್ಟೆ ಸಿಗೋದು. ಜನ ಇವ್ರಿಗೆಲ್ಲಾ ಹೇಳಿದ್ರ ನೀವು ಲಾಂಗು, ಮಚ್ಚು ಚಿತ್ರಗಳನ್ನ ಮಾತ್ರ ತೆಗೀರಿ. ನಮ್ಗೆ ಬೇರೆ ಚಿತ್ರಗಳು ಆಗಿಬರೋಲ್ಲ. ನಾವೆಲ್ಲ ಮಾಂಸಾಹಾರಿಗಳು ಅಂತ. ಹೇಳ್ರಪ್ಪ ನೀವೇನಾರ ಹೇಳಿದ್ರ ಅಂಗಂತ. "ಜನ ಏನು ಕೇಳ್ತಾರೆ ಅಂತ ಚಿತ್ರ ತೆಗೆಯೋದಕ್ಕಿಂತ, ಜನಕ್ಕೆ ಏನು ಬೇಕು ಅಂತ ಚಿತ್ರಗಳನ್ನಲ್ವ ಇವ್ರು ತೆಗೀಬೇಕಾಗಿರೋದು, ಮಾಡ್ಬೇಕಾಗಿರೋದು". ಆ ಲಾಂಗು ಮಚ್ಚಿನಷ್ಟು ದಪ್ಪಾನೇ ಇರೋ ಹುಡುಗ್ರ ಕೈಗೂ ಅವನ್ನೆಲ್ಲಾ ಹಿಡಿಸ್ಬುಟ್ಟು ಮನುಷ್ಯರನ್ನ ಒಳ್ಳೇ ತರಕಾರಿ ಕತ್ರಸೋ ಹಾಗೆ ಕತ್ರಸೋದು ನೋಡುದ್ರೆ ಅದಕ್ಕಿಂತ ದೊಡ್ಡ ಭಯೋತ್ಪಾದನೆ, ಕ್ರೌರ್‍ಯ, ಹಿಂಸಾಚಾರ ಇನ್ನೊಂದು ಉಂಟಾ? ಅನ್ಸುತ್ತೆ. ಆಯಾ ಕಾಲಧರ್‍ಮದ ಹಾಗೆ ಒಂದು ನಾಡಿನ ಸಂಸ್ಕ್ರುತಿ ಇರ್‍ತದಂತೆ. ನಾವು ನಮ್ಮ ಸಂಸ್ಕ್ರುತಿ ಅಂತ ಹೇಳೋವಾಗ ಇದೇನಾ ನಮ್ಮ್ ಸಂಸ್ಕ್ರುತಿ ಅಂತ ದಿಗಿಲಾಗ್ತದೆ. ಇನ್ನು ಆ ಬಾಶೆನೋ ಆಡೋ ಹುಡುಗ್ರು ಕೂಡ ಮಗಾ, ಶಿಷ್ಯ ಅನ್ನೋದು. ಇಂಗೆ ಆಡುದ್ರೆ ಮಗನೇ ಹೊಗೆ ಹಾಕುಸ್ಕಂಡುಬುಡ್ತೀಯ ಅನ್ನೋದು. ಫಿನಿಶ್‌ ಆಗೋಯ್ತಿಯ, ಮಟಾಶ್ ಆಗೋಯ್ತಿಯ ಅನ್ನೋದು. ಹೀಗೆ ಪಟ್ಟಿ ಬೆಳೀತಾನೇ ಹೋಯ್ತದೆ. ಇದೆಲ್ಲಾ ಯಾವಾಗ ನಿಲ್ತದೆ ಅಂದ್ರೆ ನಮ್ಮ ಪ್ರೇಕ್ಷಕ ಮಹಾಪ್ರಬುಗಳು ಇಂತ ಚಿತ್ರಗಳನ್ನ ಸಾರಾಸಗಟಾಗಿ ತಳ್ಳಿ ಹಾಕಿದಾಗ, ಅಂತ ಚಿತ್ರಗಳು ಡಬ್ಬ ಸೇರ್‍ಕಂಡಾಗ. ಇರೋದ್ರಲ್ಲಿ ಒಳ್ಳೆ ಚಿತ್ರಗಳನ್ನ ನೋಡಿ ಗೆಲ್ಲಿಸ್ದಾಗ.

