ಪೋರ್ಟ್ರೈಟ್ ೧

ಪೋರ್ಟ್ರೈಟ್ ೧

ಪೋರ್ಟ್ರೈಟ್ ಎಂದರೆ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದು ಕೇವಲ ಮುಖ ಅಥವಾ ಭುಜವನ್ನೊಳಗೊಂಡಂತೆ ತೆಗೆದೆ ಜನರ ಚಿತ್ರ. ಇಲ್ಲಿ ಪೋರ್ಟ್ರೈಟ್ ಎಂದರೆ ಕೇವಲ ಮುಖದ ಕ್ಲೋಸ್ ಅಪ್, ದೇಹದ ಮೇಲ್ಗಡೆಯ ಚಿತ್ರಕ್ಕಷ್ಟೆ ಸೀಮಿತವಾಗಿರಿಸದೆ ಇಡೀ ದೇಹದ ಮತ್ತು ವಾತಾವರಣವನ್ನೂ ಒಳಗೊಳ್ಳುವಂತೆ ವಿಸ್ತರಿಸಿದ್ದೇನೆ. ಈ ಬಗೆಯ ಚಿತ್ರ ತೆಗೆಯಲು ಹಲವು ಛಾಯಾಗ್ರಾಹಕರ ಅಭಿಪ್ರಾಯ ಭಿನ್ನವಾದರೂ, ಕೆಲವು ಸಾಮಾನ್ಯ ವಿಷಯವನ್ನು ಗಮನದಲ್ಲಿರಿಸಿ ಅದರ ಮೂಲಕ ನಮ್ಮ ಚಿತ್ರವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಚಿತ್ರಗಳಲ್ಲಿ ಹಿನ್ನೆಲೆಯ ಪಾತ್ರ


ಪೋರ್ಟ್ರೈಟ್ನಲ್ಲಿ ಹಿನ್ನೆಲೆ ಸರಳವಾಗಿದ್ದಷ್ಟೂ, ವೀಕ್ಷಕರ ದೃಷ್ಟಿ ಹಿನ್ನೆಲೆಯ ಗೊಂದಲದಲ್ಲಿ ಕಳೆದು ಹೋಗದೇ, ನಿಮ್ಮ ವಿಷಯದ ಮೇಲೆ ಕೇಂದ್ರೀಕೃತವಾಗುವುದು. ಮೇಲಿನ ಚಿತ್ರದಲ್ಲಿ ಬಂಡೆ ಹತ್ತುತ್ತಾ ಇರೋ ಹುಡುಗಿ ವಿಷಯವಾಗಿದ್ದರೂ, ಅವಳ ಭುಜಕ್ಕೆ ತಾಗಿಕೊಂಡಂತೆ ಇರುವ ಮರದ ಕಾಂಡ, ವೀಕ್ಷಕರ ದೃಷ್ಟಿ ಅದರೆಡೆಗೆ ಸೆಳೆಯುವಂತೆ ಮಾಡುತ್ತದೆ. ಆದ್ದರಿಂದ ಪೋರ್ಟೈಟ್ ತೆಗೆಯುವ ಮೊದಲು ಹಿನ್ನೆಲೆಯನ್ನು ಗಮನಿಸಬೇಕಾದ್ದು ಅವಶ್ಯಕ. ದೇಹಕ್ಕೆ ಅಂಟಿಕೊಂಡಂತೆ ಇರುವ ಮರದ ಕೊಂಬೆ, ದೇಹದ ಭಾಗ ಹಾದುಹೋಗುವ ಎಲ್ಲೆ (horizon) ನಮ್ಮ ಚಿತ್ರದ ಅಂದಗೆಡಿಸುತ್ತದೆ. ಅಪಾರ್ಚರ್ ನೆರವಿನಿಂದ ಡೆಪ್ತ್ ಆಫ್ ಫೀಲ್ಡ್ ಕಡಿಮೆ ಮಾಡಿ ಹಿನ್ನೆಲೆಯನ್ನು ಅಸ್ಪಷ್ಟಗೊಳಿಸುವುದರ ಮೂಲಕ ಕೂಡ, ನಿಮ್ಮ ವಿಷಯವನ್ನು ಎದ್ದು ಕಾಣುವಂತೆ ಮಾಡಬಹುದು. ಕೇವಲ ಅಪಾರ್ಚರ್ ಅಲ್ಲದೆ ವಿಷಯಕ್ಕೂ ಹಿನ್ನೆಲೆಗೂ ಇರುವ ದೂರ ಮತ್ತು ಕ್ಯಾಮರಾದ ಫೋಕಲ್ ಲೆಂತ್ ಕೂಡ ಈ ಅಸ್ಪಷ್ಟಗೊಳಿಸುವ ಅಂಶದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಫೋಕಲ್ ಲೆಂತ್ (ಜೂಮ್) ಜಾಸ್ತಿಯಾದಂತೆ ಮತ್ತು ವಿಷಯಕ್ಕೂ ಹಿನ್ನೆಲೆಗೂ ನಡುವಿನ ಅಂತರ ಜಾಸ್ತಿಯಾದಂತೆಯೂ ಅಸ್ಪಷ್ಟದ ಪರಿಣಾಮ ಹೆಚ್ಚಿರುತ್ತದೆ. ಕೇವಲ ಡೆಪ್ತ್ ಆಫ್ ಫೀಲ್ಡ್ ಅಲ್ಲದೆ ಗೋಡೆಯಂತಹ ಸಮಾನವಾಗಿ ಹರಡಿದ ಹಿನ್ನೆಲೆಯನ್ನು ಕೂಡ ಬಳಸಿ ಪರಿಣಾಮಕಾರಿಯಾದ ಪೋರ್ಟ್ರೈಟ್ ಪಡೆಯಬಹುದು.

