ದೇವರು ಇದಾನಾ?
ತುಂಬಾ ದಿನಗಳಿಂದ ಬರೆಯಬೇಕೆಂಬ ವಿಷಯ ಇವತ್ತು ಅನಿವಾಸಿ ಅವರ ಬರಹ ನೋಡಿದಮೇಲೆ ಬರೆಯಲೇ ಬೇಕು ಅಂತ ಅನ್ನಿಸ್ತು...
ನಿಜವಾಗ್ಲು ದೇವರು ಇದಾನಾ?
ತುಂಬಾ ಜನಕ್ಕೆ ಈ ಪ್ರಶ್ನೆ ಇದ್ದೇ ಇರುತ್ತದೆ... ಅಲ್ಲಿ ಇಲ್ಲಿ ಸ್ವಲ್ಪ ಜನಕ್ಕೆ ೧೦೦%ನಂಬಿಕೆ ಇರುತ್ತದೆ. ಕೆಲ ದಿನಗಳ ಹಿಂದೆ ಮುಂಬೈ ದಾಳಿಯಾದಾಗ ಒಬ್ಬ ಸಂಪದದವರೇ ಹೇಳಿದ್ದರು... ಭಾರತ ಮಾತೆ, ವೀರ ಮರಣ ಇದೆಲ್ಲ ಬರೀ ಬೊಗಳೆ, ಭಾರತ ಮಾತೆ [God] ಇದ್ದರೆ ಮುಂಬೈ ದಾಳಿಯನ್ನೇ ತಡೆಯಬಹುದಿತ್ತಲ್ಲಾ? ಇದನ್ನ ಕೇಳಿದರೆ ಹಲವರಿಗೆ "ಹೌದಲ್ವಾ !" ಅಂತ ಅನ್ನಿಸಿರಬಹುದು...
ಹಿಂದೂ ಸಂಪ್ರದಾಯದಲ್ಲಿ ೩ಕೋಟಿ ದೇವರುಗಳಿದ್ದಾರೆ... [ನಾನಂತೂ ಲೆಕ್ಕಾ ಹಾಕಿಲ್ಲ ಯಾರೋ ಹೇಳಿದ್ದು..] ಇವರೆಲ್ಲ ನಿಜವಾಗಲೂ ಇದ್ದಾರಾ?
ನನಗನಿಸಿದ್ದು:
ನಾವು ಒಮ್ಮೆ ನಮ್ಮ ನಡುವಳಿಕೆಯನ್ನ ಸ್ವಲ್ಪ ನೋಡೋಣ.. ನಿಮಗೆ ಯಾರಾದರೂ ಸಹಾಯ ಮಾಡಿದರೆ ನಾವು ಇವತ್ತು ಅವರಿಗೆ Thanks [ಧನ್ಯವಾದ] ಹೇಳೇ ಹೇಳುತ್ತೇವೆ.ನಿಮಗೇ ಯಾರಾದರೂ Drop ಕೊಟ್ಟಿರಬಹುದು, ಯಾವುದೋ ಸಂದರ್ಭದಲ್ಲಿ Pen ಕೊಟ್ಟಿರಬಹುದು. ಇವರೆಲ್ಲ ನಮ್ಮ ಎದುರಿಗೇ ಸಿಕ್ಕೇ ಸಿಗ್ತಾರೆ ಅವರಿಗೆ ಆವಾಗಲೇ ಧನ್ಯವಾದ ನಮ್ಮ ಕೃತಜ್ಞತೆ ಸೂಚಿಸುತ್ತೇವೆ. ಹಾಗೆಯೇ ನಮಗೆ ಸಹಾಯ ಮಾಡಿದವರು ಯಾರು ಅಂತ ಗೊತ್ತೇ ಇರಲ್ಲ, ಅಥವಾ ಗೊತ್ತಿದ್ದರೂ ಮನುಷ್ಯರಲ್ಲದ ವಸ್ತುಗಳಿಂದ ಸಹಾಯ ಆಗಿರುತ್ತದೆ ಆವಾಗ ಯಾರಿಗೆ ಕೃತಜ್ಞತೆ ಸೂಚಿಸ್ತೀರಾ? ಅಲ್ಲಿಯೇ ದೇವರು ಹುಟ್ಟಿದ್ದು.
