ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ.
ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ ಚೇಳು ಕುಟುಕುತ್ತದೆ. ಕುಟುಕಿದ ಕ್ಷಣವೇ ಯುವಾನ ಚೇಳು ಕುಟುಕಿದ ಸ್ಥಳದಿಂದ ವಿಷವನ್ನು ಹೀರಿ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ವೈದ್ಯನ ಹತ್ತಿರ ಹೋಗುವದೇ ಒಳ್ಳೆಯದು ಎಂದುಕೊಂಡು ಆ ಊರ ವೈದ್ಯನ ಮನೆಗೆ ಹೋಗುತ್ತಾರೆ. ಇವರ ಹತ್ತಿರ ಕೊಡಲು ಏನೂ ದುಡ್ಡಿಲ್ಲ ಎಂದು ತಿಳಿದುಕೊಂಡ ವೈದ್ಯ ಮನೆಯೊಳಗೇ ಕುಳಿತುಕೊಂಡು ತಾನು ಮನೆಯಲ್ಲಿಲ್ಲ ಎಂದು ಹೇಳಿಸುತ್ತಾನೆ.
ಇಂಥ ಪರಿಸ್ಥಿತಿಯಲ್ಲಿ ಹೇಗಾದರೂ ವೈದ್ಯ ತಮ್ಮ ಮಗನನ್ನು ನೋಡುವಂತಾಗಲಿ, ಆ ವೈದ್ಯನಿಗೆ ಕೊಡಲು ಒಂದು ಮುತ್ತಾದರೂ ಸಿಗಬಹುದೇನೋ ಎಂದುಕೊಂಡು ಅವತ್ತು ಮತ್ತೆ ಸಮುದ್ರಕ್ಕಿಳಿಯುತ್ತಾನೆ. ಅವನ ಅದೃಷ್ಟ, ಎಂದೂ ಕಂಡಿರದಂತಹ ಮುತ್ತೇ ಸಿಗುತ್ತದೆ ಅವತ್ತು. ಕೋಳಿ ಮೊಟ್ಟೆ ಗಾತ್ರದ ಮುತ್ತನ್ನು ನೋಡಿ ಕೀನೊ ಮತ್ತು ಯುವಾನಾಗೆ ಸ್ವರ್ಗವೇ ಸಿಕ್ಕಷ್ಟು ಖುಷಿ. ಈ ದೊಡ್ಡ ಮುತ್ತು ಸಿಕ್ಕ ಕಥೆ ಕ್ಷಣದಲ್ಲಿ ಊರ ತುಂಬೆಲ್ಲ ಹರಡಿ ಆ ಕ್ಷಣದಲ್ಲೆ ಕೀನೋಗೆ ಎಲ್ಲರಿಗೂ ಬೇಕಾದವನಾಗಿಬಿಡುತ್ತಾನೆ. ಹಿತಶತ್ರುಗಳೂ ಹುಟ್ಟಿಕೊಳ್ಳುತ್ತಾರೆ. ಚಿಕ್ಕ ಊರಿನಲ್ಲಿ ಇಂತಹ ವಿಷಯಗಳು ಹೇಗೆ ಹಲವರ ಮನಸ್ಸಿನಲ್ಲಿ ತಮ್ಮ ಸ್ವಾರ್ಥದ ವಿಚಾರಗಳನ್ನು ಪ್ರೇರಿಸುತ್ತವೆ ಎನ್ನುವದು ಬಹಳ ಸಮರ್ಥವಾಗಿ ಚಿತ್ರಿತವಾಗಿದೆ. ಆ ಊರ ಚರ್ಚಿನ ಪಾದ್ರಿಗೆ ಆಗಬೇಕಾದ ಚರ್ಚಿನ ರಿಪೇರಿಗಳ ನೆನಪಾಗುತ್ತದೆ. ಮನೆಯಲ್ಲಿದ್ದೂ ಹೊರಹೋಗಿದ್ದೇನೆ ಎಂದು ಹೇಳಿಸಿದ್ದ ವೈದ್ಯ ಇನ್ನೊಬ್ಬರ ಮುಂದೆ ಕೀನೋನ ಮಗನಿಗೆ ಕುಟುಕಿದ ಚೇಳಿನ ವಿಷಕ್ಕೆ ತಾನು ಮದ್ದು ಮಾಡುತ್ತಿರುವದಾಗಿ ಕೊಚ್ಚಿಕೊಳ್ಳುತ್ತಾನೆ. ಊರ ಬಟ್ಟೆ ಅಂಗಡಿ ಮಾಲೀಕರಿಗೆ ಕೀನೊ ಬಟ್ಟೆ ಕೊಳ್ಳುತ್ತಾನೆ ಎನ್ನುವ ಖುಷಿ. ಚರ್ಚಿನ ಬಾಗಿಲ ಬಳಿ ಕೂಡುವ ಭಿಕ್ಷುಕರಿಗಂತೂ ಒಮ್ಮಿಂದೊಮ್ಮೆಲೆ ಸಾಹುಕಾರನಾದ ಕೀನೊ ಒಳ್ಳೆ ಭಿಕ್ಷೆ ಹಾಕುತ್ತಾನೆ ಎನ್ನುವ ಭಾವನೆಯೇ ಖುಷಿಕೊಡುತ್ತದೆ. ಒಟ್ಟಿನಲ್ಲಿ ಕೀನೊ ಮತ್ತು ಅವನ ಮುತ್ತು ಆ ಮಲಗಿದಂತಹ ಊರಿನಲ್ಲಿ ಒಂದು ಸಂಚಲನವನ್ನೇ ಮಾಡುತ್ತದೆ.
ಬೆಳಿಗ್ಗೆ ಮನೆಯಲ್ಲಿಲ್ಲ ಎಂದಿದ್ದ ವೈದ್ಯ ರಾತ್ರಿ ಖುದ್ದು ಕೀನೊನ ಮನೆಗೆ ಬಂದು ಮಗುವಿಗೆ ಮದ್ದು ಕೊಡುತ್ತೇನೆ ಎನ್ನುತ್ತಾನೆ. ಮಗುವಿನ ವಿಷ ಇಳಿದಂತೆ ಕಂಡರೂ ’ಇಲ್ಲಿ ನೋಡು ಕಚ್ಚಿದ ಜಾಗ ಹೇಗೆ ಹಸಿರಾಗಿದೆ’ ಎಂದು ಸಂಶಯದ ಬೀಜ ಬಿತ್ತಿ ಅದೇನೋ ಬಿಳಿ ಪುಡಿಯನ್ನು ಮಗುವಿಗೆ ಕೊಡುತ್ತಾನೆ. ಇನ್ನೊಂದು ಗಂಟೆಯಲ್ಲಿ ವಿಷ ಹೆಚ್ಚಾಗಬಹುದು ಮತ್ತೆ ಬಂದು ನೋಡುತ್ತೇನೆ ಎನ್ನುತ್ತಾನೆ. ಕೀನೋಗೊ ಅಷ್ಟೊತ್ತಿಗಾಗಲೇ ಹಲವರ ಮೇಲೆ ಸಂಶಯ ಶುರುವಾಗಿರುತ್ತದೆ. ವೈದ್ಯ ಕೊಟ್ಟದ್ದು ನಿಜವಾಗಿಯೂ ಔಷಧಿಯೆ ಅಥವ ವಿಷವೇ ಅನ್ನುವ ಸಂಶಯ. ವೈದ್ಯ ಹೇಳಿದ ಮಾತು ನಿಜವೋ ಅಲ್ಲವೋ ನನಗಂತೂ ಗೊತ್ತಿಲ್ಲ, ಮುತ್ತನ್ನು ಮಾರಿ ಬರುವ ಹಣದಲ್ಲಿ ಕೊಯೊಟಿಟೋನನ್ನು ಓದಿಸುತ್ತೇನೆ ಆಗ ಗೊತ್ತಾಗುತ್ತದೆ ನಿಜವಾಗಿಯೂ ಪುಸ್ತಕಗಳಲ್ಲಿ ಇರುವದು ಏನು ಎನ್ನುವದು ಅಂದುಕೊಳ್ಳುತ್ತಾನೆ. ವೈದ್ಯ ಹೇಳಿದಂತೆ ಒಂದು ಗಂಟೆಯಷ್ಟೊತ್ತಿಗೆ ವಿಷ ಮತ್ತೆ ಏರಿದಂತೆ ಕಂಡಾಗ ಟಿಟೋಗೆ ವೈದ್ಯನ ಮೇಲೆ ಅಲ್ಪಸ್ವಲ್ಪ ನಂಬಿಕೆ ಬರುತ್ತದೆ. ಮತ್ತೆ ಬಂದ ವೈದ್ಯ ಮತ್ತೊಂದು ಔಷಧಿ ಕುಡಿಸಿ ವಿಷ ಕಮ್ಮಿಯಾಗುವ ತನಕ ಇದ್ದು ಹೋಗುವ ಮುಂಚೆ ’ನನ್ನ ಹಣ ಯಾವಾಗ ಕೊಡುತ್ತೀಯ’ ಎನ್ನುತ್ತಾನೆ. ಕೀನೋಗೆ ಮುತ್ತು ಸಿಕ್ಕ ವಿಶಯವನ್ನು ಆಗ ತಾನೆ ತಿಳಿದಂತೆ ನಟಿಸಿ ಅತಿ ಸಂಭಾವಿತನಂತೆ ಕೀನೋಗೆ ಏನಾದರು ಮುತ್ತನ್ನು ಇಡಲು ಸುರಕ್ಷಿತ ತಾಣ ಬೇಕಿದ್ದರೆ ತನ್ನ ಲಾಕರಿನಲ್ಲಿ ಇಡುತ್ತೇನೆ ಎನ್ನುತ್ತಾನೆ!!
ಮರುದಿನ ಮುತ್ತನ್ನು ಮಾರಲು ಹೋದ ಕೀನೋಗೆ ಮುತ್ತನ್ನು ಕೊಂಡುಕೊಳ್ಳುವವರು ’ ಈ ಮುತ್ತು ತುಂಬ ದೊಡ್ಡದು, ಯಾವ ಆಭರಣದಲ್ಲು ಬಳಸಲು ಬರುವದಿಲ್ಲ. ಬಹಳವೆಂದರೆ ೧೦೦೦ ಪೆಸೊ ಕೊಡಬಹುದು’ ಎಂದಾಗ ಸಿಡಿದೆದ್ದ ಕೀನೋ, ’ಇದಕ್ಕೆ ಕನಿಷ್ಠ ೫೦೦೦೦ ಪೆಸೊ ಕೊಡಬೇಕು. ಇಲ್ಲದಿದ್ದರೆ ನಾನೆ ಪಟ್ಟಣಕ್ಕೆ ಹೋಗಿ ಈ ಮುತ್ತನ್ನು ಮಾರುತ್ತೇನೆ’ ಎನ್ನುತ್ತಾನೆ. ಆದರೆ ಅಂದಿನ ರಾತ್ರಿಯೇ ಹಲವರು ಅವನ ಮನೆಯಿಂದ ಮುತ್ತನ್ನು ಕದ್ದೊಯ್ಯಲು ಬಂದಾಗ ಆದ ಗಲಾಟೆಯಲ್ಲಿ ಕೀನೋ ಒಬ್ಬನನ್ನು ಕೊಂದುಬಿಡುತ್ತಾನೆ. ಊರಿನಲ್ಲಿ ಇನ್ನೂ ಉಳಿಯುವದು ಕ್ಷೇಮವಲ್ಲ ಎಂದು ತಿಳಿದು ಒಂದು ದಿನವನ್ನು ಹೇಗೋ ತನ್ನೊಬ್ಬ ಸ್ನೇಹಿತನ ಮನೆಯಲ್ಲಿ ಕಳೆದು ಯುವಾನ ಮತ್ತು ಕೊಯೊಟಿಟೊರ ಜೊತೆ ಮರು ರಾತ್ರಿಯೆ ಊರು ಬಿಡುತ್ತಾನೆ. ಮುತ್ತನ್ನು ಇವನಿಂದ ಪಡೆಯಬೇಕು ಎಂದು ಇವನ ಬೆನ್ನ ಬಿದ್ದವರು ಬಿಟ್ಟಾರೆಯೇ? ಕೀನೊಗೆ ರಾತ್ರಿ ತನ್ನ ಬೆನ್ನ ಹಿಂದೆ ಬಿದ್ದ ಮೂವರ ಸುಳಿವು ಸಿಗುತ್ತದೆ. ಹೇಗೋ ಅವರ ಹಾದಿ ತಪ್ಪಿಸಲು ಬಯಸಿ ಬೆಟ್ಟಗಳಲ್ಲಿ ಹೋದರೂ ಅವರು ಇವನ ಹಿಂದೆಯೇ ಬರುತ್ತಾರೆ. ಕೊನೆಗೆ ರಾತ್ರಿ ಚಂದ್ರೋದಯಕ್ಕೆ ಮೊದಲು ಅವರಲ್ಲಿದ್ದ ಬಂದೂಕನ್ನು ಕಿತ್ತಿಬಿಟ್ಟರೆ ಅವರನ್ನು ನಾನೇ ಕೊಂದುಬಿಡಬಹುದು ಎಂದುಕೊಳ್ಳುತ್ತಾನೆ. ಆದರೆ ವಿಧಿ ಬೇರೆಯದೇ ಆಟವನ್ನು ಹೂಡಿರುತ್ತದೆ. ಬಹಳ ಹೊತ್ತು ಸುಮ್ಮನಿರಲಾಗದ ಕೊಯೊಟಿಟೊ ಮುಲುಗಿದಾಗ ಮೂವರಲ್ಲೊಬ್ಬ ಬಂದೂಕಿನಿಂದ ಶಬ್ದ ಬಂದ ಕಡೆ ಗುಂಡು ಹಾರಿಸುತ್ತಾನೆ. ಮರು ಕ್ಷಣದಲ್ಲೇ ಕೀನೋ ಅವರ ಮೇಲೆ ಹಾರಿ ಅವರನ್ನು ಕೊಲ್ಲುತ್ತಾನೆ, ತನಗೆ ಸಿಕ್ಕ ಮುತ್ತನ್ನು ಉಳಿಸಿಕೊಳ್ಳುತ್ತಾನೆ ಆದರೆ ಬೆಲೆಕಟ್ಟಲಾಗದ ಮುತ್ತನ್ನು ಕಳೆದುಕೊಂಡಿರುತ್ತಾನೆ.
ಕಥೆಯ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಕಥೆ ಹೇಳುವ ರೀತಿ ವಿಶಿಷ್ಠವಾಗಿದೆ. ಕೀನೋ ಹಾಗು ಯುವಾನರಿಗೆ ಜೀವನದ ಪ್ರತಿ ಹೆಜ್ಜೆಯಲ್ಲೂ ಅವರು ಪೂರ್ವಜರು ಬಳುವಳಿಯಾಗಿ ಕೊಟ್ಟ ಹಾಡುಗಳ ಬಗ್ಗೆ ಹೇಳುತ್ತಾ ಪಾತ್ರಗಳ ಮನಸ್ಥಿತಿಯನ್ನು ಅವುಗಳ ಮೂಲಕವೆ ಬಿಂಬಿಸುತ್ತಾನೆ ಕಥೆಗಾರ. ಸಮುದ್ರದಲ್ಲಿ ಮುತ್ತನ್ನು ಹುಡುಕುವಾಗ ಅದಕ್ಕಾಗೇ ಒಂದು ಹಾಡು, ಮುತ್ತು ಸಿಕ್ಕಾಗ ಒಂದು, ಸಿಕ್ಕ ಮುತ್ತನ್ನು ಕಾಯಬೇಕು ಎಂದಾಗ, ಬೆನ್ನ ಹಿಂದೆ ಬಿದ್ದ ಶತ್ರುಗಳ ಸುಳಿವು ಸಿಕ್ಕಾಗ ಹೊರಬರುವ ಶತ್ರುಗಳ ಹಾಡು, ಹೀಗೆ ಇಲ್ಲಿ ಆ ಹಾಡುಗಳೊಂದನ್ನೂ ಬರೆಯದೇ ಇಂಥ ಹಾಡು ಎಂದಷ್ಟೇ ಹೇಳುತ್ತ ಕಥೆಯ ಪಾತ್ರದ ಮನಸ್ಥಿತಿ ಹೇಳಿಬಿಡುತ್ತಾನೆ.
