ನಿನ್ನಿ ಆಸ್ಕರ್, ನಂದೂ ಎರಡು ಮಾತು...

ನಿನ್ನಿ ಆಸ್ಕರ್, ನಂದೂ ಎರಡು ಮಾತು...

ಭಾಳ ವರ್ಷ ಆದ ಮ್ಯಾಲೆ ಆಸ್ಕರ್ಸ್ ನೋಡಿದೆ ನಿನ್ನೆ. ನಮ್ಮ ರೆಹಮಾನ್ ದೀವಾರ್ ಸ್ಟೈಲಿನ್ಯಾಗ ’ಮೇರೆ ಪಾಸ್ ಮಾ ಹೈ’ ಅಂದದ್ದು ಮತ್ತ ಹಂಗ ’ಎಲ್ಲ ಅವಂದೇ’ ಅಂತ ದೇವರಿಗೆ ತಮಿಳಿನ್ಯಾಗ ಥ್ಯಾಂಕ್ಸ್ ಹೇಳಿದ್ದು ನೋಡಿ, ಕೇಳಿ ಖುಷಿ ಆತು. ಸ್ಲಮ್ ಡಾಗ್ ಸಿನೆಮಾನ ಇನ್ನ ನೋಡಿಲ್ಲ. ಹಂಗ ನೋಡಿದರ ನಿನ್ನೆ ಅವಾರ್ಡಿಗೆ ಬಂದಿದ್ದ ಯಾವ ಪಿಕ್ಚರ್ನೂ ನೋಡಿಲ್ಲ! ಆಸ್ಕರ್ ನಡ್ಸೊ ಕೋಡ್ಯಾಕ್ ಥೇಟರಿಗೆ ಹೋಗಿ ಅಲ್ಲಿ ಟೂರ್ ತೊಗೊಂಡರ ಗೈಡ್ ಹೇಳ್ತಿರ್ತಾನ ಇಂಥಾ ವರ್ಷ ಇಂಥಾ ಆಕ್ಟರ್ ಇಲ್ಲಿ ಕೂತಿದ್ದ(ದ್ಳು) ಅಂತ. ಇನ್ನ ಮ್ಯಾಲಿಂದ ನಮ್ ದೇಸಿ ಮಂದಿ ಹೋದಾಗ ರೆಹಮಾನ್ ಇಲ್ಲಿ ಕೂತಿದ್ದ ಅಂತನೂ ಹೇಳಲಿಕ್ಕೆ ಶುರು ಮಾಡ್ತಾರೇನೋ...

...and the Oscar goes to... ಅಂತ ಹೇಳಿ ಹೆಸರು ಅನೌನ್ಸ್ ಮಾಡಿದ ಕೂಡ್ಲೆ ಸ್ಟೇಜಿಗೆ ಬಂದು ಆಸ್ಕರ್ ತೊಗೋತಾರಲ್ಲ, ಅವರು ಮಾಡೋದು, ಮಾತಾಡೋದು ನೋಡ್ಬೇಕು.

ಒಬ್ಬೊಬ್ಬರು ಒಂದೊಂಥರ. ಕೆಲವೊಬ್ಬರು ಅಳ್ತಾರ, ಕೆಲವರು ನಗ್ತಾರ, ಬಿಕ್ಕತಾರ, ಅಳೋದು ನಗೋದ್ರ ಮಧ್ಯದ ಮಾರಿ ಮಾಡ್ತಾರ, ಭಾಳ ಎಕ್ಸೈಟ್ ಆಗಿದ್ರ ತಮಗ ಅವಾರ್ಡ್ ಕೊಡ್ಲಿಕ್ಕೆ ಬಂದವರನ್ನ ತಬ್ಬಿ ಮುದ್ದಾಡಿ ಬಿಡ್ತಾರ! ಕೆಲವರು ಒಳ್ಳೆ ಅಂಗಡಿ ಸಾಮಾನಿನ ಲಿಸ್ಟಿನ ಹಂಗ ತಾವು ಥ್ಯಾಂಕ್ಸ್ ಹೇಳಬೇಕಾದವ್ರ ಲಿಸ್ಟ್ ಮಾಡಿಕೊಂಡು ಬಂದು ಅದನ್ನ ಓದಿದ್ರ ಇನ್ನ ಕೆಲವರು ಉಡುಪಿ ಹೋಟೆಲಿನ್ಯಾಗ ಮೆನ್ಯು ಹೇಳಿಧಂಗ ಪಟ ಪಟ ಥ್ಯಾಂಕ್ಸ್ ಹೇಳ್ತಾರ. ಪೊಲಿಟಿಕಲ್ ಆಗಿದ್ರಂತೂ ಒಂದು ಸಣ್ಣ ಭಾಷಣಾನೂ ಮಾಡಿಬಿಡ್ತಾರ ಅಲ್ಲೆ. ಆದ್ರ ಅವ್ರೆಲ್ಲಾರಿಗೂ ತಮ್ಮ ಮಾತು ಮುಗಸ್ಲಿಕ್ಕೆ ಒಂದು ಫಿಕ್ಸಡ್ ಟೈಮ್ ಇರ್ತದಂತ. ಅಷ್ಟರಾಗ ಮುಗಸ್ಲಿಲ್ಲ ಅಂದ್ರ ಮ್ಯುಸಿಕ್ ಶುರು ಮಾಡಿ ಬಿಡ್ತಾರಂತ, ಸಾಕಿನ್ನ ಹೋಗ್ರಿ ಅಂತ ಹೇಳಿ :)

