ಈ ಮನಸು ಥರ ಥರ ಥರ ಥರ ಒಂಥರಾ......

ಈ ಮನಸು ಥರ ಥರ ಥರ ಥರ ಒಂಥರಾ......

ಅಲ್ಲ ನಮ್ಮ ಮನಸು ಎಷ್ಟು ವಿಚಿತ್ರ ಅಲ್ವೇನ್ರಿ. ನಾವು ಈ ಮನಸಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರು ನಮಗೆ ಈ ಭಾವನೆ ಬಂದು ಬಿಡುತ್ತೆ. ಪ್ರತಿಯೊಂದು ವಿಷಯದಲ್ಲೂ ನಮ್ಮ ಮನಸು ತೀರ ವಿಚಿತ್ರವಾಗೆ ಇರುತ್ತೆ. ಅದರಲ್ಲಿ ಮೂಡೋ ಭಾವನೆಗಳು ಅಷ್ಟೆ ವಿಚಿತ್ರ ಅಲ್ವ…

ನಾನು ಯಾಕೆ ಹೀಗೆ ಹೇಳ್ತೀನಿ ಅಂದ್ರೆ ಯಾರನ್ನೇ ಆಗ್ಲಿ ನೋಡಿದ್ ತಕ್ಷಣ ಅವರ ಬಗ್ಗೆ ಒಂದು ಭಾವನೆ ನಮ್ಮ ಮನಸಲ್ಲಿ ಬಂದು ಬಿಡುತ್ತೆ. ಅದರಿಂದ ಅವರು ಒಳ್ಳೆಯವರ ಅಥವಾ ಕೆಟ್ಟವರ ಅಂಥ ನಾವು ನಿರ್ಧಾರ ಮಾಡಿಬಿಡ್ತೀವಿ …… ಇದರಲ್ಲಿ ಏನು ವಿಚಿತ್ರ ಅಂತ ನೀವು ಕೇಳಬಹುದು ….. ಅಲ್ಲ ಅವ್ರ ಜೊತೆ ಒಂದು ಸಲ ಮಾತಾಡೋಕೆ ಮುಂಚೆನೇ ಅವ್ರ ಬಗ್ಗೆ ಒಂದು ಅಭಿಪ್ರಾಯ ಬೆಳೆಸಿಕೊಳ್ಳೋದು ಹೇಗೆ ಸಾಧ್ಯ?.... ಆಮೇಲೆ ಇನ್ನೊಂದೇನಂದ್ರೆ ನನ್ನ ಅನುಭವದಲ್ಲಿ ನನ್ನ ಮನಸು ಇದುವರೆಗೆ ಬೆಳೆಸಿಕೊಂಡಿರೋ ಅಭಿಪ್ರಾಯದಲ್ಲಿ ಒಂದು ಸಲಾನೂ ತಪ್ಪಾಗಿಲ್ಲ………ಇದು ಹೇಗೆ ಸಾಧ್ಯ ಅಂತ?????

ಹೋಗ್ಲಿ ಆ ಅಭಿಪ್ರಾಯದ ವಿಷಯ ಪಕ್ಕಕ್ಕೆ ಇಡೋಣ….. ಇನ್ನು ಈ ಮನಸು ಎಲ್ಲರನ್ನು ಅಷ್ಟು ಸುಲಭವಾಗಿ ನಂಬೋಲ್ಲ……..ಕೆಲವರನ್ನ ಬೇಗ ನಂಬಿದ್ರೆ ಕೆಲವರನ್ನ ಬಹಳಷ್ಟು ಸಲ ಪರೀಕ್ಷಿಸಿ ನಂಬುತ್ತೆ…….ಅದು ಯಾಕೆ ಹಾಗೆ ಅಂತ ಗೊತ್ತಾಗೊಲ್ಲ ಮತ್ತೆ ಕೆಲವೊಂದ್ಸಲ ಏನಾಗುತ್ತೆ ಅಂದ್ರೆ ಯಾರೋ ಒಬ್ರು ಒಳ್ಳೆಯವರು ಅಂತ ಗೊತ್ತಿದ್ರು ಅವ್ರನ್ನ ಮನಸು ಅಷ್ಟು ಬೇಗ ನಂಬೋಲ್ಲ ಇದು ಉಲ್ಟಾ ಅಗೋ ಪರಿಸ್ಥಿತಿಗಳು ಸಾಕಷ್ಟಿವೆ. ಇಲ್ಲಿ ಮನಸು ಯಾರನ್ನಾದರು ನಂಬೋಕೆ ಬಳಸೋ ಮಾಪಕ ಯಾವ್ದು????????

