Mac OS X ಗೊಂದು ಕನ್ನಡ ಯುನಿಕೋಡ್ ಫಾಂಟು
ಕಳೆದ ಎರಡು ಮೂರು ದಿನಗಳಿಂದ ವೈರಲ್ ಫೀವರ್ ನನಗಂಟಿಕೊಂಡು ಬೇರೇನೂ ಮಾಡದಾಗಿ, ಕೊನೆಗೆ ನನ್ನ ಇಂಗ್ಲಿಷ್ ಸ್ನೇಹಿತ "ಬೋರು ಹೊಡೆದಿದೆ, ಮ್ಯಾಕಿಗೊಂದು (Mac OS X ಗೆ ಒಂದು) ಯುನಿಕೋಡ್ ಫಾಂಟ್ ಮಾಡೋಣವಾ?" ಎಂದಾಗ ಓಗೊಟ್ಟೆ.
ಅವನಾರಿಸಿದ 'ಜನಕನ್ನಡ', 'ತುಂಗ' ಹಾಗೆ ಬದಲಾಯಿಸಲಾಗದೆಂದೂ, ಬದಲಾಯಿಸಬಲ್ಲ ಮುಕ್ತ ಲೈಸನ್ಸಿನ ಒಂದು ಫಾಂಟ್ ಹುಡುಕುವಾಗ ಕೇದಗೆ ಬಹಳ ಚೆನ್ನಾಗಿದೆಯೆನಿಸಿತು. ಸರಿ ಅದನ್ನೇ ಹಿಡಿದು ಶುರುವಾಯ್ತು... ಮೊದಲಿಗೆ ಅಕ್ಷರಗಳ ಪರಿಚಯ, ಕನ್ನಡ ಹೇಗೆ ಕಾಣುವುದೆಂಬುದಕ್ಕೆ 'ಸಂಪದ'ದ ಒಂದು ಸ್ಕ್ರೀನ್ ಶಾಟ್, ಅರುಣ್ ಶರ್ಮರವರ ತಾಣದಿಂದ ಕಾಗುಣಿತದ ಪುಟದ ಪಿ ಡಿ ಎಫ್, ಅರುಣ್ ಶರ್ಮರದ್ದೇ ಇನ್ನಷ್ಟು ಪುಟಗಳನ್ನು ಪಿ ಡಿ ಎಫ್ ಗೆ ಪ್ರಿಂಟ್ ತೆಗೆದು ರವಾನಿಸಿದ್ದಾಯಿತು. ಅವನೊಂದಕ್ಷರವನ್ನು ತೋರಿಸುವುದು, ನಾನದನ್ನು ತಿದ್ದಿ ಮತ್ತೆ ಚಿತ್ರದ ರೂಪದಲ್ಲಿ ಕಳುಹಿಸುವುದು... ಅವನೊಂದು ಅಕ್ಷರವನ್ನು ಮಾರ್ಕ್ ಮಾಡಿ ಕಳುಹಿಸುವುದು, ನಾನದರ ಪರಿಚಯವನ್ನವನಿಗೆ ಮಾಡಿಕೊಡುವುದು... ಹೀಗೆ ನಡೆಯಿತು.
ಮೊದಲನೆಯ ದಿನವೇನೋ 'ಮ್ಯಾಕಿ'ಗೊಂದು ಕನ್ನಡ ಫಾಂಟ್ ನೋಡುವ 'excitement'ನಲ್ಲಿ ಹಾಗೂ ಹೀಗೂ ಹೇಗೋ ಘಂಟೆಗಟ್ಟಲೆ ವದರಬೇಕಾದರೂ ಸರಾಗವಾಗಿ ನಡೆಯಿತು. ಎರಡನೆಯ ದಿನ, ಮೂರನೆಯ ದಿನದಷ್ಟೊತ್ತಿಗಾಗಲೇ ನಾನು ಮಾತನಾಡುವುದು ಅವನಿಗೆ ತಿಳಿಯದು, ಅವನು ಹೇಳುವುದು ನನಗೆ 'sensible' ಆಗಿ ಕಾಣದು ;) ಒಂದು ರೀತಿಯ ಡಿಬೇಟ್ ಶುರುವಾಗಿ ಹೋಯ್ತು! ಇದಕ್ಕೇ ಅಲ್ಲವೆ ನಮ್ಮ ಐ ಟಿ ಕಂಪೆನಿಗಳು 'ಕಮ್ಮ್ಯುನಿಕೇಶನ್ ಸ್ಕಿಲ್ಸ್ ಬೇಕು' ಅಂತ ಬಡ್ಕೊಳ್ಳೋದು? ನನಗೂ ಐ ಅರ್ ಸಿ ಯಲ್ಲಿ ಘಂಟೆಗಟ್ಟಲೆ, ದಿನಗಟ್ಟಲೆ ಮಾತನಾಡಿ ತಿಳಿದಿತ್ತೇ ವಿನಹ ಇನ್ಸ್ಟೆಂಟ್ ಮೆಸ್ಸೆಂಜರಿನಲ್ಲಿ ಹೀಗೆ ದಿನಗಟ್ಟಲೆ ಹರಟೆ ಹೊಡೆದದ್ದು (ಅದೂ ಭಾಷೆ ಬಲ್ಲದವರಿಗೆ ಭಾಷೆ ಅರ್ಥೈಸಲು ಹೊರಟಿದ್ದು) ಇದೇ ಮೊದಲನೆಯ ಸಲ!
ಕೆಲವೊಮ್ಮೆಯಂತೂ ತಲೆ ಚಚ್ಚಿಕೊಳ್ಳುವಂತಹ ಪರಿಸ್ಥಿತಿ! "ಅರ್ಕಾವತ್ತು ಎತ್ಲಾಗ್ ಬರ್ಬೇಕು?", "ತ ಕ್ಕೆ ರಾವತ್ತು, ಅದಕ್ಕೆ ಯ ವತ್ತು 'ತ್ರ್ಯ' ಆದರೆ ಮ ಕ್ಕೆ ರಾವತ್ತು, ಅದಕ್ಕೆ ಯ ವತ್ತು 'ಮ್ರ್ಯ' ಯಾಕಿರಬಾರದು" ಎಂಬ ಪ್ರಶ್ನೆಗಳು ಆ ಅಂಗ್ಲ ಸ್ನೇಹಿತನಿಂದ ಬಂದಾಗ ಅವನ್ನು ವಿಸ್ತರಿಸಿ ಅವನಿಗೆ ತಿಳಿಸುವಷ್ಟರಲ್ಲಿ ನಾನು ಸುಸ್ತೋ ಸುಸ್ತು! (ಮಧ್ಯೆ ಓ ಎಲ್ ಎನ್ ರವರಿಗೊಂದು ಫೋನ್ ಕಾಲ್ ಹೋಗಿ ಕೊನೆಗೆ 'ತ್ರ್ಯ' ಸ್ಪೆಶಲ್ ಕೇಸೋ ಅಲ್ಲವೋ ಎಂಬುದನ್ನು ಕನ್ಫರ್ಮ್ ಮಾಡಿಕೊಂಡದ್ದಾಯಿತು).
ಇನ್ನೂ ಹಲವು ಸರ್ಕಸ್ಸುಗಳು ನಡೆದು ಕೊನೆಗೆ ಹಾಗೂ ಹೀಗೂ ಒಂದು ಫಾಂಟು ರೆಡಿಯಾಗಿ ಬಿಟ್ಟಿತು. ಅಷ್ಟಕ್ಕೂ ಗ್ಲಿಫ್ಫುಗಳಿದ್ದರೆ ಯುನಿಕೋಡ್ ಫಾಂಟ್ ಮಾಡುವುದು Mac OS X ನಲ್ಲಿ ಕಷ್ಟವಲ್ಲವಂತೆ! ಒಂದು ಪ್ಯಾಟರ್ನ್ (.mif) ಬರೆದಿಟ್ಟರೆ ಬೇಕಾದ ಕ್ರಮವನ್ನು ತಂತ್ರಾಶವೇ ಸೃಷ್ಟಿಸುತ್ತದಂತೆ! ಅಂತದ್ದು ಲಿನಕ್ಸಿನಲ್ಲೂ ಇದ್ದಿದ್ದರೆ ಎಷ್ಟು ಒಳ್ಳೆಯದಿರುತ್ತಿತ್ತು ಎಂದಾಲೋಚಿಸಿದೆ (ಕೊನೆಗೆ ಫಾಂಟ್ ಫೋರ್ಜ್ನಲ್ಲಿ ಆ ಸೌಲಭ್ಯವಿದೆಯೋ ಎಂಬುದನ್ನೂ ಪ್ರಯತ್ನಿಸಿದೆ - ಸಿಗಲಿಲ್ಲ).
ಕೊನೆಗೆ ವಿಂಡೋಸ್ ಮತ್ತು ಲಿನಕ್ಸ್ ಬಳಕೆದಾರರ ದುರಾದೃಷ್ಟ, ಮ್ಯಾಕ್ ನವರ ಅದೃಷ್ಟ ಎನ್ನುತ್ತಾ ಕನ್ನಡ ಕೀಲಿ ಮಣೆಗೆ ಬೇಕಾದದ್ದಕ್ಕೊಂದಷ್ಟು ಸಹಾಯ ಮಾಡಿದೆ. Mac OS X ಗೊಂದು (inscript ನಂತಹ) ಕೀಲಿ ಮಣೆಯೂ ತಯಾರಾಯಿತು! ;)
ಸದ್ಯಕ್ಕೆ ಗೂಗಲ್ ನವರ ಜನಪ್ರಿಯ ಸಂಪ್ರದಾಯವನ್ನು ಉಳಿಸಿಕೊಳ್ಳುತ್ತ ಹೋಗುತ್ತಿರುವಂತೆ ಇವುಗಳ ಬೀಟ (beta) ರಿಲೀಸ್ ಮಾಡಿದ್ದೇವೆ, ನೀವು ಮ್ಯಾಕ್ ಬಳಕೆದಾರರಾದರೆ, ಅಥವಾ ನಿಮ್ಮ ಸ್ನೇಹಿತರು ಮ್ಯಾಕ್ ಬಳಕೆದಾರರಾದರೆ ಓದಿ ಸ್ನೇಹಿತರಿಗೆ ತೋರಿಸಿ... ಎಲ್ಲರೂ ಡೌನ್ಲೋಡ್ ಮಾಡಿಕೊಂಡು ಕನ್ನಡ ನೋಡುವಂತಾಗಲಿ. :)
ಲಿಂಕ್ ಕೆಳಗಿನಂತಿದೆ:
[:http://web.nickshan…|http://web.nickshan…]
- ಹೆಚ್ ಪಿ
Rating
Comments
ಉತ್ತಮ ಕೆಲಸ
In reply to ಉತ್ತಮ ಕೆಲಸ by tvsrinivas41
ಧನ್ಯವಾದಗಳು