ಕಥೆಯ ಉದ್ದಕ್ಕೂ ಕಥೆಗಾರ ಹಿಂದೆಯೇ ಉಳಿದು ಕಥೆಯನ್ನಷ್ಟೇ ಹೇಳುತ್ತಾನೆ. ಆದರೆ ಎರಡು ಬಾರಿ ಕಥೆಯಲ್ಲಿ ಕಥೆಗಾರ ಸ್ಪಷ್ಟವಾಗಿ ಕಂಡುಬರುತ್ತಾನೆ. ಮುತ್ತು ಸಿಕ್ಕ ರಾತ್ರಿ ಸುತ್ತ ಸೇರಿದ ಜನ ಈ ಮುತ್ತಿನಿಂದ ಬರುವ ದುಡ್ಡಿನಿಂದ ಏನು ಮಾಡುತ್ತೀಯ ಎಂದು ಕೇಳಿದಾಗ ಕೀನೋ ಹೇಳುತ್ತಾನೆ, " ನಾನು ಮತ್ತು ಯುವಾನ ಚರ್ಚಿನಲ್ಲಿ ಮದುವೆ ಮಾಡಿಕೊಳ್ಳುತ್ತೇವೆ, ಹೊಸ ಬಟ್ಟೆ ಕೊಳ್ಳುತ್ತೇವೆ, ಒಂದು ರೈಫ್ಲ್ ಕೊಳ್ಳುತ್ತೇನೆ’ ಎಂದೆಲ್ಲ ಹೇಳುತ್ತಾನೆ. ಮುಖ್ಯವಾಗಿ ತನ್ನ ಮಗ ಕೊಯೊಟಿಟೋಗೆ ಓದುವದನ್ನು ಕಲಿಸುತ್ತೇನೆ, ಅವನು ಓದಿ ತಿಳಿಸುತ್ತಾನೆ ಪುಸ್ತಕಗಳಲ್ಲಿ ನಿಜವಾಗಿ ಇರುವದು ಏನು ಇಲ್ಲದೆ ಇರುವದು ಏನು ಎಂದು ಎನ್ನುತ್ತಾನೆ. ಇಷ್ಟೆಲ್ಲ ಕನಸುಗಳನ್ನು ಒಮ್ಮೆಲೆ ಹೊರಹಾಕಿದ ಕೀನೋಗೆ ಒಮ್ಮಿಂದೊಮ್ಮೆಲೆ ಹೆದರಿಕೆಯಾದಂತಾಗಿ ಸುಮ್ಮನಾಗಿಬಿಡುತ್ತಾನೆ. ಆಗ ಕಥೆಗಾರ ಅವನ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತಾನೆ, " ಕೀನೋ ತನ್ನ ಮಾತುಗಳಿಂದ ಒಂದು ಯೋಜನೆಯನ್ನು ರೂಪಿಸಿಕೊಂಡು ತನ್ನ ಮನಸ್ಸಿನ ಪಟದ ಮೇಲೆ ತನ್ನ ಹಾಗೂ ತನ್ನ ಪರಿವಾರದ ಭವಿಷ್ಯವನ್ನು ಬೀರಿದ್ದರಿಂದ ಅವನಿಗೆ ಅದು ಒಂದು ನಿಜವೇ ಈಗ. ಹಾಗೆ ಬೀರುವದರಿಂದ ಅವನು ಆ ಭವಿಷ್ಯವನ್ನು ಕಟ್ಟುವದಕ್ಕಾಗಿ, ಉಳಿಸುವದಕ್ಕಾಗಿ ತನ್ನನ್ನೇ ಬಾಧ್ಯನನ್ನಾಗಿ ಮಾಡಿಕೊಂಡ".