ಆಮೇಲೆ ಒಂದು ಸಲ ನಂಬಿದ್ರೆ ಅವರ ಬಗ್ಗೆ ನಾವು ತುಂಬಾ ವಿಶ್ವಾಸ ಇಟ್ಟುಕೊಂಡುಬಿಡ್ತೀವಿ…. ಅದನ್ನ ಬದಲಾಯಿಸೋಕೆ ತುಂಬ ಕಷ್ಟ…….. ಆದ್ರೆ ಅವರೇನಾದ್ರೂ ನಮ್ಮ ನಂಬಿಕೆಗೆ ಅರ್ಹರಲ್ಲ ಅಂತ ಗೊತ್ತಾದ್ರೆ ಆಗೋ ಆಘಾತ ಇದೆಯಲ್ಲ ಅದನ್ನ ಯೋಚನೆ ಮಾಡಿದ್ರೆನೇ ಮೈ ಜುಮ್ಮೆನ್ನುತ್ತೆ…… ಆದ್ರೆ ವಿಪರ್ಯಾಸ ಏನು ಅಂದ್ರೆ ಆ ವಿಶ್ವಾಸ ದ್ರೋಹಾನ ಮರೆಯೋಕೆ ನಂ ಮನಸು ಮತ್ತೊಬ್ಬರ ಮೇಲಿನ ವಿಶ್ವಾಸ ಹೆಚ್ಚು ಮಾಡಿಕೊಳ್ಳುತ್ತೆ……..ಯಾಕ್ ಹೀಗೆ?????

ಅದು ಹೋಗ್ಲಿ……. ಒಂದೇ ವಿಷಯಾನ ನಮ್ಮ ಮನಸು ಎಷ್ಟೊಂದ್ ಥರ ಅರ್ಥೈಸುತ್ತೆ ಅಲ್ವ……. ಒಂದೇ ಮಾತನ್ನ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತೆ….. ಆದ್ರೆ ಅದು ಯಾವಾಗಲು ತನ್ನ ಪರವಾಗೇ ಮಾತುಗಳನ್ನ ತಿರುಚೋದು…….ಆದ್ರೆ ಒಂದು ಸಮಯದಲ್ಲಿ ಒಂದು ರೀತಿ ಅರ್ಥಕ್ಕೆ ತಲೆಯಾಡಿಸಿದ್ದ ನಾವು ಮತ್ತೆ ಇನ್ನೊಂದು ಸಂದರ್ಭದಲ್ಲಿ ಆ ವಿಚಾರಕ್ಕೂ ತಲೆ ಆಡಿಸ್ತೀವಿ…….. ಅಲ್ಲ ನಂ ಮನಸು ಇಷ್ಟೊಂದು ರೀತಿ ಹೇಗೆ ಯೋಚನೆ ಮಾಡುತ್ತೆ ಅಂತ???????

ಅದು ಸರಿ….. ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳೋದರಲ್ಲೂ ಮನಸು ಇದೇ ಆಟ ಆಡುತ್ತೆ……. ಸಂದರ್ಭಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾತ್ರ ನೋಡುತ್ತೆ………ನನ್ ಜೀವನದಲ್ಲೇ ನಡೆದಿದ್ದ ಒಂದು ಸಣ್ಣ ಸಂದರ್ಭ………..

ನಾನಾಗ ೮ನೆ ತರಗತಿಯಲ್ಲಿದ್ದೆ. ನಮ್ಮಕ್ಕ ೧ ಪಿ ಯು ನನ್ ತಮ್ಮ ೧ನೆ ತರಗತಿಯಲ್ಲಿದ್ದ. ಅಪ್ಪ ಅಕ್ಕನ ಟ್ಯೂಶನ್ ಕಾಲೇಜ್ ಅಂತ ಓಡಾಡುತ್ತ ಇದ್ರೆ ಅಮ್ಮ ತಮ್ಮನ್ನ ಓದಿಸೋದ್ರಲ್ಲಿ ಮಗ್ನರಾಗಿರುತ್ತಿದ್ರು. ನನ್ ಮನಸಿಗೆ ಆಗ ಸ್ವಲ್ಪ ಏಕಾಂಗಿತನ ಕಾಡ್ತಾ ಇತ್ತು ಅದು ನೀನು ಒಂಟಿ ಒಂಟಿ ಅಂತ ಹೇಳ್ತಾ ಇತ್ತು . ಅದೇ ಸಮಯಕ್ಕೆ ನನಗೆ ಭಾಸನ ಮಧ್ಯಮವ್ಯಾಯೋಗ ಅನ್ನೋ ಸಂಸ್ಕೃತ ನಾಟಕದ ಕನ್ನಡಾನುವಾದ ಸಿಕ್ತು.

