ಕೆಲವು ಸುಭಾಷಿತಗಳು

ಕೆಲವು ಸುಭಾಷಿತಗಳು

ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನಾಗರಿಯಲ್ಲಿದ್ದರೆ ಒಳಿತೇನು? ತಿಳಿಸಿ. ಮಿಕ್ಕ ಶ್ಲೋಕಗಳನ್ನೂ ಒಂದೊಂದಾಗಿ ಸೇರಿಸುತ್ತೇನೆ.

----------------------------------------------------------------------------------------- 

ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ  ಮನೋರಥೈಃ|

ನ  ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ||                                              

ಮನಕೆ ಬಂದ ಮಾತ್ರಕೆ
ಕಾರ್ಯಗತವಾದೀತೇ ?
ಮಲಗಿದ ಸಿಂಹದ ಬಾಯಿಗೆ
ಜಿಂಕೆ ಬಂದು ಬಿದ್ದೀತೇ ?
------------------------------------------------------------
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |                                                          ಯೋ ನ ದದಾತಿ ನ ಭುಂಕ್ತ್ತೇ ತಸ್ಯ ತೃತೀಯಾ ಗತಿರ್ಭವತಿ||

ಅನುಭವಿಸು ಇಲ್ಲ ದಾನ ಕೊಡು ಅಥವ
ವಿನಾಶವೆಂದು ಹಣಕಿದೆ ಮೂರು ಗತಿ
ಒಂದನೆಯದು ಎರಡನೆಯದೂ ಮಾಡದೆ
ಹೋದರೆ ಮೂರನೆ ಗತಿಯೇ ಪ್ರಾಪ್ತಿ
------------------------------------------------------------
ಇರಲಿ ಆಸಕ್ತಿ ಸಾಹಿತ್ಯ ಸಂಗೀತ
ಅಥವಾ ಇನ್ನಾವುದೋ ಕಲೆಯ ಮೇಲೆ
ಇಲ್ಲದೆ ಹೋದರೆ ಅವ ಪಶುವೇ ಸರಿ
ಬಾಲ ಕೊಂಬು ಎರಡಿಲ್ಲದೆಲೆ!
ಹುಲ್ಲನು ತಿನ್ನದೇ ಜೀವಿಸಬಲ್ಲವ
-ನೆಂಬುದೆ ಪುಣ್ಯ ಪ್ರಾಣಿಗಳಿಗೆ!

------------------------------------------------------------
ನೀಚರಿಗೆ ಮಾಡಿದುಪಕಾರ
ಆಗೇ ಆಗುವುದು ಅಪಕಾರ
ಹಾವಿಗೆ ಕುಡಿಸಿದ ಹಾಲು ಸಹ
ಆಗುವುದಲ್ಲವೆ ಘೋರ ವಿಷ
---------------------------------------------------------------
ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಬಡತನವೆಂಬೊಂದು ಕೊರೆ ?

----------------------------------------------------------------

ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ

ಬಾಲೇ ತವ ಮುಖಾಂಬೋಜೇ ದೃಶ್ಯಮಿಂದೀವರದ್ವಯಂ

ಕಮಲದಲಿ ಕಮಲ ಹುಟ್ಟಿದುದ
ಕಾಣೆನು ಕೇಳೆನು ಎನ್ನದಿರು
ಓ ಗೆಳತೀ ನಿನ್ನೀ ಮುಖಕಮಲದಲಿ
ಜನಿಸಿರಲು ಕಣ್ಣೆಂಬ ಕಮಲವೆರಡು

ಕೇಳಿರಿ ಚಿಂತೆಗೂ ಚಿತೆಗೂ
ವ್ಯತ್ಯಾಸವಂತೂ ಬರಿ ಸೊನ್ನೆ
ಸುಟ್ಟರೆ ಚಿತೆ ಹೋದವನನ್ನು
ಚಿಂತೆ ಸುಟ್ಟೀತು ಇದ್ದವನನ್ನೆ

