ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ


ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.

ಕೆಂಡಸಂಪಿಗೆಯಲ್ಲಿ ಯು.ಆರ್‍.ಅನಂತಮೂರ್ತಿ ಅನುವಾದಿಸಿದ ಈ ಒಂದು ಪದ್ಯ ಓದಿದೆ. ಪದ್ಯ ವಿಲಕ್ಷಣವಾಗಿ ಸೆಳೆಯಿತು. ಆದರೆ ಅನುವಾದ ಯಾಕೋ ಸರಿ ಅನಿಸಲಿಲ್ಲ. ಮೂಲವನ್ನು ಹುಡುಕಿ ಓದಿದೆ.

ಆಗಾಗ ಪದ್ಯ ಸುಲಭದಲ್ಲಿ ದಕ್ಕದೇ ಹೋದಾಗ ಕನ್ನಡಕ್ಕೆ ಅನುವಾದಿಸಿಕೊಂಡು ಓದುವ ಪ್ರಯತ್ನ ಮಾಡುತ್ತೇನೆ. ಟೈಮಿದ್ದರೆ ವಿಸ್ತೃತವಾಗಿ. ಇಲ್ಲದಿದ್ದರೆ ಕೆಲವು ಸಾಲುಗಳನ್ನು ಮನಸ್ಸಲ್ಲೆ ಅನುವಾದಿಸಿಕೊಳ್ಳುತ್ತೇನೆ. ಆಗ ಪದ್ಯದ ಸಾರ ನಿಚ್ಚಳವಾಗುತ್ತಾ, ಜತೆಜತೆಗೆ ಮೂಲ ಕವಿಯ ಕುಸುರಿ ಕೆಲಸ ತೆರೆದುಕೊಳ್ಳುತ್ತಾ ಹೋಗುತ್ತದೆ.

ನಾನಿಲ್ಲಿ ಚರ್ಚಿಸಬೇಕೆಂದುಕೊಳ್ಳುತ್ತಿರುವುದು ಕಾವ್ಯವನ್ನಲ್ಲ. ಕವಿತೆಯನ್ನೂ ಅಲ್ಲ. ಆದರೆ, ಅವೆರಡನ್ನೂ ಒಳಗೊಂಡೂ, ಅವೆರಡಕ್ಕೂ ಬೆಂಬಲವಾಗಬೇಕಾದ ಬೇಸಿಕ್ ಕವಿಯ ಕುಶಲ ಕೆಲಸವನ್ನು. ಪದಗಳ ಆಯ್ಕೆ, ಸಾಲಿನ ಕಟ್ಟು/ಒಡೆತ ಇತ್ಯಾದಿ. ಇದಕ್ಕೆ ಸ್ವಂತ ಪದ್ಯಗಳಿಗಿಂತ ಅನುವಾದದಲ್ಲಿ ಹೆಚ್ಚು ಚರ್ಚಿಸಲು ಅವಕಾಶವಿದೆ ಎಂದುಕೊಳ್ಳುತ್ತೇನೆ. ಏಕೆಂದರೆ, ನಿರ್ಣಾಯಕವಾದ ಒಂದು ಪಠ್ಯವನ್ನು ಇಟ್ಟುಕೊಂಡು ಅದಕ್ಕೆ ಹತ್ತಿರವಾಗುವಂತೆ ಕೆಲಸ ಮಾಡುವುದು. ಅದರಿಂದ ಬೇರಾಗುವುದಾದರೆ ಅದಕ್ಕೊಂಡು ಕಾರಣ ಕೊಟ್ಟುಕೊಳ್ಳುವುದು. ಸಾಧ್ಯವಾದರೆ ಮೂಲಕ್ಕಿಂತ ಮುಂದೆ ಹೋಗುವುದು.

