"ಚಿತ್ರದುರ್ಗದ ಪಾಳಯಗಾರರು"

"ಚಿತ್ರದುರ್ಗದ ಪಾಳಯಗಾರರು"

Comments

ಬರಹ

ಇವತ್ತು [:http://dli.iiit.ac.in/|ಡಿಜಿಟಲ್ ಲೈಬ್ರೆರಿಯಲ್ಲಿ] ನಾನು ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ "ಚಿತ್ರದುರ್ಗದ ಪಾಳಯಗಾರರು" ಎಂಬ ಪುಸ್ತಕ ದೊರೆಯಿತು. ಪುಸ್ತಕ ೧೯೨೪ರಲ್ಲಿ ಹೊರಬಂದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆಗೆಂದು ಓದಿದ ಗದ್ಯ ಸಂಗ್ರಹವಿರುವ ಪಠ್ಯದಲ್ಲಿ ಪಾಳಯಗಾರರ ಬಗ್ಗೆ ಇರುವ ಈ ಪುಸ್ತಕದಿಂದಲೂ ಒಂದು ಕತೆ ಇತ್ತು. ಹಲವು ವರ್ಷಗಳ ಹಿಂದೆ ಓದಿದ ಈ ಕತೆ ಇಂದಿಗೂ ಮರೆಯಲಾಗಿಲ್ಲ.

ಪುಸ್ತಕವನ್ನು PDFನಲ್ಲಿ [:http://sampada.net/Chitradurgada_PaLayagaararu.pdf|ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು].

ಚಿತ್ರದುರ್ಗದ ಕತೆ ಓದುತ್ತ ಆಗಿನ ಕರ್ನಾಟಕದ ಕೆಲವು ಚಿತ್ರಣಗಳು ನಮ್ಮ ಮುಂದೆ ಹಾದುಹೋಗುತ್ತದೆ. ಎಷ್ಟೆಲ್ಲ ಸಂಸ್ಥಾನಗಳು, ಎಷ್ಟೆಲ್ಲ ಕದನಗಳು!
ಚಿತ್ರದುರ್ಗದ nostalgia ಇದ್ದವರಿಗೆ ಈ ಪುಸ್ತಕ ಓದಲೇಬೇಕಾದ ಸರಕು.

ದುರ್ಗದ ಪಾಳಯಗಾರರ ವೀರಗಾಥೆಯನ್ನು ಕೇಳಿಯೇ ಇರುತ್ತೀರಿ. ಪುಸ್ತಕದ ಈ ತುಣುಕು ಓದಿ:

ಶತ್ರುಗಳು ದುರ್ಗದ ಬೆಟ್ಟಕ್ಕೆ ಮುತ್ತಿಗೆ ಹಾಕಲು ಬಂದು ಕಾನಾಪುರದ ಬೈಲಿನಲ್ಲಿಳಿದಿರುವಾಗ ಒಂದು ದಿನ ಅರ್ಧರಾತ್ರೆಯಲ್ಲಿ ಸೇನೆಯವರು ಪಾಳಯದಲ್ಲಿ ಮಲಗಿಕೊಂಡು ನಿದ್ರೆಮಾಡುತಿರಲು, ತಿಮ್ಮಂಣನಾಯಕನು ಒಂಟಿಯಾಗಿ ಆ ಪಾಳಯಕ್ಕೆ ನುಗ್ಗಿ ಸೇನಾಪತಿಯಾದ ಸಾಳೋ ನರಸಿಂಗರಾಯನ ಖಾಸಾಕುದುರೆಯನ್ನು ಕಟ್ಟಿದ್ದ ಕಡೆಗೆ ಹೋಗಿ ಸ್ವಲ್ಪವೂ ಗದ್ದಲವಾಗದಂತೆ ಅದರ ಅಗಾಡಿಯನ್ನೂ ಪಿಚಾಡಿಯನ್ನೂ ಬಿಚ್ಚುತ್ತಾ ಇದ್ದನು. ಆಗ ಕುದುರೆಯು ಕುಣಿದು ಶಬ್ದ ಮಾಡಿತು. ಕಾಸದಾರನಿಗೆ ಎಚ್ಚರವಾಯಿತು. ಅವನು ಕಣ್ಣನ್ನು ಹೊಸಗಿಕೊಳ್ಳುತಾ ಎದ್ದನು. ಆಗ ತಿಮ್ಮಂಣನಾಯಕನು ಅವನಿಗೆ ಕಾಣದ ಹಾಗೆ ನೆಲದಮೇಲೆ ಮಲಗಿಕೊಂಡು ಅಲ್ಲಿದ್ದ ಹುಲ್ಲನ್ನು ತನ್ನ ಮೇಲೆ ಹಾಕಿ ಕವಿಚಿಕೊಂಡನು. ಕುದುರೆಯವನು ಕಿತ್ತು ಹೋಗಿದ್ದ ಕುದುರೆಯ ಗೂಟವನ್ನು ನೆಲದ ಮೇಲೆ ಇರಿಸಿ ಗಟ್ಟಿಯಾಗಿ ಪೆಟ್ಟಿದನು. ಆ ಗೂಟವು ಅಂಗೈಯನ್ನು ಅಗಲವಾಗಿ ಚಾಚಿಕೊಂಡು ಮಲಗಿದ್ದ ತಿಮ್ಮಂಣನಾಯಕನ ಬಲದ ಹಸ್ತದ ಮಧ್ಯೆ ಹಾದು ನೆಲಕ್ಕೆ ಬಲವಾಗಿ ಇಳಿಯಿತು. ತರುವಾಯ ಕುದುರೇ ಚಾಕರನು ಅದನ್ನು ಆ ಗೂಟಕ್ಕೆ ಕಟ್ಟಿ ಮಲಗಿಕೊಂಡನು. ಅವನಿಗೆ ನಿದ್ರೆ ಬಂದುದನ್ನು ಕಂಡು, ಪಾಳಯಗಾರನು ತನ್ನ ಎಡಗೈಯಿಂದ ಸೊಂಟದಲ್ಲಿದ್ದ ಬಾಕನ್ನು ಹಿರಿದುಕೊಂಡು ತನ್ನ ಬಲಗೈಮಣಿಕಟ್ಟನ್ನು ಕುಯಿದು ಮೇಲಕ್ಕೆ ಎದ್ದು ಮೋಟಕೈಗೆ ಬಟ್ಟೆಯನ್ನು ಸುತ್ತಿ ಅದೇ‌ ಕುದುರೆಯನ್ನು ಬಿಚ್ಚಿ ಅದರ ಮೇಲೆ ಏರಿಕೊಂಡು ಮೇಲು ದುರ್ಗಕ್ಕೆ ಹೋದನು.

