ಸಕ್ಕರೆ ಮೇಲ್ಯಾಕೀ ಅಕ್ಕರೆ

ಸಕ್ಕರೆ ಮೇಲ್ಯಾಕೀ ಅಕ್ಕರೆ

ಸಕ್ಕರೆ ಎಷ್ಟೊಂದು ಸಿಹಿ ಅಲ್ವೇ? ಯಾರೀಗ್ತಾನೆ ಈ ಸಕ್ಕರೆ ಮತ್ತು ಇದರಿಂದ ತಯಾರಿಸಿದ ಸಿಹಿ ತಿಂಡಿಗಳ ಮೇಲೆ ಪ್ರೀತಿಯಿಲ್ಲ ಹೇಳಿ| ನಮ್ಮೆಲ್ಲರ ಅಚ್ಚುಮೆಚ್ಚು ಈ ಸಕ್ಕರೆ. ನಾವೆಲ್ಲ ಇಷ್ಟೊಂದು ಪ್ರೀತಿಸುವ ಈ ಸಕ್ಕರೆ ನಮಗೇನು ಕೊಡಬಹುದೆಂದು ನೋಡಿದರೆ ದಂಗು ಬಡಿಯದೆ ಇರಲಾರದು|

೧. ಸಕ್ಕರೆ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಸೂಕ್ಷ್ಮಜೀವಿಗಳ ವಿರುದ್ದ ಹೋರಾಡುವ ಸಾಮರ್ಥ್ಯವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ದೇಹದಲ್ಲಿ ವಿಷಾಂಶವನ್ನೂ ಹೆಚ್ಚಿಸುತ್ತದೆ.

೨. ದೇಹದಲ್ಲಿನ ಖನಿಜಗಳ ಪರಸ್ಪರ ಸಂಬಂಧಗಳನ್ನು ಹಾಳುಗೆಡಹುತ್ತಾ ಕ್ಯಾಲ್ಶಿಯಂ, ಮ್ಯಾಗ್ನೇಶಿಯಂ ನಂತಹ ಸೂಕ್ಶ್ಮ ಪೋಷಕಾಂಶಗಳನ್ನು ಹೀರುವ ಶಕ್ತಿಯನ್ನೇ ಕುಂದಿಸುತ್ತದೆ.

೩. ಅಂತೆಯೇ ದೇಹದ ಸಂರಕ್ಷಣೆಗಾಗಿ ಸೃಷ್ಟಿಯಾಗುವ ಕಿಣ್ವಗಳ ಮತ್ತು ರಸಗಳ ಕಾರ್ಯಕ್ಷಮತೆಯನ್ನು ಮಂದಗೊಳಿಸುತ್ತಾ ಅವುಗಳ ಕಾರ್ಯವಿಧಾನವನ್ನು ಏರುಪೇರು ಮಾಡಿಬಿಡುತ್ತದೆ.

೪. ಸಕ್ಕರೆ ಎಂತಹ ಧೂರ್ತನೆಂದರೆ ದೇಹದ LDL, triglycerides ಗಳನ್ನು ಹೆಚ್ಚಿಸುವುದಲ್ಲದೆ, ದೇಹಕ್ಕೆ ಅವಶ್ಯಕವಾದ HDL ಅನ್ನು ಕ್ಷೀಣಿಸುತ್ತದೆ.

೫. ಹೃದಯದ ಮಾಂಸಖಂಡಗಳನ್ನು ದುರ್ಬಲಗೊಳಿಸುತ್ತ ಅನೇಕ ತರಹದ ಹೃದಯಸಂಬಂಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

೬. ದೇಹದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಲಿವರ್, ಪ್ಯಾಂಕ್ರಿಯಾಸ್, ಕರುಳು ಮತ್ತು ಇತರ ಅಂಗಗಳಿಗೆ ಹಾನಿಯುಂಟುಮಾಡುತ್ತದೆ ಮತ್ತು ದೇಹದ ಶಕ್ತಿಯ ಪ್ರಸಾರಕ್ಕೆ ಅತ್ಯಮೂಲ್ಯವಾಗಿ ಅವಶ್ಯವಿರುವ ಇನ್ಸುಲಿನ್ನಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಕ್ಷಾರೀಯ ಗುಣವಿರುವ ಜೊಲ್ಲನೂ ಆಮ್ಲೀಯವಾಗಿ ಮಾಡುವ ಸಾಮರ್ಥ್ಯವಿರುವ ಸಕ್ಕರೆ ದೇಹದ ಜೀರ್ಣಪಥವನ್ನು ಆಮ್ಲೀಯಮಾಡಿಬಿಡುತ್ತದೆ. ಜೊತೆಗೆ ದೇಹದಲ್ಲಿ ಆಹಾರ ಸಂಚಾರದ ವ್ಯವಸ್ತೆಯನ್ನು ಮಂದಗೊಳಿಸುತ್ತದೆ.