ಹೀಗೆ ಚರ್ಚಿಸಲು ಅನಂತಮೂರ್ತಿಯವರ "ಭಾವಾನುವಾದ" (ಪದ್ಯಗಳ ಭಾವಾನುವಾದಗಳ ಬಗ್ಗೆ ನನ್ನ ಅನುಮಾನವಿದೆ) ಒಂದು ಕಡೆಯಾದರೆ. ನನ್ನದೇ ಅನುವಾದವನ್ನು ಈ ಚರ್ಚೆಗೆ ಒಡ್ಡಿಕೊಳ್ಳುತ್ತಿದ್ದೇನೆ. ಅನಂತಮೂರ್ತಿಯವರ ಅನುವಾದದಲ್ಲಿ ಕೆಲವು ಚೆಂದದ ಸಾಲುಗಳಿವೆ. ಆದರೆ, ನನಗವು ಬೇರೆ ರೀತಿ ಅನುವಾದಬೇಕಿತ್ತು ಅನಿಸಿತು. ಮೂಲಕವಿ/ಪದ್ಯಕ್ಕೆ ಹತ್ತಿರವಾಗಿದ್ದೂ, ಕನ್ನಡದಲ್ಲಿ ಓದಿಸಿಕೊಳ್ಳುವಂತೆ ಬರೆಯಬಹುದೇ ಎಂದು ನನ್ನ ಪ್ರಯತ್ನ

ಪೂರಕ ಓದಿಗೆ ಇಲ್ಲಿ ನೋಡಿ: ಇಷ್ಟಾರ್ ದೇವತೆಯ ಬಗ್ಗೆ

ಮೂಲ ಇಂಗ್ಲೀಷ್ ಪದ್ಯ:
Song for Ishtar
by Denise Levertov

The moon is a sow
and grunts in my throat
Her great shining shines through me
so the mud of my hollow gleams
and breaks in silver bubbles

She is a sow
and I a pig and a poet

When she opens her white
lips to devour me I bite back
and laughter rocks the moon

In the black of desire
we rock and grunt, grunt and
shine

ನನ್ನ ಅನುವಾದ:

ಶಶಿಯೊಬ್ಬಳು ಹಂದಿ
ನನ್ನ ಗಂಟಲಲ್ಲಿ ಗುರುಗುಟ್ಟುತ್ತಾಳೆ
ನನ್ನ ಟೊಳ್ಳಿನ ರಾಡಿಯನ್ನು ಬೆಳಗಿಸಲು
ಅವಳ ಮಹತ್ಕಾಂತಿ ನನ್ನೊಳಗೆ ಹೊಳೆದು
ಬೆಳ್ಳಿಗುಳ್ಳೆಗಳಲ್ಲಿ ಚೆದುರುತ್ತದೆ

ಅವಳು ಹಂದಿ
ಹಾಗು ನಾನು ಗಂಡು-
ಹಂದಿ ಹಾಗು ಕವಿ

ನನ್ನ ಕಬಳಿಸಲು
ತನ್ನ ಬೆಳ್ದುಟಿಗಳನ್ನು ಅವಳು ಬಿರಿದಾಗ
ನಾನು ಕಚ್ಚುತ್ತೇನೆ
ಆಗ ಉಲ್ಲಾಸ ಶಶಿಯನ್ನು ಓಲಾಡಿಸುತ್ತದೆ.

ಕಾಳ ಕಾಮನೆಯಲ್ಲಿ
ನಾವು ಓಲಾಡಿ ಗುರುಗುಡುತ್ತೇವೆ
ಗುರುಗುಟ್ಟಿ ಹೊಳೆಯುತ್ತೇವೆ

*****

ಅನಿಲ್ ಜೋಷಿಯವರ ಅನುವಾದ:

ಚಂದ್ರಳೊಂದು ಹಂದಿ
ಗುರುಗುಡುತ್ತಾಳೆ ನನ್ನ ಗಂಟಲೊಳು
ಅವಳ ಅತಿ ಕಾಂತಿ ನನ್ನ ತೂರಿದಂತೆ
ನನ್ನೊಳಗಣ ರಾಡಿ ಹೊಳೆಯುತ್ತದೆ
ಬೆಳ್ಳಿಗುಳ್ಳೆಗಳೊಡೆಯುತ್ತದೆ

ಅವಳು ಹಂದಿ
ನಾನು ಗಂಡು ಹಂದಿ ಹಾಗೂ ಕವಿ

ನನ್ನ ನುಂಗಿಬಿಡಲು
ಅವಳು ಬಿಳಿ ತುಟಿಗಳ ಬಿರಿದಾಗ
ನಾನೂ ಕಚ್ಚುಬಿಡುತ್ತೇನೆ
ಚಂದ್ರಳಿಗಾಗ ಕುಲು ಕುಲು ನಗು

