ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಗೊತ್ತುಮಾಡಿಕೊಂಡು ಮುಂದುವರಿಯಬೇಕು ಅಂತ. ಈ ಕ್ರಮ ಇಂದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ವಿಶ್ಲೇಷಿಸಬೇಕಾದರೆ ಬಹಳ ಪ್ರಸ್ತುತವಾಗಿದೆ. ಹಾಗಾಗಿ ನನ್ನ ಪೂರ್ವಾಗ್ರಹಗಳನ್ನು ಮೊದಲೇ ಹೇಳಿಕೊಂಡು ಮುಂದುವರೆಯುತ್ತೇನೆ.
೧. ಕಾವೇರಿ ನದಿಯು ದೇಶದ ಆಸ್ತಿಯೆಂದು ಒಪ್ಪಬಹುದಾದರೂ ತಮಿಳರ ಮುಂದೆ ತಲೆಬಾಗುವುದು (ಅದು ಯಾವುದೇ ವಿಷಯವಿರಲಿ) ಕಷ್ಟದ ಕೆಲಸವೆ.
೨. ಸ್ವತಃ ಚಳುವಳಿಯಲ್ಲಿ ಭಾಗವಹಿಸದೇ ಇರುವುದರಿಂದ ಇವನ್ನು ಹೇಳಲು ಒಂದು ಬಗೆಯ ಮುಜುಗರವಿದೆ. ಜೊತೆಗೆ, ಈ ವಿಷಯದಲ್ಲಿ ಇತರರು ಬರೆದುದ್ದನ್ನು ಕೂಲಂಕುಷವಾಗಿ ಓದದೇ ನನ್ನ ಆಲೋಚನೆಗಳನ್ನು ಪ್ರಕಟಿಸುತ್ತಿದ್ದೇನೆ. ಇದೂ ಮುಜುಗರದ ವಿಷಯವೇ.
೩. ಸುಸ್ಥಿರ ಕೃಷಿ, ಸ್ವಲ್ಪ ದೇಸಿ, ಸಮಾಜವಾದ, ಹೀಗೆ ನನ್ನ ಹಲವು ಒಲವುಗಳು ಕೆಲವೊಮ್ಮೆ objectivityಗೆ ಕಲ್ಲುಹಾಕಬಹುದು ಎನ್ನುವ ದಿಗಿಲೂ ಇದೆ.

ಅನಾದಿಕಾಲದಿಂದಿದ್ದ ನಮ್ಮ ದೇಶದ ಅಗಾಧ ವೈವಿಧ್ಯತೆಯು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಪ್ರಕಟಗೊಳ್ಳುತ್ತಿರುವುದು ಇತ್ತೀಚಿಗಷ್ಟೆ. ಭಾರತವೆಂಬ ರಾಜ್ಯಗಳ ಒಕ್ಕೂಟದಲ್ಲಿ ಅಭಿವೃದ್ಧಿ ಎನ್ನುವುದು ಏನು, ಯಾರಿಗೆ ಮತ್ತು ಹೇಗೆ ಎನ್ನುವ ಪ್ರಶ್ನೆಗಳಿಗೆ ಪೂರ್ವನಿರ್ಧಾರಿತ, ಸಮಾನ ಉತ್ತರಗಳಿಲ್ಲ. ಆದರೆ ಅಧಿಕಾರದ ತೆಕ್ಕೆಯಲ್ಲಿ ಕೆಲವೇ ಸ್ಥಳಗಳ ಕೆಲವೇ ಜನ ಇದ್ದುದರಿಂದ ಕಳೆದ ೫೦ ವರ್ಷಗಳಲ್ಲಿ (ಬ್ರಿಟೀಷರಿದ್ದಾಗಲೂ) ಸುಮಾರಿಗೆ ಈ ಪ್ರಶ್ನೆಗಳಿಗೆ ಒಬ್ಬರೇ ಉತ್ತರಿಸುತ್ತಿದ್ದುದರಿಂದ ಅಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ ಅಂತ ನನ್ನ ಭಾವನೆ. ಅಂದರೆ, ಹಿಂದೆ ನಾವೆಲ್ಲ ಒಮ್ಮತ ಹೊಂದಿದ್ದೆವು ಅಂತಲ್ಲ, ನಮ್ಮ ಧ್ವನಿಗಳನ್ನು ಅಷ್ಟೇನು ಕಷ್ಟವಿಲ್ಲದೇ ಮುಚ್ಚಿಸಬಹುದಾಗಿತ್ತು. ಅಭಿವೃದ್ಧಿಯ ದೃಷ್ಟಿಕೋನ ನಿಯಮಿತವಾಗಿತ್ತು ಅಂತ. ಆದರೆ ಪ್ರಾಂತೀಯ ರಾಜಕೀಯ, ಪ್ರಾಂತೀಯ ರಾಜಕಾರಣಿಗಳು ಕ್ರಮೇಣ ರಾಷ್ಟ್ರಮಟ್ಟದಲ್ಲಿಯೂ ಸಬಲರಾದ ಹಾಗೆ, ಅವರವರ ಆಸೆ ಆಕಾಂಕ್ಷೆಗಳೂ ದೇಶದ ಪ್ರಮುಖ ವಿಷಯಗಳಾಗುತ್ತಿವೆ. ಈ ಬದಲಾದ ಪರಿಸ್ಥಿತಿಯಿಂದ ಇಂದು ಕಾಣುತ್ತಿರುವ ಬಿಕ್ಕಟ್ಟುಗಳು ಹೆಚ್ಚು ಹೆಚ್ಚು ಕಳವಳಕಾರಿಯಾಗುತ್ತಿವೆ. ಆದರೆ ಕರ್ನಾಟಕದ ಒಳಗೆ, ಹಾಗು ಅದರ ಮಟ್ಟಿಗೆ ಇದು ಪ್ರಾಯಶಃ ಸುಳ್ಳೇನೋ.. ಮೊದಲಿಂದಲೂ ಒಂದಲ್ಲ ಒಂದು ವಿಷಯದಲ್ಲಿ ಹೋರಾಟ, ಚಳುವಳಿ ಇದ್ದಿದ್ದೇ, ಕರ್ನಾಟಕದ ಏಕೀಕರಣದಿಂದ ಹಿಡಿದು, ಇಂದಿನವರೆಗೂ. ಹಾಗೆಯೇ ತಮಿಳರ ಹೋರಾಟ, ಅವರದ್ದೇ ವಿಷಯಗಳಲ್ಲಿ. ಆದರೆ, ಬ್ರಿಟಿಷರ ಕಾಲದಲ್ಲಿ ಅದೃಷ್ಟದಿಂದ ತಮಿಳರಿಗೆ ನಮ್ಮವರಿಗೆ ವಿರುದ್ಧವಾಗಿ ಮೇಲುಗೈ ಸಿಕ್ಕಿತು. ಇದು ಇತರರಿಗೆ ಪ್ರತಿಕೂಲವೆಂದು ಅರಿತಿದ್ದೂ ತಮಗೆ ಅನುಕೂಲವೆಂದು ಸುಮ್ಮನಿದ್ದದು ತಮಿಳರ ನೈತಿಕ ತಪ್ಪು (ಇದನ್ನಿಂದು ಜಾಣ್ಮೆಯೆಂದೂ ಕರೆಯಬಹುದು)

The Earth has enough resources to meet everyone's needs, but not everyone's greed ಅಂತ ಯಾರೋ ಹೇಳಿದ ನೆನಪು. ಈ ವಾಕ್ಯದ ಅರ್ಥ ನಮ್ಮ ಇಂದಿನ ವಿಕೇಂದ್ರೀಕೃತ ಸಂದರ್ಭದಲ್ಲಿ ಹೆಚ್ಚಿನ ಮಹತ್ವ, ಹೊಸ ತಿರುವು ಪಡೆಯುತ್ತದೆ.
೧. ನಿಯಮಿತ ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ, ನಮ್ಮ ನಮ್ಮ ಆಕಾಂಕ್ಷೆಗಳು ಬೇರೆಯವರ ಆಸೆಗಳಿಗೆ ಮುಳ್ಳಾಗುತ್ತದೆಯೆಂಬ ವಿಷಯ, ಕೆಲವೊಮ್ಮೆ ಕೇವಲ ಅಸಹಾಯಕತೆ, ಕೆಲವೊಮ್ಮೆ ಬೇಕೆಂದೇ ಇನ್ನೂ ಹೆಚ್ಚು ಸಂಪನ್ಮೂಲಗಳ ಬೇಡಿಕೆಗಳಾಗಿ ತಿರುಗುತ್ತವೆ.
೨. ಸಣ್ಣಪುಟ್ಟ ವಿಷಯಗಳಿಗೂ ದೊಡ್ಡದೊಡ್ಡವರ ಮಧ್ಯಸ್ಥಿಕೆ, ಒತ್ತಡಗಳು ಜಾಸ್ತಿಯಾಗುತ್ತವೆ.
(ಇದೇನು ನಿನ್ನೆ ಮೊನ್ನೆಯದಲ್ಲ. ಗೋಪಾಲಗೌಡರಿಗೇ ಜನರು ಈ ರೀತಿಯ ಒತ್ತಡ ಹೇರುತ್ತಿದ್ದುದ್ದನ್ನು ಕೆ.ವಿ ಸುಬ್ಬಣ್ಣ ನೆನೆಸಿಕೊಂಡಿದ್ದಾರೆ. ಆದರೆ ಅವರೇ ಹೇಳಿದ ಹಾಗೆ, ಅಂದು ಗೋಪಾಲಗೌಡರ ವಿವೇಚನೆ ಜಯಸಿತು, ವಿಧಾನಸಭಾ ಶಾಸಕರ ನಿಜವಾದ ಕರ್ತವ್ಯಗಳೇನು, ಅವರಿಗಿದ್ದ ಜನಬಲವು ಹೇಗೆ ಇಡೀ ರಾಜ್ಯದ ಒಳಿತಿಗಾಗಿ ಬಳಕೆಯಾಗಬೇಕು ಎಂದು ಅರಿತು ನೆಡೆದಿದ್ದರು. ಇಂದು, ಅವೆಲ್ಲ ಕನಸಿನ ಮಾತು.)

ಒಟ್ಟಿನಲ್ಲಿ, ನಮಗೆ ಇತರರ ಚಿಂತೆಯಿಲ್ಲ, ನಮ್ಮ ಓಟು ಬೀಳುವುದಾದರೆ ನಮ್ಮ ನಾಯಕರು ಇತರರ ಬದುಕನ್ನು ನಾಶಮಾಡಿಯಾದರು ನಮ್ಮನ್ನು ಸಂತೈಸಲು ಹಿಂದೆ ಮುಂದೆ ನೋಡುವುದಿಲ್ಲ. ರಾಷ್ಟ್ರಮಟ್ಟದ ಹಲವು ಸುದ್ಧಿಗಳಲ್ಲಿ ಈ ಧಾಟಿಯ decision making processಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಕೆಲವೊಮ್ಮೆ ಇದೂ ಕಾಣಲಿಕ್ಕೆ ಸಿಗುವುದಿಲ್ಲ. ಇದನ್ನು ಮುಂದೆ ವಿವರಿಸುತ್ತೇನೆ.

ಇಂದು, ವಿಕೇಂದ್ರೀಕರಣದ ಕೆಲವೇ ಕೆಲವು ತೊಂದರೆಗಳಲ್ಲಿ ಒಂದಾದ ಸಂಪನ್ಮೂಲಗಳ 'Non-optimal usage'(ಇದೇನು ತೊಂದರೆಯೇ ಆಗಬೇಕಾಗಿಲ್ಲ, ಪರಿಹಾರಗಳು ಸಾಕಷ್ಟಿವೆ) ಸರ್ಕಾರದ ವಿಕೇಂದ್ರೀಕರಣದ ಮೊದಲ ಮಟ್ಟ (ರಾಜ್ಯಮಟ್ಟ) ದಲ್ಲಿಯೇ ಕಂಡುಬಂದಿದೆ. ಇಬ್ಬರ ನಿಲುವುಗಳೂ ಮತ್ತೊಬ್ಬರಿಗೆ ವ್ಯತಿರಿಕ್ತವಾಗಿದೆ. ಭಿನ್ನಮನೋಭಾವದ ಪ್ರಜಾಸಂಸ್ಥೆಗಳು ತಮ್ಮಲ್ಲಿಯೇ ಮಾತನಾಡಿ ಕೊಟ್ಟೂ, ಕೊಂಡೂ ಸಮಸ್ಯೆಯನ್ನು ಬಗೆಹರಿಸದೇ ಇರುವುದು ನಿಜವಾದ ತಪ್ಪು. ಈ ತಪ್ಪನ್ನು ವಿಕೇಂದ್ರೀಕರಣದ ನ್ಯೂನತೆಯೆಂದು ಸಬೂಬು ಹೇಳಿ, ಇಲ್ಲಿನ ವಾಸ್ತವವನ್ನು ಅರಿಯುವ ತಾಳ್ಮೆಯಿಲ್ಲದೇ, ಕೇಂದ್ರ ಸರ್ಕಾರವು ನಮ್ಮ್ ರಾಜ್ಯಗಳ ವಿಷಯದಲ್ಲಿ ಬೇಜವಾಬ್ದಾರಿಯಿಂದ ಅಧಿಕಾರ ಚಲಾಯಿಸಿರುವುದೂ ಇದೆ. ಜೊತೆಗೆ, ಸಬಲ ಪ್ರಾಂತೀಯ ಮಿತ್ರಪಕ್ಷವೂ ಕೇಂದ್ರದಲ್ಲಿರುವುದರಿಂದ ಈ ಮಲತಾಯಿಧೋರಣೆಗೆ ಮತ್ತೊಂದು ಮುಖ್ಯಕಾರಣವೂ ದೊರೆತಂತಾಗಿದೆ. ಇದು ಕೇಂದ್ರ ಮತ್ತು ಪ್ರಾಂತೀಯ ಪಕ್ಷಗಳ ನೈತಿಕ ಅಧಃಪತನದ ವಿಚಾರ.

