ಹೇಗಿರಬೇಕು ನನ್ನವನು

ಹೇಗಿರಬೇಕು ನನ್ನವನು

ನನ್ನವನು ಬಿಳಿ ಕುದುರೆಯೇರಿ ಬರುವ ರಾಜಕುಮಾರನಾಗಿರಬೇಕೆಂದೇನಿಲ್ಲ,
ನನ್ನಲ್ಲಿ ಕನಸ ಬಿತ್ತುವ ರೈತನಾದರೆ ಸಾಕು.

ನನ್ನನ್ನು ಅವನು ರತಿ ಮೇನಕೆ ಎಂದು ಹೊಗಳಬೇಕಿಲ್ಲ,
ನನ್ನತನಕೆ ಬೆಲೆಕೊಟ್ಟರೆ ಸಾಕು.

ನನ್ನ ಕಣ್ಣುಗಳನ್ನು ಕಮಲ, ಮೀನಿಗೆ ಹೋಲಿಸಬೇಕಿಲ್ಲ,
ನಾ ಮಲಗಿದ್ದಾಗ ಅವಕ್ಕೆ ಮುತ್ತಿಟ್ಟರೆ ಸಾಕು.

ನನ್ನವನು ಸುರಸುಂದರಾಂಗನಾಗಿರಬೇಕೆಂದೇನಿಲ್ಲ,
ಮನಸ್ಸಲ್ಲಿ ಕುರೂಪವಿಲ್ಲದಿದ್ದರೆ ಸಾಕು.

ಅವನು ಒಡವೆ ವಜ್ರಗಳ ಮಳೆಗರೆಯ ಬೇಕಾಗಿಲ್ಲ
ಆಭರಣವಿಲ್ಲದೆಯೂ ನನ್ನ ಮೆಚ್ಚಿದರೆ ಸಾಕು.

ಅವನ ಮಾತು ಮೋಡಿ ಮಾಡಬೇಕೆಂದೇನಿಲ್ಲ,
ಅದರಲ್ಲಿ ಸತ್ಯವಿದ್ದರೆ ಸಾಕು.

ಅವನು ಬಿಳಿ ಕೆನೆಹಾಲಿನಂತಿರಬೇಕೆಂದೇನಿಲ್ಲ,
ಕಪ್ಪಗಿದ್ದರೂ ಕಂಪ ಬೀರುವ ಕಸ್ತೂರಿಯಂತಿದ್ದರೆ ಸಾಕು.

ನನ್ನವನ ಪ್ರೀತಿ ಸಮುದ್ರದಷ್ಟು ಅಗಾಧವಿರಬೇಕೆಂದೇನಿಲ್ಲ,
ನನ್ನೀ ಮುಷ್ಟಿಗಾತ್ರದ ಹೃದಯ ತುಂಬುವಷ್ಟು ಪ್ರೀತಿಸಿದರೆ ಸಾಕು.

Rating
No votes yet

Comments