ಈ ಕಥೆ ಓದಿದಾಗ ನನ್ ಮನಸು ನೀನು ಅದೇ ಸ್ಥಿತಿಯಲ್ಲಿ ಇದ್ದೀಯ. ನೋಡು ನೀನು ಮನೇಲಿ ಮಧ್ಯದವಳು.ನಿಮ್ಮಪ್ಪನ್ಗೆ ನಿಮ್ಮಕ್ಕನನ್ನು ಕಂಡ್ರೆ ಪ್ರೀತಿ ಜಾಸ್ತಿ. ನಿಮ್ಮಮಂಗೆ ನಿನ್ ತಮ್ಮನ್ನ ಕಂಡ್ರೆ ಇಷ್ಟ ನಿನ್ನನ್ನ ಪ್ರೀತಿಸೋರು ಯಾರು ಇಲ್ಲ ಅಂತು. ಆಗ ನಾನು ಅದನ್ನ ನಂಬಿದೆ. ಎಷ್ಟೋ ರಾತ್ರಿ ನನ್ನನ್ನು ಪ್ರೀತಿಸೋರು ಯಾರೂ ಇಲ್ಲ ಅಂತ ಅತ್ತಿದ್ದೆ…….ಈಗ ಅದ್ರ ಬಗ್ಗೆ ಯೋಚನೆ ಮಾಡಿದ್ರೆ ಅದೇ ಮನಸು ನೀನವಾಗ ಎಷ್ಟು ಬಾಲಿಶವಾಗಿ ಯೋಚನೆ ಮಾಡ್ತಾ ಇದ್ದೆ ಅಂತ ಹೇಳುತ್ತೆ…… ಅಲ್ಲ ನಂ ಮನಸು ಯಾಕೆ ಯಾವಾಗಲೂ ಒಂದೇ ಥರ ಇರೋಲ್ಲ???????

ನಂ ಮನಸು ಯಾವಾಗಲು ಮಾಡಬೇಡ ಅಂತ ಹೇಳಿದ್ದನ್ನೇ ಮಾಡು ಅಂತ ಪ್ರಚೋದಿಸುತ್ತೆ. ಈಗ ರೆಕಾರ್ಡ್ ಬರೆದು ಮುಗಿಸಿ ಆಮೇಲೆ ಓದಬೇಕು ಟಿವಿ ನೋಡಬಾರದು ಅಂತ ಅಂದುಕೊಂಡರೆ ನಾವು ರೆಕಾರ್ಡ್ ಬರೆದು ಮುಗಿಸೋ ಹೊತ್ತಿಗೆ ಟಿವಿ ನೆ ನೋಡ್ಬೇಕು ಅಂತ ಮನಸು ನಮ್ಮನ್ನ ಒಪ್ಪಿಸಿಬಿಟ್ಟಿರುತ್ತೆ. ಮನೇಲಿ ಏನಾದ್ರೂ ಈ ಕೆಲಸ ಮಾಡು ಅಂದ್ರೆ ಅದನ್ನ ಮಾಡೋಕೆ ಆಸಕ್ತಿ ಇರೋಲ್ಲ ಬದಲಾಗಿ ಇನ್ನೊಂದೇನನ್ನೋ ಮಾಡು ಅನ್ನುತ್ತೆ. ಉದಾಹರಣೆಗೆ ಅಮ್ಮ ತರಕಾರಿ ಹಚ್ಚು ಅಂದ್ರೆ, ಅದು ಬೇಡ ನೀನು ಪಾತ್ರೆ ತೊಳೆದಿಡು ಅನ್ನುತ್ತೆ….. ಒಣಗೋಕೆ ಅಂತ ಹಾಕಿರೋ ಬಟ್ಟೆ ಎತ್ತುಕೊಂಡು ಬಾ ಅಂದ್ರೆ, ಬೇಡ ಗಿಡಗಳಿಗೆ ನೀರು ಹಾಕು ಅನ್ನುತ್ತೆ……..ಒಂದೊಂದು ಸಲ ಅಂತು ಏನು ಮಾಡ್ಬೇಡ ಸುಮ್ನೆ ಕುಳಿತುಕೋ ಅನ್ನುತ್ತೆ………ಅಲ್ಲ ಮನಸು ಯಾಕೆ ಹೀಗೆ ಹೇಳುತ್ತೆ?????

