ಸೌಂದರ್ಯದ ಖನಿ

ಸೌಂದರ್ಯದ ಖನಿ

ಹುಣ್ಣಿಮೆಯ ತುಂಬು ಬೆಳದಿಂಗಳಲ್ಲಿ
ಹಾಲ್ಗಡಲಲ್ಲಿ ಮೀಯ್ವ ಮೀನಾಗಲು
ಮನೆಯಿಂದ ಹೊರಬಂದೆ ನಾನು

ಮನವ ತುಂಬಿತ್ತೊಂದು ಕಂಪು
ಏನು ತಂಪು ಈ ಕಂಪು
ತಂಪೇನೋ ತಿಂಗಳಿನದಾಗಿತ್ತು
ಕಂಪೆಲ್ಲಿಂದ ಬಂದಿತ್ತು?
ಕಣ್ಣರಳಿಸಿದೆ ಮುಂದೆ...

ಹಸಿರ ಬಳ್ಳಿಯ ಮೇಲೆ ಮೊಸರು ಚೆಲ್ಲಿದವರಾರು?
ತಾರೆಗಳೇನಾದರೂ ಬಾನಿಂದ ಇಲ್ಲಿ ಬಂದು
ಬಳ್ಳಿಯ ಮೇಲೆ ಮಿರುಗಿ ಮಿನುಗುತ್ತಿವೆಯೇನು?

ಮನವ ಹಿಗ್ಗಿಸಿ ಹೃದಯ ತುಂಬಿಸಿ
ನರುಗಂಪಿನ ಸಿರಿ ಚೆಲುವಿನ ಬಿಳಿ ಮಲ್ಲಿಗೆ
ತಿಂಗಳ ಬೆಳಕಲ್ಲಿ ಅಂದವ ಪಡೆದಿತ್ತು.

ವನಲಕ್ಶ್ಮಿ ನಗಲು ಉದುರಿದಾ ಮುತ್ತುಗಳೋ?
ಧರಿಸಿಹ ಅವಳ ಬೆಳ್ಳಿಯ ಗೆಜ್ಜೆಗಳೋ?
ನರ್ತಿಸುವಂತೆ ಬಳುಕುತ್ತಿವೆಯೋ?
ಚೆಲುವನ್ನೆಲ್ಲಾ ತನ್ನಲ್ಲೇ ಅಡಗಿಸಿ ನಗುತ್ತಿದೆಯೋ?

ಈ ಚೆಲುವಿನ ಒಳಗನು ಅರಿಯುವರಾರು?
ಸ್ನಿಗ್ಧ ಚೆಲುವಿಗೆ ಮನವನರ್ಪಿಸಿ ನಿಂತ
ಮುಗ್ಧ ಭಕ್ತಳಷ್ಟೆ ನಾನು

ಸಮಯ ಸರಿಯಲು
ಬಳ್ಳಿಯನ್ನೊಮ್ಮೆ ಕಣ್ತುಂಬ ನೋಡಿ
ಎದೆತುಂಬಿ ನಿಂತ ನಾನು
ಒಳನಡೆದೆನಷ್ಟೆ!!!!

ಸೀತ ಆರ್. ಮೊರಬ್

Rating
No votes yet

Comments