ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?

 

ಯಾವುದೋ ಒಂದು ಟ್ರಾಲಿಯನ್ನು ಒಂದು ಟ್ರಾಕ್ಟರ್ ಎಳೆದುಕೊಂಡು ಹೋಗುತ್ತಿದೆ ಎನ್ನಿಸುತ್ತಿಲ್ಲವೇ? ಸೂಕ್ಷ್ಮವಾಗಿ ಗಮನಿಸಿದರೆ ಹಲವು ಗಾಲಿಗಳ ಒಂಡು ಅಡ್ಡಟ್ರಾಲಿಯಲ್ಲಿ ಹಲವಾರು ಹಲಗೆಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿರುವುದನ್ನು ಗಮನಿಸಬಹುದು.

 

ವಿಭಿನ್ನವಾಗಿ ಕಾಣುವ ಈ ವಾಹನವನ್ನು ವಿಶೇಷವಾಗಿ ಸೌತೆಕಾಯಿ ಕೊಯ್ಲಿಗೆಂದೇ ನಿರ್ಮಿಸಲಾಗಿದೆ. ಬೆಲಾರಸ್, ರಷ್ಯಾ ಹಾಗೂ ಪೂರ್ವ ಯೋರೋಪ್ ನಡುವಣ ಒಂದು ರಾಷ್ಟ್ರ. ಇಲ್ಲಿನ ಮರಳು ಮಿಶ್ರಿತ ಮಣ್ಣು ಸೌತೆಬೆಳೆಗೆ ಅತ್ಯಂತ ಸೂಕ್ತ. ಅಂತೆಯೇ ಬೆಳೆಯುವ ಬೆಳೆಯ ಪ್ರಮಾಣವೂ ಆಗಾಧ. ಆದರೆ ಒಮ್ಮೆಲೇ ಕಟಾವಿಗೆ ಬರುವ ಬೆಳೆಯನ್ನು ಸೂಕ್ತಕಾಲದಲ್ಲಿ ಕೀಳದೇ ಇದ್ದರೆ ಸೌತೆಕಾಯಿ ಬಲಿತು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುವ ಸಾಧ್ಯತೆ. ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡದ್ದೇ ಈ ಟ್ರಾಲಿ. ಸುಮಾರು ನೂರು ವರ್ಷಗಳ ಹಿಂದೆ ಮರದಲ್ಲಿ ಮಾಡಿದ ಟ್ರಾಲಿ ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಬಂದು ಇಂದು ಈ ರೂಪ ಪಡೆದಿದೆ.

 

ಸುಮಾರು ಹತ್ತರಿಂದ ಹನ್ನೆರೆಡು ಜನರು ತಮ್ಮ ಹೊಟ್ಟೆಯ ಮೇಲೆ ಮಲಗಿ ಸೌತೆಕಾಯಿ ಕಟಾವು ಮಾಡಬಹುದಾದ ಈ ಟ್ರಾಲಿಯನ್ನು ಒಂದು ಟ್ರಾಕ್ಟರ್ ನಿಧಾನಗತಿಯಲ್ಲಿ ಮುಂದೆ ಎಳೆಯುತ್ತದೆ. ಟ್ರಾಲಿಯ ಅಗತ್ಯವಿಲ್ಲದೇ ಕಟಾವು ನಡೆಸಬಹುದಾದರೂ ಪ್ರತಿಬಾರಿಯೂ ಬಗ್ಗಿ ಕೆಲಸ ಮಾಡಬೇಕಾಗಿರುವುದರಿಂದ ಕೆಲಸವೂ ಹೆಚ್ಚು, ಆಯಾಸವೂ ಹೆಚ್ಚು. ಅದೇ ಮಲಗಿಕೊಂಡು ಕೆಲಸ ಮಾಡುವುದರಿಂದ ಈ ಎರೆಡೂ ಕಷ್ಟಗಳಿಂದ ಬಿಡುಗಡೆ, ಶೀಘ್ರಕಾಲದಲ್ಲಿ ಹೆಚ್ಚಿನ ಕಟಾವು ಸಾಧ್ಯ. ಕಿತ್ತ ಬೆಳೆಯನ್ನು ಮುಂದಿರುವ ಚಲಿಸುವ ಬೆಲ್ಟ್ ಮೇಲಿಟ್ಟರೆ ಸಾಕು ಅದು ಬೆಲ್ಟ್ ಮೇಲೆ ಸಾಗಿ ನಡುಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ.

 

 

 

ಈ ರೀತಿಯಲ್ಲಿ ಸುಲಭವಾಗಿ, ಕ್ಷಿಪ್ರಸಮಯದಲ್ಲಿ ಹೆಚ್ಚಿನ ಬೆಳೆಯನ್ನು ಕಟಾವು ಮಾಡಬಹುದಾಗಿದೆ. ಬೆಲಾರಸ್ ದೇಶದಲ್ಲಿ ಸೌತೆಕಾಯಿ ಮಾತ್ರವಲ್ಲದೇ ಶುಗರ್ ಬೀಟ್ (ಸಕ್ಕರೆ ತಯಾರಿಸಬಹುದಾದ ಬೀಟ್ ರೂಟ್ ಗಡ್ಡೆ), ಆಲುಗೆಡ್ಡೆ ಮೊದಲಾದ ಬೆಳೆಗಳನ್ನೂ ಕಟಾವು ಮಾಡಲಾಗುತ್ತದೆ. ಬೆಲಾರಸ್ ಬಿಟ್ಟರೆ ಈ ರೀತಿಯ ಕಟಾವು ಮಾಡುವ ಇನ್ನೊಂದು ರಾಷ್ಟ್ರವೆಂದರೆ ಕೆನಡಾ. ಆದರೆ ಅಲ್ಲಿ ಯಾಂತ್ರೀಕೃತ ಕಟಾವು ವ್ಯವಸ್ಥೆ ಬಂದ ಮೇಲೆ ಸಾಂಪ್ರಾದಾಯಿಕ ವಿಧಾನ ಮೂಲೆಗುಂಪಾಗಿದೆ.ಕೃಪೆ: www.odditycentral.com

Rating
No votes yet

Comments