ಅಪ್ಪನೆಂದರೆ ಹೀಗೇ ಇರಬಹುದು .......

ಅಪ್ಪನೆಂದರೆ ಹೀಗೇ ಇರಬಹುದು .......

ಅಪ್ಪನೆಂದರೆ ಹೀಗೇ ಇರಬಹುದು .......
ವರ್ಷಕ್ಕೊಮ್ಮೆ ನಡೆವ ಜಾತ್ರೆಗೆ
ಹೆಗಲ ಮೇಲೆ ಹೊತ್ತೊಯ್ದು
ಬಿಳಿಯ ಬತ್ತಾಸು ಕಲ್ಯಾಣ ಸೇವೆ,
ಮಿಠಾಯಿಗಳ ತಿನಿಸುವವನು...

ಅಪ್ಪನೆಂದರೆ ಹೀಗೇ ಇರಬಹುದು .......
ಜಾತ್ರೆಯಲ್ಲಿ ಹರವಿದ್ದ ಬಣ್ಣ ಬಣ್ಣದ
ಲಂಗ , ಅಗಲ ಹೂವಿನ ಚಿತ್ತಾರ
ಹೊಂದಿರುವ ಬಟ್ಟೆಯನ್ನಾಯ್ದು
ತೆಗೆದುಕೊಟ್ಟವನು....

ಅಪ್ಪನೆಂದರೆ ಹೀಗೇ ಇರಬಹುದು .......
ದೇಗುಲದ ಒಳ ಹೊಕ್ಕು ,ಕೈಮುಗಿಸಿ,
ಕೊಟ್ಟ ತೀರ್ಥವ ಕುಡಿಸಿ
ಬಾಳೆ ಎಲೆಯಲಿ ನೀಡಿದ ಪ್ರಸಾದವನು
ನನಗೆಂದೇ ಕಟ್ಟಿ ತರುವವನು....

ಅಪ್ಪನೆಂದರೆ ಹೀಗೇ ಇರಬಹುದು .......
ಅಮ್ಮನಿಗು ಗೊತ್ತಿರದ ತಲೆಪಿನ್ನು,
ಹಣೆಬಟ್ಟು, ಎಲ್ಲದಕು ಕಾಸಿಟ್ಟು,
ಮಗಳ ಖುಷಿಯ ನೋಡುವವನು...

ಅಪ್ಪನೆಂದರೆ ಹೀಗೇ ಇರಬಹುದು ....... ಅಲ್ಲವೇನೇ ಅವ್ವ???

ಆದರೆ ನನ್ನಪ್ಪ ಹಾಗಲ್ಲ
ನನ್ನಂತೆಯೇ ನನ್ನಕ್ಕಂದಿರನ್ನೂ
ನಿನ್ನ ಗರ್ಭದಲ್ಲೇ ಜಗವ
ನೋಡುವ ಮೊದಲೇ
ಹೊಡೆದು ಕೊಂದವನು
ಬೆಳಕು ಮೂಡುವ ಮೊದಲೇ
ತಿರೆ ತೋರಿದವನು
ಹೆಣ್ಣೆಂದು ತಿಳಿದು
ನನ್ನ ಕಣ್ಣ ಚುಚ್ಚಿದವನು

ಅಳಬೇಡ ಬಿಡು ಅವ್ವ.. !
ನಿನ್ನಂತೆ ಕಣ್ಣೀರು ಸುರಿಸುವುದೆ ತಪ್ಪಿತು...
ಬದುಕ ಬಂಧನದಿಂದ ಬಿಡುಗಡೆಯೆ ಸಿಕ್ಕಿತು...
ನೀ ಹೆಣ್ಣಾಗಿ ಹುಟ್ಟಿದ ತಪ್ಪಿಗೆ
ಅತ್ತುಬಿಡು ಜೋರಾಗಿ !
ಸುರಿಯಲಿ ಕಣ್ಣೀರು ಹರಿಯಲಿ
ಈ ಇಳೆಯೆ ನೆನೆಯಲಿ
ಯಾಕೆಂದರೆ ಅವ್ವ .....
ಯಾಕೆಂದರೆ ಅವ್ವ
ನನ್ನಪ್ಪ ಹೂತ ಮಣ್ಣ ಕಣದೊಳಗೆ ನಾನಿದ್ದೇನೆ.

( ನಲ್ಮೆಯ ಸಂಪದಿಗರೆ, ಭ್ರೂಣಹತ್ಯೆಯಂತಹ ಕ್ರೂರ ಕೃತ್ಯಕ್ಕೆ ಮುಂದಾದ ತನ್ನ ಅಪ್ಪನನ್ನು ಕುರಿತು ಭ್ರೂಣವೊಂದು ತನ್ನವ್ವನೊಂದಿಗೆ ಎದೆಯಾಳದ ನೋವನ್ನು ಹೀಗೆ ಹಂಚಿಕೊಳ್ಳುತ್ತಿರಬಹುದೇ? ಈ ಕವನಕ್ಕೆ ಕಳೆದ ವರ್ಷ ಕರ್ನಾಟಕ ಲೇಖಕಿಯರ ಸಂಘದಿಂದ "ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ" ದೊರಕಿತ್ತು. ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಹೆಣ್ಣು ಭ್ರೂಣಹತ್ಯೆಯ ಬಗೆಗಿನ ಲೇಖನ ಓದಿ ಇದೆಲ್ಲ ನೆನಪಾಯಿತು .... ಏನೆನ್ನಿಸಿತು ? ನಾಲ್ಕು ಸಾಲು ಬರಿತೀರಿ ಅಂದ್ಕೊಳ್ತೀನಿ.... )

Rating
No votes yet

Comments