ಎರಡನೇ ಬಾರಿ ಕಥೆಗಾರ ನಿರ್ಣಾಯಕವಾಗಿ, ಒಂದು ರೀತಿಯಲ್ಲಿ ವಿಧಿಯಾಗಿ ಬರುತ್ತಾನೆ. ತನ್ನ ಬೆನ್ನ ಹಿಂದೆ ಬಿದ್ದ ಮೂವರಲ್ಲಿ ಇಬ್ಬರು ಮಲಗಿರುವದನ್ನೂ, ಎದ್ದು ಕುಳಿತಿರುವ ಒಬ್ಬನ ಬಳಿ ಬಂದೂಕು ಇರುವದನ್ನು ನೋಡಿ ಕೀನೋ ಆ ಬಂದೂಕನ್ನು ಕಿತ್ತಿಕೊಳ್ಳಲು ಬೆಕ್ಕಿನಂತೆ ಅವರ ಹಿಂದೆ ಹೋಗುತ್ತಾನೆ. ಚಂದ್ರ ಉದಿಸುವದಕ್ಕೂ ಮೊದಲು ಅವರ ಮೇಲೆ ಬೀಳಬೇಕು ಎಂದು ಕೀನೋ ಅಂದುಕೊಂಡಿದ್ದರೆ, ಚಂದ್ರ ಉದಿಸಿಯೇ ಬಿಡುತ್ತಾನೆ. ಅಲ್ಲಿ ಕೀನೊ ಕಳೆದುಕೊಳ್ಳುವ ಕೆಲವೇ ಕ್ಷಣ ನಿರ್ಣಾಯಕವಾಗಿಬಿಡುತ್ತವೆ. ಕೊನೆಗೊಮ್ಮೆ ಕೀನೋ ಅವರ ಮೇಲೆ ಹಾರಿದಾಗ ಬಂದೂಕಿನ ಗುಂಡು ಹಾರಿ ಆಗಿರುತ್ತದೆ. ಆ ಕ್ಷಣದಲ್ಲಿ ಕೀನೋನ ಮುತ್ತು ಕಳೆದು ಹೋಗಿರುತ್ತದೆ.
ಮನಸ್ಸಿಗೆ ಮುಟ್ಟುವ ಈ ಕಥೆ ಓದಿ ಆದ ಮೇಲೆ ಅನಿಸಿದ್ದು ಯಾಕೆ ಇದು ಹೀಗೆ ಕೊನೆಯಾಗಬೇಕಿತ್ತು? ಕಥೆಗಾರ ಕಥೆಯ ಅಂತ್ಯವನ್ನು ನಿರ್ಧರಿಸುತ್ತಾನೊ ಅಥವ ಪಾತ್ರಗಳು ತಮ್ಮ ಗಮ್ಯವನ್ನು ತಾವೇ ನಿರ್ಧರಿಸಿಕೊಳ್ಳುತ್ತವೋ? ಕಥೆಗಾರ ಇದನ್ನು ಒಂದು ಭರವಸೆ ಹುಟ್ಟಿಸುವ ಕಥೆಯಾಗಿಸಬಹುದಿತ್ತು. ಆ ಮೂವರಿಂದ ಕೀನೋ ತಪ್ಪಿಸಿಕೊಳ್ಳುವಂತೆ ಮಾಡಬಹುದಿತ್ತು. ಇಲ್ಲ ಒಂದು ರೀತಿ ಕೀನೋ ಮುತ್ತು ಮತ್ತು ಕುಟುಂಬ ಸಮೇತ ಪಟ್ಟಣವನ್ನು ತಲುಪಿದನೇ ಎನ್ನುವದನ್ನು ಓದುಗರ ಕಲ್ಪನೆಗೆ ಬಿಡುವಂತೆ ಕಥೆ ಮುಗಿಸಬಹುದಿತ್ತು. ಆದರೆ ಇದರಲ್ಲಿ ಕೊನೆಗೆ ಕೀನೋ ಸೋಲುತ್ತಾನೆ. ಅವನನ್ನು ಶೋಷಿಸುತ್ತಿದ್ದ ವ್ಯವಸ್ಥೆಯೇ ಗೆಲ್ಲುತ್ತದೆ. ಅಥವ ಕಥೆಗಾರ ಎಷ್ಟೋ ಸಾವಿರಕ್ಕೆ ಒಂದರಂತೆ ವ್ಯವಸ್ಥೆಯ ವಿರುದ್ಧ ಈಜಿ ಗೆದ್ದವರ ಬಗ್ಗೆ ಹೇಳುವ ಬದಲು ವ್ಯಸ್ಥೆಯ ಕ್ರೌರ್ಯದ ಮುಖವನ್ನು ಪೂರ್ತಿಯಾಗಿ ತೋರಿಸಲು ಈ ಅಂತ್ಯವನ್ನು ಉಪಯೋಗಿಸಿಕೊಂಡನೋ? ವ್ಯವಸ್ಥೆಯ ದಬ್ಬಾಳಿಕೆಯನ್ನು