ಕೇಳಿಸಿಕೋ ಗೆಳತಿ

ಕೇಳಿಸಿಕೋ ಗೆಳತಿ

ಕೇಳಿಸಿಕೋ ಗೆಳತಿ,
ನೀನಿದ್ದಿರಬಹುದು ಇಷ್ಟು ದಿನ
ನಿನ್ನ ತವರು ಮನೆಯಲ್ಲಿ ,
ಮುದ್ದಿನ ಮೊಲದ ಹಾಗೆ
ಸೊಕ್ಕಿನ ಬೆಕ್ಕಿನ ಹಾಗೆ
ನಿನ್ನಮ್ಮ ಮಾಡಿಟ್ಟ ಮೃಷ್ಟಾನ್ನವನುಂಡು
ಪುಸ್ತಕ , ಪರೀಕ್ಷೆ ಗೆಳತಿಯರ ಹಿಂಡು,
ಎಲ್ಲದರ ಜೊತೆಗೆ ಆಡಿ ಬೆಳೆದವಳು
ಉಳಿದ ಸಮಯಗಳಲ್ಲಿ ಮೂರ್ಖ ಪೆಟ್ಟಿಗೆಯನ್ನು
ನೋಡಿ ಕಳೆದವಳು,
ಒಬ್ಬಳೇ ಮಗಳೆಂದು ಮುದ್ದಿನಿಂದಾಡುತ್ತ,
ಮನೆಯ ಎಲ್ಲರ ನಡುವೆ ಪ್ರೀತಿ ಸೆಳೆದವಳು
ಇನ್ನೀಗ ಬಿಡು,
ನಿಂದಾಯ್ತು ನನ್ನ ಮನೆ, ನನ್ನ ಮನ
ನನ್ನೆಲ್ಲ ಪ್ರಿಯ ಪರಿವಾರ,
ನಾನಂದುಕೊಂಡಾಯ್ತು ಬದುಕು ಬಂಗಾರ
ಯಾಕೆ ಗೊತ್ತೆ ಗೆಳತಿ ?
"ಯಶಸ್ವಿ ಗಂಡಿನ ಹಿಂದೆ ಹೆಣ್ಣಿರುವಳಂತೆ"
ಯಾರೋ ಹೇಳಿದ ಮಾತು ನಮಗೇಕೆಂದು
ನಕ್ಕು ಬಿಡಬೇಡ , ಬಿಟ್ಟು ಬಿಡು ಸೊಕ್ಕು
ತಿಳಿದುಕೋ ಗೆಳತಿ ಅದು ನಿನ್ನ ಹಕ್ಕು
ಗಂಡನುದ್ಧಾರದಲಿ ಜೋಡಿಸುತ ಕೈ
ಮನೆಮಂದಿಗೆಲ್ಲರಿಗೆ ಹೊಂದಿಕೊಳ್ಳುತ್ತಾ
ಅನ್ನಿಸಿಕೋ ಸೈ !
ಬರಲಿ ಉದ್ಘಾರ ಸೊಸೆಕುಲಕೆ ಜೈ !
ಹಾಗಂತ ನಿನ್ನ ಬಳಗ , ನಿನ್ನ ತವರು
ಮರೆತುಬಿಡು ಎಂದೇನು ನಾ ಹೇಳಲಿಲ್ಲ
ನಿನ್ನವರಂತೆ ನನ್ನವರು ತಿಳಿ ಎಂದೆನಲ್ಲ
ಮೂರು ಗಂಟಿನದಾರ
ಇಳಿಬಿದ್ದ ಮೇಲೆ
ಹೆಗಲಿಗೇರಿದೆ ಗೆಳತಿ ಸಂಸಾರ ಭಾರ
ಸಾಗಬೇಕಿದೆ ನಾವು ಇನ್ನೂ ಬಹುದೂರ
ಹೆಗಲಿಗೆ ಹೆಗಲಾಗು ;
ಸಂತಸದ ನವಿಲಾಗು,
ಸಾಗೋಣ ಬಾ ಗೆಳತಿ
ಜೊತೆಜೊತೆಗೆ ನಾವು
ಅರಿತುಕೋ ಮನದೊಡತಿ
ಇದೇ ಸಂಸಾರ ಸಾರ !
( "ಹೀಗೇ ಒಂದು ಕವನಕ್ಕೆ " ಪ್ರತಿಯಾಗಿ ಗಂಡಿನ ದೃಷ್ಟಿಯಲ್ಲೂ ಒಮ್ಮೆ ನಿಂತು ಅವಲೋಕಿಸಿದಾಗ ಮೂಡಿ ಬಂದ ಕವನ )

Rating
Average: 5 (1 vote)

Comments