ನನ್ನ ರಮ್ಯಳ ಕಥೆ.

ನನ್ನ ರಮ್ಯಳ ಕಥೆ.

ಸುಮಾರು ದಿನಗಳಿಂದ ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಇವತ್ತ್ಯಾಕೋ ರಮ್ಯ ಬಹಳ ಕಾಡಿಸುತ್ತಿದ್ದಾಳೆ. ನನ್ನ ಕಥೆ ಹೇಳಿ ಅಕ್ಕ ಎನ್ನುತ್ತಿದ್ದಾಳೆ. ಹಾಗಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಒಂದು ಬೆಳಿಗ್ಗೆ ಎಂದಿನಂತೆ ಆಸ್ಪತ್ರೆಗೆ ಬಂದಾಗ ಒಳರೋಗಿಯಾಗಿ ಒಂದು ಪುಟ್ಟ ಬಾಲಕಿ ಅಡ್ಮಿಟ್ ಆಗಿದ್ದಳು. ಸುಮಾರು ೪-೫ ವರ್ಷದ ಆಕೆಯ ಕಣ್ಣಲ್ಲಿ ಏನೋ ಆಕರ್ಷಣೆ. ತುಸು ಎಣ್ಣೆಗೆಂಪಾದರೂ ಲಕ್ಷಣವಾಗಿದ್ದಳು. ಹರಿದ ಫ್ರಾಕಿನಲ್ಲಿಯೂ, ಬಹಳ ದಿನಗಳಿಂದ ಸ್ನಾನ ಮಾಡದಿದ್ದರೂ ಚೆಂದವಾಗಿ ಕಾಣುತ್ತಿದ್ದಳು. ಕುತೂಹಲ ತಡೆಯಲಾರದೆ ನಮ್ಮ ನರ್ಸ್ ಬಳಿ ಅವಳ ಹೆಸರೇನೆಂದು ವಿಚಾರಿಸಿದೆ ಮತ್ತು ಅಡ್ಮಿಟ್ ಆದ ಕಾರಣ ಕೇಳಿದೆ. ಆಗ ಗೊತ್ತಾಯಿತು ಅವಳ ಹೆಸರು ‘ರಮ್ಯ’. ಹಿಂದಿನ ರಾತ್ರಿ ತನ್ನ ಅಮ್ಮನೊಟ್ಟಿಗೆ ಊಟಕ್ಕೆಂದು ಹೋಟೆಲಿಗೆ ಹೋದಾಗ ಯಾವುದೋ ನೀರಿನ ಟ್ಯಾಂಕರ್ ಅವಳ ಅಮ್ಮನಿಗೆ ಗುದ್ದಿ, ರಮ್ಯಳ ಕಾಲಿನ ಮೇಲೆ ಹರಿದು ಹೋಗಿತ್ತು. ಪಾಪ! ಎಷ್ಟು ನೋವಾಗಿತ್ತೋ ಆ ಮಗುವಿಗೆ. ನಮ್ಮ ಆಸ್ಪತ್ರೆ ಹತ್ತಿರದಲ್ಲೇ ಇದ್ದ ಕಾರಣ ತುರ್ತು ಚಿಕಿತ್ಸೆಗಾಗಿ ನಮ್ಮಲ್ಲಿ ಅಡ್ಮಿಟ್ ಆಗಿದ್ದಳು. ರಾತ್ರಿಯೇ ನಮ್ಮ ortho surgeon ಬಂದು ಸರ್ಜರಿ ಮಾಡಿ ಹೋಗಿದ್ದರು. ಅವಳ ತಾಯಿ ಕೂಡ ಒಳರೋಗಿಯಾಗಿ ಅಡ್ಮಿಟ್ ಆಗಿದ್ದಳು. ಟ್ಯಾಂಕರ್ ನವನ ಮೇಲೆ ಕೇಸ್ ಕೂಡ ಸ್ಟೇಷನ್ ನಲ್ಲಿ ದಾಖಲಾಗಿತ್ತು.