ನನ್ನ ಗಮನಕ್ಕೆ ಬಂದ ಹಲವು ದೇವರುಗಳು:
೧. ಮರ ಗಿಡಗಳು ನಮಗೆ ಗೊತ್ತಿಲ್ಲದೇ ಎಷ್ಟೋಸಹಾಯ ಮಾಡಿರುತ್ತವೆ, ಅದರಿಂದಾಗಿ ನಾವು ದೇವರು ಅಂತ ಪೂಜಿಸುತ್ತೇವೆ. ಮೊನ್ನೆ ನನ್ನ ಮಿತ್ರನ ಮನೆಯಲ್ಲಿ ತೆಂಗಿನಮರವನ್ನು ಕಡಿಸಿದರು, ಅದಕ್ಕೆ ಪ್ರತಿಯಾಗಿ ಒಂದು ಹೋಮ ಹಾಗು ಒಂದು ತೆಂಗಿನ ಸಸಿಯನ್ನು ದಾನದ ರೂಪದಲ್ಲಿ ಕೊಟ್ಟರು. ಆಚರಣೆ ವಿಚಿತ್ರ ಅನಿಸಿದರೂ, ನಮ್ಮ ಪೂರ್ವಜರಲ್ಲಿ ಇದ್ದ ಪರಿಸರ ಪ್ರೇಮವನ್ನ ಇಲ್ಲಿ ನೋಡಬಹುದು. ಮರಕಡಿದರೆ ಇನ್ನೊಂದು ಮರ ನೆಡಬೇಕು ಎ೦ದು ನಮ್ಮ ಸರಕಾರ ಎಷ್ಟೇ ಬೊಬ್ಬೆ ಹೊಡೆದರೂ ಕೇಳದ ನಾವು ದೇವರ ಹೆಸರು ಬಂದ ಕ್ಷಣ ಅದನ್ನ ಮಾಡಿಬಿಡುತ್ತೇವೆ.. ಹಾಗಿದ್ದಾಗ ಈ ದೇವರು ಅನ್ನುವ ಕಲ್ಪನೆ ನಮ್ಮ ಸಮಾಜದಲ್ಲಿ ಇರುವದು ತಪ್ಪೇ?
೨. ನಾನು ಬಿಜಾಪುರಕ್ಕೆ ಹೋಗುವಾಗ ಮಧ್ಯ ಆಲಮಟ್ಟಿ ಜಲಾಶಯ ಇದೆ. ಅದು ಬಂದಾಗ ಹೆಚ್ಚು ಕಡಿಮೆ ಎಲ್ಲ ಪ್ರಯಾಣಿಕರು ನದಿಗೆ ನಮಸ್ಕಾರ ಮಾಡುತ್ತಾರೆ... [ನಾನೂ ಕೂಡ]. ಯಾಕೆ ಅಂತ ಕೇಳಿದರೆ ನದಿ ಅಂದರೆ ದೇವರು ಅಂತ ಉತ್ತರ Ready ಆಗಿರುತ್ತದೆ. ಹಾಗಾದರೆ ನಿಜವಾಗಲೂ ನದಿ ದೇವರಾ? ಹೌದು.. ಬಿಜಾಪುರದಲ್ಲಿರುವ ಜನಕ್ಕಂತೂ ಗೊತ್ತು ನೀರು ಅಂದರೆ, ದೇವರು ದೇವರು ಅಂದರೆ ನೀರು ಅಂತ.. ನನಗೆ ಚನ್ನಾಗಿ ನೆನಪಿದೆ ೨೭ ದಿನಕ್ಕೆ ಒಮ್ಮೆ ನೀರು ಬರುತ್ತಿತ್ತು ನಮ್ಮ ಮನೆಗಳಲ್ಲಿ [ನಾನು ೩-೪ ಈಯತ್ತೆ ಇರಬಹುದು]. ದಿನಕ್ಕೆ ಒಬ್ಬರಿಗೆ ೧ ಬಕೆಟ್ ಮಾತ್ರ ನೀರು ಅಂತ ನಮ್ಮ ಮನೆಯಲ್ಲಿ ನಿಯಮ ಇತ್ತು ಆಗ. ಆಗ ಇದೇ ಕೃಷ್ಣಾ ನದಿಯಿಂದ ೨೭ದಿನಕ್ಕೆ ಒಮ್ಮೆಯಾದರೂ ನೀರು ಬರುತ್ತಿತ್ತು. ನಮ್ಮನ್ನ ಉಳಿಸಿ ಬೆಳೆಸಿದ ಅಂತಹ ನದಿಗೆ ದೇವರ ಸ್ಥಾನ, ನಮಸ್ಕಾರಕ್ಕಿಂತಾ ಹೆಚ್ಚಿಗೆ ನಾನು ಏನನ್ನು ಕೊಡಲಿ?
೩. ಆಕಳು, ನಮ್ಮ ಭೂಮಿ, ವಿದ್ಯುತ್, ಇವೆಲ್ಲ ದೇವರಾ? ನೀವೇ ಹೇಳಿ.. ಮನುಷ್ಯ ತಾಯಿಯ ಎದೆ ಹಾಲಿಗಿಂತ ಹೆಚ್ಚಾಗಿ ಆಕಳಹಾಲಿನಿಂದಲೇ ಬೆಳೆದಿರುವದು. [ನೀವು ಎಮ್ಮೆಹಾಲು ಕುಡಿದಿದ್ದರೆ ಅದನ್ನೇ ಆಕಳನ್ನ ಎಮ್ಮೆ ಎಂದು ಓದಿರಿ] ಅದಕ್ಕೆ ಏನು ಪ್ರತಿಯಾಗಿ ಕೊಡಬಲ್ಲೆವು? ಅದಕ್ಕೇ ಆಕಳಿಗೆ ತಾಯಿ ಸ್ಥಾನ ಕೊಡಲಾಗಿದೆ. ಹಿಂದೆ ಇದರಬಗ್ಗೆ ಒಂದು ಚರ್ಚೆ ನಡೆದಿತ್ತು ಸಂಪದದಲ್ಲಿ "ಬರಿ ಆಕಳನ್ನು ದೇವರು ಅಂತ ಯಾಕೆ ಕರೆಯಬೇಕು?" ಇದನ್ನ ಓದಿ ನನಗೆ ನಗು ಬಂತು... ಕೆಲವರು ಎಮ್ಮೆ ದೇವರು ಅಂತ ಕರೆದರೆ ಕೆಲವರು ಆಡು, ಕುರಿ ಇವುಗಳನ್ನೂ ದೇವರು ಅಂತ ಕರೆಯಬೇಕು ಅಂತ ವಾದಿಸುತ್ತಿದ್ದರು. ಅವರೆಲ್ಲರಿಗೂ ನನ್ನ ಉತ್ತರ : ನಿಮಗೆ ತಾಯಿ ಆದವರು ಬೇರೆಯವರ ತಾಯಿಯ ಸಮಾನವೇ ಹೊರತು ತಾಯಿ ಆಗುವುದಿಲ್ಲ. ನಿಮಗೆ ಬೇಕಾದರೆ ಕುರಿ ಎಮ್ಮೆ ಇವನ್ನು ದೇವತಾಸ್ವರೂಪಿಗಳನ್ನಾಗಿ ಕಾಣಬಹುದು.. ಹಿಂದೂ ಧರ್ಮದಲ್ಲಿ ನಿಮಗೆ ಯಾರನ್ನಾದರೂ ದೇವರ ರೂಪದಲ್ಲಿ ಕಾಣುವ ಸ್ವತಂತ್ರ ಇದೆ. ಅದಕ್ಕೇ ಹಲವಾರು ಪ್ರಾಣಿಗಳನ್ನ ದೇವರ ವಾಹನ ಅಂತ ಕರೆದಿದ್ದಾರೆ ನಮ್ಮ ಪೂರ್ವಜರು. ಆನೆ, ಎತ್ತು, ಕುದುರೆ, ಎಮ್ಮೆ ಆಕಳು.. ನಮಗೆ ಯಾರಿಂದ ಸಹಾಯ ಆಗುತ್ತಿದೆಯೋ ಅವರೆಲ್ಲರನ್ನೂ ದೇವರ ಸ್ವರೂಪದಲ್ಲಿ ಕಾಣುತ್ತೇವೆ.
