ಒಮ್ಮೊಮ್ಮೆ ದುರ್ಬಲರು ಹೀಗೂ ರಕ್ಷಣೆ ಪಡೆಯುವುದುಂಟು!

ಒಮ್ಮೊಮ್ಮೆ ದುರ್ಬಲರು ಹೀಗೂ ರಕ್ಷಣೆ ಪಡೆಯುವುದುಂಟು!

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ|
ಅಜಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲ ಘಾತಕಃ||
ಹಂಸಾನಂದಿಯವರು ನೆನಪು ಮಾಡಿಕೊಟ್ಟ ಈ ಸುಭಾಷಿತ ನನಗೆ ಮಹಾಭಾರತದ ಉಪಕಥೆಯೊಂದನ್ನು ನೆನಪು ಮಾಡಿಕೊಟ್ಟಿತು. ಅಲ್ಲಿ ದೇವನು ದುರ್ಬಲ ರಕ್ಷಕನೂ ಆಗಿದ್ದ..ಹಾಗೆ ರಕ್ಷಕನಾದ ಒಳ ಕಾರಣ ಏನಾದರೂ ಇರಲಿ, ಒಂದು ದುರ್ಬಲ ಜೀವಿಯಂತೂ ರಕ್ಷಣೆ ಪಡೆಯಿತು. ಆಕಥೆ ಹೀಗಿದೆ.
ಪಾಂಡವರು ವನವಾಸ ಮಾಡುತ್ತಿದ್ದಾಗ ಅವರ ಕ್ಷೇಮ ಸಮಾಚಾರ ವಿಚಾರಿಸಲು ಶ್ರೀಕೃಷ್ಣನು ಅಲ್ಲಿಗೆ ಬರುತ್ತಾನೆ. ಅವನ ಮೇಲೆ ತಮಗೆ ಅತಿ ಪ್ರೀತಿ ಹಾಗೂ ಭಕ್ತಿ ಇದೆ ಎಂದು ನಂಬಿಕೊಂಡಿದ್ದ ದ್ರೌಪದಿ ಹಾಗೂ ಭೀಮ ಅವನಿಗೆ ಅತಿಥಿ ಸತ್ಕಾರ ಮಾಡಲು ಮುಂದಾಗುತ್ತಾರೆ. ದ್ರೌಪದಿ, "ಅಣ್ಣಾ, ಕೈ ಕಾಲು ಮುಖ ತೊಳೆಯಲು ಒಂದೇ ಕ್ಷಣದಲ್ಲಿ ಬಿಸಿನೀರು ತರುವೆ. ಪಯಣದ ಆಯಾಸ ಪರಿಹರಿಸಿಕೊಂಡು ಭೋಜನವನ್ನು ಸ್ವೀಕರಿಸು." ಎಂದು ಹೇಳಿ ಅಲ್ಲೆ ಇಟ್ಟಿಗೆಯ ಒಲೆ ಮೇಲಿದ್ದ ಹಂಡೆಯಲ್ಲಿ ನೀರು ತುಂಬಿ ಕಾಯಿಸಲು ಒಲೆ ಹಚ್ಚಿದಳು. ಭೀಮ ಕಾಡಿನ ಮರಗಳನ್ನು ಕಡಿದು ಸೌದೆಗಳ ರಾಶಿ ಒಟ್ಟು ಹಾಕಿದ. ಆದರೆ ಆಶ್ಚರ್ಯವೆಂದರೆ ಗಂಟೆಗಟ್ಟಲೆ ಧಗಧಗವೆಂದು ಒಲೆ ಉರಿದರೂ ನೀರು ಬೆಚ್ಚಗೆ ಕೂಡ ಆಗದೇ ತಣ್ಣಗೆ ಕೂತಿತ್ತು.
ಇದರ ಮರ್ಮವರಿಯದೇ ದ್ರೌಪದಿ ಹಾಗೂ ಭೀಮ ಇಬ್ಬರೂ ಸೋತು ಬಸವಳಿದರು.
ಆಗ ಕೃಷ್ಣನು, " ಗಳಿಗೆಯಲ್ಲಿ ನೀರು ತರುವೆನೆಂದು ಹೇಳಿದೆಯಲ್ಲ ತಂಗಿ, ನಾಲ್ಕಾರು ಗಂಟೆಗಳಾದರೂ ನೀರು ತಂದಿಲ್ಲ ಏಕಮ್ಮ?" ಎಂದು ಕೇಳಿದ.
ದ್ರೌಪದಿ, " ಅಣ್ಣಾ, ಇದೇನೋ ಆಶ್ಚರ್ಯ ಹಂಡೆಯ ಒಲೆ ಜೋರಾಗಿ ಹತ್ತಿ ಉರಿಯುತ್ತಿದೆ ಆದರೂ ಒಂದು ಹನಿ ನೀರೂ ಬಿಸಿಯಾಗಿಲ್ಲ. ಕಾರಣ ತಿಳಿಯುತ್ತಿಲ್ಲ" ಎಂದಳು
ಕೃಷ್ಣ ಮುಗುಳು ನಗುತ್ತಾ, "ಹಂಡೆಯ ನೀರನ್ನೆಲ್ಲಾ ಒಮ್ಮೆ ಚೆಲ್ಲು ನೋಡೋಣ. ಬೇರೆ ನೀರು ಕಾಯಿಸಿದರಾಯಿತು." ಎಂದ.
ದ್ರೌಪದಿ ಅವನಾಣತಿಯಂತೆ ಹಂಡೆಯ ನೀರನ್ನೆಲ್ಲಾ ಚೆಲ್ಲಿದಳು ಆಗ ಹಂಡೆಯೊಳಗೆ ಸಣ್ಣ ಧ್ವನಿಯಲ್ಲಿ ಮಾತು ಕೇಳಿಸಿತು. ಅದನ್ನು ಎಲ್ಲರೂ ಆಲಿಸಿದರು.
"ಹೇ ಶ್ರೀಕೃಷ್ಣಪರಮಾತ್ಮ, ಮಾನವರಂತೂ ನೀಚರು, ದುರ್ಬಲರನ್ನು ಹಿಂಸಿಸಿ ತಮ್ಮ ಸುಖವನ್ನು ಪಡೆಯುವರು. ನಿನ್ನನ್ನು ಮೆಚ್ಚಿಸಲೆಂದು ಈ ದ್ರೌಪದಿಯೂ ಭೀಮನೂ ಪ್ರಯತ್ನಪಡುತ್ತಿರುವರು. ನಿನ್ನ ಭಕ್ತರಲ್ಲಿ ನಾನು ಅವರಿಗಿಂತ ಹೇಗೆ ಕಡಿಮೆ ಹೇಳು? ನನ್ನ ಭಕ್ತಿಯಲ್ಲಿ ನೀನೇನು ಕೊರತೆ ಕಂಡೆ? ದ್ರೌಪದಿ ಹಂಡೆಗೆ ಉರಿ ತಗುಲಿಸಿದಾಗ ನಾನು ಹಂಡೆಯ ಒಳಗೆ ಇದ್ದದ್ದು ನೀನು ಬಲ್ಲೆ ಅಲ್ಲವೇ? ಹಾಗಿದ್ದೂ ಅವಳು ಒಲೆ ಹಚ್ಚುವಾಗ ನೀನು ತಣ್ಣಗೆ ಏಕೆ ಕುಳಿತೆ? ಮಾನವರಂತೆ ನೀನೂ ಸಹಾ ದುರ್ಬಲ ಘಾತುಕನಾದರೆ ನಾನು ನನ್ನ ಸಂಕಷ್ಟವನ್ನು ಇನ್ನು ಯಾರಲ್ಲಿ ಮೊರೆಯಿಡಲಿ?"
ದ್ರೌಪದಿ ಮತ್ತು ಭೀಮ ಅವಾಕ್ಕಾಗಿ ನಿಂತರು.ಆಗ ಕೃಷ್ಣ, "ನೋಡದಿರಾ ಭೀಮಾ! ಕೃಷ್ಣೆ! ನಿಮಗಿಂತ ಶ್ರೇಷ್ಠ ಭಕ್ತರಿಲ್ಲ ಎಂಬ ಅಹಂ ನಿಮ್ಮಲ್ಲಿ ತುಂಬಿತ್ತು. ಈಲೋಕದಲ್ಲಿ ನಾವೇ ಶ್ರೇಷ್ಠರೆಂಬ ಭಾವನೆ ಹಲವರಲ್ಲಿ ಕಾಣುತ್ತೇವೆ. ಆದರೆ ನಮಗಿಂತ ಶ್ರೇಷ್ಠ ರು ಅನೇಕರಿರುತ್ತಾರೆ ಎಂಬುದನ್ನು ತಿಳಿಯಿರಿ.ವಿನಯದಿಂದ ನಡೆಯಿರಿ. ಯಾವುದೇ ಕೆಲಸ ಮಾಡುವಾಗ ಗಮನವಿಟ್ಟು ಮಾಡಿರಿ. ಹಂಡೆಯೊಳಗೆ ಕಪ್ಪೆ ಇರುವಾಗಲೇ ಅರಿಯದೇ ಒಲೆ ಹಚ್ಚಿದ ನೀನು ಅದರ ಜೀವ ಬಲಿತೆಗೆದುಕೊಳ್ಳುತ್ತಿದ್ದೆ ಅಲ್ಲವಾ? " ಎಂದು ಹೇಳಿದ. ದ್ರೌಪದಿ ಹಾಗೂ ಭೀಮನಿಗೆ ಬುದ್ಧಿ ಕಲಿಸುವುದಕ್ಕಾಗಿಯಾದರೂ ದುರ್ಬಲ ಕಪ್ಪೆಯನ್ನು ಆ ದೇವನು ರಕ್ಷಿಸಿದನಲ್ಲ. ಅದೇ ಆಕಪ್ಪೆಯ ಪುಣ್ಯ ಅಲ್ಲವೇ?

Rating
No votes yet

Comments