ನಿಮ್ಮ ಮಗುವಿಗೊಂದು ಪುಟಾಣಿ ಪದ್ಯ

ನಿಮ್ಮ ಮಗುವಿಗೊಂದು ಪುಟಾಣಿ ಪದ್ಯ

ಬಾನ ತುಂಬ ಚುಕ್ಕೆ ತಾರೆ
ಚಂದ್ರ ಬಿಂಬ ನಗುತಿದೆ
ಕಣ್ಣು ಸೋಲುವಷ್ಟೂ ದೂರ
ಅನಂತ ಗಗನ ಹರಡಿದೆ |

ನಿದ್ರೆ ಬರಲೇ ಇಲ್ಲ ಎಂದು
ನೋಡುತಿದ್ದೆ ಬಾನಲಿ
ಕಂಡ ಚಂದ್ರ ಕಿಂಡಿಯಲ್ಲಿ
ಕರೆದೆ ಅವನ ಒಲವಲಿ |

ಅಳುತಲಿದ್ದ ಹಾಗೇ ಕಂಡ
ಅರ್ಧ ಚಂದ್ರ ಹಸಿವಲಿ
ನಾನೇ ಕರೆದೆ ಚಂದ್ರ ಬಾರೋ
ತಿಂಡಿ ಇಹುದು ಮನೆಯಲಿ |

ಅಗೋ! ಅಲ್ಲಿ ಅರ್ಧ ಚಂದ್ರ
ನನ್ನ ಮನೆಗೆ ಬರುತಿಹ
ಹಾಲಿನಂಥ ಬೆಳಕ ತಂದು
ಅಂಗಳದಲಿ ಸುರಿದಿಹ |

ತೊಟ್ಟಿಲಲ್ಲಿ ಪುಟ್ಟ ತಮ್ಮ
ಕೇಕೆ ಹಾಕಿ ನಗುತಿಹ
ಬೊಚ್ಚು ಬಾಯಿ ಮುಚ್ಚದೇನೆ
ಅಕೋ ಅಲ್ಲಿ ಕುಣಿದಿಹ |

ಬಂದ ಚಂದ್ರ ಬೀಗುತಿರುವ
ಹಾದು ಹೊಸಿಲ ಒಳಮನೆ
ಕಗ್ಗತ್ತಲ ಮನೆಯ ತುಂಬ
ಬೆಳ್ಳಿ ಬೆಳಕ ಬಿತ್ತನೆ |

ಕಿರುಚಿ ಬಿಟ್ಟಳಮ್ಮ ಬೆಚ್ಚಿ
ಚಂದ್ರನನ್ನು ಕಾಣುತ
ಮಗುವ ಬಾಚಿ ತಬ್ಬಿಕೊಂಡು
ಹೊರಟಳಾಚೆ ಓಡುತ |

ಕರೆದೆ ನಾನು ಅಯ್ಯೋ ! ಅಮ್ಮ
ನಿಲ್ಲೆ ಹಾಗೆ ಓಡದೆ
ಹಸಿದು ಬಂದ ಚಂದ್ರನನ್ನು
ಹೊಟ್ಟೆ ತುಂಬಬಾರದೆ ? |

ಬಂದಳಮ್ಮ ಮತ್ತೆ ಓಡಿ
ಮರೆತ ನನ್ನ ನೋಡುತ
ಎಂಥ ಧೈರ್ಯ ಕಂದ ಎಂದು
ಎದೆಗೆ ಅಪ್ಪಿಕೊಳ್ಳುತ |

ಅಂದೆ ನಾನು "ಅಮ್ಮಾ ಚಂದ್ರ
ನಾನೇ ಕರೆದ ಸ್ನೇಹಿತ"
ಅಳಲು ಬೇಡ ಹೋಗೇ ಬಿಡುವ
ನನ್ನ ಕರೆಯ ಮರೆಯುತ |

ನಕ್ಕಳಮ್ಮ ನನ್ನ ಕೆನ್ನೆ
ಮುದ್ದು ಮಾಡಿ ಒಮ್ಮೆಲೆ
ತುತ್ತು ಮಾಡಿ ಚಂದ್ರನಿಗೆ
ತಿನಿಸಿ ತನ್ನ ಕೈಯಲೆ |

ಹೊಟ್ಟೆ ತುಂಬ ತಿಂದ ಚಂದ್ರ
ಓಡಿ ಬಿಟ್ಟ ಬಾನಿಗೆ
ಬೆಣ್ಣೆಯಂಥ ಮುತ್ತ ನೀಡಿ
ನನಗೆ ಮತ್ತು ಅಮ್ಮಗೆ |
( ಹರಿಪ್ರಸಾದ ನಾಡಿಗರೇ ಈ ಪದ್ಯಕ್ಕೊಂದು ಚಿತ್ರ ಬರೀತೀರಾ ? ನಿಮ್ಮ ಅಭ್ಯಂತರವಿಲ್ಲದಿದ್ದರೆ ) ಅಥವ ಬೇರೆ ಯಾರಾದ್ರು ಬರೀಬಹುದು ..

Rating
No votes yet

Comments