ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

ಭಾಗ ಒಂದರಲ್ಲಿ,

ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ

ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿದರೆ, ಆ ಗೀತೆಯನ್ನು ಉದಾಹರಣೆಯಾಗಿ ಕೊಂಡಿ ಹಾಕಬೇಕೆಂದು ಬಯಸಿದ್ದೆ.. ಅದು ಆಗುವಂತೆ ಕಾಣುತ್ತಿಲ್ಲ. ಇರಲಿ. ಈ ಗೀತೆಯನ್ನು ಹೇಳಲು ಒಂದು ಕಾರಣವಿತ್ತು. ನೀವೆಲ್ಲರೂ ಊಹಿಸಿಯೇ ಇರುತ್ತೀರಿ. ಇದು ಮೋಹನ ರಾಗದಲ್ಲಿ ಸಂಯೋಜಿತವಾಗಿರುವ ಗೀತೆ. ಅಷ್ಬ್ಟೇ ಅಲ್ಲದೆ. ಹಾಡಿನ ಸಾಹಿತ್ಯದಲ್ಲಿ ರಾಗದ ಹೆಸರನ್ನು ಚಮತ್ಕಾರಿಕವಾಗಿ ಹೊಸೆಯುವುದು ಕರ್ನಾಟಕ ಸಂಗೀತದ ಒಂದು ವಿಶೇಷ. ಹೀಗೆ ಬರುವುದಕ್ಕೆ ರಾಗ ಮುದ್ರೆ ಎನ್ನುತ್ತೇವೆ. ಇದನ್ನೇ ನೋಡಿ, ನಾನು ಮೊದಲು ಹೇಳಿದ್ದು. ಪಾರಿಭಾಷಿಕ ಪದಗಳ ಪಟ್ಟಿ ಕೊಡುವುದಕ್ಕಿಂತ, ಹೀಗೆ ಸಮಯ ಬಂದಾಗ ಹೇಳಿದರೆ, ಓದಿದವರ ನೆನಪಿನಲ್ಲೂ ಉಳಿಯುತ್ತದೆ. ಹಲವು ವಾಗ್ಗೇಯಕಾರರು ರಾಗಮುದ್ರೆಯನ್ನು ಸಾದ್ಯವಾದಾಗ. ಅರ್ಥಕ್ಕೆ ಪೋಷಣೆ ಬರುವಂತಿದ್ದಾಗ ಪ್ರಯೋಗಿಸುತ್ತಾರೆ. ಓ, ಮತ್ತೊಂದು ಪಾರಿಭಾಷಿಕ ಪದ ಬಂದು ಬಿಟ್ಟಿತಲ್ಲ! ಚಲನಚಿತ್ರ ಸಂಗೀತದಲ್ಲಾದರೆ. ಸಾಹಿತ್ಯ (ಹಾಡು) ಬರೆಯುವವರು ಒಬ್ಬರಾದರೆ, ಅದಕ್ಕೆ ಸಂಗೀತ ಸಂಯೀಜಿಸುವರು ಇನ್ನೊಬ್ಬರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಚ್ಚಿನಂಶ ರಚನೆಗಳಿಗೆ. ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಒಬ್ಬರೇ ವ್ಯಕ್ತಿ ಮಾಡಿರುತ್ತಾರೆ. ಅಂಥವರನ್ನು ವಾಗ್ಗೇಯಕಾರ (ವಾಕ್= ಮಾತು, ಗೇಯ = ಸಂಗೀತ) ಎನ್ನುತ್ತೇವೆ.

ರಾಗ ಮೋಹನದ ವಿಷಯ ಹೇಳುತ್ತಿದ್ದೆ. ಈ ಮೊದಲೇ ಹೇಳಿದಂತೆ, ಇದು ಪ್ರಪಂಚದ ಬಹುಪಾಲು ಸಂಗೀತ ಪದ್ಧತಿಗಳಲ್ಲೂ ಕಂಡುಬರುವ ಒಂದು ರಾಗ. ನಾವು ಇದನ್ನು ಮೋಹನ ಎಂಬ ಮೋಹಕ ಹೆಸರಿನಿಂದ ಕರೆದರೆ, ಹಿಂದೂಸ್ತಾನಿಯಲ್ಲಿ, ಇದಕ್ಕೆ ಭೂಪ್, ಅಥವಾ ಭೂಪಾಲಿ ಎಂಬ ಹೆಸರು. ಆ ಪದ್ಧತಿಯಲ್ಲ್ಲಿನ ವೈಶಿಷ್ಟ್ಯತೆ ಅನುಸಾರವಾಗಿ, ದೇಶ್‍ಕಾರ್ ಎಂಬ ರಾಗವನ್ನು ಅವರು ಭೂಪಾಲಿಯಿಂದ ಬೇರೆಯೆಂದೇ ಪರಿಗಣಿಸಿದರೂ, ಕರ್ನಾಟಕ ಸಂಗೀತದಲ್ಲಿ ಇವೆರಡೂ ಮೋಹನಕ್ಕೆ ಸರಿಸಮವೆಂದು ಹೇಳಬಹುದು.ಇನ್ನು ಚೀನೀಯರ ಸಂಗೀತದಲ್ಲಿ ಇದು ಬಹಳ ಮುಖ್ಯ ಸ್ಥಾನ ಹೊಂದಿದೆ. ಪಾಶ್ಚಾತ್ಯ ಸಂಗೀತದಲ್ಲೋ, ಇದು basic pentatonic scale.