ಈ ಸಾಹಸ ಇಲ್ಲಿಗೇ ನಿಲ್ಲಲಿಲ್ಲ. ಮಾರನೇ ದಿವಸ, ಸಾಳೋ ನರಸಿಂಗರಾಯನು ಕೂತುಕೊಳ್ಳುತ್ತಿದ್ದ ಖಾಸಾ ಆನೆಯನ್ನು ದುರ್ಗದ ತಪ್ಪಲಲ್ಲಿರುವ ತಿಮ್ಮಂಣನಾಯಕನ ಕೆರೆಗೆ ನೀರು ಕುಡಿಸಲು ಹಿಡತಂದರು. ಇದು ಪಾಳಯಗಾರನಿಗೆ ತಿಳಿಯಿತು. ಅವನು ಆಕ್ಷಣದಲ್ಲಿಯೇ ಎದ್ದು ತನ್ನ ಬಿಲ್ಲನ್ನು ತರಿಸಿ ಅದನ್ನು ಕಾಲಲ್ಲಿ ಮೆಟ್ಟಿ ಬಾಣವನ್ನು ಹೆದೆಗೆ ಏರಿಸಿ, ಅದನ್ನು ಆನೆಯ ಹಣೆಗೆ ಗುರಿಕಟ್ಟಿ ಎಡಗೈಯಲ್ಲಿ ತುಯಿದು ಬಿಟ್ಟನು. ಅಲಗು ಆನೆಯ ಭ್ರೂಮಧ್ಯಕ್ಕೆ ತಗಲಿ ಅದು ಕಿರ್ರನೆ ಅರಚಿಕೊಂಡು ಒಂದೇಟಿಗೆ ನೆಲಕ್ಕೆಬಿದ್ದು ಪ್ರಾಣವನ್ನು ಬಿಟ್ಟಿತು.

ನಾನು [:http://hpnadig.net/blog/index.php/archives/2007/02/22/download-all-that-you-can|ಡೌನ್ಲೋಡ್ ಮಾಡಿರುವ] ಹಲವು ಪುಸ್ತಕಗಳಲ್ಲಿ ಕೆಲವನ್ನು PDF ರೂಪದಲ್ಲಿ ಸಂಪದಕ್ಕೆ ಅಪ್ಲೋಡ್ ಮಾಡಿರುವೆ. ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಿ:
* [:http://sampada.net/TamiLu_TalegaLa_Naduve.pdf|ತಮಿಳು ತಲೆಗಳ ನಡುವೆ]. (B G L Swamy)
* [:http://sampada.net/Antahapurageethe-DVG.pdf|ಅನ್ತಃಪುರಗೀತೆ] ಡಿ ವಿ ಜಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet