ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು...

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು...

ಹಾ.. ಸ್ನೇಹಿತರೇ.. ಇದೊಂತರ ವಿಚಿತ್ರ "ವಿಷಯ" ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..
ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ. ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ... ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಹಾ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ..

ನಾವುಗಳು ಸಣ್ಣವರಿದ್ದಾಗ, ಅಂದರೆ ತುಂಬ ಸಣ್ಣವರಿದ್ದಾಗ.. ಸುಮಾರು ಹತ್ತು ವರ್ಷ ಆಗೋವರೆವಿಗೂ ನಮ್ಮಪ್ಪ ನಮಗೆ "ಮಹಾನ್ ವ್ಯಕ್ತಿ". ಅಲ್ಲಿ ಅರ್ಥ ಮಾಡಿಕೊಂಡಿದ್ವಾ ಅನ್ನೋ ಪ್ರಶ್ನೆ ಇಲ್ಲ.. ನಮ್ಮಪ್ಪನ ಕೈಯಲ್ಲಿ ಎಲ್ಲ ಸಾಧ್ಯ... ಬಹುಷಃ ಆಮೇಲೆ ಆ ಭಾವನೆ ಕಡಿಮೆಯಾಗುತ್ತಾ ಹೋಗುತ್ತೇನೋ? ಅಲ್ಲಿವರೆವಿಗೂ ಅಪ್ಪ ಮಾಡೋದೆಲ್ಲಾ, ಯಾವತ್ತೂ ಸರಿ ಇರುತ್ತೆ ಅಂದುಕೊಂಡಿದ್ದ ಮನಸ್ಸು, ಸ್ವಲ್ಪ ಉಲ್ಟಾ ಯೋಚನೆ ಮಾಡೋಕ್ಕೆ ಶುರು ಮಾಡುತ್ತಾ ಅಂತಾ.. ಅಪ್ಪನ ಎಲ್ಲಾ ತೀರ್ಮಾನಗಳು ಸರಿ ಅನ್ನಿಸೋದಿಲ್ಲ.. ಸ್ವಲ್ಪ ತಪ್ಪಿರಬೇಕು ಅನ್ನಿಸೋಕ್ಕೆ ಶುರುವಾಗಿರುತ್ತೆ.. ಅಂದರೆ ಮನಸ್ಸಿನಲ್ಲಿ ವಿರುದ್ಧವಾದ ಯೋಚನೆ ಶುರುವಾಗಿರುತ್ತೆ. ಹಾ.. ಮಿತ್ರರೇ.. ಸ್ವಲ್ಪ ಬುದ್ಧಿ ಅಂದರೆ "ಸ್ವಂತ ಬುದ್ಧಿ" ಅಂತಾರಲ್ಲ ಅದು, ಅದು ಬರೋದಿಕ್ಕೆ ಶುರುವಾಗಿರುತ್ತೆ..

ಗೆಳೆಯರೇ.. ಹೆಚ್ಚು ಇದು, ವಿಚಿತ್ರ ವೇಗದಲ್ಲಿ ಬೆಳೆಯೋಕ್ಕೆ ಶುರು ಮಾಡುತ್ತದೆ. ಅಂದರೆ ಪ್ರಾರಂಭದಲ್ಲಿ ಒಂದು ವೇಗ ತೋರಿಸದರೆ, ಆಮೇಲೆ ಒಂದೊಂದು ಸಾರಿ ಪೂರಾ ನಿಂತು ಹೋಯಿತೇನೋ ಅಂತನ್ನಿಸುತ್ತದೆ ಆದರೆ ಯೋಚಿಸೋ ಅವಶ್ಯಕತೆ ಇಲ್ಲ. ಅದು ನಿಲ್ಲೋ ವೇಗ ಅಲ್ಲ.. "ಮ್ಯೂಸಿಕ್ ಪ್ಲೇಯರ್" ನ "ಪಾಜ್ಹ್" ಬಟನ್ ಇದ್ದ ಹಾಗೆ ಸ್ವಲ್ಪ ಕಾಲ ನಿಂತು ಮತ್ತೆ ಮುಂದುವರೆದಿರುತ್ತೆ.

ಹಾಗಾದ್ರೆ, ಇದರ ಪರಿಣಾಮಗಳೇನು ಅಂದರೆ....ಅಪ್ಪ ಯೋಚನೆ ಮಾಡೋದು..ಮಾಡ್ತಾ ಇರೋದು.. ಎಷ್ಟೊಂದು ಸಾಮಾನ್ಯ ("ಸಿಲ್ಲಿ" ಅಂತಾರಲ್ಲ ಇಂಗ್ಲೀಷ್ನಲ್ಲಿ) ಅನ್ನಿಸೋಕ್ಕೆ ಶುರುವಾಗುತ್ತೆ, ಅವರ ತೀರ್ಮಾನಗಳು ಈ ಕಾಲಕ್ಕಲ್ಲ, "ನಮ್ಮ ಭಾವನೆಗಳು ಅರ್ಥ ಮಾಡ್ಕೊಳ್ಳಕ್ಕೆ ಇವರಿಗೆ ಸಾಧ್ಯ ಇಲ್ಲ" ಅನ್ನಿಸೋಕೆ ಶುರುವಾಗಿರುತ್ತೆ. "ಇವರ ಯೋಚನೆಗಳೆಲ್ಲ, ಗೊಡ್ಡು ಸಂಪ್ರದಾಯಗಳೆಲ್ಲ ಈ ಕಾಲಕ್ಕೆ ಹೊರತಾದವು" ಅಂತ ಅನ್ನಿಸೋಕ್ಕೆ ಶುರುವಾಗಿರುತ್ತದೆ. ಇದು ಎಲ್ಲೀವರೆವಿಗೂ ಬೆಳೆಯುತ್ತೆ ಅಂದರೆ ಸ್ನೇಹಿತರೇ, "ಈ ಅಪ್ಪನಿಗೆ ಬುದ್ಧಿನೇ ಇಲ್ಲ" ಅಂತ ಅನ್ನಿಸೋಕ್ಕೆ ಶುರುವಾಗಿ ಬಿಡುತ್ತೆ. "ಭಯಂಕರ ದಡ್ಡತನ ತೋರಿಸುತ್ತಿದ್ದಾರೆ ಇತ್ತೀಚಿಗೆ ಇವರು" ಅಂತ ಅನ್ನಿಸೋಕ್ಕೆ ಶುರುವಾಗಿರುತ್ತೆ. ಹಾ.. ಅದೇ ಸಮಯಕ್ಕೆ ಅಪ್ಪನಿಗಿಂತ ಇನ್ನೂ ಚಿಕ್ಕವರಿರುವ "ಚಿಕ್ಕಪ್ಪ"ನೋ ಅಥವಾ ಪಕ್ಕದ್ಮನೆ "ಅಂಕಲ್" ಉತ್ತಮ ಅನ್ನಿಸೋಕ್ಕೆ ಶುರುವಾಗಿರುತ್ತೆ. ಅವರಿಗೆ ನಮ್ಮ ಮೇಲೆ ನಿಜವಾದ ಪ್ರೀತಿ ಇದೆ ಅನ್ನಿಸುತ್ತಿರುತ್ತದೆ. ಅಪ್ಪನಿಗೆ ನಮ್ಮ ಮೇಲೆ ಪ್ರೀತಿಗಿಂತ ಜಾಸ್ತಿ ಇರೋದು ಸಿಟ್ಟು ಅಂತ ಅನ್ನಿಸುತ್ತಿರುತ್ತದೆ.

ಮಿತ್ರರೇ, ಹೆಚ್ಚು ಕಡಿಮೆ 20 -21ರ ವಯಸ್ಸಿಗೆ ಬರುವಷ್ಟರಲ್ಲಿ ನಮ್ಮ ಮನಸ್ಸು, ನಮ್ಮ ಅಪ್ಪನನ್ನು " ಇವರು ಹಳೆ ಕಾಲದವರು, ಗೊಡ್ಡು ಸಂಪ್ರದಾಯದವರು, ಇವರದ್ದು ಎಲ್ಲಾ ಹಳೇ ಕಾಲದ ಅನಗತ್ಯ ಶಿಸ್ತುಗಳು, ಕಟ್ಟುನಿಟ್ಟುಗಳು, ಕಸಿವಿಸಿ ಮಾಡುವ, ಹೊಂದಾಣಿಕೆಯಾಗದ ವಿಚಾರಧಾರೆಗಳನ್ನು ತುಂಬಿರುವವರು, ಮಕ್ಕಳನ್ನು ಅರ್ಥ ಮಾಡಿಕೊಳ್ಳದಿರುವವರು" ಅನ್ನೋವಲ್ಲಿಗೆ ಬಂದು ನಿಂತಿರುತ್ತದೆ.

ಒಲವಿನ ಸ್ನೇಹಿತರೇ, ಇವೆಲ್ಲ ವಿಚಾರಗಳನ್ನೂ ಒಂದು ನಿಮಿಷ ಪಕ್ಕದಲ್ಲಿ, ಹಾ.. ದೂರದಲ್ಲಿ ಅಲ್ಲ, ಪಕ್ಕದಲ್ಲೇ ಇಟ್ಟುಕೊಂಡು, ಇನ್ನೇನು ಸ್ವಲ್ಪ ದಿನಗಳಲ್ಲಿ ನಾವುಗಳು, ಅಂದರೆ ತಂದೇನೋ, ತಾಯಿನೋ ಆಗುತ್ತಿರುವವರು, ಆಗಲೇ ಆಗಿರುವವರು ಅಥವಾ ಇನ್ನೇನು ಸ್ವಲ್ಪ ವರ್ಷಗಳು ಕಳೆದ ನಂತರ ಆಗಲಿರುವ ಸ್ನೇಹಿತರೇ, ಸ್ನೇಹಿತೆಯರೇ, ನನ್ನ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನೂ ಅಂತ ಯೋಚನೆ ಮಾಡುತ್ತೀರಾ?... ನಿಮ್ಮ ಉತ್ತರಕ್ಕಾಗಿ ಕೆಳಗೆ "ವಿಶೇಷ ಜಾಗ" ಇರಿಸಿದ್ದೇವೆ. ಅವಶ್ಯ ಉತ್ತರಿಸಿ..(ಕಾಮೆಂಟ್ಸ್ ನ ಜಾಗ ನಿಮ್ಮ ಉತ್ತರಕ್ಕಾಗಿ)

ಈಗ ನನ್ನ ಪ್ರಶ್ನೆಗಳು.. ಮುಂದೆ ಬರುವ ನಮ್ಮ ಮಕ್ಕಳು, ಅಥವಾ ಈಗಾಗಲೇ ಹುಟ್ಟಿರುವ ನಮ್ಮ ಮಕ್ಕಳು... ನಮಗಿಂತ ಭಿನ್ನವಾಗಿ ಯೋಚನೆ ಮಾಡುತ್ತಾರಾ? ಅಥವಾ ಇದೆ ರೀತಿಯಲ್ಲಿ ಯೋಚನೆ ಮಾಡುತ್ತಾರೋ...? ಹೇಳಿ ಸ್ನೇಹಿತರೇ.
ಹಳೇ ಕಾಲದವರು ಅಂತ ಜರಿತಾ ಇದ್ದೆವಲ್ಲಾ, ಯಾವುದು ಸ್ವಾಮೀ ಹಳೇ ಕಾಲ...? ಅಂದರೇ.. 1990, 1940, 1960, ಅಥವಾ... 2008..ಯಾವುದು ಸ್ವಾಮೀ?

ಸಾಮಾನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲ ಇವರಿಗೆ, ಮಕ್ಕಳ್ಳನ್ನು ಅರ್ಥಮಾಡಿಕೊಳ್ಳಲ್ಲ ಅಂತೆಲ್ಲಾ ಉದ್ದುದ್ದಾ ದೂರು ಕೊಡುತ್ತಿದ್ದೆವೆಲ್ಲಾ, ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೆ ನಮ್ಮ ಮಕ್ಕಳ್ಳನ್ನು... ಅಂತ ಯಾರು ಎದೆ ತಟ್ಟಿ ವಿಶ್ವಾಸ ಕೊಡೋರಿದ್ದೀರಿ? ಹಾ.. ಹಾಗೆ ಇನ್ನೊಂದು ಮುಖ್ಯವಾದ ಅಂಶ..ಈ ಮಾತಿಗೆ..ಅಂದರೆ, ನೀವು ನಿಜವಾಗಿಯೂ ನಿಮ್ಮ ಮಕ್ಕಳ್ಳನ್ನು ಅರ್ಥ ಮಾಡಿಕೊಂಡಿದ್ದೀರಿ ಅಂತ "ನಿಮ್ಮ ಮಕ್ಕಳು" ಉತ್ತರಿಸಬೇಕು. ಅದೂ ಕೂಡ ನಿಮ್ಮ ಮಕ್ಕಳು 15, 18. 21 ವರ್ಷಗಳಲ್ಲಿದ್ದಾಗ ಕೇಳಿ, ಅವರ ಉತ್ತರ ಸದಾಕಾಲ ಅದೇ ಆಗಿತ್ತು, ನಿಮ್ಮ ಪರವಾಗೇ ಇತ್ತು ಅಂದಲ್ಲಿ ನನಗೆ ದಯವಿಟ್ಟು ತಿಳಿಸಿ.

ಇನ್ನೂ, ಅಪ್ಪನಿಗೆ, ಯಾವ ವಿಷಯನೂ ಅರ್ಥನೇ ಆಗೋದಿಲ್ಲ, ಪ್ರೀತಿ ಅಂದರೆ ಏನೂ ಅಂತಾನೆ ಗೊತ್ತೇ ಇಲ್ಲ, ಯುವಕರ, ಯುವತಿಯರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇವರಿಗೆ ಇಲ್ಲ, ಹಾಗೆ ಇನ್ನೂ ಕೆಲವರ ಪ್ರಕಾರದ, "ದುಡ್ಡಿಗೆ ಬೆಲೆ ಕೊಡುವ, ಪ್ರೀತಿಗೆ ಬೆಲೆ ಕೊಡದಿರುವ ಅಪ್ಪ" ಅನ್ನುವ ಸ್ನೇಹಿತರೇ, ನೀವುಗಳು ಹೀಗೆಲ್ಲ ನಿಮ್ಮಪ್ಪನಂತೆ ಮಾಡೊಲ್ಲ ಮುಂದೆ, ನೀವು, ನಿಮ್ಮ ಮಕ್ಕಳು "ಯೌವನ" ಪ್ರವೇಶಿಸಿದಾಗ ನೀವುಗಳು, ನಿಮ್ಮ ಮಕ್ಕಳನ್ನು ಅದೆಷ್ಟು ಸಹಿಸೋಕೊತಿರಾ ಅಂತ ಯೋಚನೆ ಮಾಡಿದಿರೋ...

ಹಾ..ಹಾಗೆ ನಿಮ್ಮುಂದೆ ಇನ್ನೊಂದು ವಿಚಾರ... ಕೆಲವು ಹುಡುಗರು, ಹುಡುಗಿಯರೂ, ಇನ್ನೊಂದು ವಿಚಾರದಲ್ಲಿ ಅವರ ಮನಸ್ಸು ಈ ಕೆಳಗಿನ ರೀತಿಯಂತೆ ಯೋಚನೆ ಮಾಡಿರಬಹುದು. ಅಪ್ಪ ನಿವೃತ್ತಿಯಾಗುವಾಗ ತೆಗೆದುಕೊಳ್ಳುತ್ತಿದ್ದ ಸಂಬಳದ ದುಪ್ಪಟ್ಟು, ಮೂರು, ನಾಲ್ಕು ಪಟ್ಟು.. ಹಾ..ಹಾ.. ನಾನು ಕೆಲಸಕ್ಕೆ ಸೇರುವಾಗೆಲೇ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಸ್ನೇಹಿತರೇ, ಅದೇ ನಮ್ಮಪ್ಪ ಅದೇ ಎರಡು, ಮೂರು, ಎಂಟೋ, ಒಂಬತ್ತೋ ಸಾವಿರ ತೆಗೆದುಕೊಳ್ಳುತ್ತಿದ್ದಾಗಲೂ, ಇಡೀ ಮನೆ ಸಾಕುತ್ತಾ, ನಮ್ಮಮ್ಮನ ಎಲ್ಲಾ ಆಸೆಗಳನ್ನೂ ತೀರಿಸುತ್ತಾ, ಅವಳು ಕೇಳಿದ ಸೀರೆ ಆಭರಣ ಹೇಗೋ ಕಷ್ಟಪಟ್ಟು ಮಾಡಿಸಿ, ನಾವು ಕೇಳಿದ ಆಟಿಕೆ ಅಥವಾ ಕೇಳಿದ ಇನ್ನೇನನ್ನೋ, "ಹೂಂ" ಅಂತಲೋ, "ಹುಹೂ೦.. ಆಗೋಲ್ಲಾ" ಅಂತೆಲ್ಲ ಹೇಳಿಯೂ ಒಟ್ನಲ್ಲಿ ಕೊನೆಗೆ ಹೇಗೋ ವ್ಯವಸ್ಥೆ ಮಾಡುತ್ತಾ, ನಮ್ಮ ಅಕ್ಕನ, ಅಣ್ಣನ, ತಂಗಿಯ, ತಮ್ಮನ ಆಸೆಗಳೆಲ್ಲನೂ ತಿರಿಸೋ ತನ್ನ ಪೂರ್ಣ ಪ್ರಯತ್ನ ಮಾಡಿದ ಮೇಲೂ, ಅಕ್ಕನ, ತಂಗಿಯ ಮದುವೆ ಅದ್ದೂರಿಯಿಂದಲೇ ಮಾಡಿ, ಸಣ್ಣದೋ, ದೊಡ್ಡದೋ, ತನ್ನದೇ ಆದಂತಹ ಒಂದು "ಸ್ವಂತ ಸೂರು" ಅಂತ ಇರಲಿ ಅಂತ ಕಷ್ಟಪಟ್ಟಿದ್ದು, ಅದೇ ಅಪ್ಪ, ಅದೇ ಜುಜುಬಿ ಸಂಬಳದಿಂದನೇ ಅಲ್ಲವೇ?

ಮಿತ್ರರೇ, ನಾವುಗಳೂ ಪ್ರಾರಂಭದಲ್ಲೇ ಇಷ್ಟೊಂದು, ಮೂರ್ನಾಲ್ಕು ಪಟ್ಟು ಸಂಬಳ ತೆಗೆದುಕೊಂಡರೂ ಇದೂವರೆವಿಗೂ ನಾವು ಮಾಡಿದ್ದೇನು? ಸಾಧಿಸಿದ್ದೇನು? ಎಷ್ಟು ಜವಾಬ್ಧಾರಿವಹಿಸಿಕೊಳ್ಳಬಲ್ಲೆವು ಇವತ್ತಿಗೆ ನಾವು? ಅರೇ..ನಮ್ಮಲ್ಲಿ ಇನ್ನೂ ಎಷ್ಟೋ ಜನರೂ, ಅಪ್ಪನ ಹತ್ತಿರ ದುಡ್ಡು ಕೇಳೋದನ್ನೇ ಬಿಟ್ಟಿಲ್ಲ ಅಂತೀನಿ..

ಈಗ ಹೇಳಿ ಗೆಳೆಯರೇ, ನಮ್ಮಪ್ಪ ಬುದ್ದಿಯಿಲ್ಲದವನಾ? ಸಾಮನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲದವನಾ? ಮಕ್ಕಳ್ಳನ್ನು ಅರ್ಥ ಮಾಡಿಕೊಳ್ಳಕ್ಕೆ ಆಗದೆ ಇರುವವನಾ? ಪ್ರೀತಿ ಅಂದರೆ ಗೊತ್ತಿಲ್ಲದವನಾ? ಮಿತ್ರರೇ.. ಇನ್ನೂ ಅಪ್ಪನ ದೂರುತ್ತಿರುವವರು ಯಾರಾದ್ರೂ ನಮ್ಮಲ್ಲಿ ಇದ್ದಾರ? ಹಾಗಾದರೆ ನಿಮ್ಮ ಮಕ್ಕಳು ನಿಮ್ಮನ್ನು ದೂರದಂತೆ ನೀವು ಯಾವ ಬದಲಾವಣೆ ತಂದುಕೊಂಡಿದ್ದೀರ?

ಹೇಳಿ... ನೀವು ನಿಮ್ಮ ಮಕ್ಕಳ ಜೊತೆ ಬಿನ್ನಾಭಿಪ್ರಾಯ ಬರದಂತೆ ಯಾವ ರೀತಿಯಲ್ಲಿ, ಎಷ್ಟರ ಮಟ್ಟಿಗೆ ನೀವು ತಯಾರಾಗಿದ್ದಿರಾ? ನಿಮ್ಮಪ್ಪನ ಬಗ್ಗೆ ಅಷ್ಟೊಂದೆಲ್ಲ ಯೋಚನೆ ಮಾಡಿದ್ದ ನೀವು, ನಿಮ್ಮನ್ನು ಆ ಜಾಗದಲ್ಲಿ ಎಷ್ಟು ಬಾರಿ ಇಟ್ಟುಕೊಂಡು ಯೋಚನೆ ಮಾಡಿದ್ದೀರಿ? ಇಲ್ಲಿ.. ಹಾ.. ಈ ಜಾಗದಲ್ಲಿ ನಮ್ಮ ಅಪ್ಪ ತಪ್ಪು ಮಾಡಿದ್ದು ಅಂತೆಲ್ಲಾ ಹೇಳುತ್ತಿದ್ದಲ್ಲೆಲ್ಲಾ ನಿಮ್ಮನೂ ಇಟ್ಟು.. ಹಾ.. ಈಗ ಯೋಚನೆ ಮಾಡಿ.. ನೀವು ಎಷ್ಟರ ಮಟ್ಟಿಗೆ ತಯಾರಾಗಿದ್ದೀರ? ಯೋಚಿಸಿ.. ನನಗೂ ತಿಳಿಸಿ