ಇನ್ನು ನಮ್ಮ ಚಿತ್ರಗಳ ಹೆಸ್ರು ಬಗ್ಗೆ, ಇತಿಹಾಸ ಪ್ರಗ್ನೆ ಬಗ್ಗೆ ಮೇಲೆ ಹೇಳ್ದೆ. ನಮ್ಮ ನಾಡು, ನುಡಿಗೋಸ್ಕರ ದುಡಿದ ಮಹಾನುಭಾವ್ರನ್ನ ಗೌರವಿಸೋದು ನಮ್ಮ ಸಂಸ್ಕ್ರುತಿ ತಾನೇ. ಒಂದೆರಡು ವರ್‍ಶದ ಹಿಂದೆ ರಿಯಲ್ ಸ್ಟಾರ್ ಉಪೇಂದ್ರನ ಹಾಕ್ಕಂಡು "ಮಾಸ್ತಿ" ಅಂತ ಇದೇ "ಮಚ್" awaited, "ಲಾಂಗ್" awaited ಚಿತ್ರ ತೆಗೀಬೇಕು ಅಂತಹೊರುಟ್ರು. ಆಗ ಅಲ್ಪಸ್ವಲ್ಪ ನಮ್ಮ ನಾಡು,ನುಡಿ ಬಗ್ಗೆ ಕಾಳಜಿ ಇರೋ ಅಂತೋರು "ಮಾಸ್ತಿ ಅಂದ್ರೆ ಕನ್ನಡದ ಆಸ್ತಿ". ನಮ್ಮ ಕನ್ನಡಕ್ಕೆ ಗ್ನಾನಪೀಟ ತಂದ್ಕೊಟ್ಟೋರು ಅವ್ರು. ಅಂತೋರ ಹೆಸ್ರಲ್ಲಿ ಇಂತ ಚಿತ್ರ ತೆಗೀಬಾರ್‍ದು ಅಂತ ವಿರೋದ ಮಾಡಿ ನಿಲ್ಸುದ್ದಕ್ಕೇನೋ ಸರಿ ಹೋಯ್ತು. "ಮಾಸ್ತಿ" ಹೋಗಿ "ಮಸ್ತಿ" ಆಗಿ ತೆರೆ ಕಂಡು ಹೇಳಾಕೆ ಹೆಸರಿಲ್ದೆ ಇರಂಗೆ ಹೊಂಟೋಯ್ತು.

ಈಗ ಮತ್ತೊಂದು ಅಂತದೇ ಚಿತ್ರ ಗಂಡು ಮೆಟ್ಟಿದ ನಾಡು ಚಿತ್ರದುರ್ಗವನ್ನಾಳಿದ "ವೀರ ಮದಕರಿ"ಯ ಹೆಸ್ರಲ್ಲಿ ಬರ್‍ತಿದೆ. ಅದು ತೆಲುಗಿನ ರೀಮೇಕಂತೆ. ಆ ಚಿತ್ರದ ನಾಯಕ "ಸ್ಪರ್ಶ"ದಂತಹ ನವಿರಾದ ಪ್ರೇಮಕತೆಯಲ್ಲಿ ನಟಿಸಿದ, "ಮೈ ಆಟೋಗ್ರಾಫ್‌"ನಂತಹ ಒಳ್ಳೇ ಚಿತ್ರಾನ ತೆಗೆದ "ಕಿಚ್ಚ ಸುದೀಪ್‌". ಇದೇ ಹೆಸರಿಟ್ಟು ಬೇರೆ ಯಾರಾದ್ರು ಇಂತ ಚಿತ್ರ ತೆಗ್ದಿದ್ರೆ ಸುಮ್ನೆ ಬಿಡ್ದಿತ್ರ ನಮ್ಮ್ ಜನ. ಈ ಮಾತನ್ನ ಯಾಕೆ ಹೇಳ್ತಿದೀನಿ ಅಂದ್ರೆ ಸುದೀಪ್ ಕೂಡ ಅದೇ ಮದಕರಿ ನಾಯಕನ ಸಮುದಾಯಕ್ಕೆ ಸೇರಿದೋರು ಅನ್ನೋ ಮಾತಿದೆ. ಅಂತಹ ದೊಡ್ಡ ಮನುಷ್ಯನ ಸಮುದಾಯಕ್ಕೆ ಸೇರಿದ ಸುದೀಪ್ ಅದಕ್ಕೆ ಹೆಮ್ಮೆ ಪಟ್ಕೊಂಡು ಹೆಸ್ರು ಬದಲಾಯಿಸಿ ಇಲ್ಲಾಂದ್ರೆ ಇದು ಅಂತ ವ್ಯಕ್ತಿಗೆ ಮಾಡೋ ಅವಮಾನ ಅನ್ನೋದು ಬಿಟ್ಟು ಅಂತ ಚಿತ್ರದಲ್ಲೇ ಮಾಡ್ತಾವ್ನಲ್ಲ ಇದಕ್ಕೆ ಏನು ಹೇಳ್ಬೇಕು ನೀವೇ ಹೇಳಿ. ಕೇಳುದ್ರೆ ಅದೊಂದು ಹೆಸರಷ್ಟೆ. ನಾವೇನೂ ಮದಕರಿ ನಾಯಕನಿಗೆ ಅವಮಾನ ಮಾಡ್ತಿಲ್ಲ ಅಂತ ಹೇಳಿ ನಂ ಬಾಯ್ಮುಚ್ಚುಸ್ತಾರಶ್ಟೆ. ಅಂದು "ಮಾಸ್ತಿ" ಹೆಸರಿಟ್ಟಾಗ ವಿರೋದ ಮಾಡಿದ ಜನ ಇಂದು ಇದನ್ಯಾಕೆ ವಿರೋದಿಸ್ತಿಲ್ಲ ಅನ್ನೋದು ಪ್ರಶ್ನೆ.

ಈ ಹಿಂದೆ "ದಕ್ಷಿಣ ಪಥೇಶ್ವರ" ಎಂದು ಬಿರುದು ಪಡೆದಿದ್ದ ಸತ್ಯಾಶ್ರಯ ಪುಲಿಕೇಶಿಯನ್ನು ಬಫೂನ್ ತರ ತೋರಿಸಲಾಗಿದೆ ಎಂದು ಹೇಳಿ ತಮಿಳಿನ ಜನಪ್ರಿಯ ಹಾಸ್ಯ ನಟ ವಡಿವೇಲನ್ ನಟಿಸಿದ್ದ ಸೂಪರ್‍ ಹಿಟ್ ತಮಿಳು ಚಿತ್ರವನ್ನ ನಮ್ಮ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡಲಿಲ್ಲ ಅನ್ನೋದು ಎಶ್ಟು ಜನ ಕನ್ನಡಿಗರಿಗೆ ಗೊತ್ತಿದಿಯೋ ನಾ ಕಾಣೆ!

ನಂಗೆ ಯಾವತ್ತೂ "ಮದಕರಿ" ಅನ್ನೋ ಹೆಸ್ರು ಕೇಳಿದ ತಕ್ಶಣ ನೆನಪಾಗೋದೇ ಗಂಡು ಮೆಟ್ಟಿದ ನಾಡು ಎಂದೆನಿಸಿಕೊಂಡ ಚಿತ್ರದುರ್ಗವನ್ನಾಳಿದ "ವೀರ ಮದಕರಿ ನಾಯಕ". ಹಾಗೇನೇ ಇತಿಹಾಸದ ಬಗ್ಗೆ ಅಲ್ಪಸ್ವಲ್ಪ ಗೊತ್ತಿರೋ ಜನಗಳಿಗೂ, ಕಡೆಗೆ ಓದು ಬರಹ ಗೊತ್ತಿಲ್ದಿರೋ ಜನಕ್ಕೂ. ಈಗ ಅಂತ ಹೆಸರಿಟ್ಕೊಂಡು ಇಂತ ಚಿತ್ರ ತೆಗೀತಾರಲ್ಲ. ದುಡ್ಡಿಗೋಸ್ಕರ ನಮ್ಮ ನೆಲ ಜಲ, ನಾಡು, ನುಡಿ, ಸಂಸ್ಕ್ರುತಿ ಎಲ್ಲಾನೂ ಮಾರ್‍ಕಂಡುಬುಡದಾ?

