ಮಸಾಲೆ ದೋಸೆ ಪುರಾಣ..!

ಮಸಾಲೆ ದೋಸೆ ಪುರಾಣ..!

ಹೊಟ್ಟೆ ಚುರುಗುಟ್ಟುತ್ತಿದೆ. ಆರ್ಡರ್ ಮಾಡಿ ಬಹಳ ಹೊತ್ತಾಗಿದೆ. ತಡವಾದಷ್ಟು ಬರಲಿರುವ
ಮಸಾಲೆ ದೋಸೆಯ ರುಚಿ ಹೆಚ್ಚಾಗಲಿದೆ. ಒಳಗೆ ಕಾವಲಿಗೆ ನೀರು ಹಾಕಿ ಪೊರಕೆಯಲ್ಲಿ ಗುಡಿಸಿ
ವೇದಿಕೆ ಸಜ್ಜುಗೊಂಡಿದೆ. ಪಾರ್ಸೆಲ್ ತೆಗೆದುಕೊಳ್ಳಲು ಬಂದು ತನ್ನ ದೋಸೆ ಹುಯ್ಯುವ
ಶೈಲಿ ನೋಡುತ್ತಿರುವ ಹುಡುಗನನ್ನು ಓರೆಗಣ್ಣಿನಲ್ಲಿ ನೋಡಿದವ ಅದನ್ನು ಗಮನಿಸದವನಂತೆ
ಬಿಸಿ ಕಾವಲಿಯ ಮೇಲೆ ಬೇಕಂತಲೇ ಒಂದೆರೆಡು ಹನಿ ನೀರು ಹಾಕಿ ಚಟಪಟವೆನಿಸಿ ಸ್ಟೈಲ್
ತೋರಿದ್ದಾನೆ.
ತನ್ನನ್ನು ಗಮನಿಸುತ್ತಿರುವ ಸೂಪರ್ವೈಸರನ್ನು ಮೆಚ್ಚಿಸಲು ಈ ಸಲ ಮುಕ್ಕಾಲು ಸೌಟಿನಲ್ಲೇ
ದೋಸೆ ತಿರುವಿ ನೇವರಿಸಿಯಾಗಿದೆ. ಇನ್ನೂ ಮೆಚ್ಚಿಸಲು ತುಪ್ಪ ಕಡಿಮೆ ಹಾಕಿ ದೋಸೆ
ರುಚಿಕೆಟ್ಟು ಅಪಮಾನವಾದೀತೋ ಎಂಬ ಭಯದಿಂದಲೋ ಅಥವಾ ಗಿರಾಕಿಗಳಿಗೆ ತೋರಿಸಿಕೊಳ್ಳಲೋ
ಎಂಬಂತೆ, 'ಲೋ, ತುಪ್ಪ ಜಾಸ್ತಿ ಹಾಕೋ ರಾಯರಿಗೆ' ಅನ್ನುತ್ತಾ ಗಿರಾಕಿಗಳಿಗೆ ಬೆಣ್ಣೆ
ಹಚ್ಚಿದ್ದಾನೆ.

ಅಷ್ಟರಲ್ಲಿ ತನ್ನ ಪಾರ್ಸೆಲ್ ಬಂದಿದ್ದರಿಂದ ದೋಸೆ ಹಾಕುವವನ
ಸ್ಟೈಲನ್ನು ಪೂರ್ತಿ ನೋಡಲಾಗದ ನಿರಾಸೆಯಿಂದ ಹುಡುಗ ಹಾಗೇ ಹೊರಟಿದ್ದಾನೆ.
ಈ ಸಲ ಸುರಿದ ತುಪ್ಪದ ಘಮ ಹಾಗೇ ಹೊರಗೆ ಹೋಗಿ ರಸ್ತೆಯಲ್ಲಿ ಹೋಗುತ್ತಿರುವ ಮತ್ತಷ್ಟು
ಜನರನ್ನು ಹೋಟೇಲಿನೊಳಗೆ ಎಳೆತಂದಿದೆ. ಒಂದಿಬ್ಬರು ಮನೆಗೆ ಫೋನ್ ಮಾಡಿ 'ಗೆಳೆಯ ಒತ್ತಾಯ
ಮಾಡಿದ್ದರಿಂದ ತಿಂದಾಗಿದೆ, ರಾತ್ರಿ ಏನು ಮಾಡಬೇಡ' ಎಂದು ಸುಳ್ಳು ಹೇಳಿ ನಿರಾಳವಾಗಿ
ಕುಳಿತಿದ್ದಾರೆ.
ಅಷ್ಟರಲ್ಲಿ ಹದ್ದು ರೆಕ್ಕೆ ಬಡಿಯದಂತೆ ತೇಲುವಂತದ್ದೇ ಶೈಲಿಯಲ್ಲಿ ಮಾಣಿ ದೋಸೆಯನ್ನು
ಆಡಿಸುತ್ತ ತರುತ್ತಿದ್ದಾನೆ. ಅವನ ಕಣ್ಣುಗಳಲ್ಲಿ ಮಸಾಲೆ ದೋಸೆಯ ಬಗ್ಗೆ ಒಂಚೂರು
ಮಮತೆಯಿಲ್ಲ. ಅದು ಆಗಲೇ ಟಿಪ್ಸ್ ಎಷ್ಟು ಸಿಗಬಹುದೆಂದು ಊಹೆ ಮಾಡಿದೆ.
ಬಾಳೆ ಎಲೆಯ ಮೇಲೆ ಕೆಂಪಾಗಿ ಮಗ್ಗುಲು ಮಾಡಿ ಮಲಗಿರುವುದನ್ನು ನೋಡಿ ಮುದ್ದಾಗಿ ಅದರ
ಮೇಲೆ ಪ್ರೀತಿ ಹುಟ್ಟಿದೆ. ಮೇಲಿರುವ ಬೆಣ್ಣೆ ಆಗಲೋ ಈಗಲೋ ಜಾರಿ ಬಾಳೆ ಎಲೆಯ ಮೇಲೆ
ಹರಡಲಿದೆ.
ಕಣ್ಣು ಅದರಂದ ಆಸ್ವಾದಿಸುತ್ತಿದ್ದರೆ, ದೋಸೆಯ ಘಮಕ್ಕೆ ಮನಸು ಆಗಲೇ ಮಾರುಹೋಗಿದೆ.
ಗರಿಗರಿಯಾಗಿರುವ ದೋಸೆಯ ಅಂಚನ್ನು ಮುರಿದು ಬಾಯೊಳಗಿಟ್ಟುಕೊಂಡಾಗ ಕಣ್ಣು ತನ್ನಂತಾನೆ
ಮುಚ್ಚುತ್ತದೆ. ಹೀಗೆ ಪಂಚೇಂದ್ರಿಯಕ್ಕೂ ಮುದ ನೀಡಿದ, ಕ್ಷಣಕಾಲ ಸ್ವರ್ಗ ತೋರಿಸಿದ
ಮಸಾಲೆ ದೋಸೆ ಎಂಬ ಮಾಯೆಗೆ ಕ್ಯಾಶಿಯರ್ ಹದಿನೈದೇ ರುಪಾಯಿ ಎಂದು ಹೇಳಿ
ನಿರಾಸೆಗೊಳಿಸಿದ್ದಾನೆ!!!

Rating
Average: 4 (1 vote)

Comments