ಕರ್ನಾಟಕದಲ್ಲಾದರೋ ಸಬಲವಾದ ಪ್ರಾಂತೀಯ ಪಕ್ಷವೇ ಇಲ್ಲ. ಇರಬೇಕೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ, ಪ್ರಾಂತೀಯ ಪಕ್ಷವು ಅಸ್ತಿತ್ವದಲ್ಲಿದ್ದು ಏನು ಮಾಡಬೇಕು ಎಂಬುದು ಇತ್ಯರ್ಥವಾಗಬೇಕು. ಕೇಂದ್ರದಲ್ಲಿ ಕೂತು ನಮಗೆ ಸಿಗಬೇಕಾದ ಸಂಪನ್ಮೂಲಗಳೆಲ್ಲವನ್ನು ನಮಗೇ ಸಿಗುವಂತೆ ಮಾಡುವುದಷ್ಟೇಯೋ, ಅಷ್ಟೇ ಮಾಡುವುದಾದರೂ ನಮಗೆ ಸಿಗಬೇಕಾದದ್ದು ಅಂದರೇನು? ನಮ್ಮೆಲ್ಲ ಆಸೆ ಆಕಾಂಕ್ಷೆಗಳ ಪೂರೈಕೆಯೋ ಅಥವ ತೀರಾ ಕಷ್ಟವೆಂದಾಗ ಮಾತ್ರ ಮೂಗುತೂರಿಸಿ ಕೆಲಸ ಸಾಧಿಸಿಕೊಳ್ಳುವುದೋ.. ಅಥವ ಇದ್ಯಾವುದೂ ಅಲ್ಲದೇ, ಕೇವಲ ಅವರಿವರ ಪಕ್ಷಗಳುಹಿಂದೆ ಮಾಡಿರುವುದನ್ನೇ, ಈಗ ಮಾಡುತ್ತಿರುವುದನ್ನೇ ಮಾದರಿಯನ್ನಾಗಿಸಿ ಕಾರ್ಯಪ್ರವೃತ್ತರಾಗುವುದೇ ಮೊದಲಾದ ಪ್ರಶ್ನೆಗಳು ಬಗೆಹರಿಯಬೇಕು. ಆಗಲೇ ಅಂತಹ/ಇಂತಹ ಪಕ್ಷಗಳು ಬೇಕೋ ಬೇಡವೋ ನಿರ್ಧರಿತವಾಗಬಹುದು. (ಇಲ್ಲಿ, ಭಾರತದ ಅಭಿವೃದ್ಧಿಯು ಬ್ರಿಟಿಷರು ಹಾಕಿದ ಪಥದಲ್ಲಿಯೇ ಸಾಗಬೇಕೋ ಅಥವ ಗಾಂಧಿವಾದದ ಬೆಳಕಿನ್ನಲ್ಲಿ :) ಸಾಗಬೇಕೋ ಎನ್ನುವ ವಾದವು ಪ್ರಸ್ತುತ.)

ವಾಸ್ತವದಲ್ಲಿ ಇಂದಿಗೆ, ಕೇಂದ್ರದಲ್ಲಿ ನಮ್ಮನ್ನು ಪ್ರತಿಧ್ವನಿಸುವ ಪ್ರಾಂತೀಯ ಪಕ್ಷ ಕರ್ನಾಟಕದಲ್ಲಿ ಇಲ್ಲ. ಆದರೆ ಹಲವು ಪಕ್ಷಗಳಲ್ಲಿ ಹಲವು ನಾಯಕ ಧುರೀಣರಿಗೆ ಸಣ್ಣ ಪುಟ್ಟ ಪಕ್ಷಗಳಿಗಿರುವಷ್ಟು ಸ್ವಂತ ಪ್ರತಿಷ್ಠೆ ಇದೆ. ಅದನ್ನವರು ತಮಗೆ ತೊಂದರೆಯಾದಾಗಲೆಲ್ಲ ಸಾಕಷ್ಟು ಬಳಸಿಯೂ ಆಗಿದೆ. ಆದರೆ ಕಾವೇರಿ ವಿಷಯದಲ್ಲಿ ಇವೆಲ್ಲ ಕೇವಲ ಭಾಷಣಗಳಿಗೆ ಸೀಮಿತವಾದದ್ದು, ಈಗ ಅದೂ ಇಲ್ಲ, ದಿವ್ಯ ಮೌನ ಆಷ್ಟೇ. ಇದಕ್ಕೆ ಪರಿಹಾರ ಕೊಡುವ/ಸೂಚಿಸುವ ತಾಕತ್ತೇ ಇಲ್ಲ. ಯಾಕೆ? ಕಾವೇರಿ ಹಾಗು ಇತರ ನದಿಗಳ ಜಲಾಯನ ಪ್ರದೇಶಗಳಲ್ಲಿ ಕೆಲಸ ಮಾಡಿರುವ ಕೆಲವು ಸರ್ಕಾರಿ ನೌಕರರು ಹೇಳುವಂತೆ, ಇದಕ್ಕೆ ಕಾರಣ ಕೇಂದ್ರದ ಅಧಿಕೃತ ಒಪ್ಪಿಗೆ ತೆಗೆದುಕೊಳ್ಳದೇ, ಸರಿಯಾಗಿ ರಾಜಕೀಯ ಕಾರ್ಯತಂತ್ರಗಳನ್ನು ಯೋಜಿಸಿಕೊಳ್ಳದೇ ಜಲಾಶಯ ನಿರ್ಮಾಣ, ಅಭಿವೃದ್ಧಿ ಕಾರ್ಯಗಳನ್ನು ತಕ್ಷಣಕ್ಕೆ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಂದದು. ಇದರಲ್ಲಿ ಸರ್ವರೂ ಸಮಭಾಗಿಗಳಾಗಿರುವುದರಿಂದ ಈಗ ಎಲ್ಲರೂ ಮೂಖಪ್ರೇಕ್ಷಕರಾಗಿ ಉಳಿದುಕೊಂಡಿರುವ ಪರಿಸ್ಥಿತಿ. ಆದರೆ ಇದರಿಂದಲೂ ಪಾಠಕಲಿತಿರುವುದು ಡೌಟೇ. ಇರುವ ಅಧಿಕಾರವನ್ನು, accessabilityಯನ್ನೂ ಬಳಸಿಕೊಳ್ಳದೇ, ಜನಪ್ರತಿನಿಧಿಗಳಾದ ಮೇಲೆ ತೋರಿಸಬೇಕಾದ ಜವಾಬ್ದಾರಿಯನ್ನು ತೊರೆದು ಇನ್ನೂ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯದಲ್ಲಿ ತೊಡಗಿರುವುದು ಆತಂಕಕಾರಿ. ಇದಕ್ಕೆ ವ್ಯಾಪಕ ವಿರೋಧ ಅವಶ್ಯ.