ಸ್ನೇಹಿತರೇ.. ನಮ್ಮಪ್ಪನ ಕಣ್ಣಲ್ಲಿ ಕಣ್ಣು ಇಟ್ಟು ಅವರನ್ನು ನೇರವಾಗಿ ನೋಡಿಕೊಂಡು, ನೀನು ಬಹಳ ತಪ್ಪು ಮಾಡಿದೆ ಅಂತ, ಅಥವಾ, ನೀನು ಮಾಡಿದೆಲ್ಲಾ ತಪ್ಪು ಅಂತ ಹೇಳುವ ಧೈರ್ಯ ಇನ್ನೂ ಯಾರಿಗಾದರು ಉಳಿದಿದೆಯಾ ಸ್ನೇಹಿತರೇ?.. ನನಗಂತೂ ಹಾಗೆ ಅನ್ನಿಸುತ್ತಿಲ್ಲಾ.. ಅವರ ಕಣ್ಣಿನಂಚಿನಲ್ಲಿರೋ ಕಣ್ಣೀರು ಅವರು ನಮಗಾಗಿ ಪಟ್ಟಿರೋ ಆ ಕಷ್ಟದ ಪೂರ್ಣ ಕತೆಯನ್ನು ಹೊತ್ತಿದೆ. ಅದು ಹೊರಹರಿದರೆ ನಾವುಗಳು ಕೊಚ್ಚಿಹೋಗಬೇಕು, ಅವರಿಡೋ ನಿಟ್ಟುಸಿರು ನಮ್ಮನ್ನು ಬಿರುಗಾಳಿಯಂತೆ ಇನ್ನೆಲ್ಲೋ ಕೊಂಡಯ್ಯಬೇಕು... ಆದರೆ.. ನಾವಿದೆನ್ನೆಲ್ಲ ಗಮನಿಸುತ್ತಿದ್ದೇವಾ? ಅಥವಾ ಮರತೇಬಿಟ್ಟಿದ್ದಿವಾ?

ಸ್ನೇಹಿತರೇ... ಇಂದಿಗೆ, ನಾನು ಈ ಭೂಮಿಗೆ ಬಂದು 27 ವರ್ಷ ಆದ ಮೇಲೂ, ನಾನು ನಮಪ್ಪನಿಗೆ ಮಾಡಿದ್ದೇನು..? ಕೊಟ್ಟದ್ದೇನು..? ಅಂತನ್ನೋ ಯೋಚನೆಗೆ ಉತ್ತರಿಸಲಾರದೆ..
...........ಅವರ ಕೃಪಚರಣಾರವಿಂದಗಳಲ್ಲಿ ನನ್ನ ಈ ಲೇಖನವನ್ನ ಅರ್ಪಿಸುತ್ತಿದ್ದೇನೆ. ಇದು ನನ್ನ ೨೮ನೇ ವರ್ಷದ ನಾಂದಿಯ ಅರ್ಪಣೆ ನನ್ನಿಂದ, ನನ್ನ ಪೂಜ್ಯ ತಂದೆಯವರಿಗೆ ಹಾಗೂ ನನ್ನ ತಾಯಿಗೂ ಕೂಡ..
ನಿಮ್ಮೆಲ್ಲರ ಒಲವು, ಪ್ರೀತಿ, ಸಹಾಯ, ಬೆಂಬಲ, ನನಗೆ ಸದಾ ಅವಶ್ಯಕತೆ ಇದ್ದೆ ಇದೆ.. ಹಾಗು ಅದು ಇರುತ್ತದೆ ಅನ್ನೋ ನಂಬಿಕೆ ಇದೆ.. ಅದರೂ ಕೇಳೋದು ನನ್ನ ಕರ್ತವ್ಯ ಅನ್ಕೊಂಡು ಮತ್ತೆ ನಿಮ್ಮ ಬೆಂಬಲ ಕೇಳ್ತಾ.. ನಿಮ್ಮ ಅನಿಸಿಕೆಯನ್ನ.. ಇಲ್ಲಿ ಕೆಳಗೆ.. ದಯವಿಟ್ಟು ನೀಡಿ ಅಂತಾ ಹೇಳುತ್ತಾ..

ನಮಸ್ಕಾರಗಳು..
ನಿಮ್ಮ ಪ್ರೀತಿಯ..

ಸತ್ಯ

Rating
No votes yet

Comments