೭. ಮಾನಸಿಕವಾಗಿ ಸಮಸ್ಯಗಳನ್ನು ತಂದುಹಾಕುವ ಸಾಮರ್ಥ್ಯವೂ ಸಕ್ಕರೆಗಿದೆ. ತಿನ್ನುತ್ತಲೇ ಇರೋಣವೆಂದು ಚಟವನ್ನು ಹಚ್ಚಿಸುವ ಕಲೆಯೂ ಸಕ್ಕರೆಗಿದೆ.

೮. ದೇಹದ ಬೆಳವಣಿಗೆ, ಪೋಷಣೆ, ರಕ್ಷಣೆಗೆ ಅತ್ಯವಶ್ಯಕವಾದ ಪ್ರೋಟೀನ್, ವಿಟಮಿನ್ ಗಳ ಕಾರ್ಯಕ್ಷಮತೆಯನ್ನು ಹಾಳುಗೆಡವುತ್ತದೆ.

೯. ಹೀಗೇ ಮೆದುಳು, ಚರ್ಮ ಮತ್ತು ಇತರ ಅಂಗಗಳನ್ನು ಹಾಳುಗೆಡಹುತ್ತದೆ.

೧೦. ಕೆಲವು ಸಂಶೋಧನೆಗಳ ಪ್ರಕಾರ ಪೋಲಿಯೋಗೂ ಸಕ್ಕರೆಗೂ ಬಹಳ ಹತ್ತಿರದ ನಂಟಿದೇ.

ಪ್ರಾಯಶ: ದೇಹದ ಯಾವುದೇ ಒಂದು ಅಂಗಕ್ಕೂ ಸಕ್ಕರೆಯಿಂದ ಲಾಭವಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಬದಲಿಗೆ ಸ್ವತ: ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಸಕ್ಕರೆ ತನ್ನನ್ನು ಜೀರ್ಣಿಸಿಕೊಳ್ಳಲು ದೇಹದ ಪೌಷ್ಟಿಕಾಂಷವನ್ನು ಲೂಟಿಮಾಡುತ್ತದೆ. ಹೀಗಾದಾಗ ನೀವೇ ಹೇಳಿ ದೇಹ ಕೃಷವಾಗದೇಯಿರಲು ಸಾಧ್ಯವೇ?

ಈ ಮೇಲಿನ ವಿಷಯಗಳಾವುವೂ ಕಪೋಲಕಲ್ಪಿತವಲ್ಲ ಹಾಗೂ ಭಯ ಹುಟ್ಟಿಸುವ ಉದ್ದೇಶದಿಂದ ಬರೆದಿದ್ದೂ ಅಲ್ಲ. ಜಗತ್ತಿನ ಹಲವಾರು ಕಡೆಗಳಲ್ಲಿ ವೈಜ್ಞಾನಿಕವಾಗಿ ದಾಖಲಾಗಿರುವಂಥಾದ್ದು.

ಈಗ ಹೇಳಿ "ಸಕ್ಕರೆ ಮೇಲ್ಯಾಕೀ ಅಕ್ಕರೆ" |?| ಇದರ ಭಯಾನಕ ಕಥೆಯನ್ನು ಹೇಳುತ್ತಹೊರಟರೆ ಒಂದು ಪುಸ್ತಕವನ್ನೇ ಮಾಡಬಹುದು. ವಿಪರ್ಯಾಸವೆಂದರೆ ಚಾಕೊಲೇಟ್, ಬಿಸ್ಕತ್, ಹಣ್ಣಿನರಸ, ತಂಪುಪಾನೀಯಗಳು, ಇವತ್ತಿನ ೯೯% ಭಾಗ ಎಲ್ಲಾ ಸಿಹಿತಿಂಡಿಗಳು, ಕಾಫಿ, ಚಹಾ ಎಲ್ಲದರಲ್ಲೂ ಈ ಭಯಾನಕ ಸಕ್ಕರೆಯದ್ದೇ ತಾಂಡವ|| ಈ ಸಕ್ಕರೆಯ ಸಿಹಿ ಬೆಲ್ಲ, ಜೇನು, ಹಣ್ಣುಗಳಲ್ಲಿರುವಂತಹ ಸಿಹಿಯಲ್ಲ. ಈ ಅಡ್ಡಪರಿಣಾಮಗಳೆಲ್ಲ ಶುದ್ಧೀಕರಿಸಿದ ಬಿಳಿಯ ಸಕ್ಕರೆಯ ಪ್ರಭಾವ, ನೈಸರ್ಗಿಕವಾಗಿ ಸಿಗುವ ಸಿಹಿಯು ಒಳ್ಳೇಯದೇ.