ನನ್ನ ಕೆಲಸದ ಜಾಗಕ್ಕೆ ವಾಪಾಸ್ ಬಂದೆ. ಆಗ ನಮ್ಮ ರಿಸೆಪ್ಷನಿಸ್ಟ್ ಹೇಳಿದಳು. ಮೇಡಮ್, ರಮ್ಯ ಮತ್ತು ಅವಳ ತಾಯಿ ಅಡ್ವಾನ್ಸ್ ಕಟ್ಟಿಲ್ಲ ಮತ್ತು ವಿಳಾಸ ಕೂಡ ಸರಿಯಾಗಿ ಕೊಟ್ಟಿಲ್ಲ! ಅವಳ ತಾಯಿಯ ಬಳಿ ಹೋಗಿ ನಮ್ಮ ಆಸ್ಪತ್ರೆಯ ರೂಲ್ಸ್ ಪ್ರಕಾರ ಅಡ್ವಾನ್ಸ್ ಕಟ್ಟಬೇಕೆಂದು ಹೇಳಿದೆ. ಅದಕ್ಕೆ ಅವಳು ತನ್ನ ಗಂಡ ಊಟ ತರಲು ಮನೆಗೆ ಹೋಗಿದ್ದಾನೆ, ಬಂದ ಒಡನೆಯೇ ನಿಮ್ಮ ಬಳಿಗೆ ಕಳುಹಿಸುವೆನೆಂದು ಹೇಳಿದಳು. ೧-೨ ದಿವಸಗಳು ಕಳೆದರೂ ಆತ ಬರಲೇ ಇಲ್ಲ. ಆ ತಾಯಿ ತನ್ನ ಬಳಿ ಇದ್ದ ಹಣದಲ್ಲಿ ರೋಗಿಗಳ ಸಂಬಂದಿಕರೊಡನೆ ಊಟ ತರಿಸಿಕೊಳ್ಳುತ್ತಿದ್ದಳು. ನಾನು ಕೇಳಿದಾಗೊಮ್ಮೆ ಅವಳ ಗಂಡ ದುಡ್ಡಿಗಾಗಿ ಊರಿಗೆ ಹೋಗಿದ್ದಾನೆಂದು ಹೇಳುತ್ತಲೇ ಇದ್ದಳು. ೨-೩ ದಿವಸಗಳಾದ ನಂತರ ಅವಳಿಗೆ ಹುಷಾರಾದ ಮೇಲೆ ನನ್ನ ಬಳಿಗೆ ಬಂದಳು. ನನ್ನ ಗಂಡ ಯಾಕೋ ವಾಪಾಸ್ ಬರಲೇ ಇಲ್ಲವೆಂದು, ನಮ್ಮದು ಪ್ರೇಮ ವಿವಾಹವೆಂದೂ, ಮನೆಯವರ ವಿರೋದದಿಂದ ಮನೆ ಬಿಟ್ಟು ಬಂದಿದ್ದೇವೆಯೆಂದು ಏನೇನೋ ಕಥೆ ಹೇಳಿದಳು. ತವರು ಮನೆಗೆ ಹೋಗಿ ದುಡ್ಡು ತರುವೆನೆಂದು, ಅರ್ಧ ದಿವಸ ಅವಳ ಮಗುವನ್ನು ನೋಡಿಕೊಳ್ಳಬೇಕೆಂದು ಬೇಡಿಕೊಂಡಳು. ರಮ್ಯಳಿಗೆ ಇನ್ನೊಂದು ಸರ್ಜರಿ ಬಾಕಿಯಿತ್ತು. (skin grafting). ನಾನು ಸಹ ಅವಳ ಕಥೆಗೆ ಮರುಗಿ ಏನೂ ಯೋಚನೆ ಮಾಡಬೇಡವೆಂದು, ಬೇಗ ಹೋಗಿ ಬಾ ಎಂದು ನನ್ನ ಹತ್ತಿರವಿದ್ದ ಸ್ವಲ್ಪ ಹಣವನ್ನು ಇತ್ತೆ. ಮನಸ್ಸಿನಲ್ಲಿ ಏನೋ ಕಳವಳ. ಆದರೂ ಮಾನವೀಯತೆಯ ದೃಷ್ಟಿಯಿಂದ ಒಪ್ಪಿಗೆ ಇತ್ತೆ. ಆಕೆ ಅಂದು ಬರಲೇ ಇಲ್ಲ.