ರಾಜಕೀಯವೇನಾದರೂ ಆಗಲಿ, ನಮ್ಮಲ್ಲಿ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ವ್ಯಾಪಕ ಚಳುವಳಿ ನಡೆಯುತ್ತಿದೆ. ಈ ಚಳುವಳಿಯಲ್ಲಿ ಭಾಗವಹಿಸದೇ, ಕಾವೇರಿ ನೀರನ್ನು ಈಗಲೂ ಬಳಸುತ್ತಿರುವ, ಮುಂದೆ ಈ ಹೋರಾಟದಿಂದ ಒಳಿತಾದರೆ, ಅದರಿಂದಲೂ ಉಪಯೋಗಪಡುವ ನಾನು, ನನ್ನಂಥವರು ಬಹುಶಃ ಈ ಮಾತುಗಳನ್ನಾಡಬಾರದು. ತಪ್ಪು ಅದು. ಆದರೆ ಇದೇ ತರಹದ ಮತ್ತೊಂದು ವಿಚಾರದಲ್ಲಿ ನಾನು ಕೆಲಸಮಾಡುತ್ತಿರುವುದರಿಂದ, ಸ್ವಲ್ಪವಾದರೂ ನೈತಿಕಹಕ್ಕಿದೆ ಎಂದು ತಿಳಿದು ಈ ಮಾತುಗಳನ್ನಾಡುತ್ತಿರುವೆ.

ಚಳುವಳಿ ಜೋರಾಗಿ ನಡೆಯುತ್ತಿದೆ. ಗಾಂಧೀಜಿ ಇಂದು ಇದ್ದಿದ್ದರೆ, ಬಹುಮಟ್ಟಿಗೆ ಅಹಿಂಸಾತ್ಮಕವಾದ, ಸೃಜನಶೀಲವಾದ ಈ ಚಳುವಳಿಯನ್ನು ನೋಡಿ ಅದರ ವೈಖರಿಯನ್ನು (ವೈಖರಿಯನ್ನು ಮಾತ್ರ) ಖುಷಿಪಡುತ್ತಿದ್ದರೋ ಏನೋ. ಆದರೆ, ಈ ಚಳುವಳಿಯು ಏತಕ್ಕೆ, ಏನನ್ನು ಸಾಧಿಸುತ್ತಿದೆ ಎಂಬುದರ ಚರ್ಚೆಯಾಗಬೇಕಾಗಿದೆ. ನನಗನ್ನಿಸುವ ಹಾಗೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚಳುವಳಿ, ರೈತರ ಜೊತೆ ತಾವಿದ್ದೇವೆ ಅಂತ ೧. ರೈತರಿಗೆ ತೋರಿಸುವುದಕ್ಕೆ, ೨. ಪಾಲ್ಗೊಳ್ಳದೇ ಇರುವವರು, ಯಾರು ಯಾರು ಬಂದರು ಅಂತ ನಮ್ಮಂತೆ ಗಮನಿಸುತ್ತಿರುವವರು, ಇವರಿಗೆ ತೋರಿಸುವುದಕ್ಕೆ.