ಕರ್ನಾಟಕ ಸಂಗೀತದಲ್ಲಿ. ಮೋಹನ ಒಂದು ಪ್ರಾಚೀನ ರಾಗ, ಹಾಗೂ ಬಹಳ ಜನಪ್ರಿಯವಾದಂಥ ರಾಗ. ಈ ರಾಗದಲ್ಲಿ ಎಲ್ಲಾ ಬಗೆಯ ಸಂಗೀತ ರಚೆನೆಗಳನ್ನು ನಾವು ಕಾಣಬಹುದು. ಗೀತೆ, ವರ್ಣ, ಕೃತಿ, ತಿಲ್ಲಾನ, ಭಜನ್. ಪದ ಇತ್ಯಾದಿ. ಏನು, ಪಟ್ಟಿ ಉದ್ದವಾಯಿತೆಂದಿರಾ? ಬೇಡ ಸ್ವಾಮೀ ! ಇದರ ವಿವರಗಳನ್ನು ಸ್ವಲ್ಪ ನಿದಾನವಾಗಿ ನೋಡೋಣ. ಮೊದಲಿಗೆ, ಈ ರಾಗಕ್ಕೆ ಬರುವ್ ಸ್ವರಗಳನ್ನು ಹೇಳಿ, ಆಮೇಲೆ ಕೆಲವು ಚಿತ್ರಗೀತೆಗಳ ಉದಾಹರಣೆಗಳು. ಆಮೇಲೆ ಇತರೆ ಭಾವಗೀತೆ ಇತ್ತಾದಿ. ನಂತರ ಶಾಸ್ತ್ರೀಯ ಸಂಗೀತದ ಉದಾಹರಣೆಗಳು. ಕಂತು ಕಂತಾಗಿ, ಕಂತುಪಿತನ ದಿವ್ಯನಾಮ ಸ್ಮರಿಸೋಣ ! **

ಈ ರಾಗಕ್ಕೆ ಬರುವ ಸ್ವರಗಳ್ಉ ಐದು. ಸ್ವರಗಳು ಕೆಳಗಿನಿಂದ ಮೇಲಕ್ಕೆ ಹೋಗುವುದನ್ನು ಆರೋಹಣ  ಎನ್ನುತ್ತೇವೆ. ಮೇಲಿನಿಂದ ಕೆಳಕ್ಕೆ ಬರುವುದನ್ನು ಅವರೋಹಣ ಎನ್ನುತ್ತೇವೆ. ಒಂದು ರಾಗದ ಆರೋಹಣ-ಅವರೋಹಣ, ಆ ರಾಗದ ಒಂದು ಕಿರು ಸ್ವರೂಪವನ್ನು ನೀಡುತ್ತದೆ. ಇದನ್ನೆ ಇಂಗ್ಲಿಷ‍ನಲ್ಲ್ಯ್ scale ಎನ್ನುವುದು. ಎಲ್ಲಾ ರಾಗಗಳನ್ನೂ scale ನಿಂದ ಅಷ್ಟು ಕರಾರುವಾಕ್ಕಾಗಿ ತಿಳಿಸಲು ಆಗುವುದಿಲ್ಲ. ಇದಕ್ಕ್ಕೆಕಾರಣಗಳನ್ನು ಮುಂದೆ ಯಾವಾಗಲೊಮ್ಮೆ ಹೇಳುತ್ತೇನೆ. ಆದರೆ, ಮೋಹನದ ಮಟ್ಟಿಗೆ, ಆರೋಹಣ ಅವರೋಹಣಗಳು ರಾಗದ ಸ್ಥ್ತೂಲ ಪರಿಚಯ ಮಾದಿಕೊಡಲು ಶಕ್ತವಾಗುತ್ತವೆ.

