ಹೀಗೊಂದು ಪ್ರೇಮ ಪತ್ರ

ಹೀಗೊಂದು ಪ್ರೇಮ ಪತ್ರ

ಪ್ರೀತಿಯ..................................

ನಿನ್ನನ್ನು ಏನೆಂದು ಸಂಭೋದಿಸಲಿ? ಗೆಳೆಯ ಎನ್ನಲೇ, ನಲ್ಲ ಎನ್ನಲೇ, ನನ್ನ ಒಲವೆನ್ನಲೇ ಇಲ್ಲ ನನ್ನ ಜೀವನವೆನ್ನಲೇ? ಈ ಕೆಲವು ದಿನಗಳಿಂದ ನನ್ನ ಪ್ರಪಂಚವೇ ನೀನಾಗಿರುವೆ. ನೀನಿಲ್ಲದೆ ಈ ಜೀವನಕ್ಕೆ ಅರ್ಥವೇ ಇಲ್ಲದಂತಾಗಿದೆ. ನೀ ಒಂದು ಕ್ಷಣ ಮಾತಾಡದಿದ್ದರೂ ನನ್ನನ್ನೇ ಕಳೆದುಕೊಂಡಂಥ ಭಾವ. ಮೊದಲ ನೋಟದಲ್ಲೇ ಪ್ರೀತಿ ಉಂಟಾಗುವುದೆಂದು ನನ್ನ ಗೆಳತಿಯರು ಹೇಳಿದಾಗ ಅದನ್ನು ಹಾಸ್ಯಸ್ಪದವೆಂದು ನಕ್ಕಿದ್ದೆ. ಆದರೆ ನಿನ್ನನ್ನು ನೋಡಿದ ಕೂಡಲೇ ನಿನ್ನ ಮೋಹದ ಬಲೆಯೊಳಗೆ ಇಷ್ಟು ಬೇಗ ಹೇಗೆ ಸಿಕ್ಕಿ ಬಿದ್ದೆ ಎಂಬುದು ನನಗೀಗಲೂ ಆಶ್ಚರ್ಯವೇ!

ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ಸ್ವಭಾವತಃ ವಾಚಾಳಿಯಾಗಿದ್ದ ನಾನು ಮೌನಗೌರಿಯಂತಾಗಿದ್ದು ಏಕೆ? ತಿಳಿಯಲೊಲ್ಲದು ಗೆಳೆಯಾ ನನಗೆ. ನನ್ನ ಪ್ರೀತಿಗೆ ದನಿಯಾಗಿದ್ದೀಯಾ ನೀನು. ಹಾಗಾಗಿ ಮೌನಿಯಾಗಿದ್ದೇನೆ ನಾನು. ನಿನ್ನೆ ಸಂಜೆ ನಿನ್ನೊಂದಿಗೆ ಮಾತಾಡುತ್ತಿದ್ದಾಗ ನನ್ನ ಕೆನ್ನೆಯ ರಂಗು ಸೂರ್ಯನ ಹೊಂಬಣ್ಣದೊಂದಿಗೆ ಸ್ಪರ್ಧಿಸಿದಂತಿತ್ತಂತೆ. ಹೀಗೆಂದು ನನ್ನ ಗೆಳತಿಯೊಬ್ಬಳು ತಮಾಷೆ ಮಾಡುತ್ತಿದ್ದರೂ ಏನೋ ಪುಳಕ. ಗೆಳತಿಯರ ಒಡನಾಟವನ್ನು ಬಹುವಾಗಿ ಪ್ರೀತಿಸುತ್ತಿದ್ದ ನಾನು ಈಗೀಗ ಏಕಾಂಗಿಯಾಗಿದ್ದೇನೆ. ಅದು ನಿಜವಾಗಲೂ ಮನಕ್ಕೆ ಹಿತವನ್ನುಂಟು ಮಾಡುತ್ತಿದೆ.

ದಿನವೆಲ್ಲಾ ನಿನ್ನೊಂದಿಗೆ ಮಾತನಾಡಿದರೂ ಈ ಮನಕ್ಕೆ ತೃಪ್ತಿಯೇ ಸಿಗುತ್ತಿಲ್ಲವಲ್ಲ. ಏನೋ ಚಡಪಡಿಕೆ, ಆತಂಕ. ನಿನ್ನ ಸರಸದ ಮಾತುಗಳು ನನಗೆ ಕಚಗುಳಿಯನ್ನುಂಟು ಮಾಡುತ್ತವೆ. ನಿನ್ನ ಹಾಸ್ಯಕ್ಕೆ ಹುಸಿ ಮುನಿಸು ತೋರಿದರೂ ಮನದಲ್ಲಿ ಇನ್ನೂ ಬೇಕೆಂಬ ಆಸೆ. ನನ್ನ ಗೆಳತಿಯರನ್ನು ಕುಶಲೋಪರಿಯಾಗಿ ನೀ ವಿಚಾರಿಸಿದರೂ ಅಸೂಯೆ ಭಗ್ಗೆಂದು ಜ್ವಾಲೆಯಾಗಿ ಉರಿಯುವುದು. ನೀನು ಮೌನಿಯಾದರೇ ಜಗತ್ತೇ ತಲೆಕೆಳಗಾದಂತೆ ಭಾಸವಾಗುತ್ತದೆ. ನಿನ್ನ ಪ್ರತಿ ಮಾತುಗಳಲ್ಲೂ ನಾನೇ ಇರಬೇಕೆಂಬ ದುರಾಸೆ. ಈ ಪ್ರೀತಿಯೆಂದರೆ ಹೀಗೆಯೇ? ಇಷ್ಟು ಸುಂದರವೇ?

ನಿನ್ನ ಸುಂದರ ಕನಸುಗಳನ್ನು ನನಸು ಮಾಡುವ ಆಸೆ. ಹಾಗೆ ನನ್ನ ಕನಸುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುವ ತವಕ. ಕುರುಂಜಿ ಹೂವಿನ ಕಣಿವೆಯ ಮಧ್ಯೆ ಪುಟ್ಟ ಮನೆಯೊಂದರಲ್ಲಿ ನಿನ್ನೊಂದಿಗೆ ಉಯ್ಯಾಲೆಯಲ್ಲಿ ಕುಳಿತು ಸರಸವಾಡುವ ಬಯಕೆ. ಬೆಳದಿಂಗಳಿನ ರಾತ್ರಿ ಸಮುದ್ರದ ತೀರ ಮರಳಿನಲ್ಲಿ ನಿನ್ನೊಂದಿಗೆ ಕುಳಿತು ಆ ತೆರೆಗಳು ದ್ವೀಪಕ್ಕೆ ಚುಂಬಿಸುವುದನ್ನು ನೋಡುವ ಬಯಕೆ. ಕೋಗಿಲೆಯ ಕುಹೂಕುಹೂವಿನೊಂದಿಗೆ, ಹಕ್ಕಿಗಳ ಕಲರವದ ನಡುವೆ, ಜುಳುಜುಳು ಹರಿಯುತ್ತಿರುವ ನದಿಯ ಮಧ್ಯೆ ಸಾಗುತ್ತಿರುವ ದೋಣಿಯಲ್ಲಿ ನಿನ್ನ ಮಡಿಲಲ್ಲಿ ಮಲಗುವ ಬಯಕೆ. ನನಸು ಮಾಡುವೆಯಾ?

ಇಂತಿ ನಿನ್ನ ಪ್ರೀತಿಯ
......................

ಇಂಚರ

Rating
No votes yet

Comments