ಬಯಕೆ ಕತ್ತಲಿನಲ್ಲಿ
ನಾವು ತೊನೆಯುವೆವು ಕೆಲೆಯುವೆವು
ಕೆಲೆಯುವೆವು ಹೊಳೆಯುವೆವು

(ಜಿವಿ ಅವರ ನಿಘಂಟಿನಿಂದ: ೧. ಕೆಲೆ (ದೇ) (ಕ್ರಿ) ೧ ಗುಟುರು ಹಾಕು, ಡುರುಕಿ ಹಾಕು ೨ ಉತ್ಸಾಹದಿಂದ ಕೂಗು ೩ ಹರಟು, ಗಳಹು)

*****

ಗುರು ಬಾಳಿಗರ ಅನುವಾದ

ಎಲ್ಲಮ್ಮನಿಗೊಂದು ಹಾಡು

ನಿನ್ನ ಸವತಿ ಚಂದ್ರಿ
ಹೆಣ್ಣು ಹಂದಿ
ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಚಂದ್ರಿ ಹಂದಿ
ನನ್ನನ್ನೂ ಹಂದಿಯಾಗಿಸಿ
ಕವಿತೆ ಸ್ಫುರಿಸುತ್ತಾಳೆ

ಅವಳು ಆವರಿಸುವಾಗ
ನಾನು ಅಪ್ಪುತ್ತೇನೆ
ಚೆಲ್ಲು ನಗು ಬ್ರಹ್ಮಾಂಡವೆಲ್ಲ
ಅನುರಣಿಸುತ್ತದೆ

ಪೋಲಿ ಹುರುಪಿನುಯ್ಯಾಲೆಯಲ್ಲಿ
ಸ್ಖಲಿಸುತ್ತಾ, ಓಲಾಡುತ್ತಾ
ಅರಚುತ್ತೇವೆ..
ಎಲ್ಲಮ್ಮಾ ಉಧೋ ಉಧೋ

*****

ಆಸು ಹೆಗ್ಡೆಯವರ ಭಾವಾನುವಾದ

ಚಂದಿರೆ ಹಂದಿಯಂತಾಗಿ
ನನ್ನ ಗಂಟಲೊಳಗಿಂದ
ಗುರುಗುಟ್ಟುತ್ತಾಳೆ
ಆಕೆಯ ಆ ಅದ್ಭುತ ಕಾಂತಿ
ನನ್ನ ಖಾಲಿ ಅಂತರಂಗದ
ಕಲ್ಮಷಗಳನ್ನೆಲ್ಲಾ ಬೆಳಗಿಸಿ
ಬೆಳ್ಳಿ ಚುಕ್ಕೆಗಳಂತೆ ಹೊರ
ಹೊಮ್ಮುವಂತೆ ಮಾಡುತ್ತದೆ.

ಆಕೆ ಹೆಣ್ಣು ಹಂದಿಯಾದರೆ
ನಾನು ಗಂಡು ಹಂದಿಯಷ್ಟೇ
ಅಲ್ಲ, ಗಂಡು ಕವಿಯೂ ಕೂಡ

ನನ್ನ ಮುಗಿಸಿಬಿಡುವಿಚ್ಛೆಯಲಿ
ಆಕೆ ತನ್ನ ಬೆಳ್ದುಟಿಗಳ ಪೂರ್ತಿ
ತೆರೆಯುವ ಮೊದಲೇ ನಾ
ಆ ತುಟಿಗಳ ಕಚ್ಚಿಬಿಡುತ್ತೇನೆ
ಆಗ ಆಕೆಯೊಳಗೆ ಎಲ್ಲೆಲ್ಲೂ
ಸಂತಸದ ಲಘು ಕಂಪನ
ಕಾಮನೆಯ ಅಂಧಕಾರದಲಿ
ನಾವು ಜೊತೆ ಜೊತೆಗೆ
ಕಂಪಿಸುತ್ತೇವೆ, ಗುರುಗುಟ್ಟುತ್ತೇವೆ,
ಗುರುಗುಟ್ಟುತ್ತಾ ಗುರುಗುಟ್ಟುತ್ತಾ
ನಾವು ನಾವೇ ಮಿಂಚತೊಡಗುತ್ತೇವೆ.

ಎಲ್ಲಿಯ ಚಂದಿರೆ?
ಎಲ್ಲಿಯ ಹಂದಿ?
ಎಲ್ಲಿ ತನ್ನ ಕಲ್ಪನೆಯಲಿ
ಮೈ ಮರೆವ ಈ ಕವಿ?

 

 

 

 

 

 

Rating
No votes yet

Comments