ನಾವು ಬಹಳಷ್ಟು ಜನರನ್ನ ಪ್ರೀತಿಸಬಹುದು ಆದ್ರೆ ನಂ ಮನಸು ಕೆಲವರಿಗಷ್ಟೇ ತನ್ನಲ್ಲಿ ಆಶ್ರಯ ಕೊಡುತ್ತೆ…….ಅವರೆಲ್ಲರಿಗೂ ಒಂದು ರೀತಿಯ ಸ್ಥಾನ ಮಾನಗಳನ್ನ ಕೊಡುತ್ತೆ……ಆದ್ರೆ ಈ ಸ್ಥಾನ ಶಾಶ್ವತ ಅಲ್ಲ…….ಸಂದರ್ಭಕ್ಕೆ ತಕ್ಕಂತೆ ಅದು ಬದಲಾಗುತ್ತೆ……ಒಂದು ಪಟ್ಟಿಯಲ್ಲಿ ಕೊನೆಯಲ್ಲಿರುವ ಹೆಸರು ಮತ್ತೊಂದರಲ್ಲಿ ಮೊದಲನೆ ಸ್ಥಾನನ ಅಲಂಕರಿಸಿರುತ್ತೆ.......ಅಲ್ಲ ನಮ್ಮ ಮನಸು ಯಾಕೆ ಎಲ್ಲರನ್ನು ತನ್ನವರು ಅಂತ ಒಪ್ಪಿಕೊಳ್ಳೊಲ್ಲ………ಮತ್ತೆ ಆ ಪಟ್ಟಿಯನ್ನು ಅಷ್ಟು ಬೇಗ ಹೇಗೆ ಬದಲಾಯಿಸುತ್ತೆ????

ನಾವು ಯಾರನ್ನ ತುಂಬ ಪ್ರೀತಿಸುತ್ತೇವೋ ಅವ್ರಿಂದಾನೆ ನಮಗೆ ಜಾಸ್ತಿ ದುಃಖ ಆಗೋದು. ಬೇರೆಯವರು ಅದೇ ಮಾತು ಹೇಳಿದ್ರೆ ಬರದೆ ಇರೋ ದುಃಖ ನಾವು ಪ್ರೀತಿಸುವವರ ಬಾಯಿಂದ ಬಂದ್ರೆ ಎಲ್ಲಿದ್ರು ಹುಡುಕಿಕೊಂಡು ಬಂದು ಬಿಡುತ್ತೆ.……ಮನಸಲ್ಲೇ ಇರುವವರು ಹೇಳಿದ ಮಾತು ನಂ ಮನಸಿಗೆ ಬೇಗ ಚುಚ್ಚುತ್ತೆ ಅಲ್ವ…….ಅದರಿಂದ ಆಗೋ ನೋವು ಅಷ್ಟೆ ಜಾಸ್ತಿ ಅಲ್ವ….….ಆದ್ರೂ ನಮಗೆ ಅವರ ಮೇಲೆ ಇರೋ ಪ್ರೀತಿ ಕಡಿಮೆ ಆಗೋಲ್ಲ…….ಬದಲಾಗಿ ಅವರನ್ನ ಇನ್ನು ಹೆಚ್ಚು ಪ್ರೀತಿಸ್ತೀವಿ…… ಅಲ್ಲ, ಯಾವಾಗಲು ಸಂತೋಷವಾಗಿರಬೇಕು ಅನ್ನೋ ನಂ ಮನಸ್ಸು ಅವರ ಬಗ್ಗೆ ಇರೋ ಪ್ರೀತಿನೆ ನಮ್ಮ ದುಃಖಕ್ಕೆ ಕಾರಣ ಅಂತ ಗೊತ್ತಿದ್ದೂ ಅವರನ್ನ ದೂರ ಮಾಡಿಕೊಳ್ಳೋಕೆ ಇಷ್ಟ ಪಡೋಲ್ಲ ಯಾಕೆ??????