ದುಷ್ಟರ ಜೊತೆಯಲಿ ದ್ವೇಷವು ಬೇಡ
ಮಾಡದಿರು ನೀ ಅತಿ ಪ್ರೀತಿ
ಕೆಂಡವು ಬಿಸಿಯಲಿ ಕೈಯನು ಸುಡುವುದು
ತಣಿದಿದ್ದರೆ ಆಗುವುದು ಮಸಿ

ಹಲ್ಲು ಉಗುರು ಕೂದಲು ಮನುಜರು
ಇರಬೇಕಾದಲ್ಲೆ ಶೋಭಿಪರು
ಅದಕೆಂದೇ ಉತ್ತಮ ಜನರು
ತಮ್ಮ ಸ್ಥಾನವ ಬಿಡದಿಹರು

ಚೇಳಿನ ವಿಷವದು ಬಾಲದ ಕೊಂಡಿಲಿ
ನೊಣಕ್ಕದು ಬಾಯಲ್ಲೆಲ್ಲಾ
ಹಾವಿನ ಹಲ್ಲಲಿ ತುಂಬಿದೆ ಆ ವಿಷ
ಕೆಟ್ಟವನಿಗೋ ಮೈಯಲ್ಲೆಲ್ಲಾ

ಲಕ್ಷ್ಮಿಯು ಬಳಿಯಿದ್ದವನರಿಯನು
ಪ?ರಿಗಾಗುವ ವೇದನೆ
ಭೂಮಿಯ ಭಾರವ ಹೊತ್ತಿರೆ ಶೇಷನು
ಮಲಗಿಹ ನಾರಾಯಣ ಸುಮ್ಮನೆ

ಸ್ವಯಂಪ್ರಜ್ಞೆ ಇಲ್ಲದವನಿಗೆ
ಕಲಿಕೆ ಏನು ಮಾಡೀತು ?
ಕಣ್ಣೇ ಇಲ್ಲದ ಹುಟ್ಟುಕುರುಡಗೆ
ಕನ್ನಡಿಯಿಂದೇನಾದೀತು ?

ಪ್ರಿಯವಾಕ್ಯ ಪ್ರದಾನೇನೆ ಸರ್ವೇ ತುಷ್ಯಂತಿ ಮಾನವಾಃ

ಏತದ್ ತದೈವ ವಕ್ತವ್ಯಮ್, ವಚನೇ ಕಿಮ್ ದರಿತ್ರತಾ?

ಒಳ್ಳೆಯ ಮಾತನು ಕೇಳಲು
ಎಲ್ಲರು ಸಂತಸ ಹೊಂದುವರು
ಅದಕೇ ಅಂಥಾ ಮಾತನೆ ನೀ ನುಡಿ
ಬರೀ ಮಾತಿಗೇನು ಬಡತನವು

ಕಟ್ಟಿಗೆಯಲ್ಲಿಲ್ಲ ಅವನು
ಕಲ್ಲಲಿ ಮಣ್ಣಲಿ ಅವನಿಲ್ಲ
ಮನದಲಿ ಇಹನು ಆ ಜಗದೊಡೆಯನು
ಭಾವವೆ ಎಲ್ಲಕು ಕಾರಣವು

ಕಾಕಃ ಕೃಷ್ಣಃ ಪಿಕ: ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ?

ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ 

ಕಾಗೆಯು ಕಪ್ಪು ಕೋಗಿಲೆ ಕಪ್ಪು
ಎಲ್ಲಿದೆ ಏನಿದೆ ವ್ಯತ್ಯಾಸ ?
ವಸಂತಕಾಲವು ಬಂದಿರೆ ತಾನು
ಆಗುವುದು ಖಂಡಿತ ಭಾಸ

-ಹಂಸಾನಂದಿ

Rating
Average: 3 (1 vote)

Comments