ಒಬ್ಬ ಇತಿಹಾಸಕ್ಕೆ ಸಂಬಂಧಿಸಿದ ವ್ಯಕ್ತಿ ನಮ್ಮ ಸಮುದಾಯಕ್ಕೆ ಸೇರ್‍ದೋನು ಅಂತೇಳಿ ಇಂಗೆ ಅವಮಾನ ಮಾಡ್ಬೋದಾ?

ಇದನ್ನ ಬರೆಯೋಕೆ ಕಾರಣ ಒಂದು ಸಿನಿಮಾ ಅನ್ನೋದು ೨೧ನೇ ಶತಮಾನದ ಬಾಶೆ. ಅದರ ಮೂಲಕ ಎಂತಹ ಜನರನ್ನಾದ್ರೂ ಬಹಳ ಬೇಗ ತಲುಪಬಹುದು. ಆದ್ದರಿಂದ, ಒಂದು ಚಿತ್ರದ ಮೂಲಕ ನಾವು ಏನನ್ನ ಹೇಳ್ತೀವಿ ಅದು ಎಂತಹ ಓದು ಬರಹ ಬರದಿರೋ ಜನರನ್ನೂ ಸುಲಬವಾಗಿ ತಲುಪುತ್ತೆ ಅಂತ. ಮತ್ತೊಂದು ಕನ್ನಡಕ್ಕೆ "ಶಾಸ್ತ್ರೀಯ ಬಾಶೆ" ಸ್ತಾನಮಾನ ಬಂದಿರೋ ಈ ಹೊತ್ತಲ್ಲಿ ಆ ಗೌರವಾನ ಉಳಿಸಿ ಬೆಳಸ್ಕೊಂಡು ಹೋಗೋದು ಹೇಗೆ ಅನ್ನೋ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕೆ "ಇತಿಹಾಸ ಪ್ರಗ್ನೆ" ಅನ್ನೋದು ಬೇಕೇ ಬೇಕು. ಅದಕ್ಕೆ ವರ್‍ತಮಾನದ ಸಂಗತಿಗಳಿಗೆ ಒಂದು ನಾಡಿನ ಜನತೆ ಹೇಗೆ ಸ್ಪಂದಿಸ್ತದೆ ಅನ್ನೋದು ಬಾಳ ಮುಕ್ಯ. ಮೇಲೆ ಹೇಳ್ದ ಅಲ್ಲಮನ ಮಾತನ್ನ ಪದೇ ಪದೇ ನೆನಪು ಮಾಡ್ಕೊಂಡು ಇಂತ ಕೆಲ್ಸಗಳನ್ನ ಮಾಡ್ತಾ ಹೋಗ್ಬೇಕಾಗಿದೆ. ಇದು ಜಾತಿ, ಮತ, ದರ್‍ಮ ಎಲ್ಲವನ್ನೂ ಮೀರಿದ ಕಟ್ಟುವ ಕೆಲಸ.

ಕಡೇದಾಗಿ, ಈ ಬರೆಹಕ್ಕೆ ನನಗೆ ಹೊಳಹು ಹೊಳೆದದ್ದು ಮಯೂರದ ಫೆಬ್ರುವರಿಯ ಸಂಚಿಕೆಯ "ಉಪ್ಪೇರಿ" ಅಂಕಣದ "ಮದಕರಿಗೆ ಜೀನ್ಸು" ಎನ್ನೋ ಬರೆಹ. ಅದನ್ನ ಇಲ್ಲಿ ನೆನಸ್ಕೋಳ್ದಿದ್ರೆ ತಪ್ಪಾಯ್ತದೆ.

Rating
No votes yet

Comments