ಮೋಹನ ಔಡುವ ರಾಗ. ಹಾಗೆಂದರೆ, ಆರೋಹಣ ಅವರೋಹಣ ಎರಡರಲ್ಲೂ, ಐದು ಸ್ವರಗಳಿರುತ್ತವೆ ಎಂದರ್ಥ. ಈ ರಾಗದಲ್ಲಿ ಮ ಮತ್ತು ನಿ ವರ್ಜ್ಯ. ಎಂದರೆ, ಮ ಮತ್ತು ನಿ ಈ ರಾಗದಲ್ಲು ಬರಲಾರವು. ಹಾಗಾದರೆ, ಇದರೆ ಆರೋಹಣ ಅವರೋಹಣ ಹೀಗಾಗುತ್ತದೆ.

ಸ ರಿ ಗ ಪ ದ ಸ

ಸ ದ ಪ ಗ ರಿ ಸ

ನಮ್ಮ ಚಿತ್ರಗೀತೆಗಳಲ್ಲಿ, ಎಷ್ಟೋ ಬಾರಿ, ಬೇರೆ ಬೇರೆ ರಾಗಗಳನ್ನು ಬೆರೆಸುವುದೂ ಉಂಟು. ಅಲ್ಲದೆ, ಎಷ್ಟೋ ಬಾರಿ, ಅದು ಯಾವುದೇ ಶಾಸ್ತ್ರೀಯ ಸಂಗೀತದ ರಾಗಕ್ಕೂ ಹೊಂದುವಂತಿರುವುದಿಲ್ಲ. ಆದರೆ, ಮೋಹನ ಚಲನಚಿತ್ರ ಸಂಗೀತ ನಿರ್ದೇಶಕರಿಗೂ ಪ್ರಿಯವಾದ ರಾಗ. ಹಾಗಾಗಿ, ಬಹಳ ಚಿತ್ರಗೀತೆಗಳು ಈ ರಾಗದಲ್ಲಿ ಯೋಜಿತವಾಗಿವೆ. ಎಷ್ಟೋ ಗೀತೆಗಳು ಶುದ್ಧವಾದ ಮೋಹನದಲ್ಲೇ ಇವೆ. ಹಾಗಾದರೆ, ಕನ್ನಡದ ಸವಿಯನ್ನು ಹೊಗಳುವ ಈ ಮೋಹನ ರಾಗದ ಗೀತೆಯೊಂದಿಗೆ ಇವತ್ತಿನ ಕಂತು ಮುಗಿಯಲಿ. ನಿಮ್ಮೆಲ್ಲರಿಗೂ ಇದು ಗೊತ್ತಿರುವ ಹಾಡೇ. ರಾಜನ್-ನಾಗೇಂದ್ರ ಅವರ ನಿರ್ದೇಶನದಲ್ಲಿ, ಡಾ.ರಾಜ್‍ಕುಮಾರರ ಸಿರಿಕಂಠದಲ್ಲಿ ಜೇನಿನ ಹೊಳೆಯೋ ಹಾಳಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ:

http://www.musicindiaonline.com/p/x/EJOjO14onS.As1NMvHdW/

ಅದು ಮೋಹನದ ಉದಾಹರಣೆ ಎಂದು ಗೊತ್ತಿಲ್ಲದಿದ್ದರೆ, ಇಂದು ಅದು ನಿಮಗೆ ಗೊತ್ತಾಗಿದೆ. ಇನ್ನು ಮುಂದೆ pattern matching  ಪ್ರಾರಂಭಿಸಬಹುದು! ಹಾಡಿನ ನಡುವೆ ಬರುವ ಸ್ವರಗಳನ್ನು, ನಾನು ಮೇಲೆ ಕೊಟ್ಟಿರುವ ಆರೋಹಣ ಅವರೋಹಣಕ್ಕೆ ಹೋಲಿಸಿ ನೋಡಿ. 

ಓದಿ, ಏನೆನ್ನಿಸಿತು ಎಂದು ಎರಡು ಸಾಲು ಬರೆಯಿರಿ; ಮುಂದಿನ ಬಾರಿ, ಹಲವು ಮೋಹನ ಸುಮದುರ ಚಿತ್ರಗೀತೆಗಳೊಂದಿಗೆ ಮರಳಿ ಬರುವೆ.

-ಹಂಸಾನಂದಿ

** : ಕಂತುಪಿತನ ದಿವ್ಯ ನಾಮ ಅಂತರಂಗದೊಳಗೆ ಇಟ್ಟು ಚಿಂತೆಯಲ್ಲ ಬಿಟ್ಟು ನಿಸ್ಚಿಂತನಾದವಗಲ್ಲದೇ, ಸುಮ್ಮನೇ ದೊರಕುವುದೇ ಶ್ರೀ ರಾಮನ ದಿವ್ಯ ನಾಮವು? ಎಂದು ಪುರಂದರ ದಾಸರು ಒಂದು ದೇವರನಾಮದಲ್ಲಿ ಹೇಳುತ್ತ್ತಾರೆ :-)

Rating
No votes yet

Comments