ಎಷ್ಟೇ ಸ್ನೇಹ ಇರಲಿ ಸ್ನೇಹಿತರಲ್ಲಿ ಯಾರಾದ್ರು ಒಬ್ರು ನಮಗಿಂತ ಉತ್ತಮ ಅನಿಸಿದರೆ ಮನಸು ಅವರ ಬಗ್ಗೆ ನಮಗೇ ಗೊತ್ತಿಲ್ಲದ ಹಾಗೆ ಒಂದು ರೀತಿ ಅಸೂಯೆ ಬೆಳೆಸಿಕೊಳ್ಳುತ್ತೆ…….. ನೀನು ಅವರಿಗಿಂತ ಉತ್ತಮ ಅಂತ ಅನ್ನಿಸಿಕೊಳ್ಳುವಂಥದ್ದನ್ನು ಏನಾದ್ರೂ ಮಾಡು ಅನ್ನುತ್ತೆ…….ಅವರ ಮುಂದೆ ಅದನ್ನ ತೋರಿಸದಿದ್ದರೂ ನೀನು ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಅವರಿಗಿಂತ ಹೆಚ್ಚು ಸಾಧಿಸಬಲ್ಲೆ ಅದನ್ನ ಮಾಡಿ ತೋರಿಸು ಅನ್ನುತ್ತೆ……. ಇದು ಒಳ್ಳೆಯದಾ ಅಥವಾ ಕೆಟ್ಟದ್ದಾ????.

ಯಾವುದಾದರು ತಪ್ಪು ನಡೆದರೆ ಅದಕ್ಕೆ ತಾನೆ ಕಾರಣ ಅಂತ ಗೊತ್ತಿದ್ರು ನಂ ಕಳ್ಳ ಮನಸು ಆ ತಪ್ಪನ್ನ ಬೇರೆಯವರ ಮೇಲೆ ಹಾಕೋಕೆ ಪ್ರಯತ್ನ ಪಡುತ್ತೆ……… ಅಕಸ್ಮಾತ್ ಆಗದಿದ್ರೆ ಆ ತಪ್ಪಲ್ಲಿ ಬೇರೆಯವರಿಗೂ ಪಾಲು ಇದೆ ಅಂತ ವಾದಿಸುತ್ತೆ…… ಅದೂ ಸಾಧ್ಯ ಆಗಲಿಲ್ಲ ಅಂದ್ರೆ ಆ ತಪ್ಪನ್ನೇ ಬೇರೆಯವರು ಮಾಡಿರುತ್ತಾರೆ ಅಂತ ಉದಾಹರಣೇನು ಕೊಡುತ್ತೆ…….ಇದ್ಯಾವುದು ಆಗ್ಲಿಲ್ಲ ಅಂದ್ರೆ ಅದು ತಪ್ಪೇ ಅಲ್ಲ ಅಂತಾನು ಸಾಧಿಸಿ ಬಿಡುತ್ತೆ……..ಅಲ್ಲ ಅದು ತಪ್ಪು ಅಂತ ಗೊತ್ತಿದ್ರು ಹೀಗೆ ವಾದ ಮಾಡೋಕೆ ನಂ ಮನಸಿಗೆ ಹೇಗೆ ಸಾಧ್ಯ?????

ಇನ್ನು ಎಷ್ಟೋ ವೈಚಿತ್ರ್ಯಗಳ ಸರಮಾಲೆ ಈ ಮನಸು……ಆದ್ರೆ ಅದೂ ಹೇಳೋದೆಲ್ಲ ನಂ ಒಳ್ಳೆಯದಕ್ಕೆ ಅನ್ನೋ ಭಾವನೆ ನಮ್ಮಲ್ಲಿ ಬರೋ ಹಾಗೆ ಮಾಡಿಬಿಡುತ್ತೆ……ಅಲ್ಲ ಈ ಮನಸು ವಿಚಿತ್ರ ಅಂತ ಹೇಳ್ತಾ ಇರೋದು ನನ್ ಮನಸೇ ….ಮನಸಿನ ವೈಚಿತ್ರ್ಯದ ಬಗ್ಗೆ ಮನಸೇ ಹೇಳೋದು…. ಏನು ವಿಚಿತ್ರ ....

ಅಂದ ಹಾಗೆ ಈ ಮೇಲಿನ ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿದ್ರೆ ಹೇಳಿ ದಯವಿಟ್ಟು...

Rating
Average: 5 (1 vote)

Comments