ಹಾಗೆಯೇ ಈ ಕೆಳಗಿನ ಚಿತ್ರದಲ್ಲಿ ತಲೆಯನ್ನು ಹಾದು ಹೋಗುತ್ತಿರುವ ಸಮುದ್ರದ ಎಲ್ಲೆ ಚಿತ್ರದ ಅಂದಗೆಡಿಸಿದ್ದನ್ನು ಗಮನಿಸಬಹುದು.

ಕ್ಲೋಸ್-ಅಪ್ ಚಿತ್ರಗಳು


ಜನರ ಚಿತ್ರ ತೆಗೆಯುವಾಗ ಜೂಮ್ ಬಳಸಿ ಫ್ರೇಮನ್ನು ಬರೀ ಮುಖದಿಂದ ತುಂಬಿಸುವುದರ ಮೂಲಕ ಕ್ಲೋಸ್ ಅಪ್ ಚಿತ್ರಗಳನ್ನು ಪಡೆಯಬಹುದು . ಸಾಮಾನ್ಯವಾಗಿ ನಾವು ಜನರ ಚಿತ್ರ ತೆಗೆಯಬೇಕಾದಲ್ಲಿ ಫ್ರೇಮಿನಲ್ಲಿ ಕೇವಲ ೧೦% ಗಳಷ್ಟು ಉಪಯೋಗಿಸಿ, ವಿಷಯವನ್ನು ಮಧ್ಯದಲ್ಲಿ ಕೂರಿಸಿ ಉಳಿದ ಜಾಗವನ್ನು ಖಾಲಿ ಬಿಡುವುದು ವಾಡಿಕೆ. ಈ ರೂಢಿಯನ್ನು ಮುರಿದು ಕ್ಲೋಸ್ ಅಪ್ ಚಿತ್ರಗಳನ್ನು ತೆಗೆಯುವುದರ ಮೂಲಕ ಜನರ ಮುಖದಲ್ಲಿನ ಹೆಚ್ಚಿನ ವಿವರ ಸೆರೆ ಹಿಡಿಯಬಹುದು.
ಇಲ್ಲಿ ಬೆಳಕಿನ ದಿಕ್ಕು ಚಿತ್ರದ ಮೇಲೆ ತುಂಬಾ ಪರಿಣಾಮ ಬೀರುವುದರಿಂದ, ನಮ್ಮ ಆದ್ಯತೆಗನುಗುಣವಾಗಿ ಚಿತ್ರ ತೆಗೆಯಬಹುದು. ಬೆಳಿಗ್ಗಿನ ಮತ್ತು ಸಂಜೆಯ ಹೊಂಬೆಳಕು ಚರ್ಮಕ್ಕೆ ನೈಜತೆಯ ಬಣ್ಣ ಕೊಡುತ್ತದೆ. ನೇರವಾಗಿ ಬೀಳುವ ಬೆಳಕು ಉತ್ತಮವಾದರೂ ಮುಖದಲ್ಲಿ ಸುಕ್ಕು, ನೆರಿಗೆಯನ್ನು ಸೆರೆಹಿಡಿಯಲು ಮುಖವನ್ನು ಸವರಿಕೊಂಡು ಹೋಗುವಂತೆ ಅಡ್ಡದಿಂದ ಬರುವ ಬೆಳಕನ್ನು ಉಪಯೋಗಿಸಬಹುದು. ಸೂರ್ಯ ನೆತ್ತಿಯ ಮೇಲಿದ್ದಾಗ ಕಣ್ಣಿನ ಸುತ್ತ ಏರ್ಪಡುವ ನೆರಳನ್ನು ತಡೆಯಲು ಫ್ಲಾಷ್ (ಫಿಲ್ ಫ್ಲಾಷ್) ಬಳಸಬಹುದು.

