ಚೆಂಬೆಳಗಿನಲ್ಲೊಂದು ಸ್ವಗತ

ಚೆಂಬೆಳಗಿನಲ್ಲೊಂದು ಸ್ವಗತ

( ಹರಿಪ್ರಸಾದ್ ನಾಡಿಗರ ಆಮಂತ್ರಣಕ್ಕೆ ಮಾರುತ್ತರವಾಗಿ:)

ಎಲ್ಲರೂ ಹೇಳುವರು
ಬರುತಲಿದೆ ಪ್ರತಿದಿನವು
ರವಿಯ ಉದಯದ ಒಡನೆ
ಭರವಸೆಯ ಮುಂಜಾವು.

ನಂಬಬಹುದೇ? ಇದನು?
ಓ ಗೆಳೆಯ*?
ಬಾನಿನಲಿ ಅನುದಿನವು
ಸುತ್ತಿಯೂ ಸುತ್ತುತಿಹೆ?
ದಿನವೂ ನನ್ನ ಮೊಗ
ನೋಡಿಯೂ ನೋಡದೆಲೆ
ಮುಂದೆ ಸರಿಯುವ ನಿನಗೆ
ಮುಗುಳು ನಗೆ ಈಗೇಕೆ?

ಹೇಳಬಲ್ಲೆಯ ನೀನು
ಬರುತಿರುವ ಈ ದಿನವು
ಹಳೆಯದನು ಮರೆಸುವುದೆ?
ಹೊಸತನ್ನು ತೆರೆಸುವುದೆ?
ಕಹಿಗಳ ಕರಗಿಸುವುದೆ?
ಸಿಹಿಯನ್ನು ಉಣಿಸುವುದೆ?

ಕಂಡವರು ಯಾರೋ?
ಪ್ರಶ್ನೆಗಳೆ ಇಲ್ಲೆಲ್ಲ!
ನಗಲೆ? ಅಳಲೆ? ಇಲ್ಲ
ಬಿಟ್ಟುಬಿಡಲೆ ಎಲ್ಲ?
ಕಣ್ಣ ಮುಚ್ಚಲು ಒಮ್ಮೆ
ಕತ್ತಲೆಯೆ ಒಳಗೆಲ್ಲ.

ಅರೇ! ಕಣ್ಣ ಬಿಟ್ಟೊಡನೆ
ಕತ್ತಲೆಯಿಂದ ಬೆಳಕಿಗೆ.
ಒಣಗಿರುವ ಮರದಲ್ಲೆ
ಚಿಗುರು ಕಾಣುವುದಲ್ಲ?
ಚಿಗುರು ಹೂವಾಗಿ
ಕಾಯಿ ಹಣ್ಣಾಗಿ
ಹಣ್ಣು ಬೀಜದಿ ಮತ್ತೆ
ಮೊಳಕೆ ಹುಟ್ಟಿದರೆ
ಗಿಡವಾಗಿ ಚಿಗುರು

ಮತ್ತೆ ಹೊಸ ಹುಟ್ಟು
ಮತ್ತೆ ಜೀವನ ಚಕ್ರ
ಸುತ್ತಿದರೆ ಏನಂತೆ?
ಕಳೆದದ್ದೂ ಕಳೆದಿರಲಿ
ಮುನ್ನಡೆವ ಛಲವಿರಲಿ!

ಈಗ ನನಗನಿಸುತಿದೆ
ಬರುತಿಹುದು ಪ್ರತಿದಿನವು
ರವಿಯ ಉದಯದ ಒಡನೆ
ಚೆಂಬೆಳಗು ಮುಂಜಾವು
ಭರವಸೆಯ ಮುಂಜಾವು

-ಹಂಸಾನಂದಿ

Rating
No votes yet

Comments