ಭಾರತಭೂಮಿ, ಇಲ್ಲಿಯೇ ನಾವು ಹುಟ್ಟಿ, ಬೆಳೆದು, ನಮ್ಮ ದೇಹದ ಎಲ್ಲರೀತಿಯ ಹೊಲಸುಗಳನ್ನು ಇಲ್ಲಿಯೇ ಹಾಕಿದ್ದೇವೆ. ಇಂತಹ ಭೂಮಿಗೆ ದೇವರ ಸ್ಥಾನ ಕೊಟ್ಟಿದೇವೆ ಹೊರತು, ನಮಗೆ ತೊಂದರೆ ಆದಾಗ ಭಾರತಮಾತೆ ಎನ್ನುವ ದೇವರು ಬಂದು ನಮ್ಮನ್ನು ಕಾಪಾಡಬೇಕಿತ್ತು ಅಂದರೆ, ಇದು ನಮ್ಮ ಕೃತಘ್ನತೆಯನ್ನು ತೋರಿಸುತ್ತದೆ. ಯಾಕೆ ಭಾರತಮಾತೆ ಬಂದು ನಮ್ಮನ್ನು ಕಾಪಾಡಬೇಕು?
೪. ಈ ಬೈಕ್, ಇತರೇ ನಿರ್ಜೀವ ವಸ್ತುಗಳಿಗೂ ದೇವರ ಸ್ಥಾನ ಕೊಡಬೇಕಾ? ಹೌದು... ಯಾಕೇ ನಮಗೆ ಅದರಿಂದ ಯಾವುದೇ ಸಹಾಯ ಆಗಿಲ್ಲವಾ?ನಾವು ಆರಾಮವಾಗಿ ಇವತ್ತು ಇದ್ದೇವೆ ಅಂದರೆ ಇಂತಹ ನಿರ್ಜೀವ ವಸ್ತುಗಳ ಸಹಾಯ ಇದ್ದೇಇದೆ. ಇದಕ್ಕಾಗಿಯೇ ನಾವು ಆಯುಧ ಪೂಜೆ ಮಾಡುವುದು.
ನಾನು ನೋಡಿದಂತೆ ಬಿಜಾಪುರದಲ್ಲಿ ಮುಸ್ಲಿಂ ಜನರು ಜಾಸ್ತಿ ಇದ್ದಾರೆ, ಅವರೂ ಸಹ ಇಂದಿಗೂ ದೀಪಾವಳಿಯಲ್ಲಿ ಪೂಜೆ ಮಾಡುತ್ತಾರೆ. ಅವರ ಧರ್ಮದಲ್ಲಿ ಮೂರ್ತಿಪೂಜೆಗೆ ಅವಕಾಶ ಇಲ್ಲದಿದ್ದರೂ ಮಾಡುತ್ತಾರೆ ಯಾಕೆ? "ಕೃತಜ್ಞತೆ".
ಹೀಗೆ ಪಟ್ಟಿಮಾಡ್ತಾ ಹೋದರೆ ಮುಗಿಯೋದೆ ಇಲ್ಲ ನಮ್ಮ ದೇವರುಗಳ List.
ಈಗ ಹೇಳಿ ದೇವರು ಇದ್ದಾನಾ?
ವಿನಾಯಕ.
Comments
ಉ: ದೇವರು ಇದಾನಾ?