ಚೌಕಟ್ಟು


ಹೇಗೆ ಚಿತ್ರ ತೆಗೆದು ಅದಕ್ಕೊಂದು ಚೌಕಟ್ಟು ಹಾಕಿಸಿ ಮನೆಯ ಗೋಡೆಗೆ ನೇತು ಹಾಕಿದರೆ ಚಿತ್ರದ ಅಂದ ಹೆಚ್ಚುವುದೋ ಹಾಗೆಯೇ ಚಿತ್ರ ತೆಗೆಯುವಾಗಲೇ ದೊರಕಬಹುದಾದ ನೈಸರ್ಗಿಕ ಚೌಕಟ್ಟುಗಳನ್ನು ಬಳಸಿ ನಿಮ್ಮ ಚಿತ್ರವನ್ನು ಪರಿಣಾಮಕಾರಿಯಾಗಿ ತೆಗೆಯಬಹುದು. ನೀವು ತೆಗೆಯಹೊರಟ ಚಿತ್ರವನ್ನು ಪೂರಕವಾದ ಇನ್ನೊಂದು ವಿಷಯದೊಳಗೆ ಬಂಧಿಸಿ ಚೌಕಟ್ಟನ್ನು ಪಡೆಯಬಹುದು. ಬಾಗಿಲು, ಕಿಟಕಿ, ಚಿಕ್ಕ ಕಂಡಿಯಂತಹ ಪೂರಕ ವಿಷಯಗಳು ನಿಮಗೆ ಈ ಬಗೆಯ ಚೌಕಟ್ಟನ್ನು ಒದಗಿಸುತ್ತವೆ. ಚಿತ್ರದಲ್ಲಿ ಚೌಕಟ್ಟನ್ನು ಬಳಸುವುದರಿಂದ ಚಿತ್ರಕ್ಕೆ ಇನ್ನೊಂದು ಆಯಾಮ ಸಿಕ್ಕಿ, ಆಳ ಹೆಚ್ಚುವುದಲ್ಲದೆ ವೀಕ್ಷಕರ ದೃಷ್ಟಿ ಚೌಕಟ್ಟಿನ ಒಳಗೆ ಹಿಡಿದಿಡಲು ಸಹಾಯ ಮಾಡುತ್ತದೆ. ಮೇಲಿನ ಚಿತ್ರ ಕಂಬವನ್ನು ಚೌಕಟ್ಟಾಗಿ ಉಪಯೋಗಿಸಿ ತೆಗೆದದ್ದು.

ಈ ಕೆಳಗಿನ ಚಿತ್ರದಲ್ಲಿ ಬಾಗಿಲನ್ನು ಚೌಕಟ್ಟಾಗಿ ಉಪಯೋಗಿಸಿದ್ದೇನೆ.

ಮುಂದುವರೆಯುವುದು...

Rating
No votes yet

Comments