ಈ ಸರ್ತಿ ಮಾತಾಡಿದವರೊಳಗೆ, ಇಬ್ಬರ ಮಾತು ಹಿಡಿಸಿದ್ವು. ಒಂದು ಕೇಟ್ ವಿನ್ಸ್ಲೆಟ್ ಹೇಳಿದ್ದು, ’ಎಂಟು ವರ್ಷದಕಿ ಇದ್ದಾಗಿಂದ ಈ ಮೂಮೆಂಟಿನ ಸಲ್ವಾಗಿ ಪ್ರ್ಯಾಕ್ಟೀಸ್ ಮಾಡೀನಿ ಅಂತ ಹೇಳ್ಲಿಲ್ಲ ಅಂದ್ರ ಸುಳ್ಳ ಹೇಳಿಧಂಗಾಗ್ತದ’ ಅಂತ ಶುರು ಮಾಡಿ ಛೊಲೊ ಮಾತಾಡಿದ್ಲು. ಅಕಿ ಮಾತಿನ ಜೊತಿಗೆ ಅಲ್ಲೆ ಇದ್ದ ಮೆರಿಲ್ ಸ್ಟ್ರೀಪ್ ೧೫ ಸರ್ತಿ ನಾಮಿನೇಟ್ ಆದ್ರೂ ಇನ್ನೊಮ್ಮೆ ಸಿಗಲಿಲ್ಲ ( ೨ ಸಿಕ್ಕಾವಂತ ) ಆಸ್ಕರ್ ಅನ್ನೋದನ್ನು ಗಮನಿಸಿದ್ರ ಅವಾರ್ಡ್ ಸಿಕ್ಕವರೆಲ್ಲ ಯಾಕಷ್ಟು ಭಾವುಕರಾಗ್ತಾರ ಅನ್ನೊದಕ್ಕ ಒಂದು ಸಣ್ಣ ಕ್ಲೂ ಸಿಕ್ತದಲ್ಲ ?

ಕೇಟ್ ವಿನ್ಸ್ಲೆಟ್ ಮಾತಿನಕಿಂತ ಹೆಚ್ಚು ಸೇರಿದ್ದು ನಮ್ಮ ರೆಸುಲ್ ಪೂಕುಟ್ಟಿ ಮಾತು. ಮೊದ್ಲ ಅಲ್ಲಿ ಬಂದು ಅವಾರ್ಡ್ ತೊಗೊಂಡಿದ್ದರಿಂದ ಮೂಕ ಆದಂಗಾಗಿದ್ರೂ ಅಮ್ಯಾಲೆ ಸುಧಾರಿಸಿಕೊಂಡು ’ಇಲ್ಲೆ ಇತಿಹಾಸದ ತುಣುಕು ಕೊಡ್ಲಿಕತ್ತೀರಿ ನನಗ’ ಅಂತೆಲ್ಲ ಹೇಳಿ ತನ್ನ ಥ್ಯಾಂಕ್ಸ್ ಗಿವಿಂಗ್ ಭಾಗಕ್ಕ ಬಂದಾಗ ತನ್ನ ಟೀಚರ್ಸನ್ನ ಮೊದ್ಲ ನೆನಪಿಸಿಕೊಂಡು ಮುಂದ ಹೇಳಿದ್ನಲ್ಲ ಭಾಳ ಛೊಲೊ ಅನಿಸ್ತು!

Rating
No votes yet

Comments