ಆಮಂತ್ರಣ

ಆಮಂತ್ರಣ

ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಅಳುಕಿನ ನಡುವೆ ಕೆಲವರು ಮುಂದಿಟ್ಟ ವಿಚಾರಗಳನ್ನು ಓದುವಾಗ, ಕೇಳುವಾಗ - "ಹೌದಲ್ವ, ಈ ಬಗ್ಗೆ ಯೋಚನೆ ಕೂಡ ಮಾಡಲಿಲ್ವಲ್ಲ" ಅನಿಸಿದ್ದುಂಟು.

ಅದರಲ್ಲಿ ಒಂದು ವಿಚಾರ - ಒಬ್ಬರು ಫೋನಿನಲ್ಲಿ ತಿಳಿಸಿದ್ದು, "ಎಂಥ ಒಳ್ಳೆಯ ಚಿತ್ರ ಹರಿ. ಎಷ್ಟು ಚೆನ್ನಾಗಿ ಏನೆಲ್ಲ ಬರೆಯಬಹುದಿತ್ತು" ಎಂಬುದು. ಚಿತ್ರ ಅಷ್ಟು ಚೆನ್ನಾಗಿದೆ ಎಂದು ನನಗನಿಸಲಿಲ್ಲವಾದರೂ ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಎನ್ನುವ ಮಾತು ಹೌದೆನಿಸಿತು. ನನಗೆ ಮಾತ್ರ ಆ ಸಮಯ ಬೇರೆ ರೀತಿ ಬರೆಯುವುದಕ್ಕೆ ಆಗುತ್ತಿರಲಿಲ್ಲ. ಈಗಲೂ ಬಹುಶಃ ಆಗಲಿಕ್ಕಿಲ್ಲ. ಆದರೆ ನಾನಲ್ಲದಿದ್ದರೂ ಬೇರೆ ಯಾರಾದರೂ ಬೇರೆ ರೀತಿ ಬರೆಯಬಹುದು ಎನಿಸಿತು.

ಹೀಗಾಗಿ ಹಂಸಾನಂದಿಯವರ ಪುಸ್ತಕದಿಂದ ಒಂದು ಎಲೆ ಹಾರಿಸಿ (Taking a leaf out of the book ಎನ್ನುವಂತೆ) ಆ ಚಿತ್ರ ನಿಮಗೇ ಕೊಡುತ್ತಿರುವೆ.

ಈ ಚಿತ್ರ ನೋಡಿ ನಿಮಗೇನನಿಸುತ್ತದೋ ಅದನ್ನು ಬರೆಯಬಹುದು. ಗದ್ಯ/ಕವನ ಏನಾದರೂ ಆಗಬಹುದು. ಮನಸಿನ ಚಿತ್ರವೊಂದನ್ನು ಪರದೆಗೆ ಹಾಕುವಾಗ ಪದಗಳಲ್ಲಿ ತಡಕಾಡುವ ಬದಲು ಈ ಚಿತ್ರ ಬರೆದೆ. "A picture says a thousand words" - ಆ ಸಾವಿರ ಪದಗಳೂ ನನ್ನದೇ ಆಗಬೇಕಿಲ್ಲ. ಇದೇ ಚಿತ್ರ ನಿಮ್ಮೆಲ್ಲರಲ್ಲಿ ಏನು ಹೊರತರಬಹುದು ಎಂಬ ಕುತೂಹಲ.  ಬರೀತೀರ?

Rating
No votes yet

Comments