ಮಿತ್ರರೊಬ್ಬರು ಹೇಳಿದಂತೆ, ಈ ಚಳುವಳಿಯ ಸಿಟ್ಟು, ಚಳುವಳಿಯಲ್ಲಿ ಭಾಗವಹಿಸದೇ ಇರುವವರ ವಿರುದ್ಧ. ರಸ್ತೆ, ರೈಲು ರೋಕೋ ಇವೆಲ್ಲವೂ ಅಂತಹವರನ್ನು ಎಚ್ಚೆರಿಸುವುದಕ್ಕೆ, ಅವರು ಈ ವಿಷಯದಲ್ಲಿ ತಲೆಕೆಡೆಸಿಕೊಳ್ಳದೇ ಆರಾಮಾಗಿದ್ದಾರಲ್ಲ ಅನ್ನುವ ಸಿಟ್ಟಿಗೆ. ಇದು ಬೇಕಾದದ್ದೆ, ನಮ್ಮಂತವರನ್ನು ಬಡಿದೆಬ್ಬಿಸಲಿಕ್ಕೆ. ಆದರೆ ಇಡೀ ಚಳುವಳಿಯು ಇದಕ್ಕೆ ಸೀಮಿತವಾಗಬಾರದು. ಇದು ಚಳುವಳಿಯ ಸಂದೇಶಕ್ಕೆ ಪ್ರತಿಕೂಲವಾಗಿದೆ. ಉದಾಹರಣೆಗೆ, ಹೋರಾಟಕ್ಕೆ ಉತ್ತರ ಎನ್ನುವಂತೆ, ಮುನ್ನೆಚ್ಚೆರಿಕೆಗಾಗಿ ಕನ್ನಡ ಬಾವುಟವನ್ನು ಹಾಕಿ ಬೆಂಗಳೂರಿನಿಡೀ, ಕಂಡ ಕಂಡ ಅಂಗಡಿಗಳೂ ಮಳಿಗೆಗಳೂ ಸುಮ್ಮನಾಗಿ ಬಿಟ್ಟಿವೆ. ಚಳುವಳಿಗಾರರನ್ನು ಆಡಿಕೊಳ್ಳುತ್ತಿವೆ; ಇಷ್ಟೇ ತಾನೆ ನಿಮಗೆ ಬೇಕಾಗಿರುವುದು ಅನ್ನುವ ಹಾಗೆ. ರಾಷ್ಟ್ರೀಯ ಸುದ್ದಿ ಚ್ಯಾನೆಲ್ಲುಗಳು ಚಳುವಳಿಗಾರರನ್ನು 'pro-kannada activists' ಅಂತಲೇ ಸಂಭೋದಿಸಿವೆ. ಕವರೇಜಿನಲ್ಲಿ ಚಳುವಳಿಗೆ ಸಿಗಬೇಕಾದ ಮಾನ್ಯತೆ ಸಿಗದೆ, ಈ ಚಳುವಳಿಯಿಂದ ಯಾರು ಯಾರಿಗೆ ತೊಂದರೆ ಆಯಿತು ಅನ್ನುವುದನ್ನೆ ಪ್ರಮುಖವಾಗಿ ಬಿತ್ತರಿಸಿವೆ. ಒಟ್ಟಿನಲ್ಲಿ, ನಮ್ಮ ಚಳುವಳಿ ಕರ್ನಾಟಕದಲ್ಲಿ ಸೀಮಿತವಾಗಿ, ಅದರ ಮೈಗೆ ಬೇಡದ ಕಲೆ ತಟ್ಟಿ ಅದರ ನಿಜವಾದ ಸಂದೇಶ ಕಳೆದು ಹೋದಹಾಗಿದೆ. ವಾಟಾಳ್ ನಾಗರಾಜರನ್ನು ಈ ವಿಷಯದಲ್ಲಿ ಮೆಚ್ಚಬೇಕಾದದ್ದೇ. ಇಲ್ಲಿ ಮಾಡಬೇಕಾಷ್ಟು ಮಾಡಿ ದಿಲ್ಲಿಗೆ ಹೋಗಿ ಪ್ರತಿಭಟಿಸಿದ ಕೆಲವೇ ಕೆಲವರಲ್ಲಿ ಅವರೂ ಒಬ್ಬ. ಈ ತೀರ್ಪು, ಕೇವಲ ಕರ್ನಾಟಕಕ್ಕೆ ಸಂಭಂದಿಸಿದ್ದಲ್ಲ. ತೀರ್ಪು ಇತ್ಯರ್ಥವಾಗಿರುವುದು ದಿಲ್ಲಿಯಲ್ಲಿರುವ ನ್ಯಾಯಾಧಿಕರಣದಲ್ಲಿ. ಹೋರಾಟ ಅಲ್ಲಿಗೂ ಬಿಸಿ ಮುಟ್ಟಿಸುವಂತಾಗಬೇಕು. ತಮಿಳುನಾಡಿನ ತಮಿಳರಿಗೂ ನಾವೆಷ್ಟು ಕಷ್ಟಕ್ಕೊಳಗಾಗುತ್ತೇವೆ ಎಂಬುದರ ಅರ್ಥವಾಗಬೇಕು.