ಮರುದಿವಸ ನನ್ನ ಊರಿನಲ್ಲಿದ್ದ ಅಜ್ಜಿ ತೀರಿಹೋದ ಕಾರಣ ರಜೆ ಹಾಕಿ ಊರಿಗೆ ಹೋದ ನಾನು ಬಂದದ್ದು ೪-೫ ದಿವಸಗಳಾದ ಮೇಲೆ. ಇಲ್ಲೀ ನೋಡಿದರೆ ರಮ್ಯಳ ತಾಯಿ ಬಂದಿರಲೇ ಇಲ್ಲ. ಪಾಪ ಆ ಮಗು ನಮ್ಮ ಸಿಬ್ಬಂಧಿ ವರ್ಗದವರು, ರೋಗಿಗಳ ಸಂಬಂದಿಕರು ಕೊಟ್ಟ ತಿಂಡಿ, ಊಟಗಳನ್ನು ಮಾಡಿಕೊಂಡು ರಾತ್ರಿಯಾದರೆ ನಮ್ಮ ನರ್ಸ್ ಗಳೊಟ್ಟಿಗೆ ಮಲಗುತ್ತಿದ್ದಳು. ಆದರೂ ಆ ಕಣ್ಣುಗಳಲ್ಲಿ ಮಾತ್ರ ಅದೇ ಆತ್ಮವಿಶ್ವಾಸ. ಅವಳ ಸರ್ಜರಿ ಸಂಬಂದಿಕರಿಲ್ಲದ ಕಾರಣ ಮುಂದೂಡಲ್ಪಟ್ಟಿತ್ತು.

