ಮಚ್ಛಾ...ಎನ್ನಲು ....??

ಮಚ್ಛಾ...ಎನ್ನಲು ....??

ಮೈಕ್ರೊಪ್ರೊಸೆಸರ್ ಲ್ಯಾಬ್‍ನಲ್ಲಿ ನನ್ನ ಸಹಪಾಠಿ ೮ ಬಿಟ್ ನ ಬದಲು ೪ ಬಿಟ್ ನ ದತ್ತಾಂಶ ನೀಡಿದಳು. ಪ್ರೊಸೆಸರ್ ತಪ್ಪು ಉತ್ತರ ತೋರಿಸಿತು. "ಓಹ್! ಶಿಟ್!" ಎಂದಳು.

"ಏನು ಹಾಗೆಂದರೆ ?" ಎಂದೆ.

ಮುಖ ಕೆಂಪಾಗಿ ಹೋಯಿತು ಅವಳದು.

"ಗೊತ್ತು" ಎಂದಳು

" ಎನು ಗೊತ್ತು? " ಎಂದೆ.

"ಶಿಟ್ ಎಂದರೇನು ಅಂತ ಗೊತ್ತು"

"ನನಗೆ ಗೊತಿಲ್ಲ ಹೇಳು"

"ಅದು ಹೇಳೋಕಾಗಲ್ಲ"

"ಅಂಥ ಕೆಟ್ಟ ಪದಾನ ಅದು?"

"ಹೌದು"

"ಮತ್ಯಾಕೆ ಹೇಳಿದೆ?"

"ಅಯ್ಯೋ! ಪುಣ್ಯಾತ್ಮ ಬಿಟ್ಟುಬಿಡಪ್ಪ. ಇನ್ನು ಮೇಲೆ ಅನ್ನಲ್ಲಾ!!!"

ಇನ್ನೊಮ್ಮೆ ರಸಪ್ರಶ್ನೆ ನಡೆಯುತ್ತಿತ್ತು. ಕ್ವಿಜ್ ಮಾಸ್ಟರ್‌ನಿಂದ ಏನೋ ತಪ್ಪಾಯಿತು. " ಓಹ್! ಫ*" ಎಂದುಬಿಟ್ಟ. ಮೈಕ್ ಕೈಯ್ಯಲ್ಲಿದ್ದುದರಿಂದ ಎಲ್ಲರಿಗೂ ಕೇಳಿಸಿ ಅಭಾಸವಾಗಿಬಿಟ್ಟಿತು! ಹುಡುಗಿಯರಿಗೆ, ಮೆಷ್ಟ್ರುಗಳಿಗೆಲ್ಲಾ ಅವನ ಬಗೆಗಿನ ಒಳ್ಳೆಯ ಅಭಿಪ್ರಾಯಗಳೆಲ್ಲಾ ಕರಗಿ ಹೊಯಿತು! ಹುಡುಗರಿಗೆಲ್ಲಾ ಶಿಳ್ಳೆಗೊಂದು ನೆವ!

ಕೆಟ್ಟ ಪದಗಳನ್ನು ಉಚ್ಛರಿಸುವ ಅಭ್ಯಾಸ ಇಟುಕೊಂಡರೆ ಇಂತಹ ಆಭಾಸಗಳನ್ನು ಎದುರಿಸಬೇಕಾಗುತ್ತದೆ. ಕಣ್ಣು ಮುಚ್ಚಿಕೊಂಡು ಅಮೇರಿಕಾವನ್ನು ಅನುಸರಿಸಿದರೆ ಇನ್ನೇನಾಗುತ್ತೆ ?

’ಛೆ!’ ಎನ್ನಬಹುದು ’ಅಯ್ಯೊ’ ಅನ್ನಬಹುದು ’ಥತ್’ ಎನ್ನಬಹುದು. ’ರಾಮಾ’ ’ಶಿವ ಶಿವಾ’ ಎಂದು ದೇವರ ಹೆಸರು ಹೇಳಬಹುದು. ಅಥವಾ ಸಿಂಪಲ್ ಆಗಿ ಲೊಚಗುಟ್ಟಿ ಸುಮ್ಮನಾಗಬಹುದು.

ಇನ್ನೊಂದು ಬಳಕೆಯಲ್ಲಿರುವ ಪದ ’ಮಚ್ಛಾ’!!!!

ಇದು ತಮಿಳಿನದು. ತಮಿಳಿನಲ್ಲಿ ಇದಕ್ಕೆ ಭಾವಮೈದ ಅಥವಾ ತಂಗಿಯ ಗಂಡ ಎಂಬ ಅರ್ಥ ಇದೆ. ಒಮ್ಮೆ ತಮಿಳಿನ ಸ್ನೇಹಿತನನ್ನು ಇದರ ಅರ್ಥ ಏನು ಎಂದು ಕೇಳಿದೆ.

" ಸ್ನೇಹಿತರಿಗೆ ಯಾಕೆ ಮಚ್ಛಾ ಎನ್ನುವುದು?"

ಅವನು ಹೇಳಿದ " ಉದಾಹರಣೆಗೆ ನೀನು ನನ್ನ ಅತ್ಯಂತ ಪ್ರಿಯ ಸ್ನೇಹಿತ. ನೀನು ನನಗೆ ಎಷ್ಟು ಪ್ರಿಯ ಅಂದರೆ ನನ್ನ ತಂಗಿಯನ್ನು ನಿನಗೆ ಮದುವೆ ಮಡಿಕೊಡುತ್ತೇನೆ. ಅಷ್ಟು ಇಷ್ಟ ನೀನು ನನಗೆ! ಆದ್ದರಿಂದ ನಿನಗೆ ಮಚ್ಛಾ ಎಂದು ಕರೆಯುತ್ತೇನೆ." ಎಂದು "ಮಚ್ಛಾ" ದ "ಭಾವಾ"ರ್ಥವನ್ನು ವಿವರಿಸಿದ. ಕೇವಲ ಉದಾಹರಣೆಯಾಗಿದ್ದರಿಂದ ಬದುಕಿಕೊಂಡೆ.

ಇನ್ನು ಮುಂದೆ "ಮಚ್ಛಾ" ಎಂದು ಯಾರನ್ನಾದರೂ ಕರೆಯಬೇಕೆಂದರೆ ಅವನಿಗೆ ನಿಮ್ಮ ತಂಗಿಯನ್ನು ಮದುವೆಯಾಗುವ ಯೋಗ್ಯತೆ ಇದೆಯೇ ಎಂದು ಪರೀಕ್ಷಿಸಿ.

Rating
No votes yet

Comments