ಹೀಗೇ ಸುಮ್ಮನೆ ಒಂದು ಕವನ

ಹೀಗೇ ಸುಮ್ಮನೆ ಒಂದು ಕವನ

ಕೇಳಿಸಿಕೋ ಗೆಳೆಯ
ನೀನಿರಬಹುದು... ನಿನ್ನಮ್ಮನ ಮಡಿಲಲ್ಲಿ
ಕಳೆದ ಮುವ್ವತ್ತು ವಸಂತ
ಇನ್ನಾಯ್ತು ಬಿಡು, ನಾನು ನಿನಗೆಂದೇ
ಬಿಟ್ಟು ಬಂದಿದ್ದೇನೆ ನನ್ನಪ್ಪ ,ನನ್ನಮ್ಮ ,
ನನ್ನ ಹೊಲ, ಮನೆ, ನನ್ನೆಲ್ಲ ಬಂಧು ಬಳಗ
ಈಗಷ್ಟೇ ಗೂಡು ಬಿಟ್ಟ ಹಕ್ಕಿಯಂತೆ
ಗೊತ್ತಿಲ್ಲ!
ಕಲಿಯುವೆನೊ ಹಾರಲು
ಬಾಳ ಶರಧಿಯಲಿ ಈಜಲು
ಬಿದ್ದೆಬಿಡುವೆನೊ ಹಾಗೆ ಹೆಜ್ಜೆಯನ್ನರಿಯದೆ?
ಸಜ್ಜುಗೊಳುವೆನೊ ಕಾಣೆ ಬಾಳುವೆಯ ಹಾದಿಗೆ !
ಇದ್ದಿದ್ದಷ್ಟೇ ಗೊತ್ತು ಕೂಪ ಮಂಡೂಕದ ಹಾಗೆ
ಮನೆಯ ಬಿಳಿ ಗೋಡೆಗಳೇ
ಸಂಗಾತಿಯಾಗಿದ್ದವೆನಗೆ
ಅದಕೆ ಬೇಡುವೆ ಒಲವೆ
ಈ ಅನಂತ ಜೀವನದ ಬಾನಿನಲಿ
ಕಲಿಸಿಬಿಡು ಹಾರಲು ನಿನ್ನ ಜೊತೆ ಸಾಗಲು
ಬದುಕಿರಲೇಬೇಕೆಂಬ ಮಹದಾಸೆಗೊಂದಷ್ಟು
ಆಹಾರ ನೀಡು, ನೆತ್ತಿ ನೇವರಿಸಿ,
ಹೊಸದಾದ ಗೂಡಿನಲಿ ಬೆಚ್ಚನೆಯ ಬದುಕ ಕೊಡು
ಯಾಕೆ ಗೊತ್ತೆ ಗೆಳೆಯ ?
ನೀನು ಬದುಕಿರುವಷ್ಟು ದಿನ
ಅಥವಾ ಅವರು ಅವರು ಜೀವಿಸಿರುವ ಅಷ್ಟೂ ಹೊತ್ತು
ಪೊರೆಯುವರು ನಿನ್ನನ್ನು ,ನಿನ್ನಪ್ಪ ನಿನ್ನಮ್ಮ
ಆದರೆ ಹೆಣ್ಣು ? ಸಿಕ್ಕಿದ ಕೂಡಲೇ
ಮದುವೆಯ ಬಂಧಕೆ , ಹುಟ್ಟಿದ ಮನೆಯೂ
ತವರು ಮನೆಯೆಂದೆನಿಸುವುದು !
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆನಿಸುವಳು
ನಿನ್ನನ್ನೇ ನಂಬಿ ಬಂದವಳನ್ನು
ಕೈ ಹಿಡಿದು ನಡೆಸು
ಕಳೆದೆಲ್ಲ ಒಲವನ್ನು ನೀನೆ ಉಣಬಡಿಸು
ಬರುವ ಪ್ರತಿ ಕ್ಷಣದಲ್ಲೂ ತುಂಬಿರಲಿ ಪ್ರೀತಿ
ನಿಜದಿ ತಿಳಿದುಕೋ ಒಲವೆ ಅದೇ ದಾಂಪತ್ಯ ನೀತಿ

Rating
No votes yet

Comments