ಏನೋ ಸೆಳೆತ. ಅವಳನ್ನು ಮನೆಗೆ ಕರೆದೊಯ್ಯೋಣವೆಂದರೆ ಮನೆಯವರು ವಿರೋಧಿಸಿದರೆ ಅನ್ನುವ ಭಯ! ದಿವಸವೂ ತಿಂಡಿ, ಊಟ ಕೊಡಿಸಿದೆ. ಹೊಸ ಬಟ್ಟೆಗಳನ್ನು ಕೊಡಿಸಿದೆ. ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ತನ್ನ ಕರುಣಾಕ್ರಂದನದ ಕಥೆಯನ್ನು ಹೇಳಿ ದುಡ್ಡು ಕೇಳುತ್ತಿದ್ದನ್ನು ನಿಲ್ಲಿಸಿದೆ (ಬದುಕು ಕಲಿಸುವುದಾ ನೋಡಿ) ಮೂಳೆ ಮುರಿತದಿಂದಾಗಿ ಮತ್ತು ಕನಿಕರಕ್ಕಾಗಿ ತೆವಳುತ್ತಿದ್ದ ಅವಳನ್ನು ಗದರಿ, ಬುದ್ದಿ ಹೇಳಿ ಸರಿಯಾಗಿ ನಡೆಯುವಂತೆ ಮಾಡಿದೆ. ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ನನ್ನ ಹುಟ್ಟಿದ ದಿನದಂದು ಕರೆತಂದೆ. ನಮ್ಮ ವಕೀಲರು ಹೀಗೆ ಕರೆತಂದರೆ ತಪ್ಪಾಗುವುದೆಂದು ಮತ್ತು ಕಾನೂನಿನ ಪ್ರಕಾರ ಆಕೆಯ ತಾಯಿ ಬಂದು ಕಂಪ್ಲೇಂಟ್ ಕೊಟ್ಟರೆ ನನಗೆ ಕಷ್ಟ ಎಂದರು. ನನಗೂ ಕೂಡ ಇದು ಸತ್ಯವೆಂದು ತೋರಿತು. ಸುಮಾರು ೫-೬ ಆಶ್ರಮಗಳಿಗೆ ತಿರುಗಿದೆ. ಎಲ್ಲರೂ ಪೋಲಿಸ್ ಕೇಸ್ ಮಾಡಿದರೆ ಮಾತ್ರ ಆಶ್ರಮದಲ್ಲಿ ಸೇರಿಸಿಕೊಳ್ಳಲು ಸಾಧ್ಯವೆಂದು ಹೇಳಿದರು. ಸರಿ ಸ್ಟೇಷನ್ ಗೆ ಹೋದೆ. ನನ್ನ ಉದ್ದೇಶವಿದ್ದಿದ್ದು ಕಂಪ್ಲೇಂಟು ಕೊಟ್ಟು ಅವಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು. ಆದರೆ ಅಲ್ಲಿ ಹೋದಾಗ ನಡೆದಿದ್ದೇ ಬೇರೆ. ಅವಳನ್ನು ವಾರಸುದಾರರಿಲ್ಲದ ಕಾರಣ ಅವಳನ್ನು ಬಾಲಗೃಹದಲ್ಲಿ ಸೇರಿಸಬೇಕೆಂದರು. ಎದೆ ಧಸಕ್ಕೆಂದಿತು. ಇಷ್ಟು ಚುರುಕಾದ ಹುಡುಗಿಯನ್ನು ಬಾಲಾಪರಾಧಿಗಳ ಮನೆಯಲ್ಲಿ ಸೇರಿಸಿದರೆ, ಅವಳ ಗತಿಯೇನು? ಅವಳಿಗೂ ಪರಿಸ್ಥಿತಿಯ ಅರ್ಥವಾಗಿತ್ತು. ಅಂಗಲಾಚಿ ಬೇಡಿಕೊಂಡಳು. ಅಕ್ಕಾ! ನನ್ನನ್ನು ಇಲ್ಲಿ ಸೇರಿಸಬೇಡಿ. ಬೇಕಿದ್ರೆ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತೇನೆ, ಇಲ್ಲದಿದ್ದರೆ ನಿಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೇನೆ. ದಯವಿಟ್ಟು ನನ್ನನ್ನು ಇಲ್ಲಿಗೆ ಸೇರಿಸಬೇಡಿ. ನಾನು ಅವಳಿಗೆ ಹುಸಿ ಅಶ್ವಾಸನೆಯಿತ್ತೆ. ನಿನ್ನನ್ನು ಸ್ವಲ್ಪದಿನಗಳ ಮಟ್ಟಿಗೆ ಇಲ್ಲಿ ಬಿಡುತ್ತೇನೆಂದು, ಮತ್ತೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನನ್ನ ಮಾತನ್ನು ನಂಬಿದ ಆ ಮಗು ತಲೆ ಬಗ್ಗಿಸಿ ಹೋಗುವುದನ್ನು ಕಂಬನಿ ತುಂಬಿದ ಕಂಗಳಿಂದ ನೋಡಿದೆ. ಆಮೇಲೆ ೧-೨ ದಿವಸಗಳಾದ ಮೇಲೆ ರಿಮ್ಯಾಂಡ್ ಹೋಮ್ಗೆ ಕರೆ ಮಾಡಿದೆ. ಅವರು ನಾನು ವಾರಸುದಾರಳಲ್ಲದ ಕಾರಣ ನನ್ನ ಹತ್ತಿರ ಅವಳನ್ನು ಮಾತನಾಡಲು ಬಿಡಲಿಲ್ಲ ಮತ್ತು ಈಗ ತಾನೇ ಅಲ್ಲಿಗೆ ಅಡ್ಜಸ್ಟ್ ಆಗುತ್ತಿದ್ದಾಳೆಂದು, ಮತ್ತೆ ಮತ್ತೆ ಕರೆ ಮಾಡಿ ತೊಂದರೆ ಮಾಡಬೇಡಿರೆಂದು ಹೇಳಿಬಿಟ್ಟರು. ಅವಳಿಗೆಂದು ತಂದಿದ್ದ ಬಟ್ಟೆಗಳು, ಪುಸ್ತಕಗಳು ಎಲ್ಲಾ ನಮ್ಮನೆಯಲ್ಲುಳಿದಿತ್ತು. ಆ ಬಟ್ಟೆಗಳನ್ನು ಹಾಕಿಕೊಂಡಾಗ ಆ ಮಗುವಿನ ಮುಖವನ್ನು ನೋಡಿದರೆ ಆ ಸೌಂದರ್ಯವನ್ನು ಏನೆಂದು ಬಣ್ಣಿಸಲೀ? ಇದಾವುದನ್ನು ಅವಳಿಗೆ ಕೊಟ್ಟು ಕಳುಹಿಸಲಾಗಲಿಲ್ಲ. ಈಗೆಲ್ಲಿದ್ದಾಳೋ ಗೊತ್ತಿಲ್ಲ.

ಈಗಲೂ ಅವಳ ಆಕ್ರಂದನ ನನ್ನನ್ನು ಬಡಿದೆಬ್ಬಿಸುತ್ತದೆ. ನಾನೇನೂ ಮಾಡಲಿಕ್ಕಾಗಲಿಲ್ಲವಲ್ಲ ಎನ್ನುವ ಅಪರಾಧಿ ಭಾವನೆ ನನ್ನನ್ನು ಕಾಡಿಸುತ್ತದೆ.

ಎಲ್ಲೇ ಇರು, ಸುಖವಾಗಿರು ಕಂದಾ.

Rating
No votes yet

Comments