ಮೀರಿ ಹೋದ ಒಬ್ಬನ ಕಥೆ ಇದಾಗಬಹುದಿತ್ತು ಆದರೆ ಕೊನೆಗೆ ವ್ಯವಸ್ಥೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಮತ್ತೊಬ್ಬನ ಕಥೆಯಾಗಿಬಿಡುತ್ತದೆ. ಪುಸ್ತಕದ ಹೊದಿಕೆಯ ಹಿಂಭಾಗದಲ್ಲಿ ಕಥೆಯ ಬಗ್ಗೆ ಹೀಗೆ ಬರೆದಿದೆ, " he hoped to buy peace and happiness for himself, his wife and little son. Instead he found that peace and happiness are not to be purchased. They are, themselves, pearls beyond price." ಅದು ನಿಜವೂ ಹೌದು. ಶಾಂತಿ ಮತ್ತು ಸಂತೋಷಗಳು ಹಣದಿಂದ ಕೊಳ್ಳುವಂತಹವಲ್ಲ. ಆದರೆ ಪಟ್ಟ ಪರಿಶ್ರಮಕ್ಕೆ ಬೆಲೆ ಸಿಗುತ್ತದೆ, ಮುಂದೊಮ್ಮೆ ಬಾಳು ಹಸನಾಗುತ್ತದೆ ಎನ್ನುವ ಭರವಸೆಯಾದರೂ ಬೇಕಲ್ಲವೇ ಜೀವನಕ್ಕೆ? ತನಗೆ ಸಿಕ್ಕಿರುವ ಅವಕಾಶಗಳನ್ನು ಚನ್ನಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲೇನು ಕುಂದಿರದಿದ್ದರೂ ತನ್ನಳವು ಮೀರಿದ ಪರಿಸ್ಥಿಗೆ ಕಾರಣವಾಗುವ ವ್ಯವಸ್ಥೆ ಎಷ್ಟು ಕೀನೋಗಳನ್ನು ಸಮಾಧಿ ಮಾಡಿದೆಯೋ ಎನಿಸುತ್ತದೆ.
ಮತ್ತದೇ ಪ್ರಶ್ನೆ, ಕಥೆಗಾರ ಕಥೆಯ ಅಂತ್ಯವನ್ನು ನಿರ್ಧರಿಸುತ್ತಾನೋ ಅಥವಾ ಪಾತ್ರಗಳೋ?
Comments
ಉ: ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ
In reply to ಉ: ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ by shreekant.mishrikoti
ಉ: ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ
In reply to ಉ: ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ by ravikreddy
ಉ: ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