ಗಂಡಸರು!

ಗಂಡಸರು!

ಸಖೀ,
ಹುಣ್ಣಿಮೆಯ ಚಂದಿರನ
ಅಂದವನು ಕಂಡು
ಅವನ ಕೊಂಡಾಡಬೇಡ,
ಕಣ್ಣು ತೆರೆದು ನೋಡು,
ಅವನಲ್ಲೂ ಕಲೆಗಳಿವೆ;

ದಿಗಂತದಲಿ ಮೂಡುತಿರುವ
ಸೂರ್ಯನ ಸೌಮ್ಯತೆಯ
ನೀ ಬಣ್ಣಿಸಬೇಡ,
ಮೇಲೇರಿ ಬಂದು ಸುಟ್ಟು ಬಿಡುವ
ತಾಪವಡಗಿದೆ ಆತನಲಿ;

ತೀರದಲಿ ನಿಂತು
ಕಡಲ ಪ್ರಶಾಂತತೆಯ
ಮೆಚ್ಚಿಕೊಳ್ಳಬೇಡ,
ಅಬ್ಬರಿಸುವ
ತೆರೆಗಳನೇರಿಕೊಂಡು ಬಂದು
ನಿನ್ನನ್ನೇ ಕಬಳಿಸಿಕೊಳ್ಳುವ
ರೌದ್ರತೆಯೂ ಅಡಗಿದೆ ಅಲ್ಲಿ;

ಅಂತೆಯೇ ಈ ಗಂಡಸರು ಸಖೀ,
ಅವರ ಬರೇ ಒಳ್ಳೆಯ ಗುಣಗಳನೇ
ಕಂಡು, ಮೆಚ್ಚಿ ಹೆಮ್ಮೆ ಪಟ್ಟು,
ಗೌರವಿಸಿ, ಕೊಂಡಾಡಿ,
ಪೂಜಿಸುತಿರಬೇಡ,
ಸದ್ಗುಣಗಳ ಮುಖವಾಡದ
ಹಿಂದೆ ಷಡ್ವೈರಿಗಳನೇ
ಬಚ್ಚಿಟ್ಟುಕೊಂಡಿರುವ
ಈ ಯಃಕಶ್ಚಿತ್ ಮಾನವರ
ಸೋಗಿಗೆ ಮರುಳಾಗಿ
ನೀ ಮೋಸ ಹೋಗಬೇಡ!
**************
(ವನಜಾರ "ನಾವು ಹುಡುಗಿಯರೇ ಹೀಗೆ" ಓದಿದಾಗ ಇದನ್ನು ಇಲ್ಲಿ ಮರು ಪ್ರಕಟಿಸೋಣ ಅಂತ ಅನ್ನಿಸ್ತು)

ಈ ಹಿಂದೆ ಇಲ್ಲಿ ಪ್ರಕಟವಾಗಿತ್ತು.
http://www.kannadadhvani.com/static/kavana/gamdasaru.html

Rating
No votes yet

Comments