ಯಾವುದೇ ದೇಶದಲ್ಲಾಗಲೀ, ರಾಜ್ಯದಲ್ಲೇ ಆಗಲೀ, ಅಭಿವೃದ್ಧಿ ಸಮಾನವಾಗಿರುವುದಿಲ್ಲ. ಕೆಲವು ಪ್ರದೇಶಗಳು, ಕೆಲವು ಜನರು ಮಿಕ್ಕವರಿಗಿಂತ ಯಾವಾಗಲೂ ನೋಡಲಿಕ್ಕೆ ಹೆಚ್ಚು ಅನುಕೂಲವಾಗಿರುತ್ತಾರೆ, ನಿಜ. ಆದರೆ, ಇದೇ ನಿಸರ್ಗದ ನಿಯಮವೆಂದು ತಿಳಿದು ನಾವು ಅಭಿವೃದ್ಧಿಯಲ್ಲಿ ಸಮಾನತೆಯೆಂಬುದನ್ನು ಮರೆಯುವುದು ಘೋರ ಅನಾಹುತವಾಗುತ್ತದೆ. ಕಾವೇರಿ ಜಲಾಯನ ಪ್ರದೇಶವು ಯಾವ ಬೆಳೆಯನ್ನು ಬೆಳೆಯಲು ಯೋಗ್ಯ, ಯಾವುದನ್ನು ಬೆಳೆದರೆ ದೇಶದ ಆಹಾರ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಯಾವುದು ಜನರ, ಪರಿಸರದ, ಸುಸ್ಥಿರತೆಯ ದೃಷ್ಟಿಯಿಂದ ಒಳಿತು ಎಂಬುದೆಲ್ಲವೂ ಇತ್ಯರ್ಥವಾದ ಮೇಲೆಯೇ ಯಾರಿಗೆಷ್ಟು ನೀರು ಎಂಬುದರ ವಿಚಾರ. ಸುಮ್ಮನೇ ನಾವು ಇದೇ ಬೆಳೆ, ಇಷ್ಟೇ ಬೆಳೆಯಬೇಕು, ಇದರಲ್ಲಿ ರಾಜಿಯೇ ಇಲ್ಲ ಎನ್ನುವುದು ಪೊಗರಿನ ಮಾತು.

ಭಾರತದ, ಕರ್ನಾಟಕದ ಕೃಷಿಯ ಪರಿಸ್ಥಿತಿ ಇಂದು ಆತಂಕಕಾರಿಯಾಗಿದೆ. ಬೇರೆ ಕ್ಷೇತ್ರಗಳು ಬೆಳೆದಂತೆ ಕೃಷಿಕ್ಷೇತ್ರ ಬೆಳೆಯುವುದು ಕಷ್ಟ. ಇದಕ್ಕೆ ಸಧ್ಯಕ್ಕೆ ಸುಲಭವಾಗಿ ತೇಪೆ ಹಾಕಿ ತೊಂದರೆಗಳನ್ನು ವೃದ್ಧಿಸಿ ಮುಂದಕ್ಕೆ ಹಾಕುವುದಕ್ಕಿಂತ, ಇಂದೇ, ಕಷ್ಟವಾದರೂ, ಸುಸ್ಥಿರವಾದ ಉತ್ತರಗಳನ್ನು ಕಂಡುಕೊಳ್ಳವುದು ಅವಶ್ಯಕ. ಇಂದು, ಕಾಣದ, ಕೇಳದ ಬೆಳೆಗಳನ್ನು, ಮಾರಕ ಪದ್ಧತಿಗಳನ್ನು, ಹಿಂದುಮುಂದಿಲ್ಲದ ಕನಸುಗಳನ್ನು ರೈತ ಕಂಡಿದ್ದಾನೆ, ಜೂಜಾಡುವಂತೆ ಅಳವಡಿಸಿಕೊಂಡಿದ್ದಾನೆ. ಇದಕ್ಕೆ ಪೂರ್ತಿ ಹೊಣೆ ಅವನಲ್ಲದ್ದಿದ್ದರೂ ಅವನ ಜವಾಬ್ದಾರಿ ಸ್ವಲ್ಪವಾದರೂ ಇದೆ. ಸೊರಗುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೇಗೆ ಸರ್ಕಾರ ನಡೆಸಲಾಗದೇ ಮಾರಿ ಕೈತೊಳೆದುಕೊಳ್ಳುತ್ತದೆಯೋ, ಹಾಗೆಯೇ, ಹಲವು ಬಾರಿ ನಷ್ಟದಲ್ಲಿ ನಡೆಯುತ್ತಿರುವ ಕೃಷಿಕ್ಷೇತ್ರವನ್ನು ಸಾಕುವುದೂ ಕಷ್ಟವೇ. ಯಾವುದು ಲಾಭಕಾರಿಯೋ ಅದರತ್ತ ಒಲವು ಜಾಸ್ತಿ. ಇಳುವರಿ, ಉತ್ಪಾದನೆ ಯಾವ ಸೀಮೆಯಲ್ಲಿ ಹೆಚ್ಚೋ ಆ ಸೀಮೆಯ ಕೃಷಿಗೆ ಹೆಚ್ಚು ಸವಲತ್ತು ಸಿಗುವುದು ಸಹಜವೇ. ನನಗೆ ತಿಳಿದ ಪ್ರಕಾರ ತಮಿಳುನಾಡಿನ ಕಾವೇರಿ ಜಲಾಯನ ಪ್ರದೇಶವು ಕರ್ನಾಟಕಕ್ಕಿಂತ ಹೆಚ್ಚು ಇಳುವರಿ ಕೊಡುತ್ತಿದೆ. (ತಪ್ಪಿದ್ದರೆ ತಿಳಿದವರು ತಿದ್ದುವುದು) ನಮ್ಮ ಭೂಮಿಯನ್ನು ಸಂಪದ್ಭರಿತವಾಗಿಸಬೇಕಾದರೆ, ನೀರು ಮುಖ್ಯವೇ, ಆದರೆ ಅದೊಂದೇ ಅಲ್ಲ, ಮಿಕ್ಕ ಹಲವು ವಿಷಯಗಳ ಕಾಳಜಿ, ಪರ್ಯಾಯ ಮಾರ್ಗಗಳ ಅರಿವು ಅಗತ್ಯ. ಇದಕ್ಕೆ ರೈತರು, ನಾಗರಿಕರು, ಜನನಾಯಕರು ಮುಕ್ತಮನಸ್ಸಿನಿಂದ ಚಿಂತಿಸುವುದು ಅವಶ್ಯ. ಹಾಗೆಯೇ ನೈಸರ್ಗಿಕ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆ, ಜಾಗೃತ ಜನಸಮೂಹ, ಸಮುದಾಯಗಳು ಇಂತಹ ತೀರ್ಪುಗಳ ತೊಂದರೆಗಳನ್ನು ಎದುರಿಸುವಲ್ಲಿ, ಮುಂದೆ ನಡೆಯುವಲ್ಲಿ ಅತ್ಯವಶ್ಯಕ. ಎಲ್ಲವಕ್ಕೂ ಕೇಂದ್ರಕ್ಕೆ ಹೋಗುವುದು, 'independent studies' ಮುಂತಾದವಕ್ಕೆ ಕೈಹಾಕಿ ಕೈಸುಟ್ಟಿಸಿಕೊಳ್ಳುವುದು ಇವುಗಳಿಗಿಂತ, ಗತಿ, ವಿಗತಿಗಳಿಂದ ಸಂಗತಿಯಾಗುವಂತಹ ಮಧ್ಯಮಾರ್ಗವನ್ನಳವಡಿಸಿಕೊಳ್ಳುವ ಸಹಕಾರೀ ಮನೋಭಾವ ಮುಖ್ಯ. ಹಾಗೆಯೇ, ಕರ್ನಾಟಕದ ಬಲಗಳೇನು, ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿ ನಮ್ಮ ಕುಂದುಕೊರತೆಗಳ ನಿವಾರಣೆಗೆ ಇತರರೊಡನೆ ಚುಕಾಸಿ ಮಾಡುವ ವಿಧಾನವು ಮುಖ್ಯವೇ. ಹೀಗೆ, ನಮ್ಮಲ್ಲಿಯೇ ಇಂತಹ ತೊಂದರೆಗಳನ್ನೆದುರಿಸಲು ಹಲವು ದಾರಿಗಳಿವೆ. ಕಾವೇರಿ ನ್ಯಾಯಾಧಿಕರಣದ ಈ ತೀರ್ಪು, ನಮ್ಮನ್ನೆ ನಾವು ಈ ನಿಟ್ಟಿನಲ್ಲಿ ಅಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಿಸಿಕೊಳ್ಳಲು ಪ್ರೇರಪಿಸಲಿ ಎನ್ನುವುದು ನನ್ನ ಆಶಯ.

ಕಾವೇರಿ ನಮ್ಮದು, ನಮ್ಮ ಅಧಿಕಾರ ಎನ್ನುವುದು ಸರ್ವಥಾ ಸರಿಯಲ್ಲ. ನಾವೇನು ನೀರನ್ನು ಬೆವರಿಳಿಸಿ ಉತ್ಪಾದಿಸುತ್ತೀವೇ? ಕಾವೇರಿ ಭಾರತದ ಆಸ್ತಿ. ನದಿಯೊಂದು ಎರಡು ದೇಶಗಳಲ್ಲಿ ಹರಿದರೆ, ಆಗ ಅದು ಕೇವಲ ಒಂದು ದೇಶದ ಆಸ್ತಿಯೂ ಅಲ್ಲ. ಆದ್ದರಿಂದ, 'ಪ್ರಾಣ ಬಿಟ್ಟೇವು, ನೀರು ಕೊಡೆವು' ಅನ್ನುವುದಕ್ಕಿಂತ, ನಾವು ಸರಿಯಿದ್ದಲ್ಲಿ, 'ಪ್ರಾಣ ಹೋಗುತ್ತದೆ, ಅದಕ್ಕೆ ಇಷ್ಟೇ ನೀರು ಕೊಡುತ್ತೇವೆ' ಅನ್ನುವುದು ಹೆಚ್ಚು ಸೂಕ್ತ.

Rating
No votes yet

Comments