ಸುಳ್ಳೇ ನಮ್ಮನೆ ದೇವರು

ಸುಳ್ಳೇ ನಮ್ಮನೆ ದೇವರು

ದೇವರ ಬಗ್ಗೆ ಒಂದೆರಡು ಬರಹಗಳನ್ನ -ಅನಿವಾಸಿ ಯವರದ್ದು, ವಿನಾಯಕ ಮುತಾಲಿಕರದ್ದು - ಇಲ್ಲೇ ಓದಿದೆ. ಹಿಂದೆ ಎ.ಎನ್.ಮೂರ್ತಿರಾಯರ 'ದೇವರು' ಪುಸ್ತಕವನ್ನೂ ಓದಿದ ನೆನಪಾಯಿತು. ದೇವರಿದ್ದಾನೆಯೇ ? ಇಲ್ಲವೇ? ಆದರೆ ಕಷ್ಟಕ್ಕೆ ಸಿಲುಕಿದಾಗ ಹಾಗೊಬ್ಬ ಸರ್ವಶಕ್ತ ಇದ್ದರೆ ಒಳ್ಳೆಯದೆಂದು ಅನಿಸುವುದು ಸುಳ್ಳಲ್ಲ. ಅದಕ್ಕೇ ಇರಬೇಕು 'ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಬೇಡಿಕೊಳ್ಳುವುದು. ದೇವರನ್ನು ನಮ್ಮ, ಪರರ ಒಳ್ಳೆಯ ಗುಣದಲ್ಲಿ ಕಾಣು ಅಂತಲು ಹೇಳುತ್ತಾರೆ. ಅದೇ ತರಹ, ದೇವರು ತಾನು ಎಲ್ಲೆಲ್ಲೂ ಇರಲಾರದ್ದಕ್ಕೆಂದೇ ಅಮ್ಮಂದಿರನ್ನು ಸೃಷ್ಟಿಸಿದ ಅನ್ನುವ ಮಾತೂ ನಾವೆಲ್ಲ ಕೇಳಿರುವ್ದೇ ಆಗಿದೆ.

ಅದಿರಲಿ. ಶಿಶುವಿನಹಾಳದ ಷರೀಫರ 'ಕೋಡಗನ ಕೋಳಿ ನುಂಗಿತ್ತ' ಅನ್ನುವ ಹಾಡು ಒಂದಿಪ್ಪತ್ತು ವರ್ಷಗಳಿಂದ ಬಹಳ ಹೆಸರುವಾಸಿಯಾಗಿದೆ. ಆಗದ ಸಂಗತಿಗಳನ್ನೇ ಹೇಳುತ್ತಾ ಕೇಳುಗರನ್ನು ಗೋವಿಂದ ಗುರುವಿನ ಪಾದದ ಅಗಾಧತೆಯನ್ನು ಮನವರಿಕೆ ಮಾಡಿಕೊಡುವಂತಹ, ಒಂದು ಒಗಟಿನಂತಹ ಹಾಡಿದು. ಇಂತಹ ಹಾಡುಗಳನ್ನು ಬರೆದವರಲ್ಲಿ ಷರೀಫರು ಮೊದಲಿಗರೇನೂ ಅಲ್ಲ. ಹರಿದಾಸರು, ಶಿವಶರಣರು ಈ ರೀತಿಯ ಹಲವು ರಚನೆಗಳನ್ನ ಬರೆದಿರುವುದು ತಿಳಿದ ವಿಷಯವೇ.

ಅಂತಹ ಒಂದು ರಚನೆಯನ್ನು ಈಚೆಗೆ ಓದಿದೆ. ದೇವರ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಅದನ್ನು ಹಾಕೋಣ ಅನ್ನಿಸಿತು. ಓದಿ ನೋಡಿ - ಸುಳ್ಳೇ ನಮ್ಮನೆ ದೇವರು - ಪುರಂದರ ದಾಸರ ಒಂದು ರಚನೆ:

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು ! ||ಪಲ್ಲವಿ||

ಬೆಕ್ಕು ಭಕ್ಕರಿ ಮಾಡೋದ ಕಂಡೆ ಇಲಿಯು ಒಲೆಯ ಹಚ್ಚೋದ ಕಂಡೆ
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆ ಗಡತರ ||೧||

ಕಪ್ಪೆ ಪಾತರ ಕುಣಿಯೋದ ಕಂಡೆ ಏಡಿ ಮದ್ದಲೆ ಬಾರಿಸೋದ ಕಂಡೆ
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||೨||

ಅರಿಸಿನ ಬಿತ್ತೋದ ಕಂಡೆ ಗಸಗಸೆ ಎಣಿಸೋದ ಕಂಡೆ
ಪುರಂದರವಿಠಲನ ಪಾದವ ಕಂಡೆ ಪರ್ವತ ಗಡತರ ||೩||

ಬರೀ ಸುಳ್ಳೇ ಎನಿಸಬಹುದಾದ ಸಂಗತಿಗಳ ಜೊತೆಗೇ, ಪುರಂದರವಿಠಲನ ಪಾದವನ್ನು ಕಾಣುವುದನ್ನೂ ಪುರಂದರದಾಸರು ಸೇರಿಸಿರುವ ಉದ್ದೇಶವಾದರೂ ಏನಿರಬಹುದು? ಇದೊಂದು ಒಗಟಿನ ಪದವಾಗಿದ್ದು, ಇದರಲ್ಲಿ ಬೇರೆಯ ಅರ್ಥಗಳನ್ನೂ ಕಾಣುವುದು ಸಾಧ್ಯವಿದೆ ಎನ್ನಿಸುತ್ತೆ. ಬಲ್ಲವರು ದಯವಿಟ್ಟು ಟಿಪ್ಪಣಿಸಿ.

ಅಂದಹಾಗೆ, ಹಂಸಾನಂದಿಯ ಹಂಸನಾದಕ್ಕೆ ಇವತ್ತು ಎರಡು ವರ್ಷ. ಎರಡು ವರ್ಷದ ಹಿಂದೆ ಇಲ್ಲಿ ಬರೆಯಲು ಆರಂಭಿಸಿದಾಗ, ನನಗೆ ಇಲ್ಲಿ ಸಂಪದಿಗರ ಬಳಗದಲ್ಲಿ ಸಿಕ್ಕಬಹುದಾದ ಅನುಭವದ ಹೊಳವೂ ಇರಲಿಲ್ಲ ಅನ್ನಬೇಕು. ವರುಷದ ಹಿಂದೆ, ಇದು ನನ್ನ ಪುಣ್ಯದ ಫಲ ಎಂದಿದ್ದೆ. ಅದಕ್ಕಿಂತ ಹೆಚ್ಚು ಏನು ಹೇಳಲಿ?

ಇಷ್ಟು ದಿನಗಳು ಇಲ್ಲಿ ದೊರೆತ ಅನುಭವಕ್ಕೂ, ಗೆಳೆತನಕ್ಕೂ, ಕಲಿಕೆಗೂ ಸಂಪದ ಬಳಗಕ್ಕೊಂದು ನಾನು ಆಭಾರಿ!

-ಹಂಸಾನಂದಿ

 

Rating
No votes yet

Comments