ಇದ್ಯಾಕೆ ಈ ನಿಧಾನವಿಷವಾದ ಬಿಳಿ ಸಕ್ಕರೆ ಇಷ್ಟೊಂದು ಕುಖ್ಯಾತ? ನಮಗೆಲ್ಲ ಗೊತ್ತಿರುವಂತೆ ಸಕ್ಕರೆಯು ಕಬ್ಬಿನಿಂದ ತಯಾರಾಗುವುದಲ್ಲವೆ? ಆ ಭಗವಂತ ಕೊಟ್ಟ ಕಬ್ಬು ಇಷ್ಟೊಂದು ಕೆಡಕುಮಾಡುತ್ತದೆಯೇ? ಎಂಬ ಪ್ರಶ್ನೆಗಳು ಮೂಡುವುದು ಸಹಜವೆ. ಖಂಡಿತಾ ಆ ಭಗವಂತನೇನು ನಿಷ್ಟುರನಲ್ಲ. ಕಬ್ಬು ಬಹಳಷ್ಟು ಸತ್ವಭರಿತ. ಕಬ್ಬಿನಲ್ಲಿರುವ ಸತ್ವವನ್ನೆಲ್ಲಾ ಹಿಂಡಿ ಕೊನೆಗುಳಿಯುವ ಬರೀ ಪಿಷ್ಠ ಪದಾರ್ಥವೇ ಬಿಳಿ ಸಕ್ಕರೆ. ಸಕ್ಕರೆ ಕಾರ್ಖಾನೆಗಳಿಂದ ಎಸೆಯಲ್ಪಡುವ ಕಸದಲ್ಲಿಯೇ ಬಹಳಷ್ಟು ಪೌಷ್ಟಿಕಾಂಶಗಳಿರುತ್ತದೆ ಎಂಬ ಸತ್ಯವನ್ನು ಹೇಳಿದರೆ ಆಶ್ಚರ್ಯವಾಗಬುಹುದು ಹಾಗಿದ್ದರೆ ಈ ಪಿಷ್ಠಿದಿಂದ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿ ನಮಗೆ ಬೇಡವೆ? ಸಿಹಿ ತಿನ್ನುವುದೇ ಬೇಡವೆ? ಎಲ್ಲವೂ ಬೇಕು. ಆದರೆ ಈ ಬಿಳಿ ಸಕ್ಕರೆಯಲ್ಲ ಮತ್ತು ಇದರಿಂದ ತಯಾರು ಮಾಡಿದಂತವಲ್ಲ. ಇದೇ ಕಬ್ಬಿನಿಂದ ತಯಾರುಮಾಡುವ ಬೆಲ್ಲ ಕಾಕಂಬಿ ಬಳಸಬಹುದಲ್ಲ. ಬಿಳಿ ಸಕ್ಕರೆಯಂತೆ ಇವು ಸತ್ವಹೀನವಲ್ಲ. ಕಬ್ಬಿನಲ್ಲಿರುವ ಸತ್ವಗಳೆಲ್ಲಾ ಇದರಲ್ಲಿದೆ. ಭಾರತದಲ್ಲಿ ಈ ಬಿಳಿ ಸಕ್ಕರೆ ಎಂಬ ವಿಷ ಆಕ್ರಮಣ ಮಾಡಿದ್ದು ಬ್ರಿಟೀಷರೊಂದಿಗೆ. ಅದಕ್ಕಿಂತ ಮೊದಲು ಬೆಲ್ಲ ಕಾಕಂಬಿತರಹದ ಪೌಷ್ಠಿಕ ವಸ್ತುಗಳನ್ನೇ ಬಳಕೆಯಲ್ಲಿದ್ದುದು. ಇದರಿಂದಾಗಿಯೇ ನಮ್ಮ ಪೂರ್ವಿಕರೆಲ್ಲ ನಮಗಿಂತ ಆರೋಗ್ಯವಾಗಿದ್ದರು.

ಹಾಗಿದ್ದರೆ ಇಂದಿನಿಂದಲೇ ಸಕ್ಕರೆಯ ಬಳಕೆಯನ್ನು ನಿಲ್ಲಿಸಬಹುದಲ್ಲವೇ. ಆದರೆ ಇಲ್ಲೊಂದು ಕಿವಿಮಾತು. ಬಣ್ಣದ ಆಸೆಗೆ ಬಲಿಯಾಗಿ ಬಿಳಿ ಬೆಲ್ಲದ ಮೊರೆಹೋಗಬೇಡಿ. ನೈಸರ್ಗಿಕವಾಗಿ ಬೆಲ್ಲದ ಬಣ್ಣ ಕಪ್ಪೆ. ಅದನ್ನು ಬಿಳಿಮಾಡಲು ಬಳಸುವುದು ನಾವು ದಿನನಿತ್ಯ ಬಟ್ಟೆ ಪಾತ್ರೆ ತೊಳೆಯಲು ಬಳಸುವ ಪುಡಿಯನ್ನೆ ಎಂಬುದು ಕಹಿ ಸತ್ಯ||

ತ್ರಿವಳಿ ವಿಷವೆಂದು ಪ್ರಪಂಚದಾದ್ಯಂತ ಪ್ರಖ್ಯಾತವಾಗಿರುವುದರಲ್ಲಿ ಈ ಸಕ್ಕರೆಯೊಂದಿಗೆ ಮೈದ (ಮತ್ತು ಇದೇ ಸಾಇಗೆ ಸೇರುವ ಇತರ ಕೆಲ ಹಿಟ್ಟುಗಳು) ಮತ್ತು ಉಪ್ಪು ಸೇರುತ್ತದೆ. ಧ್ಯಾನ್ಯಗಳನ್ನು ಪರಿಷ್ಕರಿಸಿ ಅದರ ಹೊಟ್ಟನ್ನು ಬೇರ್ಪಡಿಸಿ ಉಳಿಯುವ ವಸ್ತುವಿನ ಹಿಟ್ಟೆಲ್ಲಾ ಮೈದಾ ಜಾತಿಗೆ ಸೇರುತ್ತದೆ. ಇವುಗಳ ಕಥೆಕೂಡ ಸಕ್ಕರೆಯಂತೆಯೇ ಭಯಾನಕ. ಇದಕ್ಕೂ ಪರಿಹಾರವಿದೆ - ಗೋದಿ ಹಿಟ್ಟು ಬಳಸುವ ಹಾಗೆ ಇಡೀ ಧಾನ್ಯದ ಹಿಟ್ಟನ್ನೇ ಬಳಸಬಹುದು, ಹೊಟ್ಟಿರುವ ಅಕ್ಕಿಯನ್ನೇ ಬಳಸುವುದು ಇತ್ಯಾದಿ.

ಈ ಬಿಳಿ ವಿಷಗಳಿಂದ ದೂರವಾಗಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಚಿಂತನೆ ಹಾಗು ಸಂಕಲ್ಪ ಮಾಡೋಣವೇ? ಪ್ರಕೃತಿಯಲ್ಲಿ ಕೇವಲ ಪಿಷ್ಠ, ಪ್ರೋಟೀನ್, ವಿಟಮಿನ ನಂತಹ ಯಾವುದೇ ಒಂದೇ ಘಟಕವನ್ನು ಎಲ್ಲೂ ಸೃಷ್ಟಿಯಾಗಿಲ್ಲ. ಪರಸ್ಪರ ಹೊಂದಾಣಿಕೆಯಾಗುವ ಮತ್ತು ಅವಶ್ಯಕವಾಗಿರುವ ಖನಿಜ, ಲವಣ, ನಾರು ಇನ್ನಿತರ ಅಂಶಗಳನ್ನೂ ಸೊಗಸಾಗಿ ಪೋಣಿಸಿ ಬೆಸೆಯಲಾಗಿರುತ್ತದೆ. ವೈಜ್ಞಾನಿಕತೆಯ ನೆಪದಲ್ಲಿ ಅವನ್ನೆಲ್ಲ ತುಂಡು ತುಂಡುಮಾಡಿ ಬಳಕೆಮಾಡುವಲ್ಲಿ ಎಲ್ಲೋ ಕೇವಲ ವ್ಯವಹಾರದ ದುಷ್ಚಕ್ರ ಅಡಕವಾಗಿದೆ ಎಂದು ಇಣುಕಿ ನೋಡಬೇಕಾಗುತ್ತದೆ.

ಕೃಪೆ:
"ಅಭ್ಯುದಯ"
ನೊ.೮೩, ಧರಿತ್ರಿ, ೧೪ನೇ ಅಡ್ಡರಸ್ತೆ, ೪ನೇ ಮುಖ್ಯ ರಸ್ತೆ,
ನೃಪತುಂಗನಗರ, ನಾಗರಭಾವಿ, ಬೆಂಗಳೂರು - ೫೬೦೦೭೨.
ದೂ: ೯೯೭೨೬೭೯೭೨೬, ೯೬೩೨೦೨೮೮೪೦, ೯೪೪೮೮೨೫೮೭೬, ೯೯೪೫೯೩೪೫೨೧, ೯೪೪೮೩೫೬೩೯೧, ೯೮೪೫೩೦೪೮೪೬, ೯೪೪೮೮೩೯೬